ಇಂಧನ ದರ ಏರಿಕೆ ಎಫೆಕ್ಟ್: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಳ; 2 ತಿಂಗಳಲ್ಲಿ ವಿದ್ಯುತ್ ಬೇಡಿಕೆ ಶೇ.2ರಷ್ಟು ಏರಿಕೆ..!

ಬೆಂಗಳೂರು ಹಾಗೂ ಹೆದ್ದಾರಿ ಪ್ರದೇಶಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ಕೇಂದ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೌರಶಕ್ತಿ ಆಧಾರಿತ ಹೊಸ EV ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.
File photo
EV ಚಾರ್ಜಿಂಗ್ ಸ್ಟೇಷನ್‌ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ರಾಜ್ಯದ ವಿದ್ಯುತ್ ಬಳಕೆಯ ಮೇಲೂ ಅದರ ನೇರ ಪರಿಣಾಮ ಕಾಣಿಸತೊಡಗಿದೆ.

ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ EV ಚಾರ್ಜಿಂಗ್‌ನಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ಸುಮಾರು 2 ಶೇಕಡಾ ಏರಿಕೆ ದಾಖಲಾಗಿದ್ದು, ಇದರ ಬೆನ್ನಲ್ಲೇ ಇಂಧನ ಇಲಾಖೆ ಹಾಗೂ ಎಸ್ಕಾಂಗಳು ಕ್ರಮಗಳನ್ನು ಕೈಗೊಳ್ಳುತ್ತಿವೆ.

ವಿಶೇಷವಾಗಿ ಬೆಂಗಳೂರು ಹಾಗೂ ಹೆದ್ದಾರಿ ಪ್ರದೇಶಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ಕೇಂದ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೌರಶಕ್ತಿ ಆಧಾರಿತ ಹೊಸ EV ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಸುಮಾರು 2 ಶೇಕಡಾ ಏರಿಕೆ ದಾಖಲಾಗಿರುವುದಾಗಿ ಎಸ್ಕಾಂಗಳು ತಿಳಿಸಿವೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಏರಿಕೆ ಕಂಡುಬಂದಿದ್ದು, ಹೊಸ ವಾಹನಗಳಿಗಿಂತ ಈಗಾಗಲೇ ಬಳಕೆಯಲ್ಲಿರುವ EVಗಳ ಚಾರ್ಜಿಂಗ್ ಅವಶ್ಯಕತೆಯೇ ವಿದ್ಯುತ್ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಸಿರು ಸಂಚಾರದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವುದು ಹಾಗೂ ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮ EV ವಾಹನಗಳ ಬುಕ್ಕಿಂಗ್‌ಗಳಲ್ಲೂ ಏರಿಕೆ ಕಂಡುಬರುತ್ತಿದೆ. ಇದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವೇಗದ EV ಚಾರ್ಜಿಂಗ್ ಕೇಂದ್ರಗಳ ಬೇಡಿಕೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಖಾಸಗಿ ಕಂಪನಿಗಳೊಂದಿಗೆ ಕೈಜೋಡಿಸಿ ಸೌರಶಕ್ತಿ ಆಧಾರಿತ ಫಾಸ್ಟ್‌ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (KREDL) ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಸ್ಥೆಗಳ ಜೊತೆ ಈಗಾಗಲೇ ಸಹಭಾಗಿತ್ವ ಮುಂದುವರಿದಿದೆ.

File photo
ಇಂಧನ ದರ ಏರಿಕೆ ಸಂಕಷ್ಟ: ಬಸ್ ಟಿಕೆಟ್ ದರ ಹೆಚ್ಚಳ ಸಾಧ್ಯತೆ!

ಎಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ವಸತಿ, ಕೈಗಾರಿಕೆ, ವಾಣಿಜ್ಯ ಹಾಗೂ LT(6-C) ವಿಭಾಗಗಳಲ್ಲಿ EV ಬಳಕೆದಾರರು ಸೇರಿದ್ದು, ಎಲ್ಲ ವಿಭಾಗಗಳಲ್ಲೂ ವಿದ್ಯುತ್ ಬಳಕೆ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಎರಡನೇ ಸೌರಶಕ್ತಿ ಆಧಾರಿತ EV ಚಾರ್ಜಿಂಗ್ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಈಗಿರುವ 45-50 ಕಿಲೋವ್ಯಾಟ್ ಸಾಮರ್ಥ್ಯದ ಘಟಕದ ಮಾದರಿಯಲ್ಲೇ ಇದನ್ನು ನಿರ್ಮಿಸಲಿದ್ದರೂ, ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಚಾರ್ಜಿಂಗ್ ವ್ಯವಸ್ಥೆ ಸುಧಾರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈಗಿನ EV ವಾಹನಗಳಲ್ಲಿ 30ರಿಂದ 90 KWH ಸಾಮರ್ಥ್ಯದ ಬ್ಯಾಟರಿಗಳು ಇರುವುದರಿಂದ ಡಿಸಿ ಫಾಸ್ಟ್ ಚಾರ್ಜಿಂಗ್ ಅವಶ್ಯಕತೆ ಹೆಚ್ಚಾಗಿದೆ. ಗ್ರಾಹಕರು ಕೇವಲ 30 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ ವ್ಯವಸ್ಥೆ ಬಯಸುತ್ತಿರುವುದರಿಂದ ಹೆಚ್ಚಿನ ಸೌರ ಪ್ಯಾನೆಲ್ ಪ್ರದೇಶಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದರ ನಡುವೆ, EVಗಳಿಂದ ವಿದ್ಯುತ್ ಬಳಕೆಯ ನಿಖರ ಪ್ರಮಾಣ ಅಂದಾಜಿಸಲು ಪ್ರತ್ಯೇಕ ಮೀಟರ್ ವ್ಯವಸ್ಥೆ ಜಾರಿಗೆ ತರಬೇಕೆಂದು ರಾಜ್ಯ ಲೋಡ್ ಡಿಸ್ಪ್ಯಾಚ್ ಸೆಂಟರ್ (SLDC) ಮತ್ತೆ ಒತ್ತಾಯಿಸಿದೆ.

ಪ್ರಸ್ತುತ ಬಹುತೇಕ ಗ್ರಾಹಕರು ಮನೆ ಬಳಕೆಯ ಮೀಟರ್‌ನಲ್ಲೇ EV ಚಾರ್ಜಿಂಗ್ ಮಾಡುತ್ತಿರುವುದರಿಂದ ನಿಖರ ಡೇಟಾ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತ್ಯೇಕ ಮೀಟರ್ ಇದ್ದರೆ EV ಬಳಕೆಯ ವಿದ್ಯುತ್ ಪ್ರಮಾಣ, ಬೇಡಿಕೆಯ ಏರಿಕೆ ಹಾಗೂ ಭವಿಷ್ಯದ ನೀತಿ ರೂಪಣೆಗೆ ಅಗತ್ಯ ಮಾಹಿತಿಯನ್ನು ನಿಖರವಾಗಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಒಂದು ಸೌರಶಕ್ತಿ ಆಧಾರಿತ EV ಚಾರ್ಜಿಂಗ್ ಕೇಂದ್ರವಿದೆ. BESCOM ವತಿಯಿಂದ 209 EV ಚಾರ್ಜಿಂಗ್ ಕೇಂದ್ರಗಳು ಮತ್ತು 471 ಚಾರ್ಜಿಂಗ್ ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಒಟ್ಟು ಸುಮಾರು 8,000 EV ಚಾರ್ಜಿಂಗ್ ಕೇಂದ್ರಗಳಿದ್ದು, ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com