ಖುಷಿ

ಫಿಟ್ ಆ್ಯಂಡ್ ರನ್!

ಫಿಟ್ ಆ್ಯಂಡ್ ರನ್!
Published On :

ಕ್ರೀಡಾಪಟು ಹೆಚ್ಚು ಹೆದರುವುದು ಎದುರಾಳಿ ತಂಡಕ್ಕಲ್ಲ. ಗಾಯಕ್ಕೆ! ಆ ನೋವುಗಳು ಅದೆಷ್ಟೋ ಕ್ರೀಡಾಪಟುಗಳ ಭವಿಷ್ಯವನ್ನು ನುಂಗಿಹಾಕಿವೆ. ಈ ವೇಳೆ ಅವರಿಗೆ ದೇವರಾಗಿ ಕಾಣುವುದು ದೈಹಿಕ ತಜ್ಞರು. ಆಟಗಾರರು ಗಾಯಗೊಂಡಾಗ ಸೂಕ್ತ ಚಿಕಿತ್ಸೆ ನೀಡಿ, ಶೀಘ್ರ ಚೇತರಿಸಿಕೊಳ್ಳಲು ನೆರವಾಗುವುದು ಈ ತಜ್ಞರ ಮುಖ್ಯ ಡ್ಯೂಟಿ.
ಕ್ರೀಡೆಯ ಬಗ್ಗೆ ಒಲವು ಹೊಂದಿದ ದೈಹಿಕ ತಜ್ಞರಿಗೆ ಇದು ಹೇಳಿಮಾಡಿಸಿದ ವೃತ್ತಿ. ಈತ ಕ್ರೀಡಾಪಟುಗಳಿಗೆ ದೈಹಿಕ ಚೇತರಿಕೆ ನೀಡಲು ಹಲವು ಮಾರ್ಗಗಳನ್ನು ಬಳಸಬೇಕಾಗುತ್ತದೆ. ಆಟಗಾರರು ಗಾಯಗೊಂಡಾಗ ಅವರಿಗೆ ಮೊದಲು ಮಾನಸಿಕ ಧೈರ್ಯ ತುಂಬಬೇಕು. ಇಂಥ ತಜ್ಞರಿಗೆ ಪ್ರಬಲ ಸಂವಹನ ಶಕ್ತಿಯೂ ಮುಖ್ಯ.

ಎಷ್ಟು ಓದಿರ್ಬೇಕು?
ದೈಹಿಕ ತಜ್ಞರಾಗ ಬಯಸುವವರಿಗೆ ಇಂದು ಹಲವು ಕೋರ್ಸ್‌ಗಳುಂಟು. ಆದರೆ, ಅದನ್ನು ವೃತ್ತಿಯಾಗಿ ಸ್ವೀಕರಿಸುವವರು ಫಿಸಿಯೋಥೆರಪಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯೊಂದಿಗೆ ಕೆಲ ವರ್ಷಗಳ ಅನುಭವ ಹೊಂದಿದರೆ ಈ ಕೆಲಸವನ್ನು ಸುಲಭವಾಗಿ ಗಿಟ್ಟಿಸಬಹುದು.

ಪಾಯಿಂಟ್ ಮಾಡ್ಕೊಳಿ...
ಪಂದ್ಯದ ಮುನ್ನ, ನಡೆಯುತ್ತಿರುವಾಗ ಹಾಗೂ ನಂತರ ದೈಹಿಕ ತಜ್ಞರ ಪಾತ್ರ ಬಹುಮುಖ್ಯ. ಈ ಮೂರು ಹಂತಗಳಲ್ಲೂ ಕ್ರೀಡಾಪಟುಗಳು ಫಿಟ್ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಇವರೇ ಪರೀಕ್ಷಿಸಿ ನಿರ್ಧರಿಸಬೇಕು. ಸತತ ಪಂದ್ಯಗಳು ನಡೆಯುತ್ತಿರುವಾಗಲಂತೂ ಕ್ರೀಡಾಪಟುಗಳ ಕ್ಷಮತೆ ಮೇಲೆ ಮೂರು ಕಣ್ಣಿಟ್ಟರೂ ಸಾಲದು. ಗಾಯ ಆರಂಭದ ಹಂತದಲ್ಲಿದ್ದಾಗಲೇ ವಿಶ್ರಾಂತಿ ಪಡೆಯಲು ಸೂಚಿಸಬೇಕು. ಇಲ್ಲವಾದರೆ, ಅದು ಕ್ರೀಡಾಪಟುಗಳ ವೃತ್ತಿ ಜೀವನವನ್ನೇ ಹೊಸಕಿ ಹಾಕಬಲ್ಲದು. ಅಲ್ಪ ಸಮಸ್ಯೆ ಇದ್ದಾಗ ಯಾವ ಥರದ ವ್ಯಾಯಾಮ? ಎಷ್ಟು ಕಾಲ ವಿಶ್ರಾಂತಿ? ದೀರ್ಘಾವಧಿ ಸಮಸ್ಯೆ ಇದ್ದಾಗ ದೇಹದ ಆರೈಕೆ ಹೇಗೆ? ಇತ್ಯಾದಿಗಳನ್ನು ತಿಳಿಸುವುದು ತುಂಬಾ ಸೂಕ್ಷ್ಮ ವಿಚಾರ ಅಂತಾರೆ ದೈಹಿಕ ತಜ್ಞ ಜಬಪ್ರಭು ಅಬ್ರಾಹಂ.

ಎಷ್ಟು ಸಿಗುತ್ತೋ?
ಹಿಂದೆಲ್ಲ ದೈಹಿಕ ತಜ್ಞರಿಗೆ ಭಾರತದಲ್ಲಿ ಡಿಮ್ಯಾಂಡೇ ಇರಲಿಲ್ಲ. ವಿದೇಶದಲ್ಲಷ್ಟೇ ಬೇಡಿಕೆ ಇತ್ತು. ಆದರೆ, ನಮ್ಮಲ್ಲೀಗ ಎಲ್ಲ ಕ್ರೀಡೆಗಳಿಗೂ ದೈಹಿಕ ತಜ್ಞರು ಕಡ್ಡಾಯ. ಹೀಗಾಗಿ, ಈಗಷ್ಟೇ ಪದವಿ ಪೂರ್ಣಗೊಳಿಸಿದವರೂ ವರ್ಷಕ್ಕೆ 3 ಲಕ್ಷ ರು. ವರೆಗೆ ಸಂಭಾವನೆ ಪಡೆಯುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಬಂದ ಮೇಲಂತೂ 20 ಲಕ್ಷ ರು.ನಿಂದ 1 ಕೋಟಿ ರು.ವರೆಗೆ ದುಡ್ಡು ಎಣಿಸುವ ಭಾಗ್ಯ ದೈಹಿಕ ತಜ್ಞರಿಗೆ ಸಿಕ್ಕಿದೆ.

- ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.