ಪ್ರವಾಹದಲ್ಲಿ ಮುಳುಗಿದ ಮನೆಯ ಮೇಲ್ಛಾವಣಿ ಮೇಲೆ ಭಯಂಕರ ಅತಿಥಿ; ಬೇಸ್ತು ಬಿದ್ದ ನಿವಾಸಿಗಳು

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆ ಗ್ರಾಮಕ್ಕೆ ಗ್ರಾಮಗಳನ್ನೇ ಮುಳುಗಿಸಿದ್ದು, ನೆರೆಯ ಕಾಟ ಒಂದೆಡೆಯಾದರೆ, ಇದೀಗ ಇಲ್ಲಿನ ನಿವಾಸಿಗಳಿಗೆ ಕರೆಯದೇ ಬರುವ ಅತಿಥಿಗಳ ಕಾಟ ಒಂದೆಡೆಯಾಗಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಸಮಯ ಕಳೆಯುವಂತಾಗಿದೆ.
ಹೌದು.. ಕರ್ನಾಟಕದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಗಳಲ್ಲಿ ಬೆಳಗಾವಿ ಕೂಡ ಒಂದು. ಇಲ್ಲಿನ ರಾಯಭಾಗದ ಮುಳುಗಿದ ಮನೆಯ ಛಾವಣಿಯಲ್ಲಿ ಅಪರೂಪದ ಅತಿಥಿ ಆಶ್ರಯ ಪಡೆದಿತ್ತು. ಈ ಅತಿಥಿಯನ್ನು ನೋಡಿದ್ದೇ ತಡ ಅಲ್ಲಿನ ನಿವಾಸಿಗಳು ಬೇಸ್ತು ಬಿದ್ದಿದ್ದು, ಜೀವವನ್ನು ಕೈಯಲ್ಲಿ ಹಿಡಿದು ಸಮಯ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಷ್ಟಕ್ಕೂ ಈ ವಿಶೇಷ ಮತ್ತು ಭಯಂಕರ ಅತಿಥಿ ಯಾರು ಗೊತ್ತಾ...? ದೈತ್ಯಾಕಾರದ ಮೊಸಳೆ.. ಹೌದು.. ಪ್ರವಾಹದ ನೀರಿನಲ್ಲಿ ಬಂದ ಬೃಹತ್ ಗಾತ್ರದ ಮೊಸಳೆ ಸಂಪೂರ್ಣವಾಗಿ ಮುಳುಗಿದ ಮನೆಯ ಛಾವಣಿಯ ಮೇಲೆ ಆಶ್ರಯ ಪಡೆದಿದೆ. ರಾಯಭಾಗದಲ್ಲಿ ಮನೆಯ ಮೇಲಿದ್ದ ಬೃಹತ್ ಮೊಸಳೆಯನ್ನು ಕಂಡು ಭಯಭೀತಗೊಂಡ ಜನರು, ತಕ್ಷಣ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದರಾದರೂ ಅಷ್ಟು ಹೊತ್ತಿಗಾಗಲೇ ಮೊಸಳೆ ನೀರಿಗೆ ಇಳಿದಿತ್ತು.
ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಸ್ಥಳೀಯರಲ್ಲಿ ಮಾತ್ರ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳಿಂದ ಉಕ್ಕಿ ಹರಿಯುತ್ತಿರುವ ಕೃಷ್ಣ ನದಿ, ದಡದಲ್ಲಿನ ರಾಯ್ ಬಾಗ್ ಹಾಗೂ ಅಥಣಿ ತಾಲೂಕುಗಳನ್ನು ಜಲಾವೃತಗೊಳಿಸುವ ಜೊತೆಗೆ, ಮೊಸಳೆಯಂತಹ ಅಪಾಯಕಾರಿ ಜಲಚರಗಳನ್ನು ಕೂಡ ಗ್ರಾಮದೊಳಗೆ ಕರೆತಂದಿದೆ. ಇಲ್ಲಿನ ಚಿಂಚೋಳಿಯ ಅಜಿತ್ ನಗರದ ಮನೆಯ ತಾರಸಿ ಮೇಲೆ ಮೊಸಳೆಯೊಂದು ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ತಾಲೂಕುಗಳಲ್ಲಿ ಬೇಸಿಗೆ ಸಮಯದಲ್ಲಿ ಮೊಸಳೆಗಳು ಆಹಾರ ಹುಡುಕಲು ಹಾಗೂ ಮೊಟ್ಟೆ ಇಡಲು ನೀರಿನಿಂದ ಹೊರಬರುವುದದು ಸಾಮಾನ್ಯವಾದರೂ, ಇದೆ ಮೊದಲ ಬಾರಿಗೆ ಮನೆಯೊಳಗೆ ಪ್ರವೇಶಿಸಿದೆ. ಇದರಿಂದ ಕಳೆದ 20 ದಿನಗಳಿಂದ ಆಹಾರ, ನಿದ್ರೆ, ನೆಮ್ಮದಿಯಿಲ್ಲದೆ ಕಂಗೆಟ್ಟಿರುವ ಜನರು ಈಗ ಮತ್ತಷ್ಟು ಆತಂಕಪಡುವಂತಾಗಿದೆ. ನೆರೆ ನೀರಿನಲ್ಲಿ ಹಾವು, ಮೊಸಳೆಯಂತಹ ಅಪಾಯಕಾರಿ ಪ್ರಾಣಿಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ನೀರಿಗಿಳಿಯದಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿಬಿಟ್ಟಿರುವ ಹೆಚ್ಚುವರಿ ನೀರಿನಿಂದಾಗಿ ಅನೇಕ ಗ್ರಾಮಗಳು ಜಲಾವೃತಗೊಂಡಿದೆ. ಬೆಳಗಾವಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಅನೇಕ ಜಾನುವಾರುಗಳು ಕೊಚ್ಚಿ ಹೋಗಿವೆ. ಪ್ರಾಣಹಾನಿಯೂ ಸಂಭವಿಸಿದೆ. ಏತನ್ಮಧ್ಯೆ ಕೆಲವರು ಪ್ರವಾಹದ ನೀರಿನಲ್ಲಿ ಬಂದ ಹಾವು ಕಚ್ಚಿಯೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಜಲಪ್ರಳಯದ ಹಿನ್ನೆಲೆಯಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಕೆಲವೆಡೆ ಮನೆಗಳು ಸಂಪೂರ್ಣವಾಗಿ ನಾಶವಾಗಿದೆ. ಆ.15ರ ವರೆಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ, ಆಯಾ ಜಿಲ್ಲಾಡಳಿತ ಆದೇಶ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


