ರಾಷ್ಟ್ರ ನಾಯಕರ ಮನದಲ್ಲಿ ಎಂತೆಂಥ ವಿಚಾರ!

ಸದ್ಯ ಸರ್ಕಾರ ರಚಿಸಲು ಮೂರೇ ಗೇಣು ಅನ್ನೋ ಸ್ಥಿತಿಯಲ್ಲಿರೋದು ಬಿಜೆಪಿ. ಈ ಪಕ್ಷದ ನಾಯಕರ ತಲೆಯಲ್ಲಿ ಏನೇನು ಓಡುತ್ತಿರುಬಹುದು ಈಗ?!
ನರೇಂದ್ರ ಮೋದಿ: ಬಿಜೆಪಿಯ ಅಧಿಕೃತ ಪ್ರಧಾನಿ ಅಭ್ಯರ್ಥಿ! ಅಂದರೆ, ಅನಧಿಕೃತವಾಗಿ ಇನ್ನೂ ಇದ್ದಾರಾ ಅಂತ ಕೇಳ್ಬೇಡಿ. ಅವರ ಮುಂದಿರುವುದು ಬಿಜೆಪಿಯೇ ಸ್ವಂತವಾಗಿ 220ಕ್ಕಿಂತ ಹೆಚ್ಚು ಸೀಟ್ ಗೆಲ್ಲಲೇಬೇಕು ಎಂಬ ಮಿಷನ್. ಅದು ಶಕ್ತಿಯಿಂದಾಗಲಿ ಅಥವಾ ಯುಕ್ತಿಯಿಂದಾಗಲಿ. ಯಾಕೆಂದರೆ, ಯುದ್ಧ ಮತ್ತು ಪ್ರೀತಿಯಲ್ಲಿ ಪ್ರತಿಯೊಂದು ನ್ಯಾಯಸಮ್ಮತ ಹಾಗೂ ಸಮರ್ಥನೀಯ, ಹಾಗೆಯೇ ಚುನಾವಣೆಯಲ್ಲೂ!
ಎಲ್.ಕೆ. ಆಡ್ವಾಣಿ: ಪ್ರಧಾನಿ ಹುದ್ದೆ ಮೇಲೆ ಒಂದು ಕಣ್ಣಿಟ್ಟಿರುವ ಬಿಜೆಪಿಯ ಭೀಷ್ಮ. ಆದರೆ, ಸ್ಪೀಡಾಗಿ ಓಡುತ್ತಿರುವ ಗೆಲ್ಲುವ ಕುದುರೆ ಮೋದಿಗೂ ಅವರಿಗೂ ಅಷ್ಟಕ್ಕಷ್ಟೇ. ಒಂದು ವೇಳೆ, ಬಿಜೆಪಿ 220 ಕ್ರಾಸ್ ಮಾಡದಿದ್ದರೆ ನಾನೇ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಅನ್ನೋ ವಿಷಯ ತಲೆಯಲ್ಲಿ ಓಡುತ್ತಿರಬಹುದು!
ಅರುಣ್ ಜೇಟ್ಲಿ: ಇವರು ಪ್ಲಾನ್ 'ಬಿ'ಯನ್ನು ನಂಬಿಕೊಂಡಿದ್ದಾರೆ. ಈ ವಿಷಯ ದಿಲ್ಲಿ ಮಿಡಿಯಾ ಸರ್ಕಲ್‌ನಲ್ಲಿ ಸುಳಿದಾಡುತ್ತಿದೆ. ಬಿಜೆಪಿಗೆ ಅಂದುಕೊಂಡಷ್ಟು ಸೀಟ್ ಬರದಿದ್ದರೆ, ಕುರ್ಚಿ ಮೇಲೆ ನಂದೇ ಟವಲ್ ಅಂತಿರಬಹುದು.
ಸುಷ್ಮಾ ಸ್ವರಾಜ್: ಇವರ ತಲೆಯಲ್ಲೂ 'ಅದೇ' ಓಡುತ್ತಿದೆ! ಪಕ್ಷ ಮತ್ತು ಸಂಘದೊಳಗೆ ಮೋದಿ ಕಾರ್ಯಶೈಲಿ ಇಷ್ಟಪಡದವರು ಇವರಿಗೆ ಇಷ್ಟ. ಹಾಲಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಹೋದ್ರೂ ಚಿಂತೆ ಇಲ್ಲ. ಒಬ್ಬಂಟಿಯಂತೂ ಅಲ್ಲ ಅನ್ನೋ ಧಿಮಾಕಿನಲ್ಲಿದ್ದಾರೆ.
ಅಮಿತ್ ಶಾ: ಸದ್ಯ ಇವರಿಗೆ ಭಾರತವೇ ಒಂದು ಗುಜರಾತ್ ತರಹ ಕಾಣುತ್ತಿದೆ! ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಸಾರಥಿ ಮುಂದೆ ಎಲ್ಲಿಗೆ 'ರಥ' ಎಳೆದೊಯ್ಯುತ್ತಾರೆ ನೋಡ್ಬೇಕು.
ರಾಜನಾಥ್ ಸಿಂಗ್: ಇರೋ ಬರೋವರನ್ನೆಲ್ಲ ಪಕ್ಷಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಈಗ ಹಾಕಿರುವ ಲೆಕ್ಕಾಚಾರಗಳು ಬುಡಮೇಲಾದರೆ ಅಧ್ಯಕ್ಷರಾಗಿದ್ದುಕೊಂಡು 'ಛಾನ್ಸ್' ಸಿಗಬಹುದು ಅನ್ಕೊಂಡಿದಾರೆ.
ವಸುಂಧರಾ ರಾಜೆ ಅರಸ್: ನಾನು ಹುಟ್ಟಿದ್ದೇ ಪ್ರಜಾ ಪಾಲನೆಗೆ! ಆದರೆ, ಅದು ಕೇವಲ ಜೈಪುರ ಮಾತ್ರವಲ್ಲ. ಇಡೀ ರಾಜಸ್ಥಾನ. ಹಾಗಾಗಿಯೇ, ಜಸ್ವಂತ್ ಸಿಂಗ್‌ಗೆ 'ಕೈ' ಕೊಟ್ಟಿದ್ದಾರೆ.
ಜಸ್ವಂತ್ ಸಿಂಗ್: ಇದು ನನ್ನ ಕೊನೆ ಚುನಾವಣೆ. ಬಾರ್ಮರ್‌ನಲ್ಲಿ ಬಾಳ್ವೆ ಮಾಡಬೇಕು. ಅದು ಪಕ್ಷದೊಟ್ಟಿಗಾದ್ರೂ ಸರಿ, ಸಿಂಗಲ್ ಆದ್ರೂ ಸರಿ ಅನ್ನೋ ಲೆಕ್ಕಾಚಾರ ಹಾಕಿದ್ದಾರೆ!
-----
ಮತದಾರ 'ಕೈ' ಕೊಟ್ಟರೆ ಅಂದ್ಕೊಂಡೇ ಕಾಂಗ್ರೆಸ್‌ನ ಘಟಾನುಘಟಿಗಳ ಹೆಜ್ಜೆ ಇಡುತ್ತಿದ್ದಾರೆ. ಅದು ಅವರ ನಡೆ-ನುಡಿಯಲ್ಲಿ ಕಾಣಿಸುತ್ತಿದೆ.
ಸೋನಿಯಾ ಗಾಂಧಿ: ಹೇಗಾದರೂ ಅಧಿಕಾರದ ಖಾಂದಾನಿಯನ್ನು ಮುಂದುವರಿಸಲು ಮುಂದಾಗಿರುವ ಸೋನಿಯಾಗೆ ರಾಹುಲ್ ಸೋತರೆ ಅನ್ನೋ ಚಿಂತೆ! ಒಂದು ವೇಳೆ ಪ್ರತಿಪಕ್ಷದಲ್ಲಿ ರಾಹುಲ್‌ಗೆ ಯಾವ ರೀತಿ ವಾತವಾರಣ ನಿರ್ಮಿಸಬೇಕು ಅನ್ನೋದೇ ಓಡುತ್ತಿರಬೇಕು ತಲೆಯಲ್ಲಿ.
ರಾಹುಲ್ ಗಾಂಧಿ: ಎಷ್ಟೇ 'ತೋಳೇರಿಸಿದ್ರೂ' ಯಾರೂ ಮಾತು ಕೇಳುತ್ತಿಲ್ಲ! ತಡವಾಗಿ ಜ್ಞಾನೋದಯವಾಗಿರೋ ಹಾಗಿದೆ. ಈಗ ಎಷ್ಟು ಕಷ್ಟವಾಗುತ್ತಿದೆಯೋ ಅಷ್ಟೇ ಕಷ್ಟ ಪ್ರತಿಪಕ್ಷ ಸ್ಥಾನಕ್ಕೆ ಹೋದ್ಮೇಲೂ ಇದೆ ಅನ್ನೋದು ಗೊತ್ತು. 'ವುಮೆನ್ ಆ್ಯಂಡ್ ಯೂಥ್ಸ್ ಎಂಪವರ್‌ಮೆಂಟ್' ತಲೆಗೆ ಹಚ್ಕೊಂಡು ಟೆಂಪರ್‌ವೆಂಟ್ ಹಾಳಾಗುತ್ತಾ ಅಂತಾ ಚಿಂತೆ.
ದಿಗ್ವಿಜಯ್ ಸಿಂಗ್: ಇವರು 'ಮಾತಿನ ಸೌದಾಗರ್'. ಯುದ್ಧ ಜೋರಾಗಿರುವ ಈ ಸಮಯದಲ್ಲಿ ಏನ್ ಮಾತಾಡಬೇಕು ಎಂಬುದು ತೋಚದೆ ಮತ್ತು ಚುನಾವಣೆ ಮುಗಿದ್ಮೇಲೆ ಯಾರ ವಿರುದ್ಧ ನಾಲಿಗೆ ಹರಿಯಬಿಡಬೇಕು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ಚಿದಂಬರಂ: 'ದೊಡ್ಡಮ್ಮ' ಮತ್ತು 'ಚಿಕ್ಕಮ್ಮ' ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾರೆ. ಒಬ್ಬರು ಹೋರಾಡು ಅಂದ್ರೆ, ಇನ್ನೊಬ್ಬರು ಸೋಲಿಸ್ತಿನಿ ಅಂತಾರೆ. ಇದನ್ನು ತಪ್ಪಿಸಲು 'ಹಾರ್ವರ್ಡ್'ನ 'ಹಾರ್ಡ್‌ವರ್ಕ್' ನೆರವಿಗೆ ಬರ್ತಿಲ್ಲ. ಹಾಗಾಗಿ, ತಮ್ಮ ಮಗನನ್ನೇ ಮುಂದೆ ಬಿಟ್ಟಿದ್ದಾರೆ!
ಕಪಿಲ್ ಸಿಬಲ್: ತಲೆಯಲ್ಲಿ 'ಜೀರೋ ಲಾಸ್' ಥಿಯರಿ ಗಿರಕಿ ಹೊಡೆಯುತ್ತಿದೆ. ಚಾಂದನಿ ಚೌಕ್‌ನಲ್ಲಿ ಕಸ ಗುಡಿಸುತ್ತಿರುವ 'ಪೊರಕೆ'ಯನ್ನು ಮೂಲೆಗುಂಪು ಮಾಡಲು ತಮ್ಮ ಥಿಯರಿ ವರ್ಕ್‌ಔಟ್ ಆಗುತ್ತಾ ಅಂತಾ ತಾಳೆ ಹಾಕುತ್ತಿದ್ದಾರೆ!
ಅರವಿಂದ್ ಕೇಜ್ರಿವಾಲ್: ತಮ್ಮೊಬ್ಬರನ್ನು ಬಿಟ್ಟು ಎಲ್ಲರೂ ಇವರಿಗೆ ಭ್ರಷ್ಟಾಚಾರಿಗಳ ತರಾನೇ ಕಾಣ್ತಿದ್ದಾರೆ! ಅದಕ್ಕೇ ನಾನೇನು ಮಾಡ್ಲಿ ಅನ್ತಿದ್ದಾರೆ. ಸಿಕ್ಕ ಕುದುರೆ ಬಿಟ್ಟು 'ಮಾಯಾಗುದುರೆ' ಬೆನ್ನಹತ್ತಿದ್ದಾರೆ.
ನಿತೀಶ್‌ಕುಮಾರ್: ಸಿಎಂ ಆಗಿದ್ದುಕೊಂಡೇ ಪಿಎಂ ಆಗೋರ ಸಾಲಿನಲ್ಲೇ ಇವರದ್ದು ಒಂದು ಟವಲ್ ಇದೆ. ಆದರೆ ಟೈಮೇ ಸರಿಯಾಗಿಲ್ಲ. ಆಕಡೆ 'ಬಲ'ನೂ ಈ ಕಡೆ 'ಎಡ'ನೂ ಇಲ್ಲ. ಸದ್ಯಕ್ಕೆ ದಿಕ್ಕು ತೋಚುತ್ತಿಲ್ಲ.
ಮುಲಾಯಂ ಸಿಂಗ್ ಯಾದವ್: 40 ವರ್ಷದಿಂದ ಕಾಯುತ್ತಿದ್ದಾರೆ. ಹಿಂದೆ ಅವಕಾಶ ಸಿಕ್ಕಾಗ 'ಮಣ್ಣಿನ ಮಗ' ಹೊಡ್ಕೊಂಡು ಹೋದ್ರು. ಈ ಬಾರಿಯಾದ್ರೂ ಸಿಗುತ್ತದೆ ಅನ್ನೋ ಲೆಕ್ಕಾಚಾರವಿದೆ ಅವರಿಗೆ.
ಮಾಯಾವತಿ: ಬ್ರಾಹ್ಮಣ-ಮುಸ್ಲಿಂ 'ಮಾಯಾ'ಜಾಲ ಯಾಕೋ ವರ್ಕ್‌ಔಟ್ ಆಗ್ತಿಲ್ಲ ಅಂತಾ ಚಿಂತೆ!
ಮಮತಾ ಬ್ಯಾನರ್ಜಿ: ಇವರ ತಲೆಯಲ್ಲಿ 'ಸಿಪಿಎಂ ಮುಕ್ತ ಪ.ಬಂಗಾಳ' ದಿನಾಲೂ ರಿಲೇ ಆಗ್ತಿದೆ. ಜತೆಗೆ ಎರಡು ಸೈಡ್ ವಿಂಗ್‌ನಲ್ಲಿ ಒಂದು ಕಡೆ ಅಣ್ಣಾ ಹಜಾರೆ, ಇನ್ನೊಂದು ಕಡೆ ಪ್ರಧಾನಿ ಗದ್ದುಗೆ ಕಾಣುತ್ತಿದ್ದಾರೆ!
ಜಯಲಲಿತಾ: ಅಮ್ಮನೋರ ನಡೆ ಅಗೋಚರ. ಕಾಂಗ್ರೆಸ್, ಬಿಜೆಪಿ, ಮೂರನೇ ರಂಗಕ್ಕೆ ಆಸೆ ತೋರಿಸುತ್ತಲೇ ತಮ್ಮ ಆಸೆ ಈಡೇರಿಕೊಳ್ಳೋದು ಹೇಗೆ ಎಂದು ಪ್ಲಾನ್ ಮಾಡುತ್ತಿದ್ದಾರೆ. ಎಲ್ಲದಕ್ಕೂ ತಾಯಿ ಚಾಮುಂಡೇಶ್ವರಿ ಕೃಪೆಗೆ ಕಾಯುತ್ತಿದ್ದಾರೆ!
ರಾಷ್ಟ್ರಪತಿ ಪ್ರಣಬ್ ಮುಖರ್ಜಿ: ಮೇ 16ರ ನಂತರ ಎಲ್ಲಾ ದಾರಿಗಳು ರೈಸಿನಾ ಹಿಲ್ಸ್ ಕಡೆಗೇ ಎಂದು ಒಳಗೊಳಗೆ ನಗ್ತಿದ್ದಾರೆ!
- ಮಲ್ಲಿಕಾರ್ಜುನ ತಿಪ್ಪಾರ, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


