

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಮೈಸೂರಿನ ನೇತ್ರಾ ಕೃಷ್ಣಮೂರ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ.
ವ್ಯಕ್ತಿಯೊಬ್ಬ ಕಾರನ್ನು ಪಾದಚಾರಿ ಮಾರ್ಗದ ಮೇಲೆ ನುಗ್ಗಿಸಿದ್ದರಿಂದ ಐವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ನೇತ್ರಾ ಅವರು ಸೇರಿದಂತೆ 31 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.
ನೇತ್ರಾ ಅವರು ತಮ್ಮ ಎಂಟು ತಿಂಗಳ ಮಗುವಿಗೆ ಹಾಲುಣಿಸಿ, ಕಚೇರಿಗೆ ಮರಳುವಾಗ ಈ ಘಟನೆ ಸಂಭವಿಸಿದೆ. ಹೆರಿಗೆ ರಜೆಯಲ್ಲಿದ್ದ ಅವರು ವಾರದ ಹಿಂದಷ್ಟೇ ಕಚೇರಿ ಕೆಲಸಕ್ಕೆ ಮರಳಿದ್ದರು.
ನೇತ್ರಾ ಅವರ ತಲೆಗೆ ಗಾಯವಾಗಿದ್ದು, ಶ್ವಾಸಕೋಶ, ಯಕೃತ್ ಮತ್ತು ಮೂತ್ರಕೋಶಕ್ಕೆ ಹಾನಿಯಾಗಿದೆ. ಅಲ್ಲದೆ, ಪಕ್ಕೆಲುಬು ಮತ್ತು ಬೆನ್ನುಹುರಿಗೆ ಪೆಟ್ಟಾಗಿದೆ. ತೀವ್ರ ನಿಗಾ ಘಟಕದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಅವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಘಟನೆ ನಡೆದಾಗ ಅವರ ಪತಿ ಮೋಹನ್ ಕೂಡ ಜೊತೆಯಲ್ಲಿದ್ದರು. ಅದೃಷ್ಟ ವಶಾತ್ ಅವರು ಪಾರಾಗಿದ್ದಾಗಿ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಹೈಸ್ಕೂಲ್ ವರೆಗೂ ವಿದ್ಯಾಭ್ಯಾಸ ನಡೆಸಿದ ನೇತ್ರಾ ಮೈಸೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಎಂಜಿನೀಯರಿಂಗ್ ಕಾಲೇಜಿನ ಪದವಿ ವಿದ್ಯಾರ್ಥಿನಿ. ತೀವ್ರಗಾಯಗೊಂಡಿರುವ ನೇತ್ರಾ ಗುಣಮುಖವಾಗಲು ತುಂಬಾ ಸಮಯ ಹಿಡಿಯಲಿದೆ ಎಂದು ಅವರ ಪತಿ ಹೇಳಿದ್ದಾರೆ.