ಪುರಂದೇಶ್ವರಿಗೆ ತಪ್ಪಿದ ಟಿಕೆಟ್

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ಸಿಗಬಹುದೆಂದು ನಿರೀಕ್ಷಿಸಿ ಬಿಜೆಪಿ ಸೇರಿದ್ದ ಮಾಜಿ ಸಚಿವೆ ಡಿ.ಪುರಂದೇಶ್ವರಿಗೆ ನಿರಾಸೆಯಾಗಿದೆ. ಈ ಕ್ಷೇತ್ರದಿಂದ ಆಂಧ್ರದ ಬಿಜೆಪಿ ಘಟಕದ ಅಧ್ಯಕ್ಷ ಕೆ.ಹರಿ ಬಾಬು ಅವರನ್ನು ಕಣಕ್ಕೆ ಇಳಿಸಲು ಪಕ್ಷದ ಚುನಾವಣಾ ಸಮಿತಿ ನಿರ್ಧರಿಸಿದೆ. ಟಿಡಿಪಿ ಜತೆಗೆ ಬಿಜೆಪಿ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಟಿಡಿಪಿ ನಾಯಕರು ವಿಶಾಖಪಟ್ಟಣದಿಂದ ಪುರಂದೇಶ್ವರಿಗೆ ಸ್ಪರ್ಧೆಗೆ ವಿರೋಧಿಸಿದ್ದರಿಂದ ಅವರಿಗೆ ಟಿಕೆಟ್ ಕೈ ತಪ್ಪಿದೆ.
ದಾಖಲೆ ಇಲ್ಲದ ರು. 8 ಕೋಟಿ ವಶ
ಧಾರವಾಡ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರ ತೇಗೂರು ಚೆಕ್ ಪೋಸ್ಟ್ ಬಳಿ ಸಮರ್ಪಕ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ರು. 8.58 ಕೋಟಿ ಹಣವನ್ನು ಗರಗ ಠಾಣೆ ಪೊಲೀಸರು ಮತದಾನದ ಮುನ್ನಾದಿನ ಬುಧವಾರ ಸಂಜೆ ವಶಪಡಿಸಿಕೊಂಡಿದ್ದಾರೆ. ಧಾರವಾಡದಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಚೆಕ್ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಐಸಿಐಸಿಐ ಬ್ಯಾಂಕಿಗೆ ಸೇರಿದ್ದು ಎನ್ನಲಾಗುವ ಈ ಹಣಕ್ಕೆ ಸಮರ್ಪಕ ದಾಖಲೆಗಳಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಕ್ಕರೆ ಸಚಿವರಿಗೆ ನೋಟಿಸ್
ಚಿಕ್ಕೋಡಿ: ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿರುವ ಸಭಾಭವನದಲ್ಲಿ ಬುಧವಾರ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿ, ಮತಯಾಚನೆ ಮಾಡಿದ ದೂರಿನ ಮೇರೆಗೆ ಸಕ್ಕರೆ ಸಚಿವ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಚುನಾವಣೆ ಅಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ. ಸಂಜೆ 4-30ರ ಸುಮಾರು ಸಚಿವ ಹುಕ್ಕೇರಿ, ಬಹಿರಂಗವಾಗಿಯೇ 70-80 ಜನರನ್ನು ಕೂಡಿಸಿ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ದೂರು ಸಲ್ಲಿಕೆಯಾಗಿದೆ.
ಸಿಎಂ ಬಿಡಾರ ತಪ್ಪು: ಬಿಜೆಪಿ ದೂರು
ಮೈಸೂರು: ಲೋಕಸಭೆ ಚುನಾವಣಾ ಬಹಿರಂಗ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ಪ್ರಚಾರಕ್ಕೆ ಬಂದ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಟ್ಟು ಹೊರಹೋಗಬೇಕು. ಆದರೆ ಚಾಮರಾಜನಗರ ಕ್ಷೇತ್ರದ ಮತದಾರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವುದು ತಪ್ಪು ಎಂದು ಬಿಜೆಪಿ ದೂರಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಕ್ಷದ ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಕೈ ಕಚೇರಿಗೆ ಮೋದಿ ವೈರಸ್
ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡುವೆ ಎಣ್ಣೆಸೀಗೆಕಾಯಿ ಸಂಬಂಧದ ವಿಚಾರ ಜಗಜ್ಜಾಹೀರು! ಆ ಪಕ್ಷದ ಕಚೇರಿಯಲ್ಲಿ ಮೋದಿಯವರ ಹೆಸರಿರುವ ಸೀಡಿ ಕೂಡ ಪ್ಲೇ ಆಗುತ್ತಿಲ್ಲವಂತೆ. ಅಂಥ ಒಂದು ಘಟನೆ ಬುಧವಾರ ನವದೆಹಲಿಯಲ್ಲಿ ನಡೆದಿದೆ. ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮೋದಿಯವರನ್ನು ಗುರಿಯಾಗಿರಿಸಿಕೊಂಡು ಸಿ.ಡಿಯೊಂದನ್ನು ಪತ್ರಕರ್ತರಿಗೆ ಪ್ರದರ್ಶಿಸಲು ಪಕ್ಷದ ನಾಯಕರಾದ ಆನಂದ ಶರ್ಮಾ ಮತ್ತಿತರರು ಮುಂದಾಗಿದ್ದರು. ಮಾಧ್ಯಮ ಕೊಠಡಿಯಲ್ಲಿ ಪತ್ರಕರ್ತರಿಗೆ ಸೀಡಿಯನ್ನು ಪ್ರದರ್ಶಿಸಲು ಮುಂದಾದರು. ಪ್ಲೇಯರ್ಗೆ ಸೀಡಿ ಹಾಕಿ ಪ್ಲೇ ಬಟನ್ ಒತ್ತಿದಾಗ 'ಇನ್ಕಾಂಪಟಬಿಲಿಟಿ (ಐಃಈಕಂಕಿಆಖಿಐಇಐಔಐಖಿಘ) ಎಂದು ತೋರಿಸುತ್ತಿತ್ತು. ಆದರೂ ಪ್ರಯತ್ನ ಬಿಡದ ಕಾಂಗ್ರೆಸ್ ನಾಯಕರು ಅದನ್ನು ಮಾಧ್ಯಮದವರಿಗೆ ಪ್ರದರ್ಶಿಸಲೇಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡಿದರೂ ಸೀಡಿ ತೋರಿಸುವ ಯತ್ನ ವಿಫಲವಾಯಿತು. ಅದನ್ನು ನೋಡಿದ್ದ ಪತ್ರಕರ್ತರೊಬ್ಬರು ಕಾಂಗ್ರೆಸ್ ಕಚೇರಿಗೆ 'ಮೋದಿ ವೈರಸ್' ದಾಳಿ ಮಾಡಿದೆ ಎಂದು ಗೊಣಗಿಕೊಂಡರು.
ಸ್ಮೃತಿ ಇರಾನಿ ನಾಮಪತ್ರ ಸಲ್ಲಿಕೆ
ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿರುವ ಬಿಜೆಪಿಯ ಸ್ಮೃತಿ ಇರಾನಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು ರಾಹುಲ್ ಸಾಮರ್ಥ್ಯದ ಬಗ್ಗೆ ಕಾಂಗ್ರೆಸಿಗರಲ್ಲಿಯೇ ವಿಶ್ವಾಸವಿಲ್ಲ. ಇದಕ್ಕಾಗಿಯೇ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲ ಎಂದು ಇರಾನಿ ಲೇವಡಿ ಮಾಡಿದರು.
ನಕ್ಸಲ್ ಪ್ರದೇಶದಲ್ಲಿ ಬಿಗಿ ಭದ್ರತೆ
ಸುಬ್ರಹ್ಮಣ್ಯ: ಶಾಂತಿಯುತ ಮತದಾನಕ್ಕಾಗಿ ನಕ್ಸಲ್ ಬಾಧಿತ ಭಾಗಗಳ ಸೂಕ್ಷ್ಮ ಮತಗಟ್ಟೆ ಮತ್ತು ಸಾಮಾನ್ಯ ಮತಗಟ್ಟೆಗಳಲ್ಲಿ ವಿಶೇಷ ಪೊಲೀಸ್ ಬಿಗು ಬಂದೋಬಸ್ತ್ ಏರ್ಪಡಿಸಿ ಕಟ್ಟೆಚ್ಚರ ವಹಿಸಲಾಗಿದೆ. ಈ ಮತಗಟ್ಟೆಗಳನ್ನು ಕೇಂದ್ರಿಯ ಅರೆ ಸೈನಿಕ ಪಡೆ ಯೋಧರೂ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ. ಸುಬ್ರಹ್ಮಣ್ಯ ಠಾಣಾ ಸರಹದ್ದಿನಲ್ಲಿ ಒಟ್ಟು 42 ಮತಗಟ್ಟೆಗಳ ಪೈಕಿ 5ಮತಗಟ್ಟೆಗಳು ನಕ್ಸಲ್ ಪೀಡಿತ ಮತಗಟ್ಟೆಗಳು. ಅವುಗಳಲ್ಲಿ, ಕುಲ್ಕುಂದ ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರುವಿನ 2 ಬೂತ್ಗಳು ನಕ್ಸಲ್ ವ್ಯಾಪ್ತಿಯ ಮತಗಟ್ಟೆ ಆಗಿದ್ದು ಅತಿಸೂಕ್ಷ್ಮ ಮತಗಟ್ಟೆ ನೆಲೆಯಲ್ಲಿ ಇಲ್ಲಿಗೆ ವಿಶೇಷ ಭದ್ರತೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


