ನರೇಂದ್ರ ಮೋದಿ ಅಲೆ ಕಡೆ ಮತದಾರನ ನಗುಮೊಗ...

ಬೆಂಗಳೂರು: ಮೋದಿ ಮಾರುತಕ್ಕೆ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚುವರಿಯಾಗಿ ಬಂದ ಮತಗಳ ಸಂಖ್ಯೆ 71,14,508!
ವಿಧಾನಸಭೆ ಚುನಾವಣೆ ಮುಗಿದ ಬಳಿಕ 5 ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದರೆ ದೊಡ್ಡ ಸಂಗತಿ ಎಂಬ ಮಾತುಗಳಿದ್ದವು. ಆದರೆ ದೇಶಾದ್ಯಂತ ಬೀಸಿದ ಮೋದಿ ಅಲೆಗೆ ರಾಜ್ಯದಲ್ಲಿ ಬಿಜೆಪಿಯು ಬರೋಬ್ಬರಿ ಶೇ.23.11ರಷ್ಟು ಮತ ಪ್ರಮಾಣ ಏರಿಸಿಕೊಂಡಿದೆ.
ಇದರಿಂದ ಪ್ರಚಾರ ಮಾಡದ, ಸೋಲಿನ ಹೆದರಿಕೆಯಲ್ಲಿದ್ದ ಅಭ್ಯರ್ಥಿಗಳು ಲಕ್ಷ- ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಕಾಡೆ ಮಲಗಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ಗಿಂತ ಶೇ.3ರಷ್ಟು ಅಧಿಕ ಮತವನ್ನು ಬಿಜೆಪಿ ಪಡೆದಿದೆ. ಇದಲ್ಲದೇ ಹಿಂದಿನ ಲೋಕಸಭಾ ಚುನಾವಣೆಗಿಂತ ಶೇ.2ರಷ್ಟು ಹೆಚ್ಚಿನ ಮತಗಳನ್ನು ಪಡೆಯಲು ಬಿಜೆಪಿ ಸಫಲವಾಗಿದೆ. ಇದಾಗ್ಯೂ ಅಭ್ಯರ್ಥಿಗಳ ಆಯ್ಕೆಯ ಎಡವಟ್ಟಿನಿಂದ ಇನ್ನು 3 ಸೀಟುಗಳನ್ನು ಬಿಜೆಪಿ ಕಳೆದುಕೊಂಡಿದೆ. ಕಳೆದ 2013ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯು ಭರ್ತಿ 114 ಸೀಟುಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 121 ಸೀಟು ಹೊಂದಿದ್ದ ಬಿಜೆಪಿ ಕೇವಲ 40ಕ್ಕೆ ಸೀಮಿತವಾಗಿತ್ತು. ದಕ್ಷಿಣ ಭಾರತದಲ್ಲಿ ಏಕೈಕ ಆಶಾಕಿರಣವಾಗಿದ್ದ ಕರ್ನಾಟಕ ರಾಷ್ಟ್ರ ಬಿಜೆಪಿ ಪಾಲಿಗೆ ಕೆಟ್ಟ ಕನಸಾಗಿ ರೂಪಗೊಂಡಿತ್ತು. ಕರ್ನಾಟಕ ಬಿಜೆಪಿ ಎಂದರೆ ರಾಷ್ಟ್ರೀಯ ನಾಯಕರು ಮಾಧ್ಯಮಗಳ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ರಾಜ್ಯದಲ್ಲಿ ಮೋದಿಯ 15 ರ್ಯಾಲಿಗಳು ಹಾಗೂ ಮೋದಿಯ ಹೆಸರಿನ ಮೇಲೆ ಬಿಜೆಪಿಯು ಇಂದು ಮತ್ತೆ 17ರ ಅಂಕೆಯನ್ನು ತಲುಪಲು ಸಾಧ್ಯವಾಗಿದೆ. 2009ರ ಲೋಕಸಭೆ ಚುನಾವಣೆಗಿಂತ 2 ಸ್ಥಾನಗಳು ಕಡಿಮೆಯಾಗಿದ್ದರೂ ರಾಜ್ಯ ಬಿಜೆಪಿ ಪಾಲಿಗಿದು ಶುಭ ಸಂಖ್ಯೆಯಾಗಿದೆ.
ಮೋದಿ ಹೆಸರಲ್ಲಿ ಚುನಾವಣೆ: ರಾಷ್ಟ್ರಾದ್ಯಂತ ಈ ಬಾರಿ ಯಾವ ಬಿಜೆಪಿ ಅಭ್ಯರ್ಥಿಯು ಮೋದಿ ಹೆಸರಿಲ್ಲದೆ ಮತವನ್ನೇ ಕೇಳಿಲ್ಲ. ರಾಜ್ಯದಲ್ಲಿ ಯಾವೊಂದು ಕ್ಷೇತ್ರವು ಇದಕ್ಕೆ ಹೊರತಾಗಿಲ್ಲ. ನಮೋ ಬ್ರಿಗೇಡ್ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ವ್ಯವಸ್ಥಿತವಾಗಿ ಬಿಜೆಪಿ ಮುಖಂಡರಿಗಿಂತ ಹೆಚ್ಚು ಕೆಲಸ ಮಾಡಿದರು. ಮೋದಿ ಎಂಬ ವ್ಯಕ್ತಿ ದೇಶದಲ್ಲಿದ್ದಾರೆ ಎನ್ನುವುದನ್ನು 2013ರ ಡಿಸೆಂಬರ್ನಿಂದಲೇ ವ್ಯವಸ್ಥಿತವಾಗಿ ಅಭಿಯಾನ ಮಾಡುತ್ತಾ ಸಾಗಿದರು. ಗ್ರಾಮೀಣ ಪ್ರದೇಶಗಳಲ್ಲಿ ಮೋದಿಯ ಬ್ಯಾನರ್ಗಳು ನಮೋ ಬ್ರಿಗೇಡ್ ಮೂಲಕ ರಾರಾಜಿಸಲು ಆರಂಭಿಸಿದವು. ರಾಜ್ಯ ಬಿಜೆಪಿಯ ಹುಳುಕುಗಳನ್ನು ಮೋದಿಯ ಹೆಸರು ಮರೆ ಮಾಚಿತು. ಹಿರಿಯ ನಾಯಕರ ಒಳಜಗಳ ಎದುರಿಗೆ ಬರದಂತಾದವು.
ರಾಜ್ಯದಲ್ಲಿ ಮೋದಿ ಪ್ರಭಾವಕ್ಕೆ ಸಾಕ್ಷಿ ಎಂಬಂತೆ ಮೋದಿ ಸಮಾವೇಶ ನಡೆದ ಕ್ಷೇತ್ರಗಳ ಪೈಕಿ ಬಿಜೆಪಿ ಕೈಬಿಟ್ಟಿದ್ದು ಕೇವಲ ಚಿಕ್ಕಬಳ್ಳಾಪುರ ಹಾಗೂ ಗುಲ್ಬರ್ಗ ಮಾತ್ರ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರುಗಳ ಪ್ರಭಾವ ಕೂಡ ಚುನಾವಣೆ ಮೇಲೆ ಆಗಲಿಲ್ಲ.
ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭಾವ ಕುಗ್ಗಲಿಲ್ಲ. ವಿಧಾನಸಭೆಯಲ್ಲಿ ಶೇ.36.59 ಮತ ಪಡೆದಿದ್ದ ಕಾಂಗ್ರೆಸ್, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶೇ.40.80 ಮತಗಳಿಸಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ಇದು ಶೇ.37.63 ಆಗಿತ್ತು. ಆದರೆ ಬಿಜೆಪಿ ಸೆಳೆದಿರುವ ಮತಗಳೆಲ್ಲವೂ ಜೆಡಿಎಸ್ನದ್ದಾಗಿದೆ. ಶೇ.8ರಷ್ಟು ಜೆಡಿಎಸ್ ಮತವನ್ನು ಬಿಜೆಪಿ ತೆಕ್ಕೆಗೆ ಹೋಗಿದ್ದು, ಜೆಡಿಎಸ್ ಶೇ.11ಕ್ಕೆ ತೃಪ್ತಿಪಡಬೇಕಿದೆ.
ಹೊಸ ಪ್ರಯೋಗ, ಎರಡು ಅಚ್ಚರಿ!
ಮೈಸೂರು ಹಾಗೂ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ಮೈಸೂರಿನಲ್ಲಿ ಯುವಶಕ್ತಿಗೆ ಬಿಜೆಪಿ ಮಣೆಹಾಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಳೆ ಹುಲಿ ವಿಶ್ವನಾಥ್ ವಿರುದ್ಧ ಪತ್ರಕರ್ತ ಪ್ರತಾಪ್ ಸಿಂಹ್ ಅವರನ್ನು ಕಣಕ್ಕಿಳಿಸಿ ಬಿಜೆಪಿ ಎಲ್ಲರ ಹುಬ್ಬೇರಿಸಿತ್ತು. ಇನ್ನು ಬೀದರ್ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ವಿರೋಧದ ನಡುವೆಯೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಭಗವಂತ್ ಖೂಬಾಗೆ ಟಿಕೇಟ್ ನೀಡಲಾಗಿತ್ತು. ಇವೆರಡು ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವಿನ ನಗೆ ಬೀರುವ ಮೂಲಕ ಹೊಸ ಸಂದೇಶ ನೀಡಿದೆ.
ಲೆಕ್ಕವಿಲ್ಲದ ಗೆಲುವು!
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತ್ಕುಮಾರ್ ಹೆಗಡೆ ಗೆಲ್ಲುತ್ತಾರೆ ಎನ್ನುವುದನ್ನು ಬಿಜೆಪಿಯ ಯಾವೊಬ್ಬ ಮುಖಂಡರೂ ನಿರೀಕ್ಷಿಸಿರಲಿಲ್ಲ. ರಾಜ್ಯ ಬಿಜೆಪಿಯು ಈ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಹಾಗೆಯೇ ಹೆಗಡೆ ಕೂಡ ಪಕ್ಷದೊಂದಿಗಿನ ಸಂಬಂಧವನ್ನು ಹಾಗೆ ಇರಿಸಿಕೊಂಡಿದ್ದರು. ಇದರ ಪರಿಣಾಮವಾಗಿ ಯಾವುದೇ ಮುಖಂಡರು ಅಲ್ಲಿ ಪ್ರಚಾರ ನಡೆಸಲಿಲ್ಲ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದಿದ್ದರು. ಹಿರಿಯ ಸಚಿವ ದೇಶಪಾಂಡೆಗೆ ಪ್ರತಿಷ್ಠಿತ ಕ್ಷೇತ್ರವಾಗಿತ್ತು. ಇನ್ನೊಂದು ವಿಚಿತ್ರವೆಂದರೆ ಸ್ವತಃ ಅನಂತ್ಕುಮಾರ್ ಹೆಗಡೆ ಕೂಡ ಪ್ರಚಾರ ನಡೆಸಿರೋಮಲಿಲ್ಲ. ಕೇವಲ ಮೋದಿಯ ಹೆಸರಲ್ಲಿ ಅವರಿಗೆ 1.41 ಲಕ್ಷ ಅಂತರದ ಜಯ ದೊರೆತಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಕೊಂಚ ಎಡವಟ್ಟು
ತುಮಕೂರು, ಕೋಲಾರ ಹಾಗೂ ಚಿತ್ರದುರ್ಗ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ತುಸು ಮಂತ್ರಾಲೋಚನೆ ಮಾಡಿದ್ದರೆ ಬಿಜೆಪಿಯ ಅಂಕೆ 20ನ್ನು ದಾಟುತ್ತಿತ್ತು. ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆ ಬಸವರಾಜುಗೆ ಟಿಕೆಟ್ ನೀಡಲಾಗಿತ್ತು. ಇನ್ನು ಕೋಲಾರದಲ್ಲಿ ಈ ಹಿಂದೆ ಕೇವಲ 20 ಸಾವಿರ ಮತಗಳಿಂದ ಸೋತಿದ್ದ ಡಿ.ಎಸ್. ವೀರಯ್ಯ ಅವರನ್ನು ಕಡೆಗಣಿಸಿದರ ಪರಿಣಾಮವಾಗಿ ಕೋಲಾರದಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಬೇಕಾಯಿತು. ರಾಜ್ಯದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿರುವುದು ಕೋಲಾರ ಹಾಗೂ ಹಾಸನದಲ್ಲಿ ಮಾತ್ರ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


