ಸದ್ಯಕ್ಕೆ ತಮಿಳುನಾಡಿಗಿಲ್ಲ ಕಾವೇರಿ ನೀರು; ಸಂಪುಟ ಸಭೆಯಲ್ಲಿ ತೀರ್ಮಾನ

ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬುಧವಾರ ನಡೆದ ಸರ್ವಪಕ್ಷ ಸಭೆ ಹಾಗೂ ಸಚಿವ ಸಂಪುಟಸಭೆಗಳಲ್ಲಿ ನಿರ್ಧರಿಸಲಾಗಿದೆ.
ಸರ್ವಪಕ್ಷ ಸಭೆ (ಸಂಗ್ರಹ ಚಿತ್ರ)
ಸರ್ವಪಕ್ಷ ಸಭೆ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬುಧವಾರ ನಡೆದ ಸರ್ವಪಕ್ಷ ಸಭೆ ಹಾಗೂ  ಸಚಿವ ಸಂಪುಟಸಭೆಗಳಲ್ಲಿ ನಿರ್ಧರಿಸಲಾಗಿದೆ.

ತಮಿಳುನಾಡಿಗೆ ಸೆಪ್ಟೆಂಬರ್ 21 ರಿಂದ 27ರ ವರೆಗೆ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬೆನ್ನಲ್ಲೇ ನಿನ್ನೆ ತುರ್ತು ಸರ್ವಪಕ್ಷ ಸಭೆ  ಕರೆಯಲಾಗಿತ್ತು. ಸಭೆಗೆ ಬಿಜೆಪಿ ಗೈರಾಗಿದ್ದರೂ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಹಾಜರಾಗಿದ್ದರು. ಈ ವೇಳೆ ಎಲ್ಲ ನಾಯಕರು ರಾಜ್ಯದ ಕುಡಿಯುವ ನೀರಿಗೆ ಮೊದಲ ಆದ್ಯತೆ  ನೀಡುವಂತೆ ಸಲಹೆ ನೀಡಿದರು.

ಇದರ ಬೆನ್ನಲ್ಲೇ ಕಳೆದ ರಾತ್ರಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿಯೂ ಕೂಡ ಸರ್ವಪಕ್ಷ ಸಭೆಯ ತೀರ್ಮಾನಕ್ಕೆ ಅನುಮೋದನೆ ನೀಡಲಾಗಿದ್ದು, ತಮಿಳುನಾಡಿಗೆ ಹರಿಯುತ್ತಿರುವ  ನೀರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಸಂಪುಟ ಸಭೆಯ ತೀರ್ಮಾನವನ್ನು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು, ನೀರು ಬಿಡುಗಡೆಯನ್ನು  ಮುಂದೂಡಲಾಗಿದೆ ಎಂದು ಹೇಳಿದರು. ಹೀಗಾಗಿ ಶುಕ್ರವಾರದ ವರೆಗೂ ತಮಿಳುನಾಡಿಗೆ ನೀರು ಬಿಡುವ ಸಾಧ್ಯತೆ ಇಲ್ಲ.

ಸರ್ವಪಕ್ಷ ಸಭೆಗೆ ಬಿಜೆಪಿ ಬಹಿಷ್ಕಾರ
ತಮಿಳುನಾಡಿಗೆ ನೀರು ಬಿಡಬೇಕು ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಕರೆದಿದ್ದ ವಿಧಾನಮಂಡಲ ಸದನ ನಾಯಕರು,  ಸಂಸದರು, ಶಾಸಕರ ಸಭೆಯನ್ನು ಬಿಜೆಪಿ ಬಹಿಷ್ಕರಿಸಿತು. "ಹನಿ ನೀರುಬಿಡಬಾರದು, ಈ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು’ ಎಂಬ ಪಕ್ಷದ ಬೇಡಿಕೆ ಒಪ್ಪದ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು  ಪ್ರಧಾನಿ  ಮಧ್ಯಸ್ಥಿಕೆಗೆ ಪಟ್ಟು ಹಿಡಿದು ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳದೆ ಇರಲು ನಿರ್ಧರಿಸಲಾಯಿತುಠ ಎಂದು ರಾಜ್ಯ ಬಿಜೆಪಿ  ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಇದೇ ವೇಳೆ ಸರ್ವಪಕ್ಷ ಸಭೆಗೆ ಬಹಿಷ್ಕಾರ ಹಾಕಿರುವ ಬಿಜೆಪಿ ನಿರ್ಧಾರವನ್ನು ಟೀಕಿಸಿದ ಜೆಡಿಎಸ್ ಹಾಗೂ ಕಾಂಗ್ರೆಸ್, ಸರ್ವ ಸಭೆ ಬಹಿಷ್ಕರಿಸುವ ಮೂಲಕ ಬಿಜೆಪಿ ರಾಜಕಾರಣ ಮಾಡುತ್ತಿದೆ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com