

ಬೆಂಗಳೂರು: ಶಾಲಾ ಮಕ್ಕಳು ಸಚಿವ ಡಿ.ಕೆ ಶಿವಕುಮಾರ್ ಅವರ ಫೋಟೋ ಹಿಡಿದು ತಿರುಗಿದರೇ ದೇಶ ಉದ್ಧಾರ ಆಗುತ್ತಾ ಎಂದು ಮೃತ ಐಎಎಸ್ ಅಧಿಕಾರಿ ತಾಯಿ ಗೌರಮ್ಮ ಪ್ರಶ್ನಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳು ರಣಹೇಡಿಗಳು ಎಂದು, ಒಬ್ಬ ದೇಶ ಭಕ್ತನಾಗಿ ಆತ್ಮಹತ್ಯೆ ಮಾಡಿಕೊಂಡವರ ಭಾವ ಚಿತ್ರ ಪ್ರದರ್ಶನವನ್ನು ತಡೆದೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ ರವಿ ಅವರ ತಾಯಿ ಗೌರಮ್ಮ, ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ರಣಹೇಡಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ನನ್ನ ಮಗ ಕೋಲಾರದಲ್ಲೇ ಇದ್ದಿದ್ದರೇ ಆತ ಸಾಯುತ್ತಿರಲಿಲ್ಲ, ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಆತನನ್ನು ಕೊಲ್ಲಲಾಯಿತು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಂಡ್ಯದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಡಿವೈಎಸ್ಪಿಗಳಾದ ಎಂ.ಕೆ.ಗಣಪತಿ, ಕಲ್ಲಪ್ಪ ಹಂಡಿಬಾಗ್ ಹಾಗೂ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಭಾವಚಿತ್ರಗಳನ್ನು ಹಿಡಿದು ನೃತ್ಯ ಮಾಡುತ್ತಿದ್ದುದನ್ನು ಅರ್ಧದಲ್ಲೆ ಸಚಿವ ಡಿಕೆಶಿ ತಡೆದಿದ್ದರು.