ಉದ್ದಗಿರುವವರಿಗೆ ಗಿಡ್ಡವಾಗುವ ಬಯಕೆ. ಗಿಡ್ಡ ಇರುವವರಿಗೆ ಉದ್ದವಾಗಲೆಂಬ ಹಠ. ದಪ್ಪವಾದವರಿಗೆ ತೆಳ್ಳಗೆ, ತೆಳ್ಳಗಿರುವವರಿಗೆ ದಪ್ಪಗೆ ಆಗುವ ಹೋರಾಟ. ಒಂದೊಂದ್ಸಲ ಯಾವ್ ಥರ ಮೈ ಬೆಳೆದರೂ, ಬೆಳೆಯದಿದ್ದರೂ ಸರಿಯಾಗಿಲ್ಲವೆಂದು ಮನಕ್ಕೆ ಅಸಮಾಧಾನ.
ಈಗಿನ ಬಾಯಿ ಚಪಲಕ್ಕೆ ಬಲಿಯಾಗುವ ಎಷ್ಟೋ ಜನ ಸಿಕ್ಕಸಿಕ್ಕಲ್ಲಿ, ಏನೇನನ್ನೋ ತಿಂದು ಅಸಹಜವಾಗಿ ದೇಹವನ್ನು ಬೆಳೆಸಿಕೊಂಡಿರುತ್ತಾರೆ. ಆಮೇಲೆ ಆ ದೇಹವನ್ನು ಇಳಿಸಲು ಪಡುವ ಶ್ರಮ, ಮಾಡುವ ಖರ್ಚನ್ನು ಎಷ್ಟೆಂದು ಹೇಳಲಾಗದು. ರೋಗ ಬಂದಮೇಲೆ ಅದನ್ನು ಹೋಗಲಾಡಿಸಲು ಪಡುವ ಶ್ರಮಕ್ಕಿಂತ ಬರುವ ಮೊದಲೇ ಅದನ್ನು ತಡೆಯುವುದು ಬುದ್ಧಿವಂತರ ಲಕ್ಷಣ.
ಬೊಜ್ಜು ಬಂದು ಒದ್ದಾಡುವ ಬದಲು ಬೊಜ್ಜು ಬಾರದಂತೆ ತಡೆಯಲು ಮತ್ತು ಈಗ ಹೆಚ್ಚಿರುವ ತೂಕವನ್ನು ಇಳಿಸಿಕೊಳ್ಳಲು ಪ್ರಕೃತಿದತ್ತವಾದ ಹಲವು ಆಚರಣೆಗಳಿಂದ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಪ್ರಕ್ರಿಯೆಗಳಿಂದ ಎಲ್ಲರಿಗೂ ಸಾಧ್ಯವಿದೆ. ಸುಲಭದಲ್ಲಿ ಪ್ರತಿಯೊಬ್ಬರಿಗೂ ಕೈಗೆಟುಕಬಹುದಾದ, ಮೈಭಾರ ಇಳಿಸಿಕೊಂಡು ಮನ ತಣಿಸಿಕೊಳ್ಳಲು ಸಹಕಾರಿಯಾಗುವ ಕೆಲವೊಂದಿಷ್ಟು ಟಿಪ್ಸ್ ಇಲ್ಲಿದೆ.
ಗ್ರೀನ್ ಟೀ
ಗಿಡಮೂಲಿಕೆಯಿದ ತಯಾರಿಸಲಾದ ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ. ಆದ್ದರಿಂದ ಇದು ಹೆಚ್ಚು ತಿನ್ನುವುದನ್ನು ತಡೆದು ಹಸಿವನ್ನು ನಿಯಂತ್ರಿಸುತ್ತದೆ. ದೇಹದೊಳಗಿನ ಅನಗತ್ಯ ಬೊಜ್ಜನ್ನು ಇದು ಕರಗಿಸಬಲ್ಲದು. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೇರಿದಂತೆ ದಿನದಲ್ಲಿ 3 ಬಾರಿ ಗ್ರೀನ್ ಟೀ ಕುಡಿಯುವುದರಿಂದ ನಿಧಾನವಾಗಿ ಬೊಜ್ಜು ಇಳಿಯುತ್ತದೆ. ಮೈಯ ತೂಕ ಇಳಿಸಿಕೊಳ್ಳಬೇಕಾದರೆ ಗೋಧಿ ಬ್ರೆಡ್ ಅಥವಾ ತರಕಾರಿ ಸಲಾಡ್‌ನೊಂದಿಗೆ ಗ್ರೀನ್ ಟೀ ಸೇವಿಸಬೇಕು.
ಬ್ಲ್ಯಾಕ್ ಟೀ
ಭಾರತದಲ್ಲಿ ಗ್ರೀನ್ ಟೀಗಿಂತ ಬ್ಲ್ಯಾಕ್ ಟೀಗೆ ಪ್ರಾಮುಖ್ಯತೆ ಹೆಚ್ಚು. ಅದರಲ್ಲೂ ಕೇರಳದ ಬ್ಲ್ಯಾಕ್ ಟೀಗೆ ಬೇಡಿಕೆ ಹೆಚ್ಚು. ಬ್ಲಾಕ್ ಟೀಯಲ್ಲಿರುವ ಫ್ಲೇವೈನಾಯ್ಡ್ಸ್ ಅಂಶ ದೇಹದಲ್ಲಿ ಬೊಜ್ಜು ಸ್ಟಾಕ್ ಆಗುವುದನ್ನು ತಡೆಯುತ್ತದೆ. ದೇಹದ ತೂಕ ಕಡಿಮೆ ಮಾಡಲೂ ಇದು ಸಹಕಾರಿ. ಬ್ಲ್ಯಾಕ್ ಟೀ ಜತೆಗೆ ಸಕ್ಕರೆ ಬದಲು ಜೇನು ಹಾಕಿ ಕುಡಿದರೆ ದೇಹದ ತೂಕವನ್ನು ಇನ್ನೂ ಶೀಘ್ರದಲ್ಲಿ ಇಳಿಸಬಹುದು. ದಿನಕ್ಕೆ 2 ಬಾರಿ ಬ್ಲ್ಯಾಕ್ ಟೀ ಕುಡಿದರೆ ಸಾಕು.
ಕೆಫಿನ್
ನಿತ್ಯ ಸೇವಿಸುವ ಕಾಫಿಯಲ್ಲಿ ಕೆಫಿನ್ ಅಂಶ ಇದ್ದೇ ಇರುತ್ತದೆ. ನಿರ್ದಿಷ್ಟ ಪ್ರಮಾಣದ ಕೆಫಿನ್ ದೇಹಕ್ಕೆ ಸೇರುವುದು ಆರೋಗ್ಯಕರ. ಕೆಫಿನ್‌ಗೆ ಬೊಜ್ಜನ್ನು ಸುಟ್ಟು ಹಾಕುವ ಗುಣವಿದೆ. ಇದರಿಂದ ಮಾನವನ ತೂಕ ಹಾಗೂ ತನುತ್ವ ನಿಯಂತ್ರಿಸಲು ಸಾಧ್ಯವಿದೆ.
ಕರಿಬೇವು
ಪ್ರಕೃತಿದತ್ತವಾಗಿ ಎಲ್ಲರಿಗೂ ಸುಲಭವಾಗಿ ಸಿಗಬಹುದಾದ, ನಿತ್ಯ ಬಳಸಬಹುದಾದ ಕರಿಬೇವು ಪ್ರಮುಖವಾದ ಬೊಜ್ಜು ನಿವಾರಕ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 10ರಿಂದ 20 ಕರಿಬೇವಿನ ಎಲೆ ತಿನ್ನುವುದರಿಂದ ನಿಧಾನವಾಗಿ ಬೊಜ್ಜು ಕರಗುತ್ತದೆ.
ವ್ಯಾಯಾಮ
ನಿತ್ಯ 2 ಬಾರಿ ಅಂಗಾತ ಮಲಗಿ ಎರಡೂ ಕಾಲನ್ನು ಮೇಲೆತ್ತಿ ಸೈಕಲ್ ತುಳಿಯುವ ರೀತಿಯಲ್ಲಿ ಕಾಲನ್ನು ತಿರುಗಿಸಬೇಕು. ದಿನಕ್ಕೆ 2 ಹೊತ್ತು ಕನಿಷ್ಠ 30 ಬಾರಿ ಈ ರೀತಿಯ ವ್ಯಾಯಾಮ ಮಾಡಿದರೆ ಬೊಜ್ಜು ಇಳಿಯುತ್ತದೆ. ಈ ವ್ಯಾಯಾಮವನ್ನು ಆಹಾರವನ್ನು ಸೇವಿಸುವ ಒಂದು ಗಂಟೆ ಮುಂಚೆ ಅಥವಾ ಒಂದು ಗಂಟೆ ನಂತರ ಮಾಡಬೇಕು. ಹೀಗೆ ನಿರಂತರವಾಗಿ ಒಂದೆರಡು ತಿಂಗಳು ಮಾಡುವುದರಿಂದ ಫಲಿತಾಂಶ ಸಿಗುವುದು.
-ಸುಧೀಂದ್ರ ಜಮ್ಮಟಿಗೆ
sudheeja@gmail.com