

ಬೆಂಗಳೂರು: ಬಹು ನಿರೀಕ್ಷಿತ ಹಾಸನ-ಬೆಂಗಳೂರು ಜಿಲ್ಲೆ ನಡುವಿನ ರೈಲು ಸಂಚಾರ ಭಾನುವಾರ ಆರಂಭಗೊಂಡಿದ್ದು, ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೈಲಿಗೆ ಹಸಿರು ನಿಶಾನೆ ತೋರಿದರು.
ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ, ಕೇಂದ್ರ ಸಚಿವ ಸುರೇಶ್ ಪ್ರಭು ಅವರು ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಈ ನೂತನ ರೈಲು ನೆಲಮಂಗಲ, ಕುಣಿಗಲ್, ಯಡಿಯೂರು ಮತ್ತು ಶ್ರವಣಬೆಳಗೊಳದ ಮೂಲಕ ಹಾಸನಕ್ಕೆ ತಲುಪಲಿದೆ. ಬಸ್ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರಿನಿಂದ ಹಾಸನಕ್ಕೆ ರೈಲು ತಲುಪುವ ಅವಧಿ ಕಡಿಮೆ ಇರಲಿದೆ. ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲಿನ ಪ್ರಯಾಣದ ಅವಧಿ 3 ಗಂಟೆ 50 ನಿಮಿಷದಲ್ಲಿ ಮತ್ತು ಸೂಪರ್ ಫಾಸ್ಟ್ ರೈಲು 2 ಗಂಟೆ 40 ನಿಮಿಷಗಳಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ತಲುಪಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವ ಆರ್ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು. ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕನಸಿನ ಯೋಜನೆಯಾಗಿದ್ದು, 1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ತಮ್ಮ ಕನಸಿನ ಯೋಜನೆಗೆ ಅನುಮೋದನೆ ನೀಡಿ 295 ಕೋಟಿ ರು.ಅನುದಾನ ನೀಡಿದ್ದರು. ಅಂದಿನ ರೈಲ್ವೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.