ಮಾಸ್ಕೋ: ಇದೇ ಮೊದಲ ಬಾರಿ ಫಿಫಾ ವಿಶ್ವಕಪ್ ಆತಿಥ್ಯ ವಹಿಸಿರುವ ರಷ್ಯಾ, ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 5-0 ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಉಭಯ ತಂಡಗಳು ಆರಂಭದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರೂ ರಷ್ಯಾ 12ನೇ ನಿಮಿಷದಲ್ಲಿ ಗೋಲು ಸಿಡಿಸಿ ಖಾತೆ ತೆರೆಯಿತು. ಯೂರಿ ಗಝಿನ್‌ಸ್ಕೈ ಮೊದಲ ಗೊಲು ಸಿಡಿಸಿ ರಷ್ಯಾಗೆ ಮುನ್ನಡೆ ತಂದುಕೊಟ್ಟರು.
ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಸೌದಿ ಅರೇಬಿಯಾ ತಿರುಗೇಟು ನೀಡೋ ಪ್ರಯತ್ನ ಮಾಡಿತು. 30ನೇ ನಿಮಿಷದಲ್ಲಿ ಸೌದಿ ಅರೇಬಿಯಾ ತಂಡದ ಸಲ್ಮಾನ್ ಅಲ್ ಫರಾಜ್ ಗೋಲು ಸಿಡಿಸೋ ಅತ್ಯುತ್ತಮ ಅವಕಾಶವನ್ನ ಕೈಚೆಲ್ಲಿದರು.
ಗೋಲಿನ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ರಷ್ಯಾ, ತವರಿನ ಅಭಿಮಾನಿಗಳಿಗೆ ಮತ್ತೊಂದು ಗೋಲಿನ ಸಿಹಿ ನೀಡಿತು. 43ನೇ ನಿಮಿಷದಲ್ಲಿ ಡೆನಿಸ್ ಚೆರ್ಶೆವ್ ಗೋಲು ಸಿಡಿಸೋ ಮೂಲಕ ರಷ್ಯಾಗೆ 2-0 ಮುನ್ನಡೆ ತಂದುಕೊಟ್ಟರು.
ದ್ವಿತಿಯಾರ್ಧದಲ್ಲಿ ಸೌದಿ ಅರೇಬಿಯಾ ಗೋಲಿಗಾಗಿ ಪರದಾಡಿತು. ಆದರೆ ರಷ್ಯಾ ಭರ್ಜರಿ ಪ್ರದರ್ಶನವನ್ನ ಮುಂದುವರಿಸಿತು. 71ನೇ ನಿಮಿಷದಲ್ಲಿ ರಷ್ಯಾದ ಆರ್ಟಮ್ ಡಿಜ್ಯೂಬಾ 3ನೇ ಗೋಲು ಸಿಡಿಸಿ ಸಂಭ್ರಮಿಸಿದರು.
90ನೇ ನಿಮಿಷದಲ್ಲಿ ಮತ್ತೆ ಅಬ್ಬರಿಸಿದ ಡೆನಿಸ್ ಚೆರ್ಶೆವ್ 2ನೇ ಗೋಲು ಬಾರಿಸಿದರು. ಇಂಜುರಿ ಟೈಮ್ ನಲ್ಲಿ ರಷ್ಯಾ ಮತ್ತಷ್ಟು ಆಕ್ರಮಣಕಾರಿ ಆಟವಾಡಿತು. ಇನ್ನೇನು ಪಂದ್ಯ ಮುಗಿಯಿತು ಅನ್ನುವಷ್ಟರಲ್ಲೇ ರಷ್ಯಾದ ಅಲೆಕ್ಸಾಂಡರ್ ಗೋಲ್ವಿನ್ ಗೋಲು ಸಿಡಿಸಿ ರಷ್ಯಾಗೆ 5-0 ಮುನ್ನಡೆ ತಂದುಕೊಟ್ಟರು.
ರೋಚಕ 90 ನಿಮಿಷಗಳ ಪಂದ್ಯದಲ್ಲಿ ರಷ್ಯಾ ಸಂಪೂರ್ಣ ಮೇಲುಗೈ ಸಾಧಿಸಿತು. 5-0 ಗೋಲುಗಳ ಅಂತರದಲ್ಲಿ ರಷ್ಯಾ ಗೆಲುವಿನ ಕೇಕೆ ಹಾಕಿತು.