

ಬೆಂಗಳೂರು: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಮುಂದಿನ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕಾನೂನು ತಜ್ಞರ ಸಭೆ ಕರೆದಿದ್ದಾರೆ.
ಮೂಲಗಳ ಪ್ರಕಾರ ನಾಳೆ ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನಲೆಯಲ್ಲಿ ಸರ್ಕಾರ ಕೈಗೊಳ್ಳಬಹುದಾದ ತೀರ್ಮಾನಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಅಂತೆಯೇ ನಾಳಿನ ಸಭೆಯಲ್ಲಿ ಸಚಿವರಾದ ಎಂಬಿ ಪಾಟೀಲ್, ಟಿಬಿ ಜಯಚಂದ್ರ ಸೇರಿದಂತೆ ಹಲವು ಸಚಿವರು ಹಾಗೂ ಕಾನೂನು ತಜ್ಞರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಇನ್ನು ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುಪ್ರೀಂಕೋರ್ಟ್ ನ ತೀರ್ಪಿನ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ. ಪ್ರತಿ ನಾಳೆ ಸಿಗುವ ಸಾಧ್ಯತೆ ಇದ್ದು, ನಾಳೆ ಮಧ್ಯಾಹ್ನ 3 ಗಂಟೆಗೆ ಕಾನೂನು ತಜ್ಞರ ಸಭೆ ಕರೆಯಲಾಗಿದೆ. ಸಭೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.ಟ
ತೀರ್ಪು ಹೊರಬಿದ್ದ ಬೆನ್ನಲ್ಲೇ ಭುಗಿಲ್ಲೆದ್ದ ಆಕ್ರೋಶ
ಅತ್ತ ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸುತ್ತಿದ್ದಂತೆಯೇ ಇತ್ತ ರಾಜ್ಯದ ವಿವಿಧೆಡೆ ರೈತಪರ ಸಂಘಟನೆಗಳು ಹಾಗೂ ಕನ್ನಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಇದರ ಬೆನ್ನಲ್ಲೆ ಹೇಮಾವತಿ ಜಲಾಶಯದಿಂದ ನೀರು ಹೊರಬಿಡದಂತೆ ಜೆಡಿಎಸ್, ಕನ್ನಡಪರ ಸಂಘಟನೆಗಳು ಗೊರೂರು ಬಂದ್'ಗೆ ಕರೆ ನೀಡಿವೆ. ಜಿಲ್ಲಾಡಳಿತ ಸಹ ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ಸುಪ್ರಿಂ ಕೋರ್ಟ್ ತೀರ್ಪು ವಿರೋಧಿಸಿ ವಿವಿಧ ಸಂಘಟನೆಗಳು ಹಾಸನ ಹಾಗೂ ಹೇಮಾವತಿ ಜಲಾಶಯದ ಪ್ರತಿಮೆ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ 100ಕ್ಕೂ ಹೆಚ್ಚು ಜಯ ಕರ್ನಾಟಕ ಕಾರ್ಯಕರ್ತರು ಮಾನವಿ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಅಂತೆಯೇ ಟೌನ್ ಹಾಲ್ ಬಳಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.