ಅದೇ ಪುಷ್ಪಕ

ಪುಷ್ಪಕ ವಿಮಾನದ ಬಾಗಿಲಲ್ಲಿ ಖುದ್ದು ಶ್ರೀರಾಮನೇ ನಿಂತು
ಒಳಗೆ ಕಳಿಸುತ್ತಾನೆ ಒಬ್ಬೊಬ್ಬರನ್ನೇ.
ರಾವಣನೊಬ್ಬನೇ ಏರುತ್ತಿದ್ದ ಆ ಖಾಸಗಿ ಮಹಾ ವಿಮಾನ
ಈವತ್ತು ತೆರೆದಿದೆ ಸಾರ್ವಜನಿಕರಿಗೆ.
ಮೊದಲು ಮಕ್ಕಳು, ಆಮೇಲೆ ಹೆಂಗಸರು, ಮುದುಕರು. ಕಿಟಕಿಯ
ಸೀಟಿಗೆ ಕೊಸರಾಡುವ ಎಳೆಯರು. ಮೊಲೆಗೂಸ
ತಾಯಂದಿರು. ದಿನತುಂಬಿದುಬ್ಬು ಗರ್ಭಿಣಿಯರ ಕಣ್ಣಿನಾಯಾಸ.
ಸಾಮಾನು ಸರಂಜಾಮು, ದೇಶಾಂತರದ ವೀಸ.
ವಿಭೀಷಣರೆ ನೀವು ಹತ್ತಿ. ಸುಗ್ರೀವರೇ ಈಗ ನೀವು. ಇಲ್ಲಿ ತಾರದೇವಿ;
ಇತ್ತ ಕಡೆ ರುಮೆ. ಕಿತಬೆ ಮಕ್ಕಳ ಕೂಡಿಸ ಬೇಡಿ
ಕಿಟಕಿಯ ಪಕ್ಕ. ಉಡ್ಡಯಣದ ಮುನ್ನವೇ ಕಟ್ಟಿ ಸೊಂಟ ಪಟ್ಟಿಕೆಯ.
ನೇರವಿರಲಾಸನ. ಹಾರಲಿಕ್ಕಿದೆ ವಿಮಾನ. ನೋಡಿ
ಎಷ್ಟೊಂದು ವರ್ಣಮಯ ಪುಷ್ಪಕದ ಗರ್ಭಾಂಕ! ಕಾಳ್ಗಪ್ಪು, ತಿಳಿಗಂದು
ಮಸುಕುಬಿಳಿ! ಸೀತೆಯ ಮಾಸಿದ ಮುಖಾರವಿಂದದ
ಕುದಿದ ಹಾಲ್ ಬೆಳಕು. ರಾಮನಿಗೆ, 'ನೀವೀಗ ಹತ್ತಿ ಗುರುವೇ' ಎನ್ನು
ತ್ತಿರುವ ಹನುಮಂತು. ಉಂಟು ಹಕ್ಕಿನ ಜಾಗ ಸೀತೆಯ ಪಕ್ಕ.
ಜಾಂಬವರು ಹತ್ತಿದರಷ್ಟೆ? ರಾಮ ಕೇಳುವನು. ಓಹೋ! ಅವರಿಗೆ ಮೀಸಲು
ಮುಂಬಾಗಿಲೊತ್ತಿನ ವಿಸ್ತೃತಾಸನ. ಸರಿ, ಬೊಬ್ಬೆಯಿಕ್ಕುತ
ಹಾರೇಬಿಟ್ಟಿತು ಸಿಡಿಲ ಗರ್ಜನೆಯ ಮೇಘವಿಮಾನ. ಆಕರ್ಣ ನಗುತ್ತ
ಗಗನಾಂಗಿ ಹೇಳಹತ್ತಿದ್ದಾಳೇನನ್ನೋ ಕೈಬಾಯ್ ತಿರುವುತ್ತ!
ಲಂಕೆಯಿಂದವಧಕ್ಕೆ ತಡೆರಹಿತ ಏಕಮುಖೀ ಯಾನ. ಚಿವ್ ಚಿವ್ ಪ್ರಾಣಿ
ಪ್ರಪಂಚ. ಚಿಲಿಮಿಲಿ ಪಕ್ಷಿ ಸಂಕುಲ. ವಾನರ ಪಿಳ್ಳೆಗಳ ಉದ್ದುದ್ದ ಬಾಲ.
ಮೂಲ ಮೂರ್ತಿಯ ಶೋಧಕ್ಕೆ ಬಾಲ ಜಗ್ಗುವ ರಕ್ಕಸ ಹೈಕಳ ಉತ್ಪಾತ. ಸದ್ದು
ಎಂದು ಗದ್ದಲ ಎಬ್ಬಿಸುವ ಬಾಲ ತುರುಬಿನ ತಾಯಂದಿರು. ಕಣ್ಮುಚ್ಚಿ ಹಗುರ
ತಲೆಯನ್ನು ಚಂದ್ರದಿಂಬಿಗೆ ಒರಗಿಸಿದ ಅರೆಗಣ್ಣು ಜಾಂಬವರು.
ಅಗೋ ಅಗೋ ಅಲ್ಲಿ ಕಡಲ ದಾಟಲಿಕ್ಕೆ ನಮ್ಮವರು ಕಟ್ಟಿದ ಅಡ್ಡ ಸೇತುವೆ.
ಉತ್ಸಾಹದಿಂದ ಸೀತೆಗೆ ಸೇತುಪಟ್ಟಿ ತೋರಿಸಲು ಧಿಗ್ಗೆಂದಿತೆದೆ. ಸೇತುವೆಯೆ ಅದು?
ಕಟಕಟ ಕಡಿವ ಕಡಲ ಹಲ್ಲು. ನಿರ್ಬಯಲ ಚೀತ್ಕಾರ. ಒಡಲ ತಳಮಳ.
ಉದ್ರಿಕ್ತ ರಾವಣನ ಅಗ್ನಿದಾಹ. ಇದೆ ಇದೇ ಪುಷ್ಪಕದಲ್ಲೀಗ ಕಡೆಗಣ್ಣಲ್ಲಿ
ಕದ್ದು ನೋಡಿದ ಕಡೆ ಮೂಲೆ. ಕಾರ್ಮುಗಿಲ ಬಿಗಿ ಮುಷ್ಠಿಯಲ್ಲಿ ವಿಲಿವಿಲಿ
ಒದ್ದಾಡಿದ ಮಿಂಚಿನಬಳ್ಳಿ. ಬೆಮರುವ ಕೈ. ದುಡಿ ಬಡಿಯುವ ಎದೆ. ಗಟ್ಟಿ
ಹಿಡಿದುಕೊ ಶ್ರೀರಾಮ ಹಸ್ತ! ಒಂದನ್ನ ಕಂಡಾಗ ಕಾಣಬಹುದಿನ್ನೊಂದು.
ಹಿಂದೆ ಹಿಂದೇ ಗಸ ಗಸ ಅಟ್ಟಿಸಿಕೊಂಡು ಬರುತ್ತಿರುವ ಉಗ್ರ ವ್ಯಾಘ್ರದಾರ್ಭಟ.
ಭಯಭೀತ ಹರಿಣದ ಹೆಜ್ಜೆಬರಹದ ಸಾಲು ಹುಲಿಗೆ ದಾರಿಯ ಗುರುತು.
- ಎಚ್ಚೆಸ್ವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


