ದೇಶ

ಗಣ್ಯರ ಟೆಕ್ ಪ್ರೇಮ

ಗಣ್ಯರ ಟೆಕ್ ಪ್ರೇಮ
Published On :

ಸಾಮಾಜಿಕ ತಾಣಗಳಿಗೂ 'ರಾಜಕೀಯ' ಲಗ್ಗೆಯಿಟ್ಟಿರುವುದು ಏಕೆ? ಯುವ, ನಗರಪ್ರದೇಶದ ಮತದಾರರನ್ನು ಸೆಳೆಯಲು ಎಂದೋ, ತಮ್ಮ ಸಿದ್ಧಾಂತಗಳನ್ನು ಸುಲಭವಾಗಿ ಪಸರಿಸಲು ಎಂದೋ ನೀವು ಉತ್ತರಿಸಬಹುದು. ಅದೇನೇ ಇರಲಿ, ಒಟ್ಟಾರೆಯಾಗಿ ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶ ಸಾಮಾಜಿಕ ತಾಣಗಳಿಂದ ಪ್ರಭಾವಿತಗೊಂಡಿರುತ್ತದೆ ಎನ್ನುತ್ತದೆ ಒಂದು ಅಧ್ಯಯನ. ಈ ಹಿನ್ನೆಲೆಯಲ್ಲಿ ಭಾರತದ ಟಾಪ್ 10 ತಂತ್ರಜ್ಞಾನ ಪ್ರೇಮಿ, ಸಾಮಾಜಿಕ ತಾಣ ಸ್ನೇಹಿ ರಾಜಕಾರಣಿಗಳ ಬಗ್ಗೆ ಒಂದಿಷ್ಟು.

ನರೇಂದ್ರ ಮೋದಿ
ಬಿಜೆಪಿ ಪ್ರಧಾನಿ ಅಭ್ಯರ್ಥಿಯಿಲ್ಲದೇ ಈ ಪಟ್ಟಿ ಆರಂಭಿಸಲು ಸಾಧ್ಯವೇ ಇಲ್ಲ. ಸಾಮಾಜಿಕ ತಾಣಗಳ ಕಿರೀಟ ಮೋದಿ ತಲೆಯಲ್ಲಿ ರಾರಾಜಿಸುತ್ತಿದೆ. ಅವರು ವೆಬ್‌ಸೈಟ್, ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆ ಹೊಂದಿದ್ದು, ಫೇಸ್‌ಬುಕ್‌ನಲ್ಲಿ 15 ಲಕ್ಷ ಮತ್ತು ಟ್ವಿಟರ್‌ನಲ್ಲಿ 37 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಯೂಟ್ಯೂಬ್ ಚಾನೆಲ್, ಗೂಗಲ್ ಪ್ಲಸ್ ಪೇಜ್ ಹಾಗೂ ವೈಯಕ್ತಿಕ ಬ್ಲಾಗ್‌ನಲ್ಲೂ ಮೋದಿ ಸಕ್ರಿಯರಾಗಿದ್ದಾರೆ.

ಒಮರ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ಟೆಕ್ ಪ್ರೇಮಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ. ಫೇಸ್‌ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇವರಿಗೆ 1.85 ಲಕ್ಷ ಟ್ವಿಟರ್ ಫಾಲೋವರ್‌ಗಳಿದ್ದಾರೆ. ಈವರೆಗೆ ಅವರು ಸುಮಾರು 5 ಸಾವಿರದಷ್ಟು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ಗೂಗಲ್ ಹ್ಯಾಂಗ್‌ಔಟ್ ಮೂಲಕ ಸುದ್ದಿವಾಹಿನಿಯೊಂದರ ಜತೆ ಸಂವಾದವನ್ನೂ ನಡೆಸಿದ್ದಾರೆ.

ನವೀನ್ ಜಿಂದಾಲ್
ಹರ್ಯಾಣದ ಕುರುಕ್ಷೇತ್ರದ ಯುವ ಸಂಸದ ನವೀನ್ ಜಿಂದಾಲ್ ಅವರಿಗೂ ಸಾಮಾಜಿಕ ತಾಣಗಳ ಕ್ರೇಜ್ ಇದೆ. ತಮ್ಮ ವೆಬ್‌ಸೈಟ್ ಸಕ್ರಿಯವಾಗಿರಿಸಲು ಹಾಗೂ ಮಾಹಿತಿಪೂರ್ಣಗೊಳಿಸಲು ಪ್ರತ್ಯೇಕ ಪಿಆರ್ ತಂಡವನ್ನೂ ಅವರು ನೇಮಕ ಮಾಡಿಕೊಂಡಿದ್ದಾರೆ. ಜಿಂದಾಲ್‌ರ ರಾಜಕೀಯ ಚಟುವಟಿಕೆಗಳು, ರ್ಯಾಲಿಗಳ ಬಗ್ಗೆ ಮಾಹಿತಿ ಅಪ್‌ಲೋಡ್ ಆಗುತ್ತಲೇ ಇರುತ್ತದೆ.

ಮಿಲಿಂದ್ ದೇವೊರಾ
ಚೆನ್ನಾಗಿ ವಿನ್ಯಾಸಗೊಳಿಸಿದ ವೆಬ್‌ಸೈಟ್, ಅದರೊಳಗೆ ತುಂಬಾ ಅವರ ಚಟುವಟಿಕೆಗಳ ವಿವರ. ಜತೆಗೆ 1.28 ಲಕ್ಷ ಫಾಲೋವರ್‌ಗಳಿರುವ ಟ್ವಿಟರ್ ಖಾತೆ. ಒಟ್ಟಾರೆಯಾಗಿ ಮಿಲಿಂದ್ ದೇವೊರಾ ಅವರು ಈ ಸಾಮಾಜಿಕ ಮಾಧ್ಯಮವನ್ನು ಅತ್ಯುತ್ತಮವಾಗಿ ಹೇಗೆ ಬಳಕೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಸ್ಯಲೇಪಿತ ಹಾಗೂ ಸಮಯೋಚಿತವಾದ ಟ್ವೀಟ್‌ಗಳನ್ನು ಮಾಡುವ ಮೂಲಕ ಎಲ್ಲರ ಮನಸೆಳೆದವರು ದೇವೊರಾ.

ಅರವಿಂದ ಕೇಜ್ರಿವಾಲ್

ಸುಮಾರು 16 ಲಕ್ಷದಷ್ಟು ಟ್ವಿಟರ್ ಫಾಲೋವರ್‌ಗಳನ್ನು ಹೊಂದಿರುವ ಆಪ್ ನಾಯಕ ಅರವಿಂದ ಕೇಜ್ರಿವಾಲ್, ಮೋದಿ ಬಳಿಕ ಅತ್ಯಂತ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ವ್ಯಕ್ತಿ. ಆಪ್‌ನ ಕಾರ್ಯಗಳು, ಚಟುವಟಿಕೆಗಳು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಇವರ ವಿರುದ್ಧ ಟೀಕಿಸಿದರೂ ಕೇಜ್ರಿವಾಲ್,  ವೆಬ್ ಮೂಲಕವೇ ಉತ್ತರ ಕೊಡುತ್ತಾರೆ.

ಸುಷ್ಮಾ ಸ್ವರಾಜ್
ಸಂಸತ್‌ನಲ್ಲಿ ಮಾತನಾಡುವಷ್ಟೇ ಚೆನ್ನಾಗಿ ಟ್ವೀಟ್ ಮಾಡುವ ಸುಷ್ಮಾ ಸ್ವರಾಜ್ ಸಾಮಾಜಿಕ ತಾಣಗಳಲ್ಲೂ ಭಾರಿ ಬೆಂಬಲಿಗರನ್ನು ಗಳಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿನ ಇವರ ಚಟುವಟಿಕೆ ಇಂದಿನ ಯುವಕರನ್ನೂ ನಾಚಿಸುವಂತಿದೆ. ಟ್ವಿಟರ್‌ನಲ್ಲಿ ಸುಷ್ಮಾರಿಗೆ 1.02 ದಶಲಕ್ಷ ಫಾಲೋವರ್‌ಗಳಿದ್ದಾರೆ. ಸುಷ್ಮಾ ಅವರು ಹೆಚ್ಚಾಗಿ ವಿರೋಧಿಗ ಳಿಗೆ ತಿರುಗೇಟು ನೀಡುವುದು ಈ ಮೂಲಕವೇ.

ಮಮತಾ ಬ್ಯಾನರ್ಜಿ
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಇನ್ನೂ ಟ್ವಿಟರ್ ಲೋಕಕ್ಕೆ ಜಿಗಿದಿಲ್ಲ. ಆದರೆ, ಫೇಸ್‌ಬುಕ್ ಅನ್ನು ತುಂಬಾ ಪ್ರೀತಿಸುತ್ತಾರೆ. ಮಮತಾರ ಫೇಸ್‌ಬುಕ್ ಪೇಜ್‌ಗೆ 2,82,000 ಲೈಕ್‌ಗಳು ಸಿಕ್ಕಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ, ಆಕ್ರೋಶಗಳನ್ನು ವ್ಯಕ್ತಪಡಿಸಲು, ತನ್ನ ರ್ಯಾಲಿಗಳ ಮಾಹಿತಿ ನೀಡಲು ದೀದಿ ಫೇಸ್‌ಬುಕ್ ಮೊರೆಹೋಗುತ್ತಾರೆ. ಅವರ ಖಾತೆ ಯಾವತ್ತೂ ತುಂಬಿ ತುಳುಕುತ್ತಿರುತ್ತದೆ.

ಶಶಿ ತರೂರ್
ಇವರು ಸಾಮಾಜಿಕ ತಾಣ ನಿರ್ವಹಣೆಯ 'ಪೋಸ್ಟರ್ ಬಾಯ್‌'. ಟ್ವಿಟರ್‌ನ 'ಇನ್‌ಫಾರ್ಮಲ್ ಬ್ರಾಂಡ್ ಅಂಬಾಸಿಡರ್.' ಅತ್ಯಂತ ಹೆಚ್ಚು ಟ್ವಿಟರ್ ಫಾಲೋವರ್‌ಗಳಿದ್ದ ಭಾರತದ ಮೊದಲ ರಾಜಕಾರಣಿ ಎಂಬ ಖ್ಯಾತಿಯನ್ನು ತರೂರ್ ಗಳಿಸಿದ್ದರು. ಈಗ ಅದು 2.14 ದಶಲಕ್ಷಕ್ಕೆ ಬಂದು ನಿಂತಿದೆ. ಅವರು ಮಾಡಿರುವ ಕೆಲವು ಟ್ವೀಟ್‌ಗಳು ವಿವಾದ ಸೃಷ್ಟಿಸಿದ್ದರೂ ಭಾರಿ ಜನಪ್ರಿಯತೆಯನ್ನಂತೂ ತಂದುಕೊಟ್ಟಿದೆ. ಶಶಿ ವೆಬ್‌ಸೈಟನ್ನೂ ಹೊಂದಿದ್ದು, ತಮ್ಮ ಲೇಖನಗಳು ಹಾಗೂ ಪುಸ್ತಕಗಳ ವಿವರ ನೀಡುತ್ತಾರೆ.

ಮನಮೋಹನ್‌ಸಿಂಗ್
ಮೌನವಾಗಿರುವ ಮನಮೋಹನ್‌ಸಿಂಗ್ ಅವರು ಸಾಮಾಜಿಕ ತಾಣದಲ್ಲಿ ಬಾಯಿ ತೆರೆಯುತ್ತಾರಾ ಎಂದು ಯೋಚಿಸುತ್ತಿದ್ದೀರಾ? ಇಲ್ಲ. ಆದರೆ ಪ್ರಧಾನಿ ಕಾರ್ಯಾಲಯದಲ್ಲಿರುವ ಸರ್ಕಾರಿ ಅಧಿಕಾರಿಗಳು ಪ್ರಧಾನಿ ಸಿಂಗ್ ಹೆಸರಲ್ಲಿ ಟ್ವೀಟ್ ಮಾಡುತ್ತಾರೆ. ವಿಶೇಷವೆಂದರೆ, ಡಾ.ಸಿಂಗ್ ಅವರ ಖಾತೆಗೆ 5 ಲಕ್ಷ ಫಾಲೋವರ್‌ಗಳಿದ್ದಾರೆ. ಅಷ್ಟೇ ಅಲ್ಲ, ಸಿಂಗ್ ಅವರು ಫೇಸ್‌ಬುಕ್ ಖಾತೆಯನ್ನೂ, ವೆಬ್‌ಸೈಟ್ ಅನ್ನೂ ಹೊಂದಿದ್ದಾರೆ.

ಗುಲ್ ಪನಾಗ್
ಆಪ್‌ನ ಚಂಡೀಗಡ ಅಭ್ಯರ್ಥಿ, ನಟಿ ಗುಲ್ ಪನಾಗ್ ಯಾವತ್ತೂ ತಂತ್ರಜ್ಞಾನ ಪ್ರೇಮಿ. ತನ್ನದೇ ಆದ ಸ್ವಂತ ವೆಬ್‌ಸೈಟ್ ಹೊಂದಿರುವ ದೇಶದ ಮೊದಲ ನಟಿ. ಗುಲ್ ಪನಾಗ್ ಅವರು ಮೊಬೈಲ್ ಆ್ಯಪ್‌ಗಳು, ಫೇಸ್‌ಬುಕ್, ಟ್ವಿಟರ್ ಮೂಲಕ ಗೂಗಲ್ ಹ್ಯಾಂಗ್‌ಔಟ್‌ಗಳಲ್ಲಿ ಮತದಾರರೊಂದಿಗೆ ಸಂವಾದವನ್ನೂ ನಡೆಸಿದ್ದಾರೆ. ಅವರಿಗೆ 8.5 ಲಕ್ಷ ಟ್ವಿಟರ್      ಫಾಲೋವರ್‌ಗಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.