ಏನಿದು ನಿಪಾಹ್ ವೈರಾಣು; ಬಾವಲಿಗೂ ಈ ವೈರಾಣುವಿಗೂ ಏನು ಸಂಬಂಧ?

ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ನಿಪಾಹ್ ವೈರಾಣು ಎನ್‌ಸಿಫಾಲಿಟಿಸ್‌-ಇನ್‌ಡ್ಯೂಸಡ್‌ ಮಯೋಕಾರ್ಡಿಟಿಸ್‌ (ಎನ್‌ಇಎಂ) ಮಾದರಿಯ ವೈರಸ್ ಆಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ನಿಪಾಹ್ ವೈರಾಣು ಎನ್‌ಸಿಫಾಲಿಟಿಸ್‌-ಇನ್‌ಡ್ಯೂಸಡ್‌ ಮಯೋಕಾರ್ಡಿಟಿಸ್‌ (ಎನ್‌ಇಎಂ)  ಮಾದರಿಯ ವೈರಸ್ ಆಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಏನಿದು ನಿಪಾಹ್ ವೈರಾಣು, ಹೇಗೆ ಪಸರಿಸುತ್ತದೆ?
ನಿಪಾಹ್ ಝೂನೋಸಿಸ್ ಮಾದರಿಯ ವೈರಾಣಾಗಿದ್ದು, ಇದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಹಲುವ ಬಗೆಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ. ಅಂತೆಯೇ ಪ್ರಾಣಿ ಇಲ್ಲವೇ ಪಕ್ಷಿಗಳಿಂದಲೂ ಇದು ಹರಡುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ನಿಪಾಹ್ ವೈರಾಣು ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಲ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೆ ಈ ಸೋಂಕು ಹರಡುವ ಸಾಧ್ಯತೆ ಇದೆ. 
ಮೊದಲ ಬಾರಿಗೆ ಪತ್ತೆಯಾಗಿದ್ದು ಎಲ್ಲಿ?
ಇನ್ನು ಈ ಮಾರಕ ನಿಪಾಹ್ ವೈರಾಣುವನ್ನು ಮೊದಲ ಬಾರಿಗೆ 1998ರಲ್ಲಿ ಮಲೇಷ್ಯಾದಲ್ಲಿ ಗುರುತಿಸಲಾಯಿತು. ಆದರೆ ಆ ಸಂದರ್ಭದಲ್ಲಿ ಈ ಸೋಂಕು ಹಂದಿಗಳ ಮುಖಾಂತರ ಹಬ್ಬುತ್ತಿತ್ತು. ಎನ್‌ಸಿಫಾಲಿಟಿಸ್‌-ಇನ್‌ಡ್ಯೂಸಡ್‌ ಮಯೋಕಾರ್ಡಿಟಿಸ್‌ (ಎನ್‌ಇಎಂ)  ಮಾದರಿಯ ವೈರಸ್ ಆಗಿರುವ ನಿಪಾಹ್,  ಹೆಂಡ್ರಾ ವೈರಾಣುವನ್ನೇ ಹೋಲುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಅಂದೇ ವೈದ್ಯರು ಈ ವೈರಾಣು, ಹಂದಿ, ಕೋಳಿಯಂತಹ ಮಾಂಸಾಹಾರದಿಂದ ಈ ವೈರಾಣು ಹರಡಲ್ಪಡುತ್ತದೆ ಎಂದು ಶಂಕಿಸಿದ್ದರು.
20 ವರ್ಷಗಳಾದರೂ ಈ ವೈರಾಣುವಿಗೆ ಲಸಿಕೆಯೇ ಇಲ್ಲ!
ಈ ನಿಪಾಹ್ ವೈರಾಣು 1998ರಲ್ಲೇ ಪತ್ತೆಯಾಗಿದ್ದರೂ, ಈ ವೈರಾಣುವಿಗೆ ಈ ವರೆಗೂ ಲಸಿಕೆಯನ್ನೇ ಕಂಡು ಹಿಡಿಯಲಾಗಿಲ್ಲ. ಮಾರಣಾಂತಿಕ ಕಾಯಿಲೆಗಳನ್ನು ತರಬಲ್ಲ ನಿಪಾಹ್ ವೈರಾಣುವಿಗೆ ಲಸಿಕೆ ತಯಾರಿಸಲು ಸಾಕಷ್ಟು ವೈದ್ಯಕೀಯ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆಯಾದರೂ ಲಸಿಕೆ ಮಾತ್ರ ಇನ್ನೂ ಕಂಡುಹಿಡಿಯಲಾಗಿಲ್ಲ.  ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ ಎನ್ನಲಾಗಿದೆ.
ನಿಪಾಹ್ ಸೋಂಕಿನ ಲಕ್ಷಣಗಳೇನು?
ನಿಪಾಹ್ ಸೋಂಕು ನಮ್ಮನ್ನು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 5ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ. ಕೆಲ ಪ್ರಕರಣಗಳಲ್ಲಿ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ.  ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರುವ ಅಪಾಯವಿದೆ. ಅಲ್ಲದೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಏನು?
ಯಾವುದೇ ರೀತಿಯ ಸೋಂಕುಗಳಾದರೂ ಅದರ ನಿರ್ಮೂಲನೆ ಅಥವಾ ನಿಯಂತ್ರಣ ಮನಷ್ಯನ ರೋಗ ನಿರೋಧಕ ಸಾಮರ್ಥ್ಯದ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರ ಪದಾರ್ಥಗಳು, ಡಯಟ್ ಗಳನ್ನು ಪಾಲಿಸುವುದು ಉತ್ತಮ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹರ್ಬಲ್ ಟೀ (ಗಿಡಮೂಲಿಕಾ ಚಹಾ) ಅಥವಾ ವಿವಿಧ ಬಗೆಯ ಕಷಾಯಗಳನ್ನು ಆಗಾಗ ಸೇವಿಸುತ್ತಿರಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com