ಪತಿ ಹತ್ಯೆ: ಮಹಿಳೆ, ಪ್ರಿಯಕರ ಸೇರಿ ನಾಲ್ವರ ಬಂಧನ

ಪತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಳಗಾವಿ: ಪತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಳಗಾವಿಯ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ (38) ಕೊಲೆಯಾದ ದುರ್ದೈವಿ. ಬಂಧಿತರನ್ನು ಸಂಧ್ಯಾ ಕಾಂಬಳೆ, ಆಕೆಯ ಪ್ರಿಯಕರ ಬಾಲು ಅಶೋಕ್ ಬಿರ್ಜೆ, ಜಯ್ ಅಲಿಯಾಸ್ ಸೋನು ಮೋಹನ್ ಸಸಾನೆ ಮತ್ತು ನಿತೇಶ್ ಮಹಾದೇವ ಅವಳಿ ಎಂದು ಗುರ್ತಿಸಲಾಗಿದೆ.

ಹತ್ಯೆಯಾದ ಮೂರು ತಿಂಗಳ ಬಳಿಕ ಕೊಲೆ ಪ್ರಕರಣವನ್ನು ಭೇದಿಸಲಾಗಿದೆ. ಸಂಧ್ಯಾ, ಬಾಲು ಅಶೋಕ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಈ ಬಗ್ಗೆ ರಮೇಶ್ ಅನುಮಾನಗೊಂಡು ಆಗಾಗ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತಿದ್ದ ಸಂಧ್ಯಾ ಪ್ರಿಯಕರನೊಂದಿಗೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದಳು. ಇದರಂತೆ ನಿದ್ರೆ ಮಾತ್ರೆ ಬೆರೆಸಿದ್ದ ಊಟವನ್ನು ಪತಿಗೆ ನೀಡಿದ್ದಾಳೆ. ನಂತರ ಮಲಗಿದ್ದ ರಮೇಶ್ ಅವರನ್ನು ಪ್ರಿಯಕರನೊಂದಿಗೆ ಸೇರಿ ಕತ್ತುಹಿಸುಕಿ ಹತ್ಯೆ ಮಾಡಿದ್ದಾಳೆ. ನಂತರ ಶವವನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿ ಚೋರ್ಲಾ ಘಾಟ್ ಕಾಡಿನಲ್ಲಿ ಎಸೆದಿದ್ದಾರೆ.

ನಂತರ ತನಗೇನೂ ತಿಳಿದಿಲ್ಲ ಎಂಬಂತೆ ಏಪ್ರಿಲ್ 5ರಂದು ತನ್ನ ಪತಿ ನಾಪತ್ತೆ ಆಗಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಬಳಿಕ ಪತಿ ಬೇರೊಬ್ಬ ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆಂದು ಬಿಂಬಿಸಿದ್ದಾಳೆ.

ನಂತರ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಅನುಮಾನಗೊಂಡು ಸಂಧ್ಯಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಆದರೆ, ವಿಚಾರಣೆ ವೇಳೆ ಸಂಧ್ಯಾ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದಳು. ಇದು ಸಂಶಯಗಳನ್ನು ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ. ಬಳಿಕ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ವಿಚಾರ ಬಾಯ್ಬಿಟ್ಟಿದ್ದಾಳೆ.

ಇದರಂತೆ ಮೂರು ತಿಂಗಳ ಬಳಿಕ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಪಾಟೀಲ್ ನೇತೃತ್ವದ ಪೊಲೀಸ್ ತಂಡವು ಕೊಲೆ ಪ್ರಕರಣವನ್ನು ಭೇದಿಸಿದ್ದು, ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದೆ. ಆದರೆ, ರಮೇಶ್ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com