

ಸೃಷ್ಟಿ ನಿಯಮವೇ ಹಾಗೆ. ಹೆಣ್ಣುಮಕ್ಕಳಿಗೆ ಅವರದ್ದೇ ಆದ ಆರೋಗ್ಯ ತೊಂದರೆಗಳ ಚಿಂತೆ. ಅದರಲ್ಲೂ ಸೆಕ್ಸ್ ವಿಚಾರದಲ್ಲಿ ಅನೇಕ ಸುಳ್ಳು ನಂಬಿಕೆಗಳು, ಕಾರಣವಿಲ್ಲದ ಭೀತಿ ಅವರನ್ನು ಕಾಡುತ್ತಿರುತ್ತವೆ.
ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಮಹಿಳೆಗೆ ಲೈಂಗಿಕ ಸಂಪರ್ಕ ಅವಶ್ಯಕ ಎನ್ನುವುದು ಎಷ್ಟೋ ಸ್ತ್ರೀಯರಿಗೆ ಗೊತ್ತೇ ಇಲ್ಲ. ದಾಂಪತ್ಯವನ್ನು ಮಧುರವಾಗಿಸುವಲ್ಲಿಯೂ ಇದರದ್ದು ಮಹತ್ವ ಪಾತ್ರ. ಆದರೆ ಈ ಮಿಲನದ ಮಾತು ಬಂದಾಗ ಅದೇನೋ ಭಯ.
ಸಂಭೋಗದಿಂದ ಸೋಂಕು ಹರಡಬಹುದು ಎಂಬುದು ಪೂರ್ಣಸತ್ಯವಲ್ಲ. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕೆಲವು ಸೋಂಕುಗಳು ಕಾಡಬಹುದು ಎನ್ನುವುದು ನಿಜ. ಸುರಕ್ಷಿತ ಲೈಂಗಿಕ ಕ್ರಿಯೆ ಒಳ್ಳೆಯದೆ. ಆದಾಗ್ಯೂ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು. ಸ್ವಲ್ಪ ಮುನ್ನೆಚ್ಚರಿಕೆ ಮೂಲಕ ಅದರಿಂದ ಪಾರಾಗಬಹುದು. ಆ ಮುನ್ನೆಚ್ಚರಿಕೆಗಳೇನು?
ನೀರು ಹೆಚ್ಚು ಕುಡಿಯಿರಿ
ಸಂಭೋಗದಿಂದ ಮಹಿಳೆಗೆ ಮೂತ್ರದ ಸೋಂಕುಗಳು (ಯುರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್) ಹರಡುವುದನ್ನು ತಡೆಯಲು ಹೆಚ್ಚೆಚ್ಚು ನೀರು ಕುಡಿಯಬೇಕು. ಸೋಂಕನ್ನು ಕಡೆಗಣಿಸಿದರೆ ಮೂತ್ರ ಜನಕಾಂಗ ದುರ್ಬಲಗೊಳ್ಳಬಹುದು. ಜಾಸ್ತಿ ನೀರು ಕುಡಿಯುವ ಅಭ್ಯಾಸ ಸೋಂಕಿನಿಂದ ದೂರ ಇಡಬಲ್ಲದು.
ಪಬ್ಲಿಕ್ ಟಾಯ್ಲೆಟ್ ಟಚ್ ಬೇಡ
ಮನೆಯಿಂದ ಹೊರಗೆ ಹೋದಾಗ ಆಫೀಸಿನಲ್ಲೋ ಅಥವಾ ಪ್ರಯಾಣ ಮಾಡುವಾಗಲೋ ಹೆಚ್ಚೆಚ್ಚು ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಿದ್ದರೆ ಕಡಿಮೆ ಮಾಡಿ. ಇಲ್ಲದಿದ್ದರೆ ಅತಿ ಸೂಕ್ಷ್ಮ ಬ್ಯಾಕ್ಟೀರಿಯಾಗಳು ನಿಮ್ಮನ್ನು ಆವರಿಸಬಹುದು. ಯಾವಾಗಲೂ ಡ್ರೈ ಟಿಶ್ಯೂ ಪೇಪರ್ ಇಟ್ಟುಕೊಳ್ಳಿ. ಕೈಗಳನ್ನು ತೊಳೆದುಕೊಳ್ಳುವುದನ್ನು ಮರೆಯಬೇಡಿ.
ಪ್ಯಾಪ್ ಸ್ಮೀಯರ್ ಟೆಸ್ಟ್
ಮಹಿಳೆಯರು ಲೈಂಗಿಕ ಪರೀಕ್ಷೆಗಳನ್ನು ಮಾಡಿಸಲು ಹೆಚ್ಚಾಗಿ ಹಿಂಜರಿಯುತ್ತಾರೆ. ಅವರಿಗೆ ಮುಜುಗರವಿರಬಹುದು. ಅದರೆ ವರ್ಷಕ್ಕೆ ಎರಡು ಬಾರಿಯಾದರೂ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಗರ್ಭಕೋಶ ಕ್ಯಾನ್ಸರ್, ಸಿಫಿಲಿಸ್, ಗೊನೊರಿಯಾ, ಹರ್ಪಿಸ್‌ನಂಥ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬಹುದು.
ಡಾಕ್ಟರ್ ಸಲಹೆ ಪಡೆಯಿರಿ
ಲೈಂಗಿಕ ಆರೋಗ್ಯ ಮತ್ತು ಆರೈಕೆಯ ಬಗ್ಗೆ ವೈದ್ಯರ ಸಲಹೆ ಮುಖ್ಯ. ಜತೆಗೆ ತಮ್ಮ ಜೀವನ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಕ್ರಿಯೆ ಇರುವುದು ಒಳ್ಳೆಯದು. ಆಗಾಗ ವೈದ್ಯರ ಸಲಹೆಯನ್ನು ಪಡೆಯುವುದರಿಂದ ಹರಡಬಹುದಾದ ರೋಗಗಳನ್ನು ತಡೆಗಟ್ಟಬಹುದು.
-ವಿಜಯ್ ಆರ್. ಹೊಸನಗರ