ಬೆಂಗಳೂರು: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ 36 ವರ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಬೆಂಗಳೂರಿನ ತಿಲಕ್ ನಗರದ ನಿವಾಸಿ ತಬ್ರೇಜ್ ಪಾಷಾ (36) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಶಬ್ಬೀರ್ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶಬ್ಬೀರ್, ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಪಾಷಾ ಮನೆಗೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಶಬ್ಬೀರ್ ಕೋಪಗೊಂಡು ತನ್ನ ಜೇಬಿನಿಂದ ಚಾಕು ತೆಗೆದು ಪಾಷಾಗೆ ಅನೇಕ ಬಾರಿ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಪಾಷಾ ಸಾವಿಗೀಡಾಗಿದ್ದಾರೆ.
ತಿಲಕ್ ನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಶಂಕಿತ ಶಬ್ಬೀರ್ನನ್ನು ಬಂಧಿಸಿದ್ದಾರೆ.
ಶಬ್ಬೀರ್ ಅವರ ಪತ್ನಿ ತಮ್ಮ ಸೋದರ ಸಂಬಂಧಿ ಪಾಷಾರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಶಬ್ಬೀರ್ ದುಬೈನಿಂದ ಹಿಂದಿರುಗಿದಾಗ, ಪಾಷಾ ಜೊತೆಗಿನ ತನ್ನ ಹೆಂಡತಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದರು ಮತ್ತು ದೂರ ಉಳಿಯುವಂತೆ ಎಚ್ಚರಿಕೆ ನೀಡಿದ್ದರು.
ಶಬ್ಬೀರ್ ನೀಡಿದ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಪಾಷಾ, ತನ್ನ ಸಂಬಂಧ ಮುಂದುವರಿಸಿದ್ದಾರೆ. ಪಾಷಾಗೆ ತಕ್ಕ ಪಾಠ ಕಲಿಸುವುದಾಗಿ ಶಬ್ಬೀರ್ ಬುಧವಾರ ಆತನನ್ನು ಭೇಟಿ ಮಾಡಿ ಕೊಲೆ ಮಾಡಿದ್ದಾರೆ.
Advertisement