

ಮರಣದಿಂ ಮುಂದೇನು? ಪ್ರೇತವೋ? ಭೂತವೋ?
ಪರಲೋಕವೋ? ಪುನರ್ಜನ್ಮವೋ?
ಅದೇನೋ ತಿರುಗಿ ಬಂದವರಿಲ್ಲ ವರದಿ ತಂದವರಿಲ್ಲ
ಈ ಧರೆಯ ಬಾಳ್ಗದರನೇಂ ಮಂಕುತಿಮ್ಮ
- ಎಂಬ ಡಿ.ವಿ. ಗುಂಡಪ್ಪನವರ ಮಾತಿನಂತೆ ಮಾನವನಾಗಿ ನಾವು ಹುಟ್ಟಿದ ಮೇಲೆ ಏನಾದರೂ ಜೀವನದಲ್ಲಿ ಸಾಧಿಸಿ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೇ ವಿನಾ ಜೀವನವನ್ನು ಅಂತ್ಯಗೊಳಿಸಿಕೊಳ್ಳಬಾರದು. 'ಮುಳುಗದಿರು ಜೀವನದ ತೆರೆಯ ಮೇಲೇರುತಿರು' ಎಂಬಂತೆ ಕಷ್ಟ ಬಂದಾಗ ಪ್ರಾಣ ಕಳೆದುಕೊಳ್ಳಲು ಯತ್ನಿಸಬಾರದು. ಆದರೆ ಈಗೀಗ ವಿದ್ಯಾವಂತರೇ ಆತ್ಮಹತ್ಯೆಗೆ ಹೆಚ್ಚಾಗಿ ಶರಣಾಗುತ್ತಿರುವುದು ದುರದೃಷ್ಟದ ಸಂಗತಿ. ಹುಟ್ಟು ಎಷ್ಟು ಸಹಜವೋ, ಸಾವು ಅಷ್ಟೇ ಸಹಜವೆಂದ ಮೇಲೆ ಸಾವಿಗೆ ಮುಂದಾಗುವುದಾದರೂ ಏತಕ್ಕೆ?
ಸ್ಯೂಸೈಡ್ ಪದ ಬಂದಿದ್ದು ಹೇಗೆ?
ಸ್ಯೂ (SUI) ಎಂದರೆ ಒನ್ ಸೆಲ್ಫ್, CAEDIESಎಂದರೆ ಕೊಲ್ಲುವುದು ಎಂಬ ಅರ್ಥವಿರುವ ಸ್ಯೂಸೈಡ್ ಎಂಬ ಪದವನ್ನು 1642ರಲ್ಲಿ ಮೊದಲು ಬಳಸಿದವರು ಸರ್ ಥಾಮಸ್ ಬ್ರೌನಿ ಎಂಬುವರು. ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಪ್ರಕಾರ ವ್ಯಕ್ತಿಯು ಉದ್ದೇಶಪೂರ್ವಕವಾಗಿ ತನ್ನ ಜೀವನವನ್ನು ತಾನೇ ಕೊಲ್ಲುವುದು ಆತ್ಮಹತ್ಯೆ. ಕೆಲವೊಮ್ಮೆ ಕಾರಣಗಳಿದ್ದು, ವ್ಯಕ್ತಿ ಸಾವಿಗೆ ಶರಣಾಗಬಹುದಾದರೂ, ಮತ್ತೆ ಕೆಲವೊಮ್ಮೆ ವ್ಯಕ್ತಿ ಏಕೆ ಇಂಥ ಕ್ರಮಕ್ಕೆ ಮುಂದಾಗಿರಬಹುದು ಎಂಬುದನ್ನು ಊಹಿಸೋದು ಅಸಾಧ್ಯ. ಸುಮಾರು 15-30 ವರ್ಷದವರು ಶೇ.40ರಷ್ಟು, 30-45 ವಯಸ್ಸಿನ ಶೇ.35 ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಕಾರಣಗಳು ನೂರಾರು
ಮೂರ್ಛೆರೋಗ, ಹೃದ್ರೋಗ, ಡಿಮನ್ಷಿಯಾ, ಮೆದುಳಿಗಾದ ಪೆಟ್ಟು, ಏಡ್ಸ್‌ನಂಥ ದೀರ್ಘಕಾಲದ ರೋಗಗಳು ಆತ್ಮಹತ್ಯೆಗೆ ಕಾರಣವಾಗಬಲ್ಲದು. ಆರ್ಥಿಕ, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳು, ಪ್ರೇಮ ವೈಫಲ್ಯ, ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವುದು, ಆಸ್ತಿ ಜಗಳ, ವರದಕ್ಷಿಣೆ ಕಿರುಕುಳ, ದುಶ್ಚಟ, ವಂಶೀಯ, ಜೈವಿಕ ಕಾರಣಗಳೂ ಮನುಷ್ಯನನ್ನು ಆತ್ಮಹತ್ಯೆ ಕೂಪಕ್ಕೆ ತಳ್ಳುತ್ತದೆ.
ಕೆಲವು ಸಂಶೋಧನೆಗಳ ಪ್ರಕಾರ ಖಿನ್ನತೆ ಹಾಗೂ ಆತ್ಮಹತ್ಯೆಗೆ ಮಾನವನ ಮೆದುಳಿನಲ್ಲಿ ಸೆರೆಟೋನಿನ್ ಎಂಬ ಅಂಶ ಕಡಿಮೆ ಆಗುವುದೇ ಮುಖ್ಯ ಕಾರಣ. ವ್ಯಕ್ತಿಯಲ್ಲಿ ಖಿನ್ನತೆಯ ಲಕ್ಷಗಳು ಕಂಡಾಗ ಸೂಕ್ತ ಚಿಕಿತ್ಸೆ ಮೂಲಕ ಸೆರೆಟೋನಿನ್ ಪ್ರಮಾಣ ಸರಿಯಾಗುವಂತೆ ನೋಡಿಕೊಂಡರೆ ಆತ್ಮಹತ್ಯೆ ಪ್ರಮಾಣವನ್ನು ತಗ್ಗಿಸಬಹುದು. ವ್ಯಕ್ತಿತ್ವ ದೋಷಗಳೂ ವ್ಯಕ್ತಿಯಿಂದ ವ್ಯಕ್ತಿಗೆ ಹರಿದು ಬರುವ ಸಾಧ್ಯತೆಗಳಿರುವುದರಿಂದ ವಂಶದಲ್ಲಿ ಯಾರಾದರೂ ಆತ್ಮಹತ್ಯೆಗೆ ತುತ್ತಾಗಿದ್ದರೂ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಬಹುದು.
ಮೂಡ್ ಅಥವಾ ಕಾಗ್ನಿಟೀವ್ ಡಿಸಾರ್ಡರ್‌ಗಳೂ ಆತ್ಮಹತ್ಯೆಯ ಪ್ರಮುಖ ಕಾರಣಗಳಲ್ಲೊಂದು. ಸಮಾಜಘಾತಕ ವ್ಯಕ್ತಿತ್ವ, ಸಬ್ಸೆಂಟ್ಸ್ ಯೂಸ್ ಡಿಸಾರ್ಡರ್ ಸಹ ಆತ್ಮಹತ್ಯೆಗೆ ಶೇ.90ರಷ್ಟು ಕಾರಣವಾಗಬಲ್ಲದು. ಮಧ್ಯವಯಸ್ಸಿನ ಜನರಲ್ಲಿ ಹೆಚ್ಚು ಖಿನ್ನತೆ, ಉದ್ವೇಗ ಹಾಗೂ ಕ್ರೌರ್ಯ ಪ್ರವೃತ್ತಿ ಕಂಡು ಬರುವುದು ಸಂಶೋಧನೆಗಳಿಂದ ಸಾಬೀತಾಗಿದ್ದು, ಅವರು ಬೇಗ ಆತ್ಮಹತ್ಯೆಗೆ ಬಲಿಯಾಗುತ್ತಾರೆ.
ವಿಜನ್ಯ ಭ್ರಮೆ ಹೆಚ್ಚಿರುವ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವವ ಶೇ.10 ಮಂದಿಗೆ ಆತ್ಮಹತ್ಯಾ ಮಾಡಿಕೊಳ್ಳುವ ಮನಸ್ಸಿರುತ್ತದೆ.
ಚಟದಿಂದ ಚಟ್ಟಕ್ಕೆ
ಮದ್ಯಪಾನಿಗಳಲ್ಲಿ ಸುಮಾರು ಶೇ.20ರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದರಲ್ಲಿ ಪುರುಷರೇ ಹೆಚ್ಚು. ಖಿನ್ನತೆ ಹೆಚ್ಚಿಸುವ ಮದ್ಯಪಾನದಿಂದ ದಾಂಪತ್ಯದಲ್ಲಿ ವಿರಸ, ನಿರುದ್ಯೋಗ ಸಮಸ್ಯೆ, ಒಂಟಿತನ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ.
ಸೂಕ್ಷ್ಮವಾಗಿ ಗಮನಿಸಿ
ಆತ್ಮಹತ್ಯಾ ಮನೋಭಾವ ಇರುವವರು ಆತ್ಮಹತ್ಯೆ ಮಾಡಿಕೊಳ್ಳುವ ಸಂಬಂಧ ಪದೆಪದೆ ಸುಳಿವು ನೀಡುತ್ತಲೇ ಇರುತ್ತಾರೆ. ಇವರು ಊಟ, ನಿದ್ರೆ ಸರಿ ಮಾಡೋಲ್ಲ. ವ್ಯಕ್ತಿತ್ವದಲ್ಲಿ ಆಗಿಂದಾಗ್ಗೆ ಬದಲಾವಣೆ, ಸ್ನೇಹಿತರೊಡನೆ ಅಂತರ ಕಾಪಾಡೋದು, ಮಾಡುವುದು, ಸಾಮಾಜಿಕ ಕಾರ್ಯಕ್ರಮಗಳಿಂದ ದೂರವಿರುವುದು, ಹವ್ಯಾಸ, ಓದಿನಲ್ಲಿ ನಿರಾಸಕ್ತಿ, ವಿಪರೀತ ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ, ದೈಹಿಕ ಸ್ವಚ್ಛತೆ ಬಗ್ಗೆ ಕಾಳಜಿ ಕಡಿಮೆಯಾಗುವುದು, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು ಇವೆಲ್ಲ ಆತ್ಮಹತ್ಯೆಯ ಮುನ್ಸೂಚನೆಗಳೇ. ಕೆಲವು ದೀರ್ಘಕಾಲದ ರೋಗದಿಂದ ಆಸ್ಪತ್ರೆಗೆ ದಾಖಲಾದಾಗ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಸಿದರೆ ಆತ್ಮಹತ್ಯಾ ಲಕ್ಷಣಗಳು ಗೋಚರಿಸುತ್ತವೆ. ಆಪ್ತ ಸಲಹೆ, ಚಿಕಿತ್ಸೆ, ಯೋಗ ಹಾಗೂ ಧ್ಯಾನ ಮುಂತಾದ ಕ್ರಮಗಳಿಂದ ಸ್ಯೂಸೈಡಲ್ ಟೆಂಡೆನ್ಸಿಯನ್ನು ಕಡಿಮೆ ಮಾಡಬಹುದು.
- ಕೆ.ಸಿ. ಸದಾನಂದ ರಾವ್, 9880441703