

ಲೈಫ್‌ಸ್ಟೈಲ್ ಚೆನ್ನಾಗಿದ್ದರೆ ಲೈಫ್‌ಲಾಂಗ್ ಸ್ಮೈಲ್ ನಿಮ್ಮದಾಗಿರುತ್ತದೆ. ದಿನವಿಡೀ ಚಟುವಟಿಕೆಯಿಂದಿರುವ ಚಿನಕುರಳಿಗಳ ಮನಸು ಸದಾ ಒಳ್ಳೆಯ ಮೂಡ್‌ನಲ್ಲಿರುತ್ತದೆ. ಜತೆಗೆ ವಯಸ್ಸು ಹಿಂದಕ್ಕೋಡುತ್ತದೆ. ಆಯಸ್ಸೂ ವೃದ್ಧಿಯಾಗುತ್ತದೆ.
ವರ್ಷಾನುಗಟ್ಟಲೆ ಒಂದೆಡೆಯೇ ನಿಲ್ಲಿಸಿದರೆ ಒಳ್ಳೆಯ ಕಂಡಿಷನ್‌ನಲ್ಲಿರುವ ನಿಮ್ಮ ವಾಹನ ಕೂಡಾ ಹಾಳಾಗುತ್ತದೆ. ಆಗಾಗ್ಗೆ ಸರ್ವೀಸ್ ಮಾಡಿಸುತ್ತಿರಬೇಕು. ವಾರಕ್ಕೊಮ್ಮೆಯಾದರೂ ಓಡಿಸಬೇಕು. ಅಂಥದರಲ್ಲಿ ಚಟುವಟಿಕೆ ಇಲ್ಲದ ದೇಹದ ಪಾಡೇನು?
ವ್ಯಾಯಾಮ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೂ ಮಾಡುವವರು ಎಷ್ಟು ಮಂದಿ? ದಿನದ ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಟ್ಟರೆ ಅರ್ಧಗಂಟೆಗಳೆಲ್ಲ ಒಟ್ಟಾಗಿ ನಿಮ್ಮ ಆಯಸ್ಸನ್ನು ಹಿಗ್ಗಿಸುತ್ತದೆ. ವ್ಯಾಯಾಮದ ಪ್ಲಸ್ ಪಾಯಿಂಟ್ ಎಂದರೆ ಅಲ್ಲಿ ಹಲವು ಬಗೆಗಳಿವೆ. ಏರೋಬಿಕ್ಸ್, ಸ್ವಿಮ್ಮಿಂಗ್, ಯೋಗ, ಡಾನ್ಸ್, ಜಿಮ್, ವಾಕಿಂಗ್, ಸೈಕ್ಲಿಂಗ್ ಇತ್ಯಾದಿ. ನಮ್ಮ ನಮ್ಮ ಆಸಕ್ತಿಗನುಗುಣವಾಗಿ ಯಾವುದೊಂದನ್ನು ಆಯ್ಕೆ ಮಾಡಿಕೊಂಡರೂ ಅದು ನಮ್ಮ ರೊಟೀನ್ ಆಗುವುದರಲ್ಲಿ ಅನುಮಾನವಿಲ್ಲ.
ಹಾಗಾದ್ರೆ, ವ್ಯಾಯಾಮದಲ್ಲಿ ಏನ್ ಲಾಭ ಉಂಟು?
ಸಮ'ತೂಕ'
ವ್ಯಾಯಾಮ ದೇಹದಲ್ಲಿ ಶೇಖರಣೆಯಾಗಿರುವ ಬೊಜ್ಜನ್ನು ಕರಗಿಸುವುದಲ್ಲದೆ, ಅನಗತ್ಯವಾಗಿ ದೇಹ ಸೇರುವ ಕ್ಯಾಲೊರಿಗಳನ್ನು ಕೊಲ್ಲುತ್ತದೆ. ತೂಕ ಸಮನಾಗಿದೆ ಎಂದ ಮೇಲೆ ದೇಹದ ಆಕಾರವೂ ಆಕರ್ಷಕವಾಗುತ್ತದೆ.
ರೋಗನಿವಾರಕ
ಹೃದಯದ ಸಮಸ್ಯೆಗಳು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದಿಷ್ಟು ಇಲ್ಲವೆಂದರೆ ವ್ಯಕ್ತಿ ಹೆಚ್ಚು ಕಡಿಮೆ ಆರೋಗ್ಯವಾಗಿದ್ದಾನೆಂದೇ ಹೇಳಬಹುದು. ಜೀವನವಿಡೀ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದೋ, ವ್ಯಾಯಾಮ ಮಾಡಿ ಈ ಎಲ್ಲ ಸಮಸ್ಯೆಗಳಿಂದ ದೂರವಿರುವುದೋ ನೀವೇ ಯೋಚಿಸಿ.
ಮೂಡ್ ಬದಲಾಗುತ್ತೆ!
ಒತ್ತಡದ ಬದುಕಿನ ನಡುವೆ ನಮ್ಮ ಮೂಡನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಪ್ರಯಾಸದ ವಿಷಯವೇ ಸರಿ. ಆದರೆ ವ್ಯಾಯಾಮ ಮಾಡುವುದರಿಂದ ಕೆಲವೊಂದು ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವು ನಿಮ್ಮೊಳಗೆ ಖುಷಿಯನ್ನು ಹೆಚ್ಚಿಸುತ್ತದೆ.
ಶಕ್ತಿಮದ್ದು
ಸತತ ವ್ಯಾಯಾಮ ಮಾಂಸಖಂಡಗಳಿಗೆ ಶಕ್ತಿ ತುಂಬುತ್ತದೆ. ರಕ್ತ ಸಂಚಾರ ಎಲ್ಲೆಡೆ ಚೆನ್ನಾಗಿ ಆಗುವುದರಿಂದ ಎಲ್ಲ ಟಿಶ್ಯೂಗಳಿಗೂ ಆಮ್ಲಜನಕ ಯಥೇಚ್ಚವಾಗಿ ಸರಬರಾಜಾಗುತ್ತದೆ. ಹೃದಯ ಮತ್ತು ಶ್ವಾಸಕೋಶಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದಾದಲ್ಲಿ ಸುಸ್ತು ಎಂಬ ಪದ ಹತ್ತಿರ ಸುಳಿಯುವುದಿಲ್ಲ. ಜತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ನಿದ್ದೆ
ದೈಹಿಕ ಶ್ರಮ ಒಳ್ಳೆಯ ನಿದ್ದೆಗೆ ದೂಡುತ್ತದೆ. ಒಳ್ಳೆಯ ನಿದ್ದೆ ದಿನವಿಡೀ ನಿಮ್ಮನ್ನು ಫ್ರೆಶ್ ಮೂಡಿನಲ್ಲಿಡುತ್ತವೆ.
-Much ಮುನಿಯಮ್ಮ