

ಬೆಂಗಳೂರು: ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ(JICA) ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ 3(ಆರೆಂಜ್ ಲೈನ್)ಗಾಗಿ ಕೇಂದ್ರ ಸರ್ಕಾರದೊಂದಿಗೆ 6,100 ಕೋಟಿ ರೂ.ಗಳ ಅಧಿಕೃತ ಅಭಿವೃದ್ಧಿ ಸಹಾಯ(ODA) ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ.
JICAಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಹಂತ 3(I) 31 ಎತ್ತರದ ನಿಲ್ದಾಣಗಳೊಂದಿಗೆ ಸುಮಾರು 44.65 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣವನ್ನು ಒಳಗೊಂಡಿದೆ. ಈ ಕಾರಿಡಾರ್ ಹೊರ ವರ್ತುಲ ರಸ್ತೆಯ ವಿಸ್ತಾರ(ಕಾರಿಡಾರ್ 3-1) ಮತ್ತು ಪಶ್ಚಿಮ ಗ್ರೋತ್ ಕಾರಿಡಾರ್(ಕಾರಿಡಾರ್ 3-2) ಅನ್ನು ಒಳಗೊಂಡಿವೆ. ಪೂರ್ಣಗೊಂಡ ನಂತರ, ಹೊಸ ಮಾರ್ಗ ವಿಮಾನ ನಿಲ್ದಾಣ ಮಾರ್ಗ ಮತ್ತು ಮಾರ್ಗ 6 ರೊಂದಿಗೆ ಸಂಯೋಜಿಸಲ್ಪಡುತ್ತದೆ. ಇದು ನಗರದ ಸುತ್ತಲೂ ವೃತ್ತಾಕಾರದ ಜಾಲವನ್ನು ರೂಪಿಸುತ್ತಗೆ ಮತ್ತು ವಿಮಾನ ನಿಲ್ದಾಣ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಈ ಸಾಲವು 10 ವರ್ಷಗಳ ಗ್ರೇಸ್ ಅವಧಿಯನ್ನು ಒಳಗೊಂಡಂತೆ 30 ವರ್ಷಗಳ ಮರುಪಾವತಿ ಅವಧಿಯನ್ನು ಹೊಂದಿರುತ್ತದೆ. ಈ ಯೋಜನೆಯು ಜನವರಿ 2032 ರೊಳಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ.
ವಯಾಡಕ್ಟ್ ನಿರ್ಮಾಣ ಸೇರಿದಂತೆ ಆರಂಭಿಕ ಸಿವಿಲ್ ಕೆಲಸಗಳಿಗೆ ಟೆಂಡರ್‌ಗಳನ್ನು ಮೇ 2026 ರಲ್ಲಿ ಕರೆಯುವ ಸಾಧ್ಯತೆಯಿದೆ. ಮೆಟ್ರೋ ವಿಸ್ತರಣೆಯು ಫೀಡರ್ ಸೇವೆಗಳು ಮತ್ತು ಹಂಚಿಕೆಯ ಚಲನಶೀಲತೆ ವ್ಯವಸ್ಥೆಗಳನ್ನು ಒಳಗೊಂಡಂತೆ ಬಹುಮಾದರಿ ಏಕೀಕರಣದ ಮೂಲಕ ಸಾರಿಗೆ-ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಪ್ಪಂದವು ಒಟ್ಟು 6,775 ಕೋಟಿ ರೂ.ಗಳಾಗಿದ್ದು, ಇದನ್ನು ಎರಡು ಬ್ಯಾಚ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆರಂಭದಲ್ಲಿ 6,100 ಕೋಟಿ ರೂ.ಗಳು ಮತ್ತು ಉಳಿದ ಹಣ ಮುಂದಿನ 15 ರಿಂದ 20 ದಿನಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನಂತರ ಹೆಚ್ಚಿನ ಹಣವನ್ನು ಭೂಸ್ವಾಧೀನ ಮತ್ತು ನಂತರದ ಸಿವಿಲ್ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಅವರು ಟಿಎನ್‌ಐಇಗೆ ತಿಳಿಸಿದ್ದಾರೆ.
Advertisement