

ಬೆಂಗಳೂರು: ನಗರದ ಜನರ ಬೇಡಿಕೆಯಂತೆ ಸಬ್ ಅರ್ಬನ್ ರೈಲು ಯೋಜನೆಯನ್ನು ರಾಜ್ಯ ಸರ್ಕಾರದ ನೆರವಿನೊಂದಿಗೆ ಅತಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಭಾನುವಾರ ಘೋಷಣೆ ಮಾಡಿದರು.
ನಗರದ ಜನರ ಬಹುದಿನಗಳ ಬೇಡಿಕೆ ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಕಾಲ ಸನ್ನಿಹಿತವಾಗಿದ್ದು, ಇದೇ ಮೇ ತಿಂಗಳಲ್ಲಿ ಯೋಜನೆ ಶಂಕು ಸ್ಥಾಪನೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಸ್ವತಃ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಘೋಷಣೆ ಮಾಡಿದ್ದು, ಆ ಮೂಲಕ ನಗರದ ಜನರ ದಶಕಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.
ಬೆಂಗಳೂರು-ಹಾಸನ ನಡುವೆ ಸಂಚರಿಸುವ ರೈಲನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಪ್ರಭು ಅವರು, ನಗರ ಜನರ ಬಹುಬೇಡಿಕೆ ಸಬ್ ಅರ್ಬನ್ ರೈಲು ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಸಬ್ ಅರ್ಬನ್ ರೈಲಿಗೆ ಈಗಾಗಲೇ ಶೇ.50 ರ ಯೋಜನಾ ವೆಚ್ಚವನ್ನು ನೀಡಲು ಸಮ್ಮತಿಸಿದ್ದು, ಅತಿ ಶೀಘ್ರವೇ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಸಬ್ ಅರ್ಬನ್ ರೈಲು ಯೋಜನೆಗೆ ಪ್ರಸಕ್ತ ಮುಂಗಡ ಪತ್ರದಲ್ಲಿ 370 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಒದಗಿಸಿದೆ. ಸಬ್ ಅರ್ಬನ್ ರೈಲು ಯೋಜನೆಯಿಂದ ಬೆಂಗಳೂರಿನ ಜನತೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಗೊಮ್ಮಟೇಶ್ವರ ಎಕ್ಸ್ ಪ್ರೆಸ್ ಎಂದು ನಾಮಕರಣ
ಇನ್ನು ಇದೇ ವೇಳೆ ಬೆಂಗಳೂರು-ಮಂಗಳೂರು ನಡುವೆ ಶೀಘ್ರವೇ ನೇರ ರೈಲು ಸಂಚಾರ ಆರಂಭಿಸಲಾಗುವುದು. ಆ ರೈಲಿಗೆ ಗೊಮ್ಮಟೇಶ್ವರ ಎಂದು ಹೆಸರಿಡುವುದಾಗಿಯೂ ಇದೇ ವೇಳೆ ಅಧಿಕೃತವಾಗಿ ಸುರೇಶ್‌ಪ್ರಭು ಪ್ರಕಟಿಸಿದರು. "ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 200 ಕಿ.ಮೀ.ನಷ್ಟು ಜೋಡಿ ರೈಲುಮಾರ್ಗ ಮಾಡಲಾಗಿದೆ. 548 ಕಿ.ಮೀ. ವಿದ್ಯುದ್ದೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. 92 ಕಿ.ಮೀ. ಹೊಸ ಮಾರ್ಗ ಕೈಗೆತ್ತಿಕೊಳ್ಳಲಾಗಿದೆ. 6 ಮಾನವರಹಿತ ಕ್ರಾಸಿಂಗ್ ತೆಗೆದು ಹಾಕಲಾಗಿದೆ. ದಶಕಗಳಿಂದ ಹಾಕಿರುವ ಎಲ್ಲ ರೈಲ್ವೆ ಯೋಜನೆಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಈ ಮೂಲಕ ಪ್ರಯಾಣಿಕರಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೆ, ರೈಲ್ವೆ ಹಳಿಗಳ ಡಬ್ಬಲಿಂಗ್, ತ್ರಿಬಲಿಂಗ್, ವಿದ್ಯುದ್ದೀಕರಣ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ ವಿವಿಧ ಮೂಲ ಸೌಲಭ್ಯ ಕಲ್ಪಿಸಲಾಗುವುದು" ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, "ಬಹುದಿನಗಳ ಬೇಡಿಕೆಯ ಸಬ್ಅರ್ಬನ್ ರೈಲಿಗೆ ಮೇ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲು ರೈಲ್ವೆ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಹಾಸನ-ಮಂಗಳೂರು ನಡುವಿನ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಗೆ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಲಾಗಿದೆ. 2018ರ ಫೆಬ್ರವರಿಯಲ್ಲಿ ಗೊಮ್ಮಟೇಶ್ವರಮೂರ್ತಿಯ ಮಹಾಮಸ್ತಕಾಭಿಷೇಕ ನಡೆಯಲಿದ್ದು, ದೇಶದ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಯಾತ್ರಾರ್ಥಿಗಳು ಆಗಮಿಸುವ ಹಿನ್ನೆಲೆಯಲ್ಲಿ ವಿಶೇಷ ರೈಲು ಓಡಿಸುವಂತೆ ಇದೇ ವೇಳೆ ಮನವಿ ಮಾಡಲಾಗಿದೆ. 12 ವರ್ಷಕ್ಕೊಮ್ಮೆ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಗಣ್ಯರನ್ನು ಆಹ್ವಾನಿಸುವುದಾಗಿ ಅವರು ಹೇಳಿದರು.