ಕನಿಷ್ಟ ವೇತನ ಬೇಡಿಕೆ ಈಡೇರಿಸದ ಹಿನ್ನಲೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದು, ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ಆರಂಭವಾಗಿ ನಾಲ್ಕು ದಿನಗಳೇ ಕಳೆದರೂ ರಾಜ್ಯ ಸರ್ಕಾರ ಮಾತ್ರ ಇನ್ನೂ ಈ ಬಗ್ಗೆ ಗಮನ ಹರಿಸಿಲ್ಲ. ಇದರಿಂದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಸಿಯೂಟ ತಯಾರಿಕರ ಸಿಬ್ಬಂದಿಗಳ ಒಕ್ಕೂಟ ಇಂದು ರಾಜ್ಯಾದ್ಯಂತ ಬಿಸಿಯೂಟ ತಯಾರಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕಳೆದ ನಾಲ್ಕು ದಿನಗಳಿಂದ ಬಿಸಿಯೂಟ ತಯಾರಿಕಾ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಮೈಕೊರೆಯುವ ಚಳಿಯಲ್ಲೂ ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದು, ಆದರೂ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ.