

ಬೆಂಗಳೂರು: ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮವು(ಟಿಎಸ್ ಇಟಿಸಿ) ಅಂತರಾಜ್ಯ ಚುನಾವಣಾ ವಿಶೇಷ ಸೇವೆಯನ್ನು ಬೆಂಗಳೂರಿನಿಂದ ನಿರ್ವಹಿಸಲಿವೆ.
ಕೇರಳ ಮತ್ತು ತಮಿಳುನಾಡುಗಳಲ್ಲಿ ಇದೇ 16ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಈ ಎರಡೂ ರಾಜ್ಯಗಳ ಮತದಾರರಿಗೆ ಮತ ಹಾಕಲು ಊರಿಗೆ ತೆರಳಲು ಅನುಕೂಲವಾಗಲು ಇಲಾಖೆ ಈ ಸೌಲಭ್ಯ ಕಲ್ಪಿಸಿದೆ. ಬಸ್ಸು ಟಿಕೆಟ್ ಗಳು ಹಾಟ್ ಕೇಕ್ ನಂತೆ ಮಾರಾಟವಾಗುತ್ತಿವೆ. ಎಲ್ಲಾ ಬಸ್ಸುಗಳಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗಿದೆ.
ಈ ಸಂದರ್ಭದಲ್ಲಿ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಎರಡೂ ರಾಜ್ಯಗಳ ರಸ್ತೆ ಸಾರಿಗೆ ನಿಗಮವು ಚುನಾವಣಾ ವಿಶೇಷ ಬಸ್ಸುಗಳನ್ನು ಬಿಡಲಿವೆ. ತಮಿಳುನಾಡು ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ಈಗಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಸುಗಳನ್ನು ಬಿಡುತ್ತಿದೆ.
ಕೇರಳದ ಕಣ್ಣೂರು, ತಲಶ್ಶೆರಿ, ಕೋಜ್ಹಿಕೋಡ್ ಗಳಿಗೆ ಸೂಪರ್ ಫಾಸ್ಟ್ ಸೇವೆಗಳನ್ನು, ಕೊಟ್ಟಾಯಮ್, ಕೋಜ್ಹಿಕ್ಕೋಡ್ ಗಳಿಗೆ ಸಿಲ್ವರ್ ಲೈನ್ ಜೆಟ್ ಸರ್ವಿಸ್ ಗಳನ್ನು ನೀಡಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಈ ರಾಜ್ಯಗಳ ಚುನಾವಣಾ ಸೇವೆಗೆಂದು ಯಾವುದೇ ಬಸ್ಸುಗಳನ್ನು ಕಳುಹಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.