

ಸುಖವಾಗಿರುವುದೆಂದರೆ ಸಿಕ್ಕಿದ್ದೆಲ್ಲಾ ತಿನ್ನುವುದು ಅಥವಾ ಕಂಡಿದ್ದೆಲ್ಲಾ ತಿನ್ನದೇ ಇರುವುದು ಎಂದೇನಲ್ಲ. ಮಾಡುವ ಕೆಲಸಕ್ಕೆ ಪೂರಕವಾಗಿ ಬೇಕಾಗುವ, ಇಷ್ಟವಾಗುವಂಥ ಅಥವಾ ಆರ್ಥಿಕ ಶಕ್ತಿಗೆ ತಕ್ಕಂತೆ ಆಹಾರ ಪದಾರ್ಥಗಳನ್ನು ಸವಿಯುವುದು. ಹಾಗಿದ್ದಾಗ್ಯೂ, ನಿಶ್ಶಕ್ತಿ, ಬೊಜ್ಜಿನಂಥ ಸಮಸ್ಯೆಗಳು ಕಾಡದೇ ಬಿಡುವುದಿಲ್ಲ. ಇದನ್ನು ನಿವಾರಿಸಲು ನಾವು ಏನೇನೋ ಮಾಡುತ್ತೇವೆ. ಸಾವಿರಾರು ರುಪಾಯಿ ಖರ್ಚು ಮಾಡುತ್ತೇವೆ. ಆದರೆ, ಇದಕ್ಕೊಂದು ಸಿಂಪಲ್ ಪರಿಹಾರವಿದೆ. ಅದೇ ವಾಕಿಂಗ್, ಅಂದರೆ ನಡಿಗೆ. ಟಕ್ ಟಕ್ ಟಕ್...
ಬೆಳಗಿನ ಆಲಸ್ಯವನ್ನು ದೂರ ಮಾಡಿ, ಮನಸ್ಸನ್ನು ಚಿಂತನೆಗಳಿಗೆ ತೆರೆದುಕೊಳ್ಳುವಂತೆ ಪ್ರೇರೇಪಿಸಬಲ್ಲ ಗುಣ ಈ ವಾಕಿಂಗ್‌ಗೆ ಇದೆ.
ಮನೆಗೆಲಸದ ಮಧ್ಯೆ ನೀವು ಯಾವುದೇ ವಾಕಿಂಗ್ ಬೇಡ ಎಂದು ನಿರ್ಲಕ್ಷಿಸುವುದು ಬೇಡ. ಕನಿಷ್ಠ ಅರ್ಧ-ಮುಕ್ಕಾಲು ತಾಸಾದರೂ ವಾಕಿಂಗ್ ಮಾಡುವುದನ್ನು ರೂಢಿಸಿಕೊಳ್ಳಿ.
ಇದಕ್ಕೆಂದೇ ಸಮಯ ಮೀಸಲಿಡಿ. ಕಡೇಪಕ್ಷ ಆರು ದಿನವಾದರೂ ನೀವು ವಾಕಿಂಗ್‌ಗೆ ಮನಸೋತರೆ ಅದೂ ನಿಮಗೆ ಉತ್ತಮ ಆರೋಗ್ಯ ದಯಪಾಲಿಸುತ್ತದೆ.
ಮುಂಜಾನೆ ಅಥವಾ ಸಂಜೆ ಕನಿಷ್ಠ ಐದಾರೂ ಕಿ.ಮೀ.ಗಳವರೆಗಿನ ನಡಿಗೆ ನಿಮಗೆ ಸಾಧ್ಯವಾಗುವಂತಿರಲಿ. 10 ನಿಮಿಷದಲ್ಲಿ ಕಿ.ಮೀ. ಗುರಿ ತಲುಪುವ ಪ್ರಯತ್ನ ಜೊತೆಗಿರಲಿ.
ಹೃದಯ ಸಂಬಂಧಿ ತೊಂದರೆಗಳಿಗೆ ವಾಕಿಂಗ್ ಮನೆಮದ್ದಿದ್ದಂತೆ. ಇದರಿಂದ ರಕ್ತದೊತ್ತಡ ನಿಯಂತ್ರಣ ಸಾಧ್ಯ. ರಕ್ತಸಂಚಾರವೂ ಸುಲಲಿತವಾಗುತ್ತದೆ.
'ಮಲಗಿ ಮಲಗಿ ಕಳೆದುಕೊಂಡ ಸಾಮರ್ಥ್ಯವನ್ನು ಓಡಿ, ನಡೆದಾಡಿ ಕಂಡುಕೊಳ್ಳಬೇಕು' ಎಂಬ ಮಾತಿನಲ್ಲಿ ನಂಬಿಕೆ ಇಡಿ. ಅಂದ್ರೆ, ನಡಿಗೆ ನಿಮ್ಮ ಅಂಗಾಂಗಗಳಿಗೆ ಕಸುವು ನೀಡುವುದಲ್ಲದೆ ದೇಹಕ್ಕೂ ಅಂದ ತಂದುಕೊಡುತ್ತದೆ.
ತಲೆನೋವು, ಆಯಾಸ ಅಂಟಿಕೊಳ್ಳುವುದು ಹೆಚ್ಚು ನಿದ್ರೆ ಮಾಡುವುದರಿಂದ! ಅದಕ್ಕೆ ಬ್ರಹ್ಮಾಸ್ತ್ರವೆಂದರೆ ಲಘು ವ್ಯಾಯಾಮ. ವಾಕಿಂಗ್‌ನಂಥ ಚಟುವಟಿಕೆಯಿಂದ ಅದನ್ನು ನಿಯಂತ್ರಿಸಬಹುದು.
30 ನಿಮಿಷ ನಡೆಯುವುದರಿಂದ ಕಾಲಿನ ಮೂಳೆಗಳ ಬಲ ಹೆಚ್ಚುತ್ತದೆ. ನಡೆಯುತ್ತಲೇ ಕೈ, ಕುತ್ತಿಗೆ, ಸೊಂಟ, ಹೊಟ್ಟೆ ಮತ್ತು ಎದೆ ಭಾಗಕ್ಕೂ ಪೂರಕವಾದ ವ್ಯಾಯಾಮಗಳನ್ನು ಮಾಡುತ್ತಿರಿ.
ನೀವು ಡಯಾಬಿಟಿಸ್ ಪೇಶೆಂಟಾ? ವಾಕಿಂಗ್ ಮಾಡಬೇಕೆನಿಸಿದರೆ ವೈದ್ಯರ ಸಲಹೆ ಕೇಳುವುದೊಳಿತು. ವಾರಕ್ಕೆ 150 ನಿಮಿಷಗಳ ವಾಕಿಂಗ್‌ನಿಂದ ಡಯಾಬಿಟಿಸ್ ಅನ್ನು ತಗ್ಗಿಸಬಹುದು.
ಸ್ತನ ಮತ್ತು ಕರುಳು ಕಾನ್ಯರ್ ರೋಗಿಗಳೂ ನಡಿಗೆಯಂಥ ವ್ಯಾಯಾಮಕ್ಕೆ ಒಗ್ಗಿಕೊಳ್ಳುವುದು ಒಳಿತು. ನಿತ್ಯ ವಾಕಿಂಗ್ ಮಾಡುವುದರಿಂದಲೂ ಸ್ತನ ಮತ್ತು ಕರುಳು ಕ್ಯಾನ್ಸರನ್ನು ದೂರವಿಡಬಹುದು.
ಓಡುವುದಕ್ಕಿಂದ ನಡೆಯುವುದೇ ಮೇಲು. ಮೊಣಕಾಲು ಚಿಪ್ಪು, ಮಣಿಗಳಿಗೆ ನಡಿಗೆಯಿಂದ ಬಲ ತುಂಬಬಹುದು ಎಂಬುದು ಪರಿಣತ ವೈದ್ಯರ ನುಡಿ.
ಯಾವುದೇ ವಯಸ್ಸಿನವರೂ ಈ ನಡಿಗೆ ವ್ಯಾಯಾಮಕ್ಕೆ ಮುಂದಾಗಬಹುದು. ಸಮಾನಾಂತರ ವೇಗ ಕಾಪಾಡಿಕೊಂಡ ನಡಿಗೆಯಿಂದ ಮನೋಬಲವನ್ನು ಹೊಂದಬಹುದು.
ಖರ್ಚಿಲ್ಲದ ವ್ಯಾಯಾಮ, ವಾಕಿಂಗ್. ಹೀಗೂ ಮಾಡಿ, ನಡಿಗೆಗೆಂದೇ ಖರ್ಚು ಮಾಡಿ ಶೂ ಖರೀದಿಸಿ. ಇದು ನಿಮ್ಮಲ್ಲಿ ಚೈತನ್ಯ ಕಾಪಿಡುವುದಲ್ಲದೆ ಆರಾಮದಾಯಕ ನಡಿಗೆಗೆ ಸಹಕಾರಿಯಾಗುತ್ತದೆ.
ಮನೆಯಲ್ಲೇ ರನ್ನಿಂಗ್ ಮಷಿನ್ ಮೇಲೆ ಓಡುವುದಕ್ಕಿಂದ ಹೊರಗಡೆ ನಾಲ್ಕು ಹೆಜ್ಜೆ ನಡೆಯುವುದು ಅತ್ಯುತ್ತಮ. ವ್ಯಾಯಾಮದ ಉಪಕರಣಗಳ ನೆರವಿಲ್ಲದೆ ಉತ್ತಮ ಮೂಡ್‌ನಲ್ಲಿಡಬಲ್ಲ ವ್ಯಾಯಾಮ ಅಂದ್ರೆ ನಡಿಗೆ ಮಾತ್ರ.
ಸೋ, ಜಸ್ಟ್ ಸ್ಟಾರ್ಟ್ ವಾಕಿಂಗ್.
- ಶಿವಮೊಗ್ಗ ಗಿರಿಧರ್