ಪ್ರಶ್ನೆಗಳ ಪುಸ್ತಕ

Updated on: 

ಒಳ್ಳೆಯ ಸಾಹಿತ್ಯ, ಪ್ರಶ್ನೆಗಳನ್ನು ಎತ್ತಬೇಕು ಅನ್ನುತ್ತಾರೆ. ಕೆಲವರ ಸಾಹಿತ್ಯವನ್ನು ಓದುವಾಗಲೇ ಪ್ರಶ್ನೆ ಉದ್ಭವಿಸುತ್ತದೆ- ಇದನ್ನು ಓದಿ ನಾನು ಹುಚ್ಚಾಸ್ಪತ್ರೆ ಸೇರಬೇಕಾಗಬಹುದೇ? ತಮಾಷೆ ಹಾಗಿರಲಿ. ಶ್ರೇಷ್ಠ ಸಾಹಿತ್ಯ ಸಾವಾಗಲೂ ಮನುಷ್ಯನ ಮೂಲಭೂತ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತ ಬಂದಿದೆ. ಕೃತಿಯಲ್ಲಿ ಅಂತರ್ಗತವಾಗಿ ಪ್ರಶ್ನೆಯಿರುತ್ತದೆ. ಆದರೆ ಪ್ರಶ್ನೆಗಳಿಂದಲೇ ಕೃತಿ ರಚಿಸಿದವರು ಯಾರೂ ಇಲ್ಲ, ಚಿಲಿಯ ಕವಿ ಪಾಬ್ಲೋ ನೆರೂಡನನ್ನು ಬಿಟ್ಟು.  ಪಾಬ್ಲೋ ಬರೆದ 'ದಿ ಬುಕ್ ಅಫ್ ಕ್ವೆಶ್ಚನ್ಸ್‌' ಕವಿತೆಯೋ ಕತೆಯೋ ಹೇಳಲಾಗದಂಥ ವಿಚಿತ್ರ ಪುಸ್ತಕ. ಇದರ ತುಂಬ ಆತ 316 ಪ್ರಶ್ನೆಗಳನ್ನು ಪೋಣಿಸಿಟ್ಟಿದ್ದಾನೆ. ಯಾವುದೂ ಎರಡು ಸಾಲುಗಳನ್ನು ಮೀರಿಲ್ಲ. ಇದರಲ್ಲಿ ಸೋಜಿಗ, ತಮಾಷೆ, ಬೆರಗು, ವ್ಯಂಗ್ಯ ಎಲ್ಲವೂ ಅಡಕವಾಗಿರುವುದು ಕಾಣುತ್ತದೆ. ಅದರಿಂದ ಎತ್ತಿದ ಕೆಲ ಪ್ರಶ್ನೆಗಳು ನಿಮಗಾಗಿ.
-      ಹೇಳು ನನಗೆ, ಈ ಗುಲಾಬಿಯೇ ಬೆತ್ತಲೆಯೋ ಅಥವಾ ಅದರ ಬಳಿ ಇರುವುದೊಂದೇ ಉಡಿಗೆಯೋ?
-        ಯಾಕೆ ಈ ಮರಗಳು ತಮ್ಮ ಬೇರುಗಳ ಸೊಬಗನ್ನು ಹೀಗೆ ಬಚ್ಚಿಟ್ಟುಕೊಂಡಿವೆ?
-       ಮಳೆಯಲ್ಲಿ ನೆನೆಯುತ್ತ ನಿಂತಿರುವ ರೈಲ ಬೋಗಿಗಿಂತ ವಿಷಾದದ ನೋಟ ಇನ್ನೊಂದಿದೆಯೇ?
-        ನೀಲಿ ಬಣ್ಣ ಉದ್ಭವವಾದಾಗ ಹರುಷದಿಂದ ಚೀತ್ಕರಿಸಿದವರ್ಯಾರು?
-        ನೇರಳೆ ಬಣ್ಣ ಉಕ್ಕಿದಾಗ ಭೂಮಿಯೇಕೆ ಶೋಕಿಸಿತು?
-        ನನ್ನ ಮಕ್ಕಳ ಮಕ್ಕಳ ಮಕ್ಕಳು, ಅವರೇನಾಗುತ್ತಾರೆ? ಈ ಭೂಮಿಯನ್ನು ಏನು ಮಾಡುತ್ತಾರವರು?
-        ನಾನು ಸತ್ತರೆ ಮತ್ತು ನನಗದು ಗೊತ್ತಿಲ್ಲದಿದ್ದರೆ ನಾನು ಯಾರನ್ನು ಟೈಮ್ ಕೇಳಲಿ?
-       ತಾವು ಹಳದಿಯಾಗಿದ್ದೇವೆಂದು ಗೊತ್ತಾದ ಕೂಡಲೆ ಎಲೆಗಳೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆ?
-        ಪ್ರೀತಿ, ಪ್ರೀತಿ. ಅವನ ಪ್ರೀತಿ, ಅವಳ ಪ್ರೀತಿ. ಅವರು ಸತ್ತ ಮೇಲೆ ಆ ಪ್ರೀತಿ ಎಲ್ಲಿ ಹೋಗುತ್ತೆ?
-        ಒಂದು ದಿನದಲ್ಲಿ ವಾರಗಳೆಷ್ಟಿವೆ ಮತ್ತು ಒಂದು ತಿಂಗಳಲ್ಲಿ ವರ್ಷಗಳೆಷ್ಟಿವೆ?
-        ನಾನೇನು ಮಾಡಲು ಈ ಜಗತ್ತಿಗೆ ಬಂದೆನೆಂದು ಯಾರನ್ನು ಕೇಳಲಿ?
-        ನಾನು ನನ್ನನ್ನು ಕಂಡುಕೊಂಡ ಸ್ಥಳದಲ್ಲೇ ಅವರು ನನ್ನನ್ನು ಕಳೆದುಕೊಂಡರೆ?
-        ಎರಡು ದೊಡ್ಡ ಸ್ಪಷ್ಟ ಸಂಗತಿಗಳ ನಡುವಿನ ಕೊಳವೆಯೆ ಬದುಕೆಂದರೆ?
-       ನಾನು ಬಾಲಕನಾಗಿದ್ದೆನಲ್ಲ,  ಅವನೀಗ ಎಲ್ಲಿ ಹೋದ? ನನ್ನೊಳಗಿದ್ದಾನೋ, ಹೋಗೇಬಿಟ್ಟನೋ?
-        ಯಾವುದು ಹೆಚ್ಚು ಭಾರವಾದದ್ದು, ಶೋಕವೋ ನೆನಪುಗಳೋ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com