ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಣೆ ಮಾಡಿ: ಸಚಿವ ಪರಮೇಶ್ವರ್ ಆಗ್ರಹ, ಭಾರೀ ವಿರೋಧ

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಘೋಷಣೆ ಮಾಡಲಾಗಿದೆ. ಅದೇ ರೀತಿ ತುಮಕೂರನ್ನು ಬೆಂಗಳೂರು ಉತ್ತರ ಎಂದು ಮಾಡಬೇಕು. ವಿದೇಶದಲ್ಲಿರುವವರಿಗೆ, ಉದಾಹರಣೆಗೆ ನ್ಯೂಯಾರ್ಕ್‌ನಲ್ಲಿರುವವರಿಗೆ ತುಮಕೂರು ಎಲ್ಲಿದೆ ಎಂದು ಗೊತ್ತಾಗುವುದಿಲ್ಲ, ಆದರೆ ಬೆಂಗಳೂರು ಉತ್ತರ ಎಂದರೆ ಸುಲಭವಾಗಿ ಅರ್ಥವಾಗುತ್ತದೆ.
Home Minister Dr. G. Parameshwar
ಗೃಹ ಸಚಿವ ಡಾ. ಜಿ. ಪರಮೇಶ್ವರ್
Updated on

ಬೆಂಗಳೂರು: ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ಕಲ್ಪತರು ನಾಡು ತುಮಕೂರು ಜಿಲ್ಲೆಯ ಹೆಸರನ್ನು 'ಬೆಂಗಳೂರು ಉತ್ತರ' ಎಂದು ಬದಲಾಯಿಸುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತುಮಕೂರನ್ನು 'ಬೆಂಗಳೂರು ಉತ್ತರ' ಜಿಲ್ಲೆ ಎಂದು ಘೋಷಣೆ ಮಾಡುವಂತೆ ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೆ ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಘೋಷಣೆ ಮಾಡಲಾಗಿದೆ. ಅದೇ ರೀತಿ ತುಮಕೂರನ್ನು ಬೆಂಗಳೂರು ಉತ್ತರ ಎಂದು ಮಾಡಬೇಕು. ವಿದೇಶದಲ್ಲಿರುವವರಿಗೆ, ಉದಾಹರಣೆಗೆ ನ್ಯೂಯಾರ್ಕ್‌ನಲ್ಲಿರುವವರಿಗೆ ತುಮಕೂರು ಎಲ್ಲಿದೆ ಎಂದು ಗೊತ್ತಾಗುವುದಿಲ್ಲ, ಆದರೆ ಬೆಂಗಳೂರು ಉತ್ತರ ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ಬ್ರ್ಯಾಂಡ್ ಬೆಂಗಳೂರು ವಿಸ್ತರಣೆಯಡಿ ಈ ಹೆಜ್ಜೆ ಇಡುವುದು ಅಗತ್ಯವಿದೆ ಎಂದು ಹೇಳಿದರು.

ತುಮಕೂರು ಬೆಂಗಳೂರಿಗೆ ತುಂಬ ಹತ್ತಿರದಲ್ಲಿದೆ. ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ನನ್ನ ಬೇಡಿಕೆ ಏನೆಂದರೆ ತುಮಕೂರು ಬೆಂಗಳೂರಿನ ಭಾಗವಾಗಬೇಕು.

ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡಿರುವಂತೆ, ತುಮಕೂರನ್ನು ಬೆಂಗಳೂರು ಉತ್ತರ ಎಂದು ಘೋಷಿಸಬೇಕು. “ಮುಂದಿನ ದಿನಗಳಲ್ಲಿ ತುಮಕೂರು ಬೆಂಗಳೂರಿನ ಭಾಗವಾಗಲಿದೆ. ಅದಕ್ಕಾಗಿ ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯೂ ಸಿದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಈ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಪರಮೇಶ್ವರ್‌ ಅವರ ಈ ಪ್ರಸ್ತಾವನೆಗೆ ಡಿ.ಕೆ. ಶಿವಕುಮಾರ್‌ ಕೂಡ ಬೆಂಬಲ ಸೂಚಿಸಿದರು. ಬೆಂಗಳೂರು ನಗರದ ಟ್ರಾಫಿಕ್ ಮತ್ತು ಜನಸಂದಣಿ ಸಮಸ್ಯೆಗೆ ಉತ್ತರ ದಿಕ್ಕಿನತ್ತ ವಿಸ್ತರಣೆ ಮಾಡುವುದು ಪರಿಹಾರವಾಗಿದೆ. ತುಮಕೂರನ್ನು ಎರಡನೇ ಬೆಂಗಳೂರಾಗಿ ರೂಪಿಸುವ ಆಲೋಚನೆಗೆ ನಾನು ಸಹ ಕೈಜೋಡಿಸುತ್ತೇನೆ ಎಂದು ಹೇಳಿದರು.

Home Minister Dr. G. Parameshwar
Watch | ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಪರಮೇಶ್ವರ್ ಸಿಎಂ ಆಗಬೇಕು!

ಆದರೆ, ಈ ಪ್ರಸ್ತಾವನೆ ಹೊಸ ಗೊಂದಲವನ್ನೂ ಸೃಷ್ಟಿಸಿದೆ. ಕಳೆದ ವರ್ಷ ರಾಜ್ಯ ಸಚಿವ ಸಂಪುಟ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ‘ಬೆಂಗಳೂರು ಉತ್ತರ’ ಎಂಬ ಹೆಸರನ್ನು ಬಳಸಲು ನಿರ್ಧರಿಸಿತ್ತು. ಇದೀಗ ತುಮಕೂರಿಗೂ ಅದೇ ಹೆಸರು ಬಳಸುವ ಪ್ರಸ್ತಾಪ ಕೇಳಿಬಂದಿರುವುದರಿಂದ ಸರ್ಕಾರ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ-48 ಮೂಲಕ ಉತ್ತಮ ಸಂಪರ್ಕ ಹೊಂದಿರುವ ತುಮಕೂರು ಈಗಾಗಲೇ ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ (CBIC) ಯೋಜನೆಯ ಪ್ರಮುಖ ಭಾಗವಾಗಿರುವ ತುಮಕೂರಿನಲ್ಲಿ ವಸಂತನರಸಪುರದಲ್ಲಿ ಜಪಾನೀ ಕೈಗಾರಿಕಾ ನಗರವೂ ಅಭಿವೃದ್ಧಿಯಾಗುತ್ತಿದೆ.

ಇದರ ಜೊತೆಗೆ, ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಸಮೀಪ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಪರಮೇಶ್ವರ್‌ ಮುಂದಿಟ್ಟಿದ್ದಾರೆ.

ಕುಣಿಗಲ್ ಮತ್ತು ನೆಲಮಂಗಲ ನಡುವಿನ ಪ್ರದೇಶವನ್ನು ಸಾಧ್ಯತೆಯ ಸ್ಥಳಗಳಲ್ಲೊಂದು ಎಂದು ಗುರುತಿಸಲಾಗಿದೆ. ಆದರೆ, ಸರ್ಕಾರ ಕನಕಪುರ ರಸ್ತೆ ಭಾಗದ ಇತರ ಸ್ಥಳಗಳನ್ನೂ ಪರಿಗಣಿಸುತ್ತಿದೆ ಎನ್ನಲಾಗಿದೆ.

ಇದೀಗ ಸರ್ಕಾರ ಮಾದವರ-ತುಮಕೂರು ಮೆಟ್ರೋ ಮಾರ್ಗದ ವಿವರವಾದ ಯೋಜನಾ ವರದಿ (DPR) ಅಂತಿಮಗೊಳಿಸುತ್ತಿದ್ದು, ಸುಮಾರು 59 ಕಿಲೋಮೀಟರ್ ಉದ್ದದ ಈ ಮೆಟ್ರೋ ಯೋಜನೆಗೆ ರೂ.20,896 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಇನ್ನೊಂದೆಡೆ, ಬಿಜೆಪಿ ಸಂಸದ ಪಿಸಿ ಮೋಹನ್ ಪರಮೇಶ್ವರ್‌ ಪ್ರಸ್ತಾವನೆಯನ್ನು ಟೀಕಿಸಿದ್ದಾರೆ. “ಈ ವೇಗದಲ್ಲಿ ಮುಂದುವರಿದರೆ ಮಂಗಳೂರು ‘ಬೆಂಗಳೂರು ಬೀಚ್‌ಫ್ರಂಟ್‌’, ಕಲಬುರಗಿ ‘ಬೆಂಗಳೂರು ಫಾರ್‌ ಈಸ್ಟ್‌’, ಕೊಡಗು ‘ಬೆಂಗಳೂರು ಹಿಲ್‌ ಸ್ಟೇಷನ್‌’ ಆಗಬಹುದು. ಕೊನೆಗೆ ಇಡೀ ರಾಜ್ಯವೇ ‘ಗ್ರೇಟರ್‌ ಬೆಂಗಳೂರು’ ಆಗಬಹುದು” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com