ನನ್ನ ಖುಷಿ, ನನ್ನಪ್ಪ

ಈಗ್ಲೂ ನಂಗೆ ಸ್ಕೂಲ್ ಗೆ ರೆಡಿ ಮಾಡೋದು ಅಪ್ಪಾನೆ. . ಯೂನಿಫಾರ್ಮ್ ಐರನ್ ಮಾಡಿ , ವಾಟರ್ ಬಾಟಲ್ ತುಂಬಿಸಿ...
ಅಪ್ಪನ ಜತೆ ಹಿರಣ್ಮಯೀ ಪ್ರಿಯಾ
ಅಪ್ಪನ ಜತೆ ಹಿರಣ್ಮಯೀ ಪ್ರಿಯಾ

ನಾನು ಹಿರಣ್ಮಯೀ ಪ್ರಿಯಾ . ಫಿಫ್ತ್ ಓದ್ತಿದೀನಿ. ನಂಗೆ ಅಪ್ಪ ಅಂದ್ರೆ ಇಷ್ಟ. ತುಂಬಾ ಇಷ್ಟ ಅಪ್ಪಂಗೂ ನಾ ಕೂಡ ಇಷ್ಟ. ಅಣ್ಣನಿಗಿಂತ ಹೆಚ್ಚು.
ಅಮ್ಮ ಹೇಳ್ತಿದ್ಲು , ನಾ ಪಾಪು ಆಗಿದ್ದಾಗ ನಂಗೆ ತುಂಬಾ ಹುಷಾರಿರ್ಲಿಲ್ಲ ಅಂತೆ. ಆಗ ಅಪ್ಪ ಕತ್ತಲೆಯಲ್ಲೇ ನನ್ನ ಕರ್ಕೊಂಡು ನರ್ಸಿಂಗ್ ಹೋಮ್ ಗೆ ಅಡ್ಮಿಟ್ ಮಾಡಿದ್ರಂತೆ. ಎಷ್ಟೊತ್ತಾದ್ರೂ ಡಾಕ್ಟರ್ ಬಂದಿಲ್ಲ ಅಂತ ಜೋರು ಜಗಳ ಮಾಡಿದ್ರಂತೆ. ನಾನು ನರಳ್ತಾ ಇರೋದು ನೋಡಿ ಅಪ್ಪ ಕಣ್ತುಂಬಿಕೊಂಡ್ರಂತೆ. .ಹೇಗೋ ನಾ ಹುಷಾರಾದ್ಮೇಲೆ ಅಪ್ಪ ನನ್ನ ಯಾವತ್ತೂ ಬಿಟ್ಟಿರಲ್ಲ. ದೂರದ ಊರಿಗೆ ಹೋಗಿದ್ರೂನು ಪದೇ ಪದೇ ಕಾಲ್ ಮಾಡಿ 'ಪುಟ್ಟೀ, ಏನವಾ ಮಾಡ್ತಿದೀ'ಅಂತ ರಾಗವಾಗಿ ಕೇಳ್ತದೆ. ನಾನೂ ಅದೇ ಥರ ' ಏನೂ ಇಲ್ಲ, ಯಾವಾಗ ಬರ್ತೀಯಪಾ' ಅಂತೀನಿ. ಹ್ಹ ಹ್ಹ !!
ಈಗ್ಲೂ ನಂಗೆ ಸ್ಕೂಲ್ ಗೆ ರೆಡಿ ಮಾಡೋದು ಅಪ್ಪಾನೆ. . ಯೂನಿಫಾರ್ಮ್ ಐರನ್ ಮಾಡಿ , ವಾಟರ್ ಬಾಟಲ್ ತುಂಬಿಸಿ, ಲಂಚ್ ಬಾಕ್ಸ್ ಕೊಟ್ಟು ಅಬ್ಬ! ಅಪ್ಪ, ನಾ ಹೋಗೊ ಹೊತ್ತಿಗೆ ಎಲ್ಲಾನು ರೆಡಿ ಮಾಡಿರ್ತರೆ. ಅಮ್ಮ ಅಡುಗೆcಮನೆಲಿರ್ತಾಳಲ್ವಾ ! ಅದ್ಕೆ. ಅಪ್ಪ ಇಲ್ಲದಿದ್ದಾಗ ಅಮ್ಮಂಗೆ ನನ್ನನ್ನು ರೆಡಿ ಮಾಡೋದು ತುಂಬಾ ಕಷ್ಟ. . .
ಅಪ್ಪ ಇದ್ರೆ ಸಾಕು ನಂಗೆ . ಆಟೋದಲ್ಲಿ ಸ್ಕೂಲ್ ಹೋಗೋವಾಗ್ಲು ಬೈ ಅಪಾ ಅಂತೀನಿ. . .ಬಂದ ಕೂಡ್ಲೇ ಅಪಾ ಎಲ್ಲಿದ್ಯಾ ಅನ್ಕೊಂಡೇ ಮನೆ ಒಳಗೆ ಬರ್ತೀನಿ. ನಿಮಗ್ಗೊತ್ತಾ ಅಪ್ಪಾ ನಾನು ತುಂಬಾ ಕೀಟಲೆ ಮಾಡ್ತೀವಿ. .ಜಗಳ ಮಾಡ್ತೀವಿ. ಎಷ್ಟೆಂದ್ರೆ ಅಮ್ಮಂಗೆ ಕೋಪ ಬರೋವಷ್ಟು. ಆದ್ರೆ ಅಪ್ಪನ ಜೊತೆ ಎಷ್ಟೇ ಜಗಳ ಮಾಡಿದ್ರು ಅದು ಸ್ವಲ್ಪ ಹೊತ್ತು ಮಾತ್ರ. ಆಮೇಲೆ ಇಬ್ಬರೂ ಮಾಮೂಲು. ಇದನ್ನು ನೋಡಿ ಅಮ್ಮ ಅಣ್ಣ ಇಬ್ರೂ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳ ಥರ ಆಡ್ತಾರೆ.

ಆಮೇಲೆ ಇನ್ನೊಂದ್ ವಿಷ್ಯ ಗೊತ್ತಾ? ಅಮ್ಮ ಇಲ್ಲದಿದ್ದಾಗ ನಾವಿಬ್ಬರೂ ಮ್ಯಾಗಿ ಪ್ಯಾಕೆಟ್ ತಂದು ಚಿಟ್ ಪಟ್ ಅಂತ ರೆಡಿ ಮಾಡ್ಕೊಂಡು ತಿಂತಾ ಇದ್ವಿ. ಸೂಪರಾಗಿತ್ತು! ಆದ್ರೆ ಈಗೇನ್ಮಾಡೋದು . .

ಮ್ಯಾಗಿ ಎಲ್ಲೂ ಸಿಗ್ತಿಲ್ಲ! ಒಂದ್ಸಲ ಏನಾಯ್ತಂದ್ರೆ ಅಪ್ಪ ಮ್ಯಾಗಿ ಮಾಡಕ್ಕೆ ಸ್ಟವ್ ಮೇಲೆ ಇಟ್ಟು ಫೋನ್ ಬಂತು ಅಂತ ಬಿಜಿಯಾಗಿದಾರೆ. ನಾನು ಚಿಂಟು ಟಿವಿ ನೋಡ್ತಿದ್ದೆ. . ಮ್ಯಾಗಿ ಹೋಗಿ ಕಾಗೆ ಕಲರ್ ಆಗ್ಬುಟ್ಟಿತ್ತು. . ಹ್ಹ ಹ್ಹ!! ಅಮ್ಮ ಬಂದು ಚೆನ್ನಾಗಿ ಮಂಗಳಾರತಿ ಮಾಡಿದ್ರು. .ಈಗ್ಲೂ ಆ ಪಾತ್ರೆ ನೋಡಿದ್ರೆ ಮ್ಯಾಗಿನೇ ನೆನಪಾಗುತ್ತೆ ನಂಗೆ!!! ಛೇ!!
ಅಪ್ಪ ಕೆಲವು ವಿಷ್ಯದಲ್ಲಿ ತುಂಬಾ ನನ್ ಥರಾನೆ. ಅಲ್ಲ ಅಲ್ಲ ನಾನು ಅಪ್ಪನ ಥರಾನೆ. ನಾನು ನೋಡೋಕು ಅಪ್ಪನ ಥರಾನೆ ಇದೀನಿ ಅಂತ ಎಲ್ರೂ ಹೇಳ್ತಾರೆ. ನಮ್ಮಿಬ್ಬರ ಬಾಯಲ್ಲಿ ಯಾವ ಗುಟ್ಟೂ ನಿಲ್ಲೋದಿಲ್ಲ.!!

ಬೇಗ ಕೋಪ ಬರೋದು ಕೂಡ ಒಂದೇ ಥರ! ನಾನು ಊರಿಗೋದಾಗ್ಲೂ ಎಲ್ರೂ ಹಾಗೇ ಹೇಳ್ತಾರೆ. . ಅದಕ್ಕೇ ನಂಗೆ ನಮ್ಮಪ್ಪಾ ಅಂದ್ರೆ ತುಂಬಾ ಪ್ರೀತಿ. . ನಂಗೆ ದಿನಾಗ್ಲೂ ಫಾದರ್ಸ್ ಡೇ ನೇ.

ಹೆಂಗೆ !! ನಮ್ಮಪ್ಪ. . . ನನ್ ಖುಷಿ. . .ಲವ್ ಯೂ ಅಪಾ !!
-ಹಿರಣ್ಮಯೀ ಪ್ರಿಯಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com