ಬುಟ್ಟಿಯಿಂದ ಹಾರಿದವ!

ಆಗಷ್ಟೇ ತಯಾರಾಗಿದ್ದ ಖಾಲಿ ಕಾಗದ ಮಾರುಕಟ್ಟೆಗೆ ಬರಲು ಸಿದ್ಧವಾಗಿತ್ತು. ಆ ಕಾಗದ ತನ್ನ ಜೀವನದ ಬಗ್ಗೆ ಸುಂದರ ಕನಸುಗಳನ್ನ ಕಟ್ಟಿತ್ತು. ತಾನು ಒಬ್ಬ ಹುಡುಗನ ವಿದ್ಯಾಭ್ಯಾಸಕ್ಕೆ ಸೋಪಾನವಾದೆನು; ಪ್ರಿಯತಮೆಯ ಪ್ರೀತಿಯ ನಿವೇದನೆಗೆ ಸಾಕ್ಷಿಯಾದೆನು; ಉದ್ಯೋಗಿ ತನ್ನ ತಾಯಿಯ ಆರೋಗ್ಯದ ಸಲುವಾಗಿ ಬರೆದ ರಜೆ ಅರ್ಜಿಯಾದೆನು; ದೂರದ ಊರಿನ ಗೆಳೆಯನಿಗೆ ಬರೆವ ಯೋಗಕ್ಷೇವುದ ಪತ್ರವಾದೆನು; ಕವಿಯ ಕವನಕ್ಕೆ ಸಾಕಾರವಾದೆನು; ಗೃಹಿಣಿಗೆ ದಿನಚರಿಯ ಲೆಕ್ಕವಾದೆನು; ಕಷ್ಟಕ್ಕೊಳಗಾಗ ಅನಾಥೆಯ ಮನಸಿನ ಸಂವೇದನೆಯ ಸಾಧನವಾದೆನು; ಇತಿಹಾಸಕಾರನ ಅಧ್ಯಯನದ ಪುಟವಾದೆನು; ಚಿತ್ರಕಾರನ ಕುಂಚದ ಕಲೆಗೆ ಮೈಯ್ಯಾದೆನು; ವಿಜ್ಞಾನಿಯ ಸಂಶೋಧನೆಗೆ ಸಂಕೇತವಾದೆನು; ಭವ್ಯ ದೇಗುಲದ ನೀಲನಕ್ಷೆಯಾದೆನು...
ಇಷ್ಟೆಲ್ಲಾ ಕನಸುಗಳಿರುವ ಆ ಕಾಗದಕ್ಕೆ ಒಂದು ಸಣ್ಣ ಭಯವೂ ಇತ್ತು. ದುರದೃಷ್ಟವಶಾತ್ ನಾನೇನಾದರೂ ಸಾಲದಲ್ಲಿ ಬೆಂದ ವ್ಯವಹಾರಸ್ಥನ ಆತ್ಮಹತ್ಯೆಯ ಪತ್ರವಾದರೆ? ಮಗನಿಗೆ ತಂದೆಯ ನಿಧನದ ಸುದ್ದಿ ತಿಳಿಸುವ ಅಂಚೆಯಾದರೆ... ಹೀಗೆ ತನ್ನ ಕೆಟ್ಟ ಆಲೋಚನೆಗಳ ನಡುವೆಯೂ ಹೇಗೋ ನಾನು ಜೀವನದಲ್ಲಿ ಯಾರೊಬ್ಬರಿಗಾದರೂ ಬಳಕೆಯಾದರೆ ಸಾಕು, ನನ್ನ ಈ ಜನ್ಮ ಸಾರ್ಥಕವೆಂದು ಭಾವಿಸುತ್ತಾ ಸಣ್ಣಗೆ ಮನಸ್ಸಿನಲ್ಲಿ ಸಮಾಧಾನ ತಂದುಕೊಂಡಿತ್ತು. ಅಷ್ಟರಲ್ಲಿ ಆ ಪುಸ್ತಕದ ಅಂಗಡಿಗೆ ಪ್ರಸಿದ್ಧ ಕಥೆಗಾರ ಬಂದ.
ಅವನನ್ನು ನೋಡಿದ ಕಾಗದದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಕಾಗದವನ್ನು ಕೊಂಡೊಯ್ದ ಕಥೆಗಾರ ಅದರ ಮೇಲೆ ತನ್ನ ನವೀನ ಕಥೆಯನ್ನು ಬರೆಯುವುದಕ್ಕೆ ಅನುವು ಮಾಡಿಕೊಂಡ. ಇದನ್ನೆಲ್ಲ ವೀಕ್ಷಿಸುತ್ತಿದ್ದ ಕಾಗದಕ್ಕೆ ನಾನಿನ್ನು ಶ್ರೇಷ್ಠ ಕಥೆಯೊಂದಕ್ಕೆ ಸಾಕ್ಷಿಯಾಗುತ್ತಿದ್ದೀನೆಂದು ತನ್ನೊಳಗೆ ಮೆಲ್ಲನೆ ಹೆಮ್ಮೆಪಟ್ಟುಕೊಂಡಿತು. ಆ ಕಥೆಗಾರ ಅದರ ಮೇಲೊಂದು ಕಥೆ ಗೀಚಲಾರಂಭಿಸಿದ. ಪೆನ್ನಿನ ಸರಿದಾಟಕ್ಕೆ ಕಾಗದದ ಮೈ ಪುಳಕಗೊಳ್ಳುತ್ತಿತ್ತು. ಬಹುದಿನದ ಕನಸು ನನಸಾಗುತ್ತಿರುವ ಕಾರಣ ದೇವರಿಗೆ ಧನ್ಯವಾದ ತಿಳಿಸಿತು.
ಆ ಕಥೆಗಾರ ಅರ್ಧ ಪುಟ ಬರೆದ ಮೇಲೆ ಅವನಿಗೇಕೋ ಕಥೆಯ ಶುರುವಿನ ಬಗ್ಗೆ ಅಸಮಾಧಾನ. ಹೊಸದಾಗಿ ಬರೆಯುವ ಸಲುವಾಗಿ ನೋಡನೋಡುತ್ತಾ ಕಾಗದವನ್ನು ಮುದುರಿ ಕಸದಬುಟ್ಟಿಗೆ ಎಸೆದ. ಒಂದೇ ಸಲ ಮೈಮೇಲೆ ಪರ್ವತ ಬಿದ್ದಂತೆ ದುಃಖ ಭಾರವಾಯಿತು ಕಾಗದ. ನಿರೀಕ್ಷೆ ಗೋಪುರ ನೆಲಕ್ಕೆ ಬಿದ್ದಿತ್ತು. ತಾನು ಕೆಲಸಕ್ಕೆ ಬಾರದವನಾಗುತ್ತೀನೆಂದು ಅದು ಎಂದೂ ನೆನೆಸಿರಲಿಲ್ಲ. ತನ್ನ ಸ್ಥಿತಿ ಕಂಡು ಅಸಹ್ಯಗೊಂಡಿತು. ತಾನು ಪಡೆದಿದ್ದೇ ಇಷ್ಟು ಅಂತ ಪರಿತಪಿಸಿತು. ಸುತ್ತ ದೃಷ್ಟಿ ಹರಿಸಿತು. ಆ ಬುಟ್ಟಿಯ ತುಂಬಾ ಬೇಡದ ವಸ್ತುಗಳು, ಕಸ, ಜೇಡರ ಹುಳು, ಹರಿದ ಕಾಗದಗಳು ತುಂಬಿದ್ದವು. ಜೀವನವೇ ನಿರರ್ಥಕವೆಂದು ಭಾವಿಸಿತು. ಆಗಷ್ಟೇ ಮಳೆ ನಿಂತಿದ್ದ ಸಮಯ. ಜನಗಳ ಸದ್ದು ಸಣ್ಣಗೆ ಕೇಳಲಾರಂಭಿಸಿತು.
ಮಳೆಯಲ್ಲಿ ನೆನೆಯಬೇಕೆಂದು ಹಠ ಹಿಡಿದಿದ್ದ ಹುಡುಗ ಅವನ ತಾಯಿ ಮಳೆ ನಿಂತ ಮೇಲೆ ಹೊರಗಡೆ ಕಳುಹಿಸಿದ್ದಳು. ಮರದ ಎಲೆಯ ತುದಿಯಲ್ಲಿದ್ದ ಹನಿ, ಅಲ್ಲಲ್ಲಿ ನಿಂತ ನೀರು, ಗೂಡಿನಿಂದಾಚೆ ಬಂದಿದ್ದ ಹಕ್ಕಿಗಳು... ಇವೆಲ್ಲವನ್ನೂ ನೋಡಿದ ಆ ಹುಡುಗನಿಗೆ ಈ ವಾತಾವರಣದಲ್ಲಿ ಏನಾದರೂ ಆಟವಾಡಬೇಕೆನಿಸಿತು. ಮನಸ್ಸಿನಲ್ಲಿ ಏನೋ ಹೊಳೆದ ಹಾಗೆ ಅವನು ಆ ಕಥೆಗಾರನಿದ್ದ ಮನೆಗೆ ಓಡಿ ಕಾಗದಕ್ಕಾಗಿ ಹುಡುಕತೊಡಗಿದ. ಕಸದ ಬುಟ್ಟಿಯನ್ನು ನೋಡಿದ ಅವನು ನೇರ ಅದರೊಳಗೆ ಕೈ ಹಾಕಿ ಈ ಕಾಗದವನ್ನು ಕೈಗೆತ್ತಿಕೊಂಡ. ಏನು ನಡೆಯುತ್ತಿದೆ ಎಂದು ಕಾಗದ ಊಹಿಸುವಷ್ಟರಲ್ಲಿ ಆ ಹುಡುಗ ಸುಂದರ ದೋಣಿ ಮಾಡಿದ್ದ.
ಹಾಗೆಯೇ ಓಡಿ ರಸ್ತೆ ಬದಿಯಲ್ಲಿ ಸಣ್ಣಗೆ ಹರಿಯುತ್ತಿದ್ದ ನೀರಲ್ಲಿ ದೋಣಿ ತೇಲಿಬಿಟ್ಟ. ಆ ದೋಣಿಯ ವಯ್ಯಾರ ಕಂಡು ಆ ಹುಡುಗ ಚಪ್ಪಾಳೆ ಹೊಡೆದ. ಕೇಕೆ ಹಾಕಿ ನಲಿದ. ಆ ಕಾಗದಕ್ಕೆ ಕಣ್ತುಂಬಿ ಬಂತು. ಮುಗ್ಧ ಹುಡುಗನ ನಲಿವಿಗೆ ತಾನು ಕಾರಣನಾದೆನಲ್ಲಾ ಎಂಬ ಧನ್ಯತೆ ಅದಕ್ಕೆ ಅತೀವ ಸಂತೋಷವನ್ನು ಉಕ್ಕಿಸಿತ್ತು. ನನ್ನ ನಿರೀಕ್ಷೆಗಳೆಲ್ಲದಕ್ಕಿಂತ ನನ್ನ ಜೀವನದ ಈ ಅಂತ್ಯದಲ್ಲಿ ನಿಜವಾದ ಸಾರ್ಥಕತೆ ಇದೆ ಎಂದೆನಿಸಿತು ಅದಕ್ಕೆ. ಆ ನೀರಿನಲ್ಲಿ ನಿಧಾನವಾಗಿ ನೆನೆಯುತ್ತ, ಆ ಹುಡುಗನ ಖುಷಿಯನ್ನು ನೋಡುತ್ತಾ ಕಾಗದ ಆನಂದಬಾಷ್ಪದೊಂದಿಗೆ ತಣ್ಣನೆಯ ಹರಿಯುವ ನೀರಿನಲ್ಲಿ ವಿಲೀನವಾಯಿತು.
'ಹ್ಯಾಗೆ ಬರೆಯೋದು?', 'ನಾವ್ ಬರೆದಿದ್ದನ್ನ ಪ್ರಕಟಿಸ್ತಾರಾ?' ಎಂಬ ಆತಂಕ ಬದಿಗಿಟ್ಟು ನಿಮ್ಮ ಮೊದಲಬರಹಗಳನ್ನು ನಮಗೆ ಕಳುಹಿಸಿ. 'ಇದೇ ಮೊದಲ ಬಾರಿಗೆ ನನ್ನ ಬರಹ ಪ್ರಕಟವಾಗಿದೆ' ಎಂಬ ಖುಷಿ ನಿಮ್ಮದಾದರೆ ಸಾಕು. ತೊದಲು ಬರಹಗಳಿಗೇ ಇರುವ ಅಂಕಣ ಇದು, 'ಮೊದಲ ಖುಷಿ'. ನೀವೂ ಗೀಚಿ...
khushimag@gmail.com
ನಮ್ಮ ಅಂಚೆ ವಿಳಾಸ
ಕನ್ನಡಪ್ರಭ, 'ಮೊದಲ ಖುಷಿ' ವಿಭಾಗ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-01
- ವಿನಾಯಕ ನಾಗಮಂಗಲ
vinayakanige@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


