ದೇಶ

ಮೋದಿ ಸಂಚಲನಕ್ಕೆ ನೆಗೆದ ಸೆನ್ಸೆಕ್ಸ್

ಮೋದಿ ಸಂಚಲನಕ್ಕೆ ನೆಗೆದ ಸೆನ್ಸೆಕ್ಸ್
Published On :

ಮುಂಬೈ: ಇನ್ನೂ ಚುನಾವಣೆ ಫಲಿತಾಂಶ ಪ್ರಕಟವಾಗಿಲ್ಲ, ಆದರೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗಗನಕ್ಕೆ ಚಿಮ್ಮಿದೆ... ಅದು ಹೇಗೆ ಎಂದು ಪ್ರಶ್ನಿಸುತ್ತಿದ್ದೀರಾ?
ಎಲ್ಲವೂ ಮೋದಿ ಮೋಡಿ! ಹೌದು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಷೇರುಪೇಟೆಯ ಬಾಗಿಲನ್ನೂ ತಟ್ಟಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದೆ. ಒಟ್ಟಾರೆಯಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಹೂಡಿಕೆದಾರರಲ್ಲಿ ಹೊಸ ಭರವಸೆಯ ಆಶಾಕಿರಣ ಮೂಡಿಸಿದ್ದಾರೆ ಮೋದಿ.
ಸೆನ್ಸೆಕ್ಸ್ ದಾಖಲೆ ಏರಿಕೆ: ದೇಶದ ಮುಂದಿನ ಸರ್ಕಾರದ ಬಗೆಗಿನ ಆಶಾಭಾವ, ನರೇಂದ್ರ ಮೋದಿ ಅವರಿಂದ ಆರ್ಥಿಕತೆ ಸುಧಾರಿಸಲಿದೆ ಎಂಬ ಭರವಸೆ ಮತ್ತಿತರ ಅಂಶಗಳು ಸೆನ್ಸೆಕ್ಸ್ ಅನ್ನು ದಾಖಲೆ ಮಟ್ಟಕ್ಕೆ ಏರಿಸಿತು. ಶುಕ್ರವಾರ ಷೇರುಪೇಟೆ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರು ಖರೀದಿಯಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 650 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 22,994ರಲ್ಲಿ ಕೊನೆಗೊಂಡಿತು. ಈ ಮೂಲಕ ಏಪ್ರಿಲ್ 25ರ (22,939) ದಾಖಲೆಯನ್ನು ಮುರಿಯಿತು. ಇದೇ ವೇಳೆ, ನಿಫ್ಟಿ ಕೂಡ ತಾನೇನೂ ಕಮ್ಮಿಯಿಲ್ಲ ಎಂಬಂತೆ ಬರೋಬ್ಬರಿ 198 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 6,858ರ ದಾಖಲೆಯೊಂದಿಗೆ ವಹಿವಾಟು ಅಂತ್ಯಗೊಳಿಸಿತು.
ಮತಗಟ್ಟೆ ಸಮೀಕ್ಷೆ: 12ರಂದು ಕೊನೇ ಹಂತದ ಮತದಾನ ಮುಗಿದೊಡನೆ ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿವೆ. ದೇಶದ ಮತದಾರರು ಎಷ್ಟು ಉತ್ಸಾಹದಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದರ ಮೇಲೂ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇವೆಲ್ಲವನ್ನು ನೋಡಿದರೆ ಎನ್‌ಡಿಎ ಅಧಿಕಾರಕ್ಕೇರುವುದು, ಮೋದಿ ಪ್ರಧಾನಿಯಾಗುವುದು ಖಚಿತ ಎಂಬ ಭಾವನೆ ಮಾರುಕಟ್ಟೆಯಲ್ಲಿ ಮೂಡಿದೆ. ಮೋದಿ ಅವರು ಹೂಡಿಕೆ ಹಾಗೂ ಉದ್ದಿಮೆ ಸ್ನೇಹಿ ಆಗಿರುವ ಕಾರಣ ಅವರು ಪ್ರಧಾನಿಯಾದರೆ ಆರ್ಥಿಕತೆ ಸುಧಾರಿಸೀತು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿದೆ.

ಷೇರು ಖರೀದಿ ಭರಾಟೆ
ಹೂಡಿಕೆದಾರರು ಹೆಚ್ಚಾಗಿ ಓಎನ್‌ಜಿಸಿ, ರಿಲಯನ್ಸ್‌ನಂತಹ ಬ್ಲೂಚಿಪ್ ಷೇರುಗಳ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಶುಕ್ರವಾರದ ವಹಿವಾಟಿನ ವೇಳೆ ಅಂಬುಜಾ ಸಿಮೆಂಟ್ (ಶೇ.7.4), ಎಸಿಸಿ (ಶೇ.5.6)ಯಂತಹ ಮೂಲಸೌಕರ್ಯ ಷೇರುಗಳೂ ಏರಿಕೆ ಕಂಡಿವೆ. ಐಸಿಐಸಿಐ ಬ್ಯಾಂಕ್ ಶೇ.7, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.3.9, ರಿಲಯನ್ಸ್ ಇಂಡಸ್ಟ್ರೀಸ್ ಶೇ.3.9, ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಶೇ.4.2ರಷ್ಟು ಏರಿಕೆ ಕಂಡಿವೆ. ಹೊಸ ಸರ್ಕಾರವು ಆರ್ಥಿಕತೆಯನ್ನು ಮೇಲೆತ್ತುವ ನೀತಿಗಳನ್ನು ಜಾರಿ ತರಲಿದೆ ಎಂಬ ಆಸೆಯೇ ಸೆನ್ಸೆಕ್ಸ್ ಏರಿಕೆಗೆ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

1984ರ ಬಳಿಕ ಸ್ಥಿರ ಸರ್ಕಾರ
1984ರ ರಾಜೀವ್ ಗಾಂಧಿ ಸರ್ಕಾರದ ಬಳಿಕ ಈ ಬಾರಿ ಮೋದಿ ನೇತೃತ್ವದ ಸ್ಥಿರ ಹಾಗೂ ಬಲಿಷ್ಠ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಫಲಿತಾಂಶ ದಿನ ಸಮೀಪಿಸುತ್ತಿರುವಂತೆಯೇ ಷೇರುಪೇಟೆಯಲ್ಲಿ ಮಿಂಚಿನ ಸಂಚಲನ ಕಾಣಿಸಿಕೊಂಡಿದೆ. ಎಲ್ಲರೂ ಷೇರುಗಳ ಖರೀದಿಯಲ್ಲಿ ಭಾರಿ ಆಸಕ್ತಿ ವಹಿಸಿದ್ದಾರೆ ಎನ್ನುತ್ತಾರೆ ಏಂಜೆಲ್ ಬ್ರೋಕಿಂಗ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಥಕ್ಕರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.