ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾನೆ: ಹೈಕೋರ್ಟ್'ಗೆ ಸಿಐಡಿ ಮಾಹಿತಿ

ಅತ್ಯಾಚಾರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆಂದು ಸಿಐಡಿ ಹೈಕೋರ್ಟ್'ಗೆ ಮಾಹಿತಿ ನೀಡಿದೆ.
ನಿತ್ಯಾನಂದ ಸ್ವಾಮೀಜಿ
ನಿತ್ಯಾನಂದ ಸ್ವಾಮೀಜಿ
Updated on: 

ಬೆಂಗಳೂರು: ಅತ್ಯಾಚಾರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆಂದು ಸಿಐಡಿ ಹೈಕೋರ್ಟ್'ಗೆ ಮಾಹಿತಿ ನೀಡಿದೆ. 

ಪ್ರಕರಣ ಸಂಬಂಧ ನಿತ್ಯಾನಂದ ಸ್ವಾಮೀಜಿಗೆ 2010ರಲ್ಲಿ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ಪೀಠಕ್ಕೆ ತನಿಖಾಧಿಕಾರಿಯೂ ಆದ ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ಬಾಲರಾಜ್ ವರದಿ ಸಲ್ಲಿಸಿದರು.
 
ಅರ್ಜಿ ಸಂಬಂಧ ನಿತ್ಯಾನಂದ ಸ್ವಾಮೀಜಿಗೆ ಸಿಐಡಿ ತನಿಖಾಧಿಕಾರಿ ಖುದ್ದಾಗಿ 2020ರ ಫೆ.3ರೊಳಗೆ ನೋಟಿಸ್ ಜಾರಿ ಮಾಡಬೇಕು. ಆ ಕುರಿತು ಫೆ.3ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಜ.31ರಂದು ಹೈಕೋರ್ಟ್ ನಿರ್ದೇಶಿಸಿ ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಿತ್ತು. 

ಅದರಂತೆ ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ ಸಿಐಡಿ ತನಿಖಾಧಿಕಾರಿ ವರದಿ ಸಲ್ಲಿಸಿದರು. ನ್ಯಾಯಾಲಯದ ಜ.31ರ ಆದೇಶದಂತೆ ಶುಕ್ರವಾರ ಬಿಡದಿ ಧ್ಯಾನಪೀಠ ಆಶ್ರಮಕ್ಕೆ ತೆರಳಿದ್ದೆವು. ಆದರೆ, ಆರೋಪಿಯಾದ ಸ್ವಾಮೀಜಿ ಅಲ್ಲಿ ಇರಲಿಲ್ಲ. ಅವರು ತಲೆಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅವರ ಪರವಾಗಿ ಆಶ್ರಮದಲ್ಲಿದ್ದ ಕುಮಾರಿ ಅಚಲಾನಂದಗೆ ನೋಟಿಸ್ ನೀಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. 

ಆಗ ನ್ಯಾಯಾಲಯದ ಮುಂದೆ ಹಾಜರಾದ ಅಚಲಾನಂದ ಪ್ರಮಾಣಪತ್ರ ಸಲ್ಲಿಸಿ, ನೋಟಿಸ್ ಪಡೆಯುವಂತೆ ಪೊಲೀಸರು ತಮಗೆ ಒತ್ತಾಯ ಮಾಡಿದರು. ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರಿಗೆ ಈ ನೋಟಿಸ್ ತಲುಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರೂ ಪೊಲೀಸರು ಒತ್ತಾಯಪೂರ್ವಕವಾಗಿ ನನಗೆ ನೋಟಿಸ್ ನೀಡಿ ಹೋದರು ಎಂದು ತಿಳಿಸಿದರು. 

ಅದಕ್ಕೆ ಬಾಲರಾಜ್ ವಿರುದ್ಧ ಗರಂ ಆದ ನ್ಯಾಯಪೀಠ, ನೋಟಿಸ್ ತಲುಪಿಸುವ ವಿಧಾನ ಇದೇನಾ? ಇದೇ ಮೊದಲ ಬಾರಿಗೆ ಕೋರ್ಟ್ ನೋಟಿಸ್ ತಲುಪಿಸುತ್ತಿದ್ದೀರಾ? ಈ ರೀತಿ ಮಾಡಿದರೆ ಕೋರ್ಟ್ ಆದೇಶ ಪಾಲಿಸಿದಂತಾಗುತ್ತದೆ ಎಂದು ನೀವು ಭಾವಿಸಿದ್ದೀರಾ? ಅಚಲಾನಂದಗೆ ನೋಟಿಸ್ ನೀಡಿ, ಅವರು ಸಹ ಕೋರ್ಟ್'ಗೆ ಬರುವಂತೆ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿತು. ಇದರಿಂದ ಬಾಲರಾಜ್ ನ್ಯಾಯಾಲಯದ ಕ್ಷಮೆ ಕೋರಿದರು. 

ನಂತರ ಲೆನಿನ್ ಪರ ವಕೀಲರು, ಆರೋಪಿ ನಿತ್ಯಾನಂದ ಸ್ವಾಮೀಜಿ ಕೊನೆಯ ಬಾರಿಗೆ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದು, 2018ರ ಜೂನ್ 5 ರಂದು. ಆ ನಂತರ ಹಾಜರಾಗಿಲ್ಲ. ಅವಧಿ ಮುಗಿದ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಅವರ ಭಾರತದಲ್ಲಿ ಇಲ್ಲ. ವಿಚಾರಣೆಗೆ ಸತತವಾಗಿ ಗೈರಾಗುತ್ತಿರುವ ಕಾರಣ ಪರಿಗಣಿಸಿ ಅವರಿಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದು ಪಡಿಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com