ಸಿಲಿಕಾನ್ ಸಿಟಿಯ ಲೈಫ್‌ಲೈನ್‌ಗೆ ಏನಾಗುತ್ತಿದೆ? 10 ತಿಂಗಳಲ್ಲಿ ಬರೋಬ್ಬರಿ 15 ಬಾರಿ ಕೈಕೊಟ್ಟ ‘ನಮ್ಮ ಮೆಟ್ರೋ’..!

2025ರ ಸೆಪ್ಟೆಂಬರ್‌ನಿಂದ 2026ರ ಜುಲೈವರೆಗೆ ನೇರಳೆ ಮಾರ್ಗದಲ್ಲಿ 5, ಹಸಿರು ಮಾರ್ಗದಲ್ಲಿ 6 ಹಾಗೂ ಹಳದಿ ಮಾರ್ಗದಲ್ಲಿ 4 ತಾಂತ್ರಿಕ ವ್ಯತ್ಯಯಗಳು ದಾಖಲಾಗಿವೆ.
Bengaluru Metro breaches fare cap
ನಮ್ಮ ಮೆಟ್ರೋ
Updated on

ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎಂದೇ ಹೆಸರಾಗಿರುವ ‘ನಮ್ಮ ಮೆಟ್ರೋ’ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕೈಕೊಡುತ್ತಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಸೆಪ್ಟೆಂಬರ್ 2025 ರಿಂದ ಜುಲೈ 2026 ರ ನಡುವಿನ ಕೇವಲ 10 ತಿಂಗಳ ಅವಧಿಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಬರೋಬ್ಬರಿ 15 ಬಾರಿ ತಾಂತ್ರಿಕ ವ್ಯತ್ಯಯ ಉಂಟಾಗಿರುವುದು ಬೆಳಕಿಗೆ ಬಂದಿದೆ.

ವಿಧಾನ ಪರಿಷತ್ತಿನಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಮೆಟ್ರೋ ಹಳಿಗಳ ಮೂಲಸೌಕರ್ಯ, ವಿದ್ಯುತ್ ಸರಬರಾಜು ಮತ್ತು ರೈಲು ಕೋಚ್‌ಗಳಲ್ಲಿನ ಗಂಭೀರ ಲೋಪಗಳೇ ಈ ಸರಣಿ ಅಪಘಾತ ಹಾಗೂ ವಿಳಂಬಕ್ಕೆ ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ.

2025ರ ಸೆಪ್ಟೆಂಬರ್‌ನಿಂದ 2026ರ ಜುಲೈವರೆಗೆ ನೇರಳೆ ಮಾರ್ಗದಲ್ಲಿ 5, ಹಸಿರು ಮಾರ್ಗದಲ್ಲಿ 6 ಹಾಗೂ ಹಳದಿ ಮಾರ್ಗದಲ್ಲಿ 4 ತಾಂತ್ರಿಕ ವ್ಯತ್ಯಯಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

ಇವುಗಳಲ್ಲಿ ಕೆಲವು ಪ್ರಮುಖ ಘಟನೆಗಳು ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟುಮಾಡಿವೆ. ಜೂನ್‌ 23ರಂದು ನೇರಳೆ ಮಾರ್ಗದಲ್ಲಿ ಮೂರನೇ ರೈಲು ಹಳಿಯ (Third Rail) ವ್ಯವಸ್ಥೆಯಲ್ಲಿ ಉಂಟಾದ ಅಸಮರ್ಪಕ ಹೊಂದಾಣಿಕೆಯಿಂದ ಸಂಜೆ ಗರಿಷ್ಠ ಸಂಚಾರದ ಅವಧಿಯಲ್ಲಿ ಐದು ಗಂಟೆಗಳಿಗೂ ಹೆಚ್ಚು ಕಾಲ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು.

ಅದೇ ರೀತಿ, ಜುಲೈ 21ರಂದು ಹಸಿರು ಮಾರ್ಗದಲ್ಲಿ ರಕ್ಷಣಾ ವಿದ್ಯುತ್‌ ವಲಯ ಸಕ್ರಿಯಗೊಂಡ ಪರಿಣಾಮ ಮೂರನೇ ರೈಲು ಹಳಿಯ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಬೆಳಗಿನ ಗರಿಷ್ಠ ಸಂಚಾರದ ಅವಧಿಯಲ್ಲಿ 51 ನಿಮಿಷಗಳ ಕಾಲ ರೈಲುಗಳ ಸಂಚಾರ ನಿಯಂತ್ರಣ ಹಾಗೂ ಸೀಮಿತ ಮಾರ್ಗದಲ್ಲಿ ರೈಲು ಓಡಿಸುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.

ಎಲ್ಲ ಪ್ರಮುಖ ತಾಂತ್ರಿಕ ದೋಷಗಳ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ವಿವರವಾದ ವೈಫಲ್ಯ ವಿಶ್ಲೇಷಣೆ ಹಾಗೂ ಮೂಲ ಕಾರಣ ಪತ್ತೆಹಚ್ಚುವ ಪರಿಶೀಲನೆ ನಡೆಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Bengaluru Metro breaches fare cap
ನಮ್ಮ ಮೆಟ್ರೋ ಬ್ಲೂ ಲೈನ್: BMRCL-BIAL ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ; ಬಾಕಿ ಕಾಮಗಾರಿ ಪೂರ್ಣಕ್ಕೆ ಗಡುವು ನಿಗದಿ

ಪರಿಶೀಲನೆಯ ಆಧಾರದ ಮೇಲೆ ದೋಷಪೂರಿತ ಘಟಕಗಳನ್ನು ಬದಲಾಯಿಸಲಾಗುತ್ತದೆ. ಅಲ್ಲದೆ, ಆಯಾ ವ್ಯವಸ್ಥೆಗಳಿಗೆ ಅಗತ್ಯವಿರುವ ಸರಿಪಡಿಸುವ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಕ್ರಮಗಳ ಪರಿಣಾಮಕಾರಿತ್ವವನ್ನು ವೈಫಲ್ಯಗಳ ಮಾಹಿತಿ ಹಾಗೂ ಅವು ಮರುಕಳಿಸುವ ಪ್ರಮಾಣದ ಆಧಾರದ ಮೇಲೆ ನಿರಂತರವಾಗಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಗರಿಷ್ಠ ಸಂಚಾರದ ಅವಧಿಯಲ್ಲಿ ಮೆಟ್ರೋ ತಾಂತ್ರಿಕ ದೋಷದಿಂದ ಸೇವೆ ಸ್ಥಗಿತಗೊಂಡರೆ, ಪ್ರಯಾಣಿಕರಿಗೆ ಉಚಿತ ಅಥವಾ ಪರ್ಯಾಯ ಫೀಡರ್‌ ಬಸ್‌ ಸೇವೆ ಒದಗಿಸುವ ಕುರಿತು ಯಾವುದೇ ಕಡ್ಡಾಯ ನಿಯಮ ರೂಪಿಸಲಾಗಿದೆಯೇ ಎಂಬ ಪ್ರಶ್ನೆಗೂ ಸಚಿವರು ಉತ್ತರಿಸಿದ್ದಾರೆ.

ಪ್ರಮುಖ ಸೇವಾ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಅಗತ್ಯವಿರುವ ಕಡೆ ಬಿಎಂಟಿಸಿಯೊಂದಿಗೆ ಸಮನ್ವಯ ಸಾಧಿಸಿ ಹೆಚ್ಚುವರಿ ಅಥವಾ ಪರ್ಯಾಯ ಬಸ್‌ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಆದರೆ, ಉಚಿತ ಬಸ್‌ ಸೇವೆ ಒದಗಿಸುವ ಕಡ್ಡಾಯ ವ್ಯವಸ್ಥೆ ಅಥವಾ ಬಸ್‌ ನಿಯೋಜನೆಗೆ ನಿಗದಿತ ಸಮಯದ ಮಿತಿ ಇಲ್ಲ ಎಂಬುದು ಉತ್ತರದಿಂದ ಸ್ಪಷ್ಟವಾಗಿದೆ.

ಸೇವೆಯಲ್ಲಿ ವ್ಯತ್ಯಯ ಉಂಟಾದ ನಿಲ್ದಾಣಗಳ ಎರಡೂ ಬದಿಗಳಲ್ಲಿ ಸಾಧ್ಯವಾದಷ್ಟು ಸೀಮಿತ ಮಾರ್ಗದ ರೈಲು ಸೇವೆ ಒದಗಿಸುವ ಮೂಲಕ ಪ್ರಯಾಣಿಕರು ವ್ಯತ್ಯಯಗೊಂಡ ಭಾಗದಾಚೆಗಿನ ತಮ್ಮ ಗಮ್ಯಸ್ಥಾನ ತಲುಪಲು ಸಹಾಯ ಮಾಡಲಾಗುತ್ತದೆ. ನಿಲ್ದಾಣಗಳಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ರೈಲುಗಳು ಅಥವಾ ನಿಲ್ದಾಣಗಳಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತುರ್ತು ಹಾಗೂ ವಿಪತ್ತು ನಿರ್ವಹಣಾ ಕಾರ್ಯವಿಧಾನಗಳನ್ನು ಬಿಎಂಆರ್‌ಸಿಎಲ್‌ ರೂಪಿಸಿದೆ ಎಂದು ಸಚಿವರು ಹೇಳಿದ್ದಾರೆ.

ಎಲ್ಲಿ ಎಷ್ಟು ಬಾರಿ ವ್ಯತ್ಯಯ?

ಹಸಿರು ಮಾರ್ಗ – 6 ಬಾರಿ

ಜುಲೈ 21: ಬೆಳಿಗ್ಗೆ ಪೀಕ್ ಅವರ್ ವೇಳೆ ಯಶವಂತಪುರ ಮತ್ತು ಮಾದವರ ನಡುವಿನ ಸಂಚಾರ ಟ್ರಾಕ್ಷನ್ ವಿದ್ಯುತ್ ಕಡಿತವು 51 ನಿಮಿಷಗಳ ಕಾಲ ಸೇವೆಗಳಲ್ಲಿ ವ್ಯತ್ಯಯವನ್ನುಂಟುಮಾಡಿತು.

ನೇರಳೆ ಮಾರ್ಗ – 5 ಬಾರಿ

ಜೂನ್‌ 23: ಕಬ್ಬನ್‌ ಪಾರ್ಕ್‌ ಸಮೀಪ ಮೂರನೇ ರೈಲು ಹಳಿಯ ಅಸಮರ್ಪಕ ಹೊಂದಾಣಿಕೆಯಿಂದ ಸಂಜೆ ಪೀಕ್ ಅವರ್ ವೇಳೆ ಐದು ಗಂಟೆಗಳಿಗೂ ಹೆಚ್ಚು ಕಾಲ ಸೇವೆ ವ್ಯತ್ಯಯ.

ಹಳದಿ ಮಾರ್ಗ – 4 ಬಾರಿ

ಆಗಸ್ಟ್‌ 24: ಬೆರಟೆನ ಅಗ್ರಹಾರದಲ್ಲಿ ರೈಲಿನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲನ್ನು ಅಲ್ಲಿಯೇ ಕೊನೆಗೊಳಿಸಲಾಯಿತು. ಪ್ರಯಾಣಿಕರನ್ನು ಬಳಿಕ ಬಂದ ಮತ್ತೊಂದು ರೈಲಿಗೆ ಸ್ಥಳಾಂತರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com