

'ನಿನ್ನ ತಲೆಯಲ್ಲೇನು ಮೆದುಳಿದೆಯಾ? ಇಲ್ಲ ಸೆಗಣಿ ತುಂಬಕೊಂಡಿದೆಯಾ' ಅಂತ ಆಗಾಗ ಬೈಯ್ಯೋದನ್ನು ಕೇಳಿರಬಹುದು. ಇಲ್ಲವೇ ನೀವೇ ಬೈಯಿಸಿಕೊಂಡಿರಬಹುದು. ಯಾಕೆ ಹಾಗೆ ಬೈಯುತ್ತಾರೆ ಎಂದರೆ, ಮನುಷ್ಯನದೇಹದಲ್ಲಿ ತುಂಬಾ ಮಹತ್ವದ ಅಂಗ ಅದು. ಅದು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಎಲ್ಲವೂ ಶೂನ್ಯ! ಆದರೆ, ಇಂಥ ಪ್ರಮುಖ ಅಂಗವೊಂದರ ಕಾಳಜಿಯನ್ನೇ ನಾವು ಮಾಡುವುದಿಲ್ಲ ಎಂದರೆ ನಂಬಲೇಬೇಕು. ನಮಗೆ ಗೊತ್ತಿಲ್ಲದಂತೆ ಮೆದುಳಿಗೆ ಹಾನಿಯುಂಟು ಮಾಡುವ ಅನೇಕ ಆಹಾರಗಳನ್ನು ಸೇವಿಸುತ್ತೇವೆ, ಚಟಗಳನ್ನು ಕಲಿತಿರುತ್ತೇವೆ. ಅಷ್ಟೇ ಅಲ್ಲ, ನಮ್ಮ ಯೋಚನಾ ಲಹರಿಯೂ ಒಮ್ಮೊಮ್ಮೆ ಮೆದುಳಿಗೆ ಹಾನಿ ಉಂಟುಮಾಡಬಲ್ಲದು ಎಂಬುದು ನೆನಪಿರಲಿ.
ಮೆದುಳಿನ ಕೆಲಸವೇನು?
ಮೆದುಳಿಲ್ಲದೆ ಯಾವುದೇ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಮಾಹಿತಿಗಳನ್ನು ಗ್ರಹಿಸಿ, ಶೇಖರಿಸಿ, ಸರಿಯಾದ ಸಮಯಕ್ಕೆ ಹೊರ ಹಾಕುವುದು ಮೆದುಳಿನ ಕೆಲಸ.
ಮೆದುಳಿಗೇನು ಹಾನಿಕರ?
1. ತಿಂಡಿ ತಿನ್ನದೇ ಇರುವುದು
ತಿಂಡಿ ತಿನ್ನದಿದ್ದರೆ ರಕ್ತದ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತದೆ ಹಾಗೂ ಮಿದುಳಿಗೆ ಬೇಕಾದಂಥ ಪೋಷಕಾಂಶಗಳು ಸಿಗುವುದಿಲ್ಲ.
2. ಹೆಚ್ಚಿನ ಆಹಾರ ಸೇವನೆ
ತಿಂಡಿ ಕಡಿಮೆ ತಿಂದರೆ ಮೆದುಳಿಗೆ ಹಾನಿ ಎಂದು ಯದ್ವಾತದ್ವಾ ತಿಂದರೂ ಹಾನಿ ತಪ್ಪಿದ್ದಲ್ಲ ಹುಷಾರ್. ಹೆಚ್ಚಿನ ಆಹಾರ ಸೇವನೆ ಮಿದುಳಿನ ಅಪಧಮನಿಗಳು ಗಟ್ಟಿಯಾಗುವುದಕ್ಕೆ ಕಾರಣವಾಗುತ್ತದೆ. ಇದರಿಂದ ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ.
3. ಧೂಮಪಾನ
ಇದು ಮೆದುಳಿನ ಕುಗ್ಗುವಿಕೆಗೆ ಮತ್ತು ಅಲ್ಜೈಮರ್ ಕಾಯಿಲೆಗೆ ಕಾರಣವಾಗಬಹುದು.
4. ವಾಯು ಮಾಲಿನ್ಯ
ಮೆದುಳು ನಮ್ಮ ದೇಹದ ಅತಿದೊಡ್ಡ ಆಮ್ಲಜನಕ ಗ್ರಾಹಕ. ಕಲುಷಿತ ಗಾಳಿಯ ಉಸಿರಾಟದಿಂದ
ಮೆದುಳಿಗೆ ಆಮ್ಲಜನಕದ ಪೂರೈಕೆ ಕುಗ್ಗಲು ಕಾರಣವಾಗುತ್ತದೆ. ಇದರಿಂದ ಮೆದುಳಿನ ಸಾಮರ್ಥ್ಯ ಇಳಿಮುಖ
ವಾಗುತ್ತದೆ.
5. ಹೆಚ್ಚಿನ ಸಕ್ಕರೆ ಬಳಕೆ
ಹೆಚ್ಚಿನ ಸಕ್ಕರೆ ಸೇವನೆ ದೇಹದಲ್ಲಿ ಪ್ರೊಟೀನ್ ಮತ್ತು ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಪಡಿಸುತ್ತದೆ. ಇದರಿಂದ ಅಪೌಷ್ಠಿಕತೆಗೆ ಮತ್ತು ಬೆಳವಣಿಗೆ ಕುಂಠಿತವಾಗಲು ಕಾರಣವಾಗಬಹುದು.
6. ನಿದ್ರಾಹೀನತೆ
ನಿದ್ರೆ ಮೆದುಳಿಗೆ ವಿಶ್ರಾಂತಿ ನೀಡುತ್ತದೆ. ಆದರೆ ನಿದ್ರಾಹೀನತೆಯಿಂದ ಮೆದುಳಿನ ಜೀವಕೋಶಗಳ ಮೇಲೆ ಪರಿಣಾಮ ಉಂಟಾಗುತ್ತದೆ.
7. ಸಕಾರಾತ್ಮಕ ಧೋರಣೆ ಕೊರತೆ
ಯೋಚನೆ ಅಥವಾ ಚಿಂತನೆ ನಮ್ಮ ಮಿದುಳಿನ ತರಬೇತಿಯ ಮಾರ್ಗವಾಗಿದೆ. ಉತ್ತೇಜಿಸುವ ಆಲೋಚನೆಗಳ ಕೊರತೆಯಿಂದ ಮೆದುಳು ಹಾನಿಗೆ ಒಳಗಾಗುತ್ತದೆ.
9. ಅನಾರೋಗ್ಯದಲ್ಲಿ ಕೆಲಸ ಕೊಡಬೇಡಿ
ಅನಾರೋಗ್ಯದ ಸಮಯಮಲ್ಲಿ ಓದುವುದರಿಂದ ಹಾಗೂ ಮೆದುಳಿಗೆ ಹೆಚ್ಚು ಕೆಲಸ ನೀಡುವುದರಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
10. ಮುಖ ಮುಚ್ಚಿ ನಿದ್ದೆ ಮಾಡಬೇಡಿ
ಹೀಗೆ ಮಾಡುವುದರಿಂದ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದರಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
- ಷಾಯಿಸ್ತಾ ಮೆಹ್ರಾಜ್