ಲಾ ಪಾಯಿಂಟ್
ಚೆಕ್ಕುಬಂದಿ ಇದ್ದರೆ ಸರ್ವೆ ಮಾಡಿಸಿ
ಸತ್ಯನಾರಾಯಣ, ಭದ್ರಾವತಿ
18 ವರ್ಷಗಳ ಹಿಂದೆ ನಾನು ರೆವೆನ್ಯೂ ಸೈಟೊಂದನ್ನು ಖರೀದಿಸಿದ್ದು, ಮಾರಾಟಗಾರ ಇನ್ನೂವರೆಗೆ ಸೈಟು ವಿಂಗಡಿಸಿ ಕೊಟ್ಟಿಲ್ಲ. ನಾನೇ ಸರ್ವೆ ಮಾಡಿಸಿಕೊಳ್ಳಬಹುದೇ? ಹಾಗೂ ಕಟ್ಟಡ ಕಟ್ಟಬಹುದೇ? ಅಥವಾ ಕೋರ್ಟಿಗೇ ಅರ್ಜಿ ಹಾಕಬೇಕೇ?
- ನಿಮ್ಮ ಜಾಗಕ್ಕೆ ಚೆಕ್ಕುಬಂದಿ ಇದ್ದರೆ ಸರ್ವೆ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ.
ಹುಟ್ಟಿನಿಂದಲೇ ಈ ಹಕ್ಕು ಬರುತ್ತದೆ
ಶಿವಪ್ಪ ಕಡದಕಟ್ಟೆ
ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಎಂದಿನಿಂದ ಜಾರಿಗೆ ಬಂದಿದೆ? ಯಾವಾಗ ಮದುವೆಯಾದವರಿಗೆ ಈ ಕಾನೂನು ಅನ್ವಯಿಸುತ್ತದೆ?
- ಕೇಂದ್ರ ಸರ್ಕಾರವು ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು 9.8.2005ರಿಂದ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಎಲ್ಲ ಹೆಣ್ಣುಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಷ್ಟೇ ಪಾಲು ಬರಬೇಕೆಂದು ಆದೇಶಿಸಿತು. ಈ ಹಿಂದೆ ಕರ್ನಾಟಕ ಸರ್ಕಾರವು ತಿದ್ದುಪಡಿ ಮಾಡಿ 30.7.1994ರಿಂದ ಈಚೆಗೆ ಮದುವೆಯಾದ ಹೆಣ್ಣುಮಕ್ಕಳಿಗೆ ಮಾತ್ರ ಇದು ಅನ್ವಯಿಸುತ್ತದೆಂದು ಹೊರಡಿಸಿದ್ದ ಆದೇಶ ಈಗ ಕೇಂದ್ರ ಸರ್ಕಾರದ ತಿದ್ದುಪಡಿಯಿಂದ ರದ್ದಾಗಿದೆ. ಈಗ ಮದುವೆಯಾಗಿರಲಿ ಬಿಡಲಿ ಹೆಣ್ಣುಮಕ್ಕಳಿಗೆ ಅವರು ಹುಟ್ಟಿದ ದಿನದಿಂದಲೇ ಈ ಹಕ್ಕು ಬರುತ್ತದೆ. ಆದರೆ 20.12.2004ಕ್ಕೆ ಮೊದಲು ಆಸ್ತಿ ವಿಭಾಗವಾಗಿದ್ದು, ಅದು ನೋಂದಣಿಯಾಗಿದ್ದರೆ ಈ ಹೊಸ ಕಾನೂನು ಅನ್ವಯಿಸುವುದಿಲ್ಲ.
ನಿಮಗೂ ಸಮಪಾಲಿದೆ
ಚಂದ್ರಶೇಖರ ಹೆಗಡೆ, ಬಲೇಕಣಿ
ಪಿತ್ರಾರ್ಜಿತ ತೋಟದ ಆದಾಯದಲ್ಲಿ ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಮಗಳ ಮದುವೆ ಮಾಡಿ, ಗಂಡುಮಕ್ಕಳಿಗೆ 2 ಎಕರೆ ತೋಟವನ್ನು ಸ್ವಯಾರ್ಜಿತವೆಂದು ಭಾಗ ಮಾಡಿರುತ್ತಾರೆ. ನಾನು ಕೊನೆಯ ಮಗ. ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದು, ನಂಗೆ ಕೇವಲ 32 ಗುಂಟೆ ಜಮೀನು ಕೊಟ್ಟಿರುತ್ತಾರೆ. ಈಗ ದಾವಾ ಹಾಕಿದರೆ ಅನುಕೂಲವಾಗುತ್ತಾ?
- ನಿಮ್ಮ ತಂದೆ ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯ ಆದಾಯದಿಂದ ಎಂದು ಪರಿಗಣಿಸಿದರೂ ಒಟ್ಟು ಆಸ್ತಿಯಲ್ಲಿ ನಿಮ್ಮ ತಂದೆ ತಾಯಿ (ಇದ್ದರೆ), ಅಕ್ಕ ಹಾಗೂ ಸಹೋದರರಿಗೂ ನಿಮ್ಮಷ್ಟೇ ಸಮಪಾಲಿದೆ. ಅಂದರೆ ನಿಮಗೆ ಒಟ್ಟು ಆಸ್ತಿಯ 1/6 ಭಾಗ ಬರುತ್ತದೆ. ನೀವೇ ಒಟ್ಟು ಆಸ್ತಿಯಲ್ಲಿ ನಿಮಗೆಷ್ಟು ಪಾಲು ಬರಬೇಕೆಂಬುದನ್ನು ಲೆಕ್ಕ ಹಾಕಿಕೊಳ್ಳಿ.
ಎಲ್ಲವೂ ಕುಟುಂಬಕ್ಕೇ ಸೇರಿದ್ದು
ಸಿ. ಚಂದ್ರಶೇಖರ, ಮೈಸೂರು
ತಂದೆ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾಗಿದ್ದಾರೆ. ಅವರಿಗೆ ಇಬ್ಬರು ತಮ್ಮಂದಿರಿದ್ದು ಊರಿನಲ್ಲಿ ಪಿತ್ರಾರ್ಜಿತ ಜಮೀನನ್ನು ಭಾಗ ಮಾಡಿಕೊಂಡು ಒಂದು ಬಿಳಿ ಹಾಳೆಯ ಮೇಲೆ ಬರೆದು ಸರಿ ಮಾಡಿದ್ದಾರೆ. ಈ ಆಸ್ತಿಯ ಆದಾಯದಿಂದ ಖರೀದಿಸಿದ ಇನ್ನೊಂದು ಜಮೀನು ಕೊನೆಯ ತಮ್ಮನ ಹೆಸರಿನಲ್ಲಿದೆ. ಸ್ವಲ್ಪ ತಕರಾರಿದ್ದು ಇಲ್ಲಿಯವರೆಗೂ ಖಾತೆ ಮಾಡಿಸಿಕೊಂಡಿಲ್ಲ. ಉಳಿದವರು ಸಹಕರಿಸದಿದ್ದರೆ ನಮ್ಮ ತಂದೆ ತಮ್ಮ ಖಾತೆ ಮಾಡಿಸಿಕೊಳ್ಳಬಹುದೇ? ಕೊನೆಯ ತಮ್ಮ ತನ್ನ ಹೆಸರಿನ ಜಮೀನು ತನ್ನದೇ, ಉಳಿದ ಜಮೀನಿನಲ್ಲಿ ಹಿಸ್ಸೆ ಬೇಕೆಂದು ಕೇಳಬಹುದೇ?
- ನಿಮ್ಮ ತಂದೆಯವರು ತಮ್ಮ ಹೆಸರಿಗೆ ಖಾತೆ ಮಾಡಿಸಲು ತಾಲೂಕು ಕಚೇರಿಗೆ ಅರ್ಜಿ ಹಾಕಬಹುದು. ಬೇರೆಯವರು ತಕರಾರು ಎತ್ತಿದರೆ 25 ವರ್ಷಗಳ ಹಿಂದಿನ ಪಾಲುಪತ್ರ ಹಾಜರುಪಡಿಸಬಹುದು. ಇತ್ಯರ್ಥವಾಗದಿದ್ದರೆ ಮೇಲ್ಮನವಿ ಸಲ್ಲಿಸಬಹುದು. ಕೊನೆಯ ತಮ್ಮನ ಹೆಸರಿನಲ್ಲಿರುವ ಜಮೀನೂ ಒಟ್ಟು ಕುಟುಂಬಕ್ಕೇ ಸೇರಿದ್ದು ವಿಭಾಗದಲ್ಲಿ ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

