

ಬೆಂಗಳೂರು: ಕಳೆದ 10 ದಿನಗಳಲ್ಲಿ ಡೀಸೆಲ್ ದರವು ಒಟ್ಟು ರೂ.7.81 ಹಾಗೂ ಪೆಟ್ರೋಲ್ ದರ ರೂ.7.97 ಏರಿಕೆಯಾದ ಬೆನ್ನಲ್ಲೇ ಕರ್ನಾಟಕದ ಲಾರಿ ಮಾಲೀಕರು ಮತ್ತು ಸಾರಿಗೆ ಸಂಸ್ಥೆಗಳು ಸಾಗಣೆ ದರವನ್ನು ಕನಿಷ್ಠ ಶೇ.10ರಷ್ಟು ಹೆಚ್ಚಿಸುವ ಕುರಿತು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಇದರಿಂದ ತರಕಾರಿ, ದಿನಸಿ ವಸ್ತುಗಳು, ಪ್ಲೈವುಡ್, ಕಬ್ಬಿಣ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಇಂಧನ ದರ ಏರಿಕೆಯಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಾರಿಗೆ ವಲಯದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
ಜೂನ್ ಮೊದಲ ವಾರದಿಂದಲೇ ತರಕಾರಿ ಮತ್ತು ಕೃಷಿ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಪ್ರತಿ ಕೆಜಿಗೆ ಕನಿಷ್ಠ 50 ಪೈಸೆಯಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೃಷಿ ವಲಯದ ಪ್ರತಿನಿಧಿಗಳು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಒಕ್ಕೂಟದ ಅಧ್ಯಕ್ಷ ಜಿ.ಆರ್. ಶಣ್ಮುಗಪ್ಪ ಮಾತನಾಡಿ, ಡೀಸೆಲ್ ದರ ಏರಿಕೆಯಾದಾಗ ಸಾಗಣೆ ವೆಚ್ಚವೂ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಗಣೆ ದರ ಹೆಚ್ಚಳ ಹೊರತುಪಡಿಸಿ ಬೇರೆ ಮಾರ್ಗವಿಲ್ಲ ಎಂದು ಹೇಳಿದ್ದಾರೆ.
ಬುಧವಾರ ಸಾರಿಗೆ ಸಂಸ್ಥೆಗಳ ಸಭೆ ನಡೆಯಲಿದ್ದು, ಅದರಲ್ಲಿ ದರ ಹೆಚ್ಚಳದ ಪ್ರಮಾಣದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇತ್ತೀಚಿನ ಡೀಸೆಲ್ ದರ ಏರಿಕೆಗೆ ಅನುಗುಣವಾಗಿ ಕನಿಷ್ಠ ಶೇ.10ರಷ್ಟು ಸಾಗಣೆ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಡೀಸೆಲ್ ಮೇಲಿನ ತೆರಿಗೆ ಹೊರೆ ಕುರಿತಂತೆ ಮಾತನಾಡಿ, ಪ್ರತಿ ರೂ.100 ಡೀಸೆಲ್ ವೆಚ್ಚದಲ್ಲಿ ಸುಮಾರು ರೂ.46 ವಿವಿಧ ತೆರಿಗೆಗಳು ಹಾಗೂ ಸೆಸ್‌ಗಳಿಗೆ ಹೋಗುತ್ತಿದೆ. ಸಾರಿಗೆ ಕ್ಷೇತ್ರವು ಜಿಎಸ್‌ಟಿ ಹಾಗೂ ಇತರ ತೆರಿಗೆಗಳ ಮೂಲಕ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯ ನೀಡುತ್ತಿದ್ದರೂ, ಕಾರ್ಯಾಚರಣಾ ವೆಚ್ಚ ಏರಿಕೆಯ ಸಂದರ್ಭದಲ್ಲಿ ಯಾವುದೇ ನೇರ ಪರಿಹಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಇಂಧನ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಸಲಹೆಗಾರ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಮುಂದಿನ ವಾರದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಲಾಜಿಸ್ಟಿಕ್ಸ್ ವೆಚ್ಚ ಮತ್ತಷ್ಟು ಹೆಚ್ಚಳವಾಗಲಿದ್ದು, ಜೂನ್ ಮೊದಲ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಪ್ರತಿ ಕೆಜಿಗೆ ಕನಿಷ್ಠ 50 ಪೈಸೆಯಷ್ಟು ಏರಿಕೆ ಕಾಣಬಹುದು ಎಂದು ಹೇಳಿದ್ದಾರೆ
ಸಾಗಣೆ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗಳು ಈಗಾಗಲೇ ಸಾಗಣೆ ದರ ಪರಿಷ್ಕರಣೆ ಕುರಿತು ಚರ್ಚೆ ಆರಂಭಿಸಿವೆ. ಕೃಷಿ ಉತ್ಪನ್ನಗಳ ಖರೀದಿ ಮತ್ತು ವಿತರಣೆಯಲ್ಲಿ ಲಾಜಿಸ್ಟಿಕ್ಸ್ ವೆಚ್ಚವೇ ಅತ್ಯಂತ ದೊಡ್ಡ ಅಂಶವಾಗಿರುವುದರಿಂದ ಅದರ ಪರಿಣಾಮ ನೇರವಾಗಿ ಗ್ರಾಹಕರ ಮೇಲೆಯೇ ಬೀಳಲಿದೆ ಎಂದು ತಿಳಿಸಿದ್ದಾರೆ.
Advertisement