ಆರೋಗ್ಯ

ದೇಶದಲ್ಲಿ ಸಂತಾನೋತ್ಪತ್ತಿ ವಯೋಮಾನದ ಬಹುತೇಕ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ!

ದೇಶದಲ್ಲಿ ಸಂತಾನೋತ್ಪತ್ತಿ ವಯೋಮಾನದ ಬಹುತೇಕ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ!
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದೇಶದಲ್ಲಿ ಸಂತಾನೋತ್ಪತ್ತಿ ವಯೋಮಾನದ (15ರಿಂದ 49 ವರ್ಷ) ಅರ್ಧಕ್ಕಿಂತ ಹೆಚ್ಚು ಮಹಿಳೆಯರು ರಕ್ತಹೀನತೆ (anaemic) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸರ್ಕಾರಿ ಸಮೀಕ್ಷೆಯ ವರದಿ ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಧೀನದ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (NIN) ನಡೆಸಿದ 'ಜನರ ಆರೋಗ್ಯ, ಚಟುವಟಿಕೆ, ಆಹಾರ ಪದ್ಧತಿ ಮತ್ತು ದೇಹರಚನೆಯ ಸೂಚಕಗಳ ಮೌಲ್ಯಮಾಪನ ಸಮೀಕ್ಷೆ' (SAMPADA) ಪ್ರಕಾರ, ಹದಿಹರೆಯದ ಹೆಣ್ಣುಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಂದಿ ಹಾಗೂ 20ರಿಂದ 59 ವರ್ಷದ ಗರ್ಭಿಣಿಯರಲ್ಲದ ಮತ್ತು ಹಾಲುಣಿಸದ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಹದಿಹರೆಯದ ಗಂಡುಮಕ್ಕಳು, ವಯಸ್ಕ ಪುರುಷರು ಮತ್ತು ಹಿರಿಯ ಪುರುಷರಲ್ಲಿ ರಕ್ತಹೀನತೆಯ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ. ರಕ್ತಹೀನತೆಯಿಂದ ಬಳಲುತ್ತಿರುವವರಲ್ಲಿಯೂ ನಾಲ್ಕನೇ ಮೂರು ಭಾಗದಷ್ಟು ಮಂದಿಯಲ್ಲಿ ಸೌಮ್ಯ ಸ್ವರೂಪದ ರಕ್ತಹೀನತೆ ಕಂಡುಬಂದಿದೆ.

ಕೆಂಪು ರಕ್ತಕಣಗಳ ಸಂಖ್ಯೆ ಅಥವಾ ಅವುಗಳಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆಯಾದಾಗ ಉಂಟಾಗುವ ಸ್ಥಿತಿಯನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಇದು ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

ಹಿಂದಿನ ರಾಷ್ಟ್ರೀಯ ಸಮೀಕ್ಷೆಗಳಿಗೆ ಹೋಲಿಸಿದರೆ ಐಸಿಎಂಆರ್ ನಡೆಸಿದ ಸಮೀಕ್ಷೆಯಲ್ಲಿ ರಕ್ತಹೀನತೆಯ ಪ್ರಮಾಣ ಕಡಿಮೆ ಇರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5, 2019-21) ಪ್ರಕಾರ, 15ರಿಂದ 49 ವರ್ಷದ ಮಹಿಳೆಯರಲ್ಲಿ ಶೇ.57, ಹದಿಹರೆಯದ ಹೆಣ್ಣುಮಕ್ಕಳಲ್ಲಿ ಶೇ.59.1 ಹಾಗೂ 6ರಿಂದ 59 ತಿಂಗಳ ಮಕ್ಕಳಲ್ಲಿ ಶೇ.67.1ರಷ್ಟು ರಕ್ತಹೀನತೆ ಕಂಡುಬಂದಿತ್ತು. ಗರ್ಭಿಣಿಯರಲ್ಲಿ ಶೇ.52.2ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದರು.

ಹೆಚ್ಚಿನ ಪ್ರಕರಣಗಳು ಸೌಮ್ಯ ಸ್ವರೂಪದ ರಕ್ತಹೀನತೆಯಾಗಿದ್ದು, ಆರಂಭಿಕ ಹಂತದಲ್ಲೇ ಮಧ್ಯಪ್ರವೇಶಿಸಿ ಸಮಸ್ಯೆ ತಡೆಗಟ್ಟಲು ಅವಕಾಶವಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ರಕ್ತಹೀನತೆಯ ಪ್ರಮಾಣದಲ್ಲಿ ಸೌಮ್ಯ ಸ್ವರೂಪದ ಪ್ರಕರಣಗಳ ಪಾಲು ಗಣನೀಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಹಾಗೂ ಮಕ್ಕಳೂ ಸೇರಿದಂತೆ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅರ್ಧದಷ್ಟು ಮಂದಿಗೆ ಸೌಮ್ಯ ಸ್ವರೂಪದ ರಕ್ತಹೀನತೆ ಇದೆ. ಮಧ್ಯಮ ಅಥವಾ ತೀವ್ರ ಸ್ವರೂಪದ ರಕ್ತಹೀನತೆಗೆ ಹೋಲಿಸಿದರೆ, ಇವರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆಯ ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು ಪ್ರಕರಣಗಳಿಗೆ ಕಬ್ಬಿಣದ ಅಂಶದ ಕೊರತೆಯೇ ಕಾರಣವಾಗಿದೆ.

ಸೂಕ್ಷ್ಮ ಪೋಷಕಾಂಶಗಳ ಮೌಲ್ಯಮಾಪನದ ಪ್ರಕಾರ, ದುರ್ಬಲ ಜನಸಮೂಹಗಳಲ್ಲಿ ರಕ್ತಹೀನತೆಗೆ ಕಬ್ಬಿಣದ ಕೊರತೆಯೇ ಪ್ರಮುಖ ಕಾರಣವಾಗಿದ್ದರೂ, ಒಟ್ಟಾರೆ ಪ್ರಕರಣಗಳಲ್ಲಿ ಅದರ ಪಾಲು ಸುಮಾರು ಅರ್ಧದಷ್ಟಿದೆ. ಹೀಗಾಗಿ ಸೋಂಕುಗಳು, ಹಿಮೋಗ್ಲೋಬಿನ್ ಸಂಬಂಧಿತ ಆನುವಂಶಿಕ ಕಾಯಿಲೆಗಳು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಉಂಟಾಗುವ ಉರಿಯೂತ ಸೇರಿದಂತೆ ಪೌಷ್ಟಿಕಾಂಶ ಮತ್ತು ಪೌಷ್ಟಿಕಾಂಶೇತರ ಹಲವು ಕಾರಣಗಳನ್ನು ಏಕಕಾಲದಲ್ಲಿ ಪರಿಹರಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ಮಟ್ಟದಲ್ಲಿ ಈವರೆಗೆ ಸಾಕಷ್ಟು ಮಾಹಿತಿ ಲಭ್ಯವಿಲ್ಲದ ಹಿರಿಯ ನಾಗರಿಕರಲ್ಲಿನ ರಕ್ತಹೀನತೆಯ ಪ್ರಮಾಣದ ಬಗ್ಗೆಯೂ ಈ ಸಮೀಕ್ಷೆ ಅಂದಾಜು ಮಾಹಿತಿ ಒದಗಿಸಿದೆ.

ವಯಸ್ಸು, ಲಿಂಗ, ದೈಹಿಕ ಸ್ಥಿತಿ ಹಾಗೂ ವಾಸಸ್ಥಳಕ್ಕೆ ಅನುಗುಣವಾಗಿ ರಕ್ತಹೀನತೆಯ ಪ್ರಮಾಣದಲ್ಲಿ ಗಮನಾರ್ಹ ವ್ಯತ್ಯಾಸಗಳಿರುವುದನ್ನು ಸಂಶೋಧನೆಗಳು ತೋರಿಸಿವೆ. ಹೀಗಾಗಿ ಎಲ್ಲರಿಗೂ ಒಂದೇ ರೀತಿಯ ಕ್ರಮ ಅನುಸರಿಸುವ ಬದಲು, ವಿವಿಧ ಜನಸಮೂಹಗಳಿಗೆ ಅನುಗುಣವಾಗಿ ಪ್ರತ್ಯೇಕ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವನ್ನು ಈ ಅಂಶಗಳು ಒತ್ತಿಹೇಳುತ್ತವೆ.

ಮಕ್ಕಳು, ಹದಿಹರೆಯದವರು, ವಯಸ್ಕರು, ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಹಾಗೂ ಹಿರಿಯ ನಾಗರಿಕರಲ್ಲಿ ರಕ್ತಹೀನತೆಯ ಪ್ರಮಾಣದ ಕುರಿತು ರಾಷ್ಟ್ರೀಯ ಮಟ್ಟದ ಅಂದಾಜುಗಳನ್ನು SAMPADA ಸಮೀಕ್ಷೆ ಒದಗಿಸಿದೆ. ರಕ್ತಹೀನತೆಗೆ ಕಾರಣವಾಗಬಹುದಾದ ಅಂಶಗಳನ್ನು ಮೌಲ್ಯಮಾಪನ ಮಾಡಲು ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಕುರಿತಾದ ವಿವರವಾದ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ.

ಹಿಂದಿನ ರಾಷ್ಟ್ರೀಯ ಸಮೀಕ್ಷೆಗಳಿಗೆ ಹೋಲಿಸಿದರೆ SAMPADAಯಲ್ಲಿ ರಕ್ತಹೀನತೆಯ ಪ್ರಮಾಣ ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆ. ಈ ಸಮೀಕ್ಷೆಯ ಸಮಗ್ರ ಮಾಹಿತಿ, ರಕ್ತಹೀನತೆ ಮುಕ್ತ ಭಾರತ ಅಭಿಯಾನದಡಿ ನಡೆಯುತ್ತಿರುವ ರಾಷ್ಟ್ರೀಯ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು ಪೂರಕವಾಗಲಿದೆ" ಎಂದು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಹಾಗೂ ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ್ ಬಹಲ್ ತಿಳಿಸಿದ್ದಾರೆ.

ಈ ಸಂಶೋಧನೆಗಳು ರಕ್ತಹೀನತೆ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಹೆಚ್ಚು ಉದ್ದೇಶಿತ, ಜನಸಮೂಹ ಆಧಾರಿತ ಹಾಗೂ ಜೀವನದ ವಿವಿಧ ಹಂತಗಳನ್ನು ಗಮನದಲ್ಲಿಟ್ಟುಕೊಂಡ ಕಾರ್ಯತಂತ್ರಗಳನ್ನು ರೂಪಿಸಲು ನೆರವಾಗಲಿವೆ. ಹೆಚ್ಚಿನ ಸಂಶೋಧನೆ ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆಯ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಲೂ ಈ ಮಾಹಿತಿ ಸಹಕಾರಿಯಾಗಲಿದೆ ಎಂದು ಐಸಿಎಂಆರ್-ಎನ್‌ಐಎನ್ ನಿರ್ದೇಶಕಿ ಡಾ. ಭಾರತಿ ಕುಲಕರ್ಣಿ ಹೇಳಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6)ನಲ್ಲಿ ಲಭ್ಯವಾಗದಿದ್ದ ರಕ್ತಹೀನತೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಬಹುತೇಕ ವಯೋಮಾನದವರಲ್ಲಿ ತೀವ್ರ ಸ್ವರೂಪದ ರಕ್ತಹೀನತೆ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇದೆ.

35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 183 ಜಿಲ್ಲೆಗಳ 81,000ಕ್ಕೂ ಹೆಚ್ಚು ಕುಟುಂಬಗಳ 2 ಲಕ್ಷಕ್ಕೂ ಅಧಿಕ ಜನರನ್ನು ಒಳಗೊಂಡ ಸಮೀಕ್ಷೆಯಲ್ಲಿ, 12ರಿಂದ 59 ತಿಂಗಳ ಮಕ್ಕಳಲ್ಲಿ ಶೇ.41.8, 10ರಿಂದ 19 ವರ್ಷದ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಶೇ.46.3, 20ರಿಂದ 59 ವರ್ಷದ ಗರ್ಭಿಣಿಯರಲ್ಲದ ಮತ್ತು ಹಾಲುಣಿಸದ ಮಹಿಳೆಯರಲ್ಲಿ ಶೇ.54.8 ಹಾಗೂ 15ರಿಂದ 48 ವರ್ಷದ ಸಂತಾನೋತ್ಪತ್ತಿ ವಯೋಮಾನದ ಮಹಿಳೆಯರಲ್ಲಿ ಸುಮಾರು ಶೇ.56ರಷ್ಟು ರಕ್ತಹೀನತೆ ಕಂಡುಬಂದಿದೆ.

60 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಶೇ.55.7ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದರೆ, ಇದೇ ವಯೋಮಾನದ ಪುರುಷರಲ್ಲಿ ಶೇ.44.7ರಷ್ಟು ಮಂದಿಯಲ್ಲಿ ಈ ಸಮಸ್ಯೆ ಕಂಡುಬಂದಿದೆ.

10ರಿಂದ 19 ವರ್ಷದ ಹದಿಹರೆಯದ ಗಂಡುಮಕ್ಕಳಲ್ಲಿ ರಕ್ತಹೀನತೆಯ ಪ್ರಮಾಣ ಶೇ.22.8ರಷ್ಟಿದ್ದರೆ, 20ರಿಂದ 59 ವರ್ಷದ ಪುರುಷರಲ್ಲಿ ಇದು ಸುಮಾರು ಶೇ.22ರಷ್ಟಿದೆ. 12ರಿಂದ 59 ತಿಂಗಳ ಮಕ್ಕಳಲ್ಲಿಯೂ ಶೇ.42ರಷ್ಟು ರಕ್ತಹೀನತೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಈ ಸಮೀಕ್ಷೆಯ ಸಂಶೋಧನೆಗಳನ್ನು ಸಿದ್ಧಪಡಿಸಲು ವಿವಿಧ ವಯಸ್ಸು, ಲಿಂಗ ಮತ್ತು ದೈಹಿಕ ಸ್ಥಿತಿಯ ಜನರ ಹಿಮೋಗ್ಲೋಬಿನ್ ಮಟ್ಟವನ್ನು ಅಂದಾಜಿಸಲು 1.7 ಲಕ್ಷಕ್ಕೂ ಅಧಿಕ ರಕ್ತದ ಮಾದರಿಗಳನ್ನು ವಿಶ್ಲೇಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.