

ಕೆಲವರಿರುತ್ತಾರೆ, ಯಾರನ್ನೂ ಹಂಗಿಸದೇ ಬಿಡರು. ಯಾರನ್ನೂ, ಯಾರ ಮಾತನ್ನೂ ಒಪ್ಪರು. ಎಲ್ಲದಕ್ಕೂ ತಮ್ಮದೊಂದು ಅಭಿಪ್ರಾಯ ಮಂಡಿಸುವುದು ಇವರ ಖಯಾಲಿ. ಇಂಥ 'ಬುದ್ಧಿಜೀವಿ'ಗಳು ತಕ್ಕಮಟ್ಟಿಗೆ ವಿದ್ಯಾಭ್ಯಾಸ ಮಾಡಿ, ಒಂದಿಷ್ಟು ಪುಸ್ತಕ ಓದಿಕೊಂಡಿರುತ್ತಾರೆ. ಪತ್ರಿಕೆ, ಪುಸ್ತಕ, ಟಿವಿ ನೋಡುತ್ತಾ ಚಿತ್ರರಂಗ, ರಾಜಕೀಯ, ಸಾಮಾಜಿಕ ವ್ಯವಸ್ಥೆ ಹೀಗೆ ಎಲ್ಲವನ್ನೂ, ಎಲ್ಲರನ್ನೂ ಬೈಯ್ಯುತ್ತಿರುತ್ತಾರೆ.
ಇಂಥವರು ಗೆಳೆಯರ ಗುಂಪು, ಶಾಲಾ-ಕಾಲೇಜು, ಕಚೇರಿ, ಓಣಿಗಳಲ್ಲಿ ನಮ್ಮನಿಮ್ಮ ಮಧ್ಯೆಯೇ ಇದ್ದು ಸದಾ ಎಲ್ಲದರಲ್ಲೂ ಮೂಗು ತೂರಿಸುತ್ತಾ ತಮ್ಮ 'ಪಾಂಡಿತ್ಯ' ಪ್ರದರ್ಶಿಸಲು ಹಾತೊರೆಯುತ್ತಾರೆ. ಮೊಂಡು ವಾದ, ಒಣ ತರ್ಕ ಮಾಡುತ್ತಾ ಎಲ್ಲವನ್ನೂ ಅಲ್ಲಗಳೆದುಬಿಡುತ್ತಾರೆ.
ತಮ್ಮನ್ನು ತಾವು ಗುರುತಿಸಿಕೊಳ್ಳಬೇಕೆಂಬ ಹುಂಬತನದಲ್ಲಿ 'ನನಗೆಲ್ಲ ಗೊತ್ತು' ಎನ್ನುತ್ತಲೇ ಇತರರ ವಿಚಾರಗಳನ್ನು ಅಲ್ಲಗಳೆಯುತ್ತಾರೆ. ಇಂಥವರಿಗೆ ಜ್ಞಾನ ಇಲ್ಲವೇ ಇಲ್ಲ ಎಂದಲ್ಲ. ಆದರೆ, ಯಾವ ವಿಷಯದ ಮೇಲೂ ಹಿಡಿತ ಅಥವಾ ಪೂರ್ಣ ಜ್ಞಾನ ಇರುವುದಿಲ್ಲ. ಬೇರೆಯವರು ತಮಗಿಂತ ಹೆಚ್ಚು ತಿಳಿದಿರಬಹುದು ಎಂಬ ಕಲ್ಪನೆಯೇ ಇವರಿಗೆ ಇರುವುದಿಲ್ಲ. ಇದ್ದರೂ ಅದನ್ನು ಒಪ್ಪಲು ಸಿದ್ಧರಿಲ್ಲ. ತಮ್ಮ ಅಲ್ಪಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಹರಟಲು ಶುರು ಮಾಡುತ್ತಾರೆ.
ಇವರ ವಿತಂಡವಾದ, ಒಣತರ್ಕ ಬೇರೆಯವರಿಗೆ ಕಿರಿಕಿರಿ ಆಗುವುದೇ ಹೆಚ್ಚು. ಇದರಿಂದ ಅನ್ಯರ ಮನಸ್ಸು ನೋಯಬಹುದು. ತಮ್ಮ ಮಾತೇ ನಡೆಯಬೇಕು ಎಂಬ ಹಠ ಹಿಡಿದವರು ಯಾರೊಂದಿಗೂ ಶಾಶ್ವತವಾಗಿ ಸಂಬಂಧ ಉಳಿಸಿಕೊಳ್ಳಲಾರರು, ತಾವೂ ನೆಮ್ಮದಿಯಿಂದ ಇರಲಾರರು. ಎಲ್ಲರ ಮೇಲೂ ಅಪನಂಬಿಕೆ, ವೈರತ್ವ ಬೆಳೆಯುತ್ತದೆ. ಇಂಥ ಮನಸ್ಥಿತಿ ಮುಂದೊಂದು ದಿನ ಒಂಟಿತನಕ್ಕೆ ದಾರಿ ಮಾಡುತ್ತದೆ.
ಇವರು ತಮ್ಮ ಜೀವನದಲ್ಲಿ ಸಣ್ಣ ಮಾರ್ಪಾಟು ಮಾಡಿಕೊಂಡರೆ ಸಾಕು, ಅವರ ಜೀವನ ಅದ್ಭುತವಾಗುತ್ತದೆ. ಗೆಳೆಯರ ಗುಂಪು ಬೆಳೆಯುತ್ತದೆ.
ಮಾಡಬೇಕಾದ್ದು ಇಷ್ಟೇ
- ತರ್ಕ ಮಾಡುವುದು ತಪ್ಪಲ್ಲ. ಅದರಲ್ಲಿ ವಾಸ್ತವತೆ ಇರಲಿ. ವಿನಾಕಾರಣ ಮೊಂಡುವಾದ ಮಾಡುವುದರಿಂದ ಯಾರಿಗೂ ಲಾಭವಿಲ್ಲ. ವೈಷಮ್ಯ, ಅಸೂಯೆ, ದ್ವೇಷ ಮಾತ್ರವೇ ನಿಮಗೆ ದಕ್ಕುತ್ತದೆ.
- ನನಗೆಲ್ಲ ಗೊತ್ತು ಎಂದರೆ ನಮ್ಮ ಬುದ್ಧಿಗೆ ನಾವೇ ಬೇಲಿ ಹಾಕಿದಂತೆ. ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆನ್ನಿ, ಗೊತ್ತಿದ್ದವರ ಮಾತು ಗಮನವಿಟ್ಟು ಕೇಳಿ. ಆಗ ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಳ್ಳುವ ಅವಕಾಶ ನಿಮ್ಮದಾಗುತ್ತೆ.
- ಯಾವುದೇ ವಿಷಯದ ಬಗ್ಗೆ ಸಂಪೂರ್ಣ ಗೊತ್ತಿದ್ದರೆ ಮಾತ್ರ ಮಾತನಾಡಿ. ಇತರರು ನಿಮ್ಮ ಅಭಿಪ್ರಾಯ ಕೇಳಿದಾಗ ಮಾತ್ರ ಹೇಳಿ. ಯಾರೋ ಮಾತನಾಡುತ್ತಿರುವಾಗ ಮಧ್ಯೆ ಬಾಯಿಹಾಕಿ ಪಾಂಡಿತ್ಯ ಪ್ರದರ್ಶಿಸಲು ಹೋಗಬೇಡಿ.
- ಎಲ್ಲರಿಗೂ ಎಲ್ಲ ವಿಷಯ ಗೊತ್ತಿರಲು ಸಾಧ್ಯವಿಲ್ಲ. ಎಲ್ಲ ಗೊತ್ತಿರುವವರು ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ವಿಷಯದ ಮೇಲೆ ಹಿಡಿತ ಇರುತ್ತದೆ. ಯಾರೂ ದಡ್ಡರಲ್ಲ. ನಿಮ್ಮ ಮಧ್ಯೆಯೇ ನಿಮಗಿಂತಲೂ ಹೆಚ್ಚು ತಿಳಿದವರು ಇರುತ್ತಾರೆ ಎಂಬುದು ನೆನಪಿರಲಿ.
- ನಾವಾಡುವ ಮಾತನ್ನು ಮಾಡಿ ತೋರಿಸುವ, ಹೇಳಿದಂತೆ ನಡೆದುಕೊಳ್ಳುವ ಗುಣ ಬೆಳಸಿಕೊಳ್ಳಿ. ಬರಿ ಮಾತಿನಿಂದ ಎಲ್ಲವನ್ನೂ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಬರಿ ಮಾತನಾಡಿ ಅದನ್ನು ಕೃತಿಗಿಳಿಸದಿದ್ದರೆ 'ಬಂಡಲ್ ಬಡಾಯಿ ಮಾದೇವಾ' ಹಣೆಪಟ್ಟಿ ಗಳಿಸುತ್ತಿರಷ್ಟೆ.
- ನಾವು ಯಾವಾಗ ನಾನು ಮಾಡಿದ್ದೇ ಸರಿ, ನನ್ನದೇ ಸರಿ ಎಂದುಕೊಳ್ಳುತ್ತೀವೋ ಆಗ ಇತರರಿಗೆ ನಮ್ಮ ಪೆದ್ದುತನ ಕಾಣಿಸುತ್ತೆ. ನಮ್ಮೊಳಗಿನ ಆಹಂಕಾರ ನಮ್ಮ ವಿಶಾಲ ಅರಿವಿಗೆ ಭಂಗ ತರುತ್ತೆ.
- ನನಗೆಲ್ಲ ಗೊತ್ತು ಎನ್ನುತ್ತಾ ಬಾವಿಯ ಕಪ್ಪೆಗಳಾಗಬೇಡಿ. ಅದರಾಚೆಗೂ ಜಗತ್ತಿದೆ. ಸೋ... ಆ ಬಾವಿಯಿಂದ ಹೊರಬನ್ನಿ.
- ಗೊತ್ತಿದ್ರೆ ಗೊತ್ತಿದ್ಹಾಗಿರು, ಗೊತ್ತಿಲ್ದೆ ಇದ್ರೆ ಗೊತ್ತಿಲ್ದೆ ಇರೋ ಹಾಗಿರು, ಗೊತ್ತಿದ್ರೂ ಗೊತ್ತಿಲ್ದೆ ಇರೋಹಾಗಿದ್ರೆ, ಗೊತ್ತಿಲ್ದೆ ಇದ್ರೂ ಗೊತ್ತಿದ್ದ ಹಾಗಿದ್ರೆ, ಗೊತ್ತಿದ್ದಿದ್ದೂ ಗೊತ್ತಾಗೋದಿಲ್ಲಾ, ಗೊತ್ತಾಯ್ತಾ?!
- ಗಣೇಶ್ ಕಮ್ಲಾಪುರ
ganeshkamlapur@gmail.com