ತರವಲ್ಲ ತಗಿ ನಿನ್ನ ತಂಬೂರಿ
ಶಿಶುನಾಳ ಶರೀಫರನ್ನು ನಾವು ಲೋಕಶಿಕ್ಷಕರು ಎಂದು ಕರೆಯಬಹುದು. ತಮ್ಮ ಗೀತೆಗಳ ಮೂಲಕ ಶರೀಫರು ಲೌಕಿಕರಿಗೆ ಸಾಮಾಜಿಕ ನೀತಿಯನ್ನು ಹಾಗು....
(ಸುನಾಥ ಎಂಬ ಕಾವ್ಯನಾಮದಿಂದ ಬರೆಯುವ ಎಸ್.ಎಲ್.ದೇಶಪಾಂಡೆ ಅವರ 'ಬೇಂದ್ರೆ ಶರೀಫ ಕಾವ್ಯಯಾನ' ಕೃತಿಯಿಂದ ಆಯ್ದ ಭಾಗ.)
ಶಿಶುನಾಳ ಶರೀಫರನ್ನು ನಾವು ಲೋಕಶಿಕ್ಷಕರು ಎಂದು ಕರೆಯಬಹುದು. ತಮ್ಮ ಗೀತೆಗಳ ಮೂಲಕ ಶರೀಫರು ಲೌಕಿಕರಿಗೆ ಸಾಮಾಜಿಕ ನೀತಿಯನ್ನು ಹಾಗು ಸಾಧಕರಿಗೆ ಆಧ್ಯಾತ್ಮಿಕ ನೀತಿಯನ್ನು ಬೋಧಿಸಿದ್ದಾರೆ. ಶರೀಫರ ಅನೇಕ ಕವನಗಳು ಒಂದು ಲೌಕಿಕ ವಸ್ತುವಿನ ವರ್ಣನೆಯಿಂದ ಪ್ರಾರಂಭವಾಗಿ, ಅಲೌಕಿಕ ವಸ್ತುವಿನ ವರ್ಣನೆಯತ್ತ ಹೊರಳುತ್ತವೆ. ತರವಲ್ಲ ತಗಿ ನಿನ್ನ ತಂಬೂರಿ ಗೀತೆಯಲ್ಲಿಯೂ ಇದೇ ಪದ್ಧತಿಯನ್ನು ಕಾಣಬಹುದು.
ತಂಬೂರಿ ಇಲ್ಲಿ ಲೌಕಿಕ ಜೀವನದ ಸಂಕೇತವಾಗಿರುವಂತೆಯೇ, ಆಧ್ಯಾತ್ಮಿಕ ಸಾಧನೆಯ ಸಂಕೇತವೂ ಆಗಿದೆ. ಈ ಎರಡೂ ಸಂಕೇತಗಳನ್ನು ಶರೀಫರು ಅಕ್ಕಪಕ್ಕದಲ್ಲಿ ಇಟ್ಟುಕೊಂಡೇ ಈ ಗೀತೆಯನ್ನು ರಚಿಸಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಸಿರಬೇಕು ಎನ್ನುವದಾದರೆ, ಸಮಾಜದ ವಿವಿಧ, ವಿಭಿನ್ನ ಜನರಲ್ಲಿ ಸಾಮರಸ್ಯ ಹಾಗು ಪ್ರೀತಿ ಇರಬೇಕು. ಆವಾಗಲೇ ಸಮಾಜ ಎನ್ನುವ ತಂಬೂರಿಯಿಂದ ಸುಸ್ವರ ಹೊರಡುತ್ತದೆ. ಇಂತಹ ಸರಸ ಸಂಗೀತದ ಕುರುಹುಗಳನ್ನು ಅರಿಯದ, ಸಮಾಜಘಾತಕ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ ಹಬ್ಬುವಂತಹ ಅಪಸ್ವರಗಳನ್ನು ಹೊರಡಿಸುತ್ತಾರೆ. ಇಂತಹವರಿಗೆ ಶರೀಫರು ಎಚ್ಚರಿಕೆ ನೀಡುತ್ತಾರೆ. 'ಸ್ವರ ಬರದೆ ಬಾರಿಸದಿರು ತಂಬೂರಿ'. ಇಂತಹ ಅವಿವೇಕಿ ವ್ಯಕ್ತಿಗಳು ಬಾಳಲು ಬಲ್ಲವರಲ್ಲ. ಇವರು 'ತಾಳಗೇಡಿಗಳು'.
ಇನ್ನು ಈ ಗೀತೆಯು ಅಧ್ಯಾತ್ಮ ಸಾಧಕರಿಗೂ ಸಹ ಎಚ್ಚರಿಕೆಯ ದನಿಯಾಗಿದೆ. ಸ್ಥೂಲಶರೀರ, ಸೂಕ್ಷ್ಮಶರೀರ ಹಾಗು ಕಾರಣಶರೀರ ಎನ್ನುವ ಮೂರು ಶರೀರಗಳೊಂದಿಗೆ ಮನಸ್ಸನ್ನು ಬೆಸೆದಿರುವ ವ್ಯಕ್ತಿತ್ವವು ಒಂದು ತಂಬೂರಿಯಿದ್ದಂತೆ. ಸ್ಥೂಲದೇಹದ ಬೇಡಿಕೆಗಳಿಗೆ ದಾಸನಾಗಿರುವ ವ್ಯಕ್ತಿತ್ವವು ಪಶುಸಮಾನವಾದ ವ್ಯಕ್ತಿತ್ವವು. ಮಾನವನಾಗಿ ಹುಟ್ಟಿದ ಮೇಲೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವುದೇ ವಿವೇಕಿಗಳ ಲಕ್ಷಣ. ಅಂತೆಯೇ, ಮಾನವಜನ್ಮ ಬಲು ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು ದಾಸರು ಹಾಡಿದ್ದಾರೆ. ಭಕ್ತಿಯ ಮೂಲಕ ಸಾಧನೆ ಮಾಡುವುದು ಒಂದು ಮಾರ್ಗ. ಯೋಗಸಾಧನೆ ಮತ್ತೊಂದು ಮಾರ್ಗ.
ಶರೀಫರ ಅನೇಕ ಗೀತೆಗಳನ್ನು ಗಮನಿಸಿದಾಗ, ಅವರು ಯೋಗವಾರ್ಗವನ್ನು ಅರಿತವರಾಗಿದ್ದರು ಎಂದು ಭಾಸವಾಗುವುದು. ಯೋಗಸಾಧಕರಿಗೆ ಸಹಜವಾಗಿಯೇ ಸಿದ್ಧಿಗಳು ಲಭಿಸುವವು. ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಇಂತಹ ಸಿದ್ಧಿಗಳು ದೊರೆತಿದ್ದವು. ಆದರೆ ಶರೀಫರಿಗೆ ಮಾತ್ರ ಯಾವ ಸಿದ್ಧಿಯೂ ಲಭ್ಯವಾಗಿರಲಿಲ್ಲ. ಆದುದರಿಂದಲೇ ಅವರು 'ಎಲ್ಲರಂಥವನಲ್ಲ ನನ ಗಂಡ, ಎಲ್ಲಿಗೋಗಧಾಂಗ ಮಾಡಿಟ್ಟಾ, ಕಾಲ್ಮುರಿದು ಬಿಟ್ಟಾ' ಎಂದು ಹಾಡಿದ್ದಾರೆ. ಯೋಗಸಾಧಕರು ಸಿದ್ಧಿಯ ಜಾಲದಲ್ಲಿ ಬೀಳಬಾರದು. ಈ ಸಿದ್ಧಿಗಳು ಅವರನ್ನು ಅಪಮಾರ್ಗಕ್ಕೆ ಎಳೆಯಬಹುದು. ಆದರೆ ಮನೋನಿಗ್ರಹ ಮೂಲಕ ತಮ್ಮ ಮೂರೂ ಶರೀರಗಳ ಮೇಲೆ ನಿಯಂತ್ರಣ ಸಾಧಿಸಿ, ಯೋಗಾನಂದವನ್ನು ಪಡೆಯುವುದೆಂದರೆ ತಂಬೂರಿಯನ್ನು ಸರಸವಾಗಿ ಬಾರಿಸಿದಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

