ಕಬ್ಬಿಗೆ 5,500 ರೂ. ಬೆಂಬಲ ಬೆಲೆಗೆ ಪಟ್ಟು: ಹೆದ್ದಾರಿ ತಡೆ ಕೈಬಿಟ್ಟು, ಸಚಿವ ಪ್ರಹ್ಲಾದ್ ಜೋಶಿ ನಿವಾಸದತ್ತ ಹೆಜ್ಜೆ ಹಾಕಿದ ರೈತರು, ಹುಬ್ಬಳ್ಳಿಯಲ್ಲಿ ಹೆಚ್ಚಿದ ಭದ್ರತೆ..!

ಅಧಿಕಾರಿಗಳಿಗೆ ನೀಡಿದ್ದ ಐದು ಗಂಟೆಗಳ ಗಡುವು ಮುಗಿದರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಹೆದ್ದಾರಿಗಳಿಂದ ಪ್ರತಿಭಟನೆಯನ್ನು ಕೇಂದ್ರ ಸಚಿವರ ನಿವಾಸದತ್ತ ಸ್ಥಳಾಂತರಿಸಲು ರೈತರು ನಿರ್ಧರಿಸಿದ್ದಾರೆ.
Union Minister Pralhad Joshi
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Updated on: 

ಹುಬ್ಬಳ್ಳಿ/ಧಾರವಾಡ/ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಕಳೆದ ಎರಡು ದಿನಗಳಿಂದ ತೀವ್ರಗೊಂಡಿದ್ದ ಕಬ್ಬು ಬೆಳೆಗಾರರ ಹೋರಾಟ ಈಗ ಹೊಸ ತಿರುವು ಪಡೆದುಕೊಂಡಿದೆ.

ಹುಬ್ಬಳ್ಳಿ-ಬೆಳಗಾವಿ ಹೆದ್ದಾರಿ ತಡೆದು ಪ್ರತಿಭಟಿಸುತ್ತಿದ್ದ ರೈತರು, ಈಗ ಹೆದ್ದಾರಿ ತಡೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಈ ನಿರ್ಧಾರ ಕೈಗೊಂಡಿರುವ ರೈತರು, ತಮ್ಮ ಹೋರಾಟದ ಮುಂದಿನ ಭಾಗವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ನಿವಾಸಕ್ಕೆ ಮುತ್ತಿಗೆ ಹಾಕಲು ಬೃಹತ್ ಪಾದಯಾತ್ರೆ ಆರಂಭಿಸಿದ್ದಾರೆ. ಇದೇ ವೇಳೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳಿಗೆ ನೀಡಿದ್ದ ಐದು ಗಂಟೆಗಳ ಗಡುವು ಮುಗಿದರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಹೆದ್ದಾರಿಗಳಿಂದ ಪ್ರತಿಭಟನೆಯನ್ನು ಕೇಂದ್ರ ಸಚಿವರ ನಿವಾಸದತ್ತ ಸ್ಥಳಾಂತರಿಸಲು ರೈತರು ನಿರ್ಧರಿಸಿದ್ದಾರೆ.

ಧಾರವಾಡದಲ್ಲಿ ಕಳೆದ 32 ಗಂಟೆಗಳಿಂದ ಹುಬ್ಬಳ್ಳಿ-ಬೆಳಗಾವಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರೂ ರಸ್ತೆ ತಡೆಯನ್ನು ಅಂತ್ಯಗೊಳಿಸಿದ್ದಾರೆ. ವಿವಿಧ ಪ್ರದೇಶಗಳ ರೈತರು ಸ್ಥಳಕ್ಕೆ ತಲುಪುವವರೆಗೆ ರಸ್ತೆ ಬದಿಯ ಟೆಂಟ್‌ನಲ್ಲಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಇತರ ರೈತರು ಬಂದ ಬಳಿಕ ಪಾದಯಾತ್ರೆಯಲ್ಲಿ ಸೇರಿಕೊಂಡು ಪ್ರಹ್ಲಾದ್ ಜೋಶಿ ಅವರ ನಿವಾಸದತ್ತ ತೆರಳಲಿದ್ದಾರೆ.

Union Minister Pralhad Joshi
Watch | ಕಬ್ಬು ಬೆಳೆಗಾರರಿಂದ ಹೆದ್ದಾರಿ ತಡೆ; ಪ್ರಲ್ಹಾದ್ ಜೋಶಿ ಹೇಳಿದ್ದಿಷ್ಟು...

ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹೆದ್ದಾರಿ ತಡೆ ಹೋರಾಟವನ್ನು ಹಿಂಪಡೆಯಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಇದೇ ವೇಳೆ, ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಳೇಶ್ವರ ಸ್ವಾಮೀಜಿ ಅವರು ಪ್ರಹ್ಲಾದ್ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ಆಶಯದಂತೆ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗುವವರೆಗೂ ಸಕ್ಕರೆ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹೋರಾಟಕ್ಕೆ ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

ಈ ನಡುವೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸಲು ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಂಟಿ ಸಮಿತಿಯನ್ನು ರಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com