ಬೇಹುಗಾರರಿಗೆ ಶುಕ್ರದೆಸೆ!

ನವದೆಹಲಿ: ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಅಭ್ಯರ್ಥಿಗಳ ದೆಸೆ ಹೇಗಿರುತ್ತದೋ ಗೊತ್ತಿಲ್ಲ, ಆದ್ರೆ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳಿಗೆ ಮಾತ್ರ 'ಶುಕ್ರದೆಸೆ'ಯೇ! ವರ್ಷವಿಡೀ ನೊಣ ಓಡಿಸುತ್ತಾ ಕಾಲ ಕಳೆಯುವ ಡಿಟೆಕ್ಟಿವ್ಗಳೂ ಚುನಾವಣೆ ಬಂತೆಂದರೆ ಹಿರಿಹಿರಿ ಹಿಗ್ಗುತ್ತಾರೆ. ಜೇಬಿಗೆ 'ಲಕ್ಷ್ಮಿ' ಆಗಮಿಸುತ್ತಾಳೆ ಎಂಬ ಖುಷಿಯಿಂದ ಕುಣಿಯುತ್ತಾರೆ. ಇದಕ್ಕೆ ಕಾರಣವೇನು ಗೊತ್ತಾ? ರಾಜಕೀಯ ಪಕ್ಷಗಳು!
ಡಿಮ್ಯಾಂಡೋ ಡಿಮ್ಯಾಂಡು
ಹೌದು. ತಮ್ಮ ಪ್ರತಿಸ್ಪರ್ಧಿಯ ಚಲನವಲನಗಳ ಮೇಲೆ ಕಣ್ಣಿಡಲೆಂದು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ವಿವಿಧ ಡಿಟೆಕ್ಟಿವ್ ಏಜೆನ್ಸಿಗಳನ್ನು ನಿಯೋಜಿಸುತ್ತಾರೆ. ಹೀಗಾಗಿ ಬೇಹುಗಾರಿಕಾ ಸಂಸ್ಥೆಗಳಿಗೆ ಡಿಮ್ಯಾಂಡೋ ಡಿಮ್ಯಾಂಡ್. ಇದು ಈ ಬಾರಿಯ ಚುನಾವಣೆಗೆ ಮಾತ್ರವಲ್ಲ, ಈ ಹಿಂದಿನ ಚುನಾವಣೆಗಳಲ್ಲೂ ಪಕ್ಷಗಳು ಖಾಸಗಿ ಸ್ಪೈ ಏಜೆನ್ಸಿಗಳನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿವೆ. ಈ ಬಾರಿ ಟ್ರೆಂಡ್ ಸ್ವಲ್ಪ ಬದಲಾಗಿದೆ. 'ರಾಜಕೀಯ ತನಿಖೆ'ಯ ಜತೆಗೆ 'ಮತ ನಿರ್ವಹಣಾ ಪ್ಯಾಕೇಜ್'ಗಳ ಕೆಲಸವನ್ನೂ ಈ ಸಂಸ್ಥೆಗಳಿಗೆ ವಹಿಸಲಾಗಿದೆ.
15 ಸಾವಿರ ಏಜೆನ್ಸಿಗಳು
ದೇಶದಲ್ಲಿ ಸದ್ಯಕ್ಕೆ 15 ಸಾವಿರ ಸ್ಪೈ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ ಕನಿಷ್ಠ 50 ಸಂಸ್ಥೆಗಳು ರಾಜಕೀಯ ಬೇಹುಗಾರಿಕೆಯಲ್ಲಿ ಪರಿಣತಿ ಹೊಂದಿದವು. ಈ ಸಂಸ್ಥೆಗಳು ರಾಜಕೀಯ ಪ್ರತಿಸ್ಪರ್ಧಿಯ ಬಗ್ಗೆ ಮಾಹಿತಿ ಕಲೆಹಾಕುವುದು ಮಾತ್ರವಲ್ಲ, ಮತಗಟ್ಟೆ ಮಟ್ಟದ ಮಾಹಿತಿ, ಮತದಾರರ ಇಚ್ಛೆಗಳು, ಕಾರ್ಯತಂತ್ರಗಳು, ಪ್ರತಿಸ್ಪರ್ಧಿ ಅಭ್ಯರ್ಥಿಯ ಹಾಗೂ ಪಕ್ಷದ ಕಾರ್ಯಾಚರಣೆಯ ವಿಧಾನಗಳು ಮತ್ತಿತರ ವಿಚಾರಗಳ ಬಗ್ಗೆಯೂ ಮಾಹಿತಿಗಳನ್ನು ಸಂಗ್ರಹಿಸಿ ತಮ್ಮನ್ನು ನೇಮಿಸಿಕೊಂಡ ಪಕ್ಷಕ್ಕೆ ನೀಡುತ್ತವೆ.
3 ವಿಧದ ತನಿಖೆ
ಇಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ರಾಜಕೀಯ ಪಕ್ಷಗಳು ಸ್ಪೈ ಏಜೆನ್ಸಿಗಳಿಗೆ ಸೂಚಿಸುತ್ತವೆ. ಅಂದರೆ, ವ್ಯಕ್ತಿಯ ಗೆಲ್ಲುವ ಸಾಮರ್ಥ್ಯಕ್ಕನುಗುಣವಾಗಿ ಅಭ್ಯರ್ಥಿಯ ಆಯ್ಕೆ ಮಾಡಬೇಕು. ಇದರ ಉದ್ದೇಶವೇನೆಂದರೆ, ಅಭ್ಯರ್ಥಿಯ ಹಿಂದೆ-ಮುಂದೆ ತಿಳಿದುಕೊಂಡು ಆತನ ಜನಪ್ರಿಯತೆಯನ್ನು ಅರಿಯುವುದು. ಈ ಕೆಲಸ ಮಾಡುವಾಗ ಆತ ಕ್ರಿಮಿನಲ್ ಹಿನ್ನೆಲೆ ಉಳ್ಳವನೇ ಎಂಬ ಬಗ್ಗೆಯೂ ಡಿಟೆಕ್ಟಿವ್ಗಳು ತನಿಖೆ ನಡೆಸುತ್ತಾರೆ.
ತಮ್ಮದೇ ಪಕ್ಷದ ಕಾರ್ಯಕರ್ತರ ಚಟುವಟಿಕೆಗಳ ಮೇಲೆ ಕಣ್ಣಿಡಲೆಂದು ಡಿಟೆಕ್ಟಿವ್ ಏಜೆನ್ಸಿಗಳನ್ನು ಪಕ್ಷಗಳು ನೇಮಕ ಮಾಡುತ್ತವೆ. ಇದರ ಉದ್ದೇಶವೇನು ಗೊತ್ತೇ? ಕಾರ್ಯಕರ್ತರಲ್ಲಿ ಯಾರಾದರೂ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರಾ ಅಥವಾ ಪಕ್ಷದ ರಹಸ್ಯ ಮಾಹಿತಿಗಳನ್ನು ಪ್ರತಿಸ್ಪರ್ಧಿಗಳಿಗೆ ತಿಳಿಸುತ್ತಿದ್ದಾರಾ ಎಂಬುದನ್ನು ತಿಳಿದುಕೊಳ್ಳುವುದು.
ಇತರೆ ಪಕ್ಷಗಳ ಚುನಾವಣಾ ಕಾರ್ಯತಂತ್ರ ಮತ್ತು ಚಟುವಟಿಕೆಗಳನ್ನು ಅರಿಯಲೆಂದೇ ಕೆಲ ಪಕ್ಷಗಳು ಇಂತಹ ಸಂಸ್ಥೆಗಳ ಮೊರೆ ಹೋಗುತ್ತವೆ. ಮಾಹಿತಿ ಪಡೆದ ನಂತರ ಪ್ರತಿಸ್ಪರ್ಧಿಗಳ ಕಾರ್ಯತಂತ್ರವನ್ನು ಎದುರಿಸಲು ಬೇಕಾದ ಸಿದ್ಧತೆ ನಡೆಸಲಾಗುತ್ತದೆ.
ಎರಡು ಪಕ್ಷಗಳಿಗೆ ಒಂದೇ ಸಂಸ್ಥೆ?
ಇಲ್ಲ. ಡಿಟೆಕ್ಟಿವ್ ಸಂಸ್ಥೆಗಳ ನೀತಿ ನಿಬಂಧನೆಗಳ ಪ್ರಕಾರ ಇದು ಸಾಧ್ಯವಿಲ್ಲ. ಯಾವುದಾದರೂ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷವು ಒಂದು ಏಜೆನ್ಸಿಯನ್ನು ಬೇಹುಗಾರಿಕೆಗೆ ನಿಯೋಜಿಸಿತೆಂದರೆ, ಆ ಸಂಸ್ಥೆಯು ಇನ್ನೊಂದು ಪಕ್ಷದ ಅಥವಾ ಪ್ರತಿಸ್ಪರ್ಧಿಯ ಅಸೈನ್ಮೆಂಟ್ ಅನ್ನು ಒಪ್ಪಿಕೊಳ್ಳುವಂತಿಲ್ಲ. ಮಾಹಿತಿಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಹಾಗೂ ಹಿತಾಸಕ್ತಿ ಸಂಘರ್ಷವನ್ನು ತಡೆಯುವುದು ಇದರ ಉದ್ದೇಶ.
ತನಿಖೆಯ ಬಜೆಟ್ ಎಷ್ಟು?
ತನಿಖೆಯ ವಿಧ ಹಾಗೂ ಫಾಲೋ-ಅಪ್ ಆಧಾರದಲ್ಲಿ ದರ ನಿಗದಿಪಡಿಸಲಾಗುತ್ತದೆ. ಇದು 5 ಲಕ್ಷದಿಂದ 25 ಲಕ್ಷದವರೆಗೂ ಹೋಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


