ಖುಷಿ

ಅರರೆ ಗೋಣಿ ರಾಮ!

ಅರರೆ ಗೋಣಿ ರಾಮ!
Published On :

ಒಂದು ಚಿತ್ರದ ಒಳಗೆ ನುಗ್ಗುವ ಅಪರೂಪದ ತಾಕತ್ತು ಫೋಟೋಗ್ರಾಫರ್ ಶಶಿಧರ ಹಿರೇಮಠ (ಮೊ. 8861308304) ಅವರಿಗಿದೆ. ಇಲ್ಲೊಂದು 'ಗೋಣಿ ವೃಕ್ಷ'. ಅದರ ಹಣ್ಣನ್ನು ತಿನ್ನಲು ಬರುವ ವೈವಿಧ್ಯ ಹಕ್ಕಿಗಳನ್ನು ಕ್ಯಾಮೆರಾ ಮೂಲಕ ಮಾತಾಡಿಸಿದ್ದಾರೆ ಹಿರೇಮಠರು. ಹಾಗೆಯೇ, ಮರದ ಸ್ವಗತವನ್ನು ಮನೋಜ್ಞವಾಗಿ ಬಿಡಿಸಿಟ್ಟಿದ್ದಾರೆ...

ನಾನು ಕಾನನ ಸುಂದರಿ. ನನ್ನ ವಾಸ ಪಶ್ಚಿಮಘಟ್ಟಗಳ ಅಂಚಿಗಿರುವ ಗ್ರಾಮಗಳಲ್ಲಿ. ನನ್ನ ಬಂಧುಗಳು ಧಾರವಾಡ, ಬೆಳಗಾವಿ ಹಾಗೂ ದಾಂಡೇಲಿ ನಗರವಾಸಿಗಳು. ನಾನು 25 ಮೀಟರ್ ಎತ್ತರದವರೆಗೂ ಬೆಳೆಯಬಲ್ಲೆ. ಅಂದಹಾಗೆ, ನನ್ನ ಹೆಸರು 'ಗೋಣಿ ಮರ'. ಸಸ್ಯ ವಿಜ್ಞಾನಿಗಳು ನನ್ನನ್ನು ಪಿಕಸ್ ಡ್ರುಪೆಸಾ (Ficus drupacea) ಎಂದು ಕರೆದು ಮೊರೇಸಿ ಸಸ್ಯ ಕುಟುಂಬಕ್ಕೆ ಸೇರಿಸಿದ್ದಾರೆ. ನಿವೃತ್ತ ಅರಣ್ಯಾಧಿಕಾರಿಯಾದ ಎಸ್.ಜಿ. ನೆಗಿನಹಾಳರವರು 'ಪಶ್ಚಿಮಘಟ್ಟದ ಅರಣ್ಯ ಮರಗಳು' ಕೃತಿಯಲ್ಲಿ ನನ್ನ ಬಗ್ಗೆ ವಿವರಿಸಿದ್ದಾರೆ.
ಮಾಗಿಯ ಚಳಿಯಲ್ಲಿ ಮಾಗಿದ ನನ್ನ ಹಣ್ಣುಗಳನ್ನು ಸವಿಯಲು ಕೆಲ ಪಕ್ಷಿ ಮಿತ್ರರೆಲ್ಲಾ ಜಾತ್ರೆಯನ್ನೇ ನಡೆಸ್ತಾರೆ. ಆ ನಿಸರ್ಗದ ಜಾತ್ರೆಯ ಪಕ್ಷಿಗಳ ಕೂಗಿನ ಇಂಚರದ ಸದ್ದಿಗೆ ನನ್ನ ಮೈಮನ ಪುಳಕಗೊಳ್ಳುತ್ತದೆ. ಹಾಗೆಯೇ ಕುಣಿಯಬೇಕೆನಿಸುತ್ತದೆ. ಅಯ್ಯೋ ಅದು ಸಾಧ್ಯವಿಲ್ಲದ ಮಾತು. ಯಾಕೆಂದರೆ, ನಾ ನಿಂತಿರೋದು ಭೂ ತಾಯಿಯ ಒಡಲೊಳಗೆ. ಸುಳು ಸುಳು ಬೀಸುವ ತಂಗಾಳಿಯ ನಿನಾದದ ಜೊತೆ ಪಕ್ಷಿಗಳ ಕಲರವದ ಸವಿಗಾನ ಕೇಳಿದಾಗ ತಲೆಬಾಗಿ ಕುಣಿದಾಡುವೆ ಅಷ್ಟೇ. ಆಹಾ! ನನ್ನ ಹಣ್ಣನರಸಿ ಬರುವ ಪಕ್ಷಿ- ಪ್ರಾಣಿ ಮಿತ್ರರು ಅದೆಷ್ಟೋ... ಮನಿಯಾಡಲು (Yellow Leged Green Pigeon),, ಕೆಂಗೆಲೆ ಗಿಳಿ (Plum-Headed Parakeet), ಚಿಟ್ಟು ಗಿಳಿ (Indian Hanging Parrot ), ಕೋಗಿಲೆ (Asian Koel), ಬೂದು ಮಂಗಟ್ಟೆ ಹಕ್ಕಿ (Indian Grey Hornbill), ಮಲೆ ಮಂಗಟ್ಟೆ ಹಕ್ಕಿ (Malabar Grey Hornbill), ಮಲೆದಾಸ ಮಂಗಟ್ಟೆ ಹಕ್ಕಿ (Malabar Pied Hornbill), ದೊಡ್ಡ ಮಂಗಟ್ಟೆ ಹಕ್ಕಿ (Great Pied Hornbill), ಕೆಂಪು ಕತ್ತಿನ ಕಂಚು ಕುಟಿಗ (Crimson throated Barbet), ಕಂಚು ಕುಟಿಗ (Coppersmith Barbet), ಕಾಮಳ್ಳಿ (Common Hill Myna), ಬೆಳ್ಗಣ್ಣು (Oriental White Eye), ಪಿಕಳಾರಗಳು (Bulbuls) ಅಲ್ಲದೆ ಕೆಂಚಳಿಲೂ ಬಂದು ನನ್ನ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.
ಹ್ಞಾಂ, ಇನ್ನೊಂದು ಕೌತುಕ ಗೊತ್ತಾ? ಅತಿಯಾಗಿ ಮಾಗಿದ ನನ್ನ ಹಣ್ಣು ತಿಂದು ಕೆಲ ಬಾನಾಡಿಗಳು ಸಾರಾಯಿ ಕುಡಿದ ಹಾಗೆ ಮತ್ತೇರಿ, ಗಾಳಿಯಲ್ಲಿ ತೇಲಾಡ್ತಾ ಹಾರ್ತವೆ ಕಣ್ರೀ. ಕೆಲ ಸಲ ಟೈಟಾಗಿ ನೆಲಕ್ಕೆ ಬಿದ್ದಿದ್ದೂ ಉಂಟು!
ನನ್ನ ಹಣ್ಣು ಪಕ್ಷಿ- ಪ್ರಾಣಿಗಳ ಹೊಟ್ಟೆ ಸೇರಿ ಜಿರ್ಣಕ್ರಿಯೆ ನಡೆದಾದ ಅಲ್ಲಿಯ ಆಮ್ಲದ ಜೊತೆಗೂಡಿ ಬೀಜೋಪಚಾರ ನಡೆದು ಅವು ಹಾಕುವ ಹಿಕ್ಕೆ ನೆಲಕ್ಕೆ ಬೀಳುತ್ತದೆ. ಅದರ ಮೇಲೆ ವರುಣನ ಸಿಂಚನ. ನಂತರ ಭೂ ತಾಯಿಯ ಒಡಲಿನಿಂದ ನನ್ನ ವಂಶಾಭಿವೃದ್ಧಿ. ಹೀಗೆ ನನ್ನ ಮತ್ತು ಪಕ್ಷಿ-ಪ್ರಾಣಿಗಳ ನಂಟು ಯುಗ ಯುಗಗಳಿಂದ ಸಾಗಿದೆ. ನನ್ನ ಇನ್ನೊಂದು ವಿಚಿತ್ರವೆಂದರೆ, ಹಳದಿಯಿಂದ ಕೆಂಪು ವರ್ಣಕ್ಕೆ ತಿರುಗಿ ಹಣ್ಣಿನಂತೆ ಕಾಣುವ ಇವು ಹಣ್ಣಲ್ಲಾರೀ... 'ಹೈಪ್ಯಾನ್ ತೋಡಿಯಂ' ಎಂಬ ವಿಶಿಷ್ಟ ಬಗೆಯ ಹೂಗೊಂಚಲು! ಇದರೊಳಗೆ ಗಂಡು ಹೂವು, ಹೆಣ್ಣು ಹೂವು ಹಾಗೂ ಸ್ಟರೈಲ್‌ಗಳೆಂಬ 3 ಬಗೆಗಳಿವೆ. ಇವುಗಳ ತುದಿಯಲ್ಲಿರುವ ಸಣ್ಣ ರಂಧ್ರದ ಮೂಲಕ ಪರಾಗಸ್ಪರ್ಶ ಕ್ರಿಯೆ ನಡೆದು, ಒಳಾವರಣದಲ್ಲಿ ಬೀಜಗಳು ಮೂಡುತ್ತವೆ. ಶಿಶಿರನ ದಾಳಿಯಿಂದ ನನ್ನೆಲ್ಲ ಎಲೆಗಳು ಉದುರಿ ಮೈ ತುಂಬೆಲ್ಲ ಬರೀ ಹಳದಿ ಹಣ್ಣುಗಳೇ ಆವರಿಸಿ, ಅರಶಿನ ಹಚ್ಚಿ ಶೃಂಗರಿಸಿದ ನವ ವಧುವಂತೆ ಕಾಣುವೆ. ವಸಂತನ ಆಗಮನವಾಗುತ್ತಿದ್ದಂತೆಯೇ ಎಲೆಗಳು ಚಿಗುರಿ, ಹಸಿರಾಗಿ ಭೂ ತಾಯಿಯ ಮುಕುಟದಂತೆ ಕಾಣುವೆ. ಎಲೆ ಕಿತ್ತಾಗ ಹಾಲಿನಂಥ ಅಂಟು ದ್ರವ ಸುರಿಸುವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.