ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್
Updated on: 

ಇಂಗ್ಲೆಂಡಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕಾಲಿಟ್ಟರೆ ಸೋಲುತ್ತದೆ. ಅದೇ ಇಂಗ್ಲಿಷರ ದಂಡು ಆಸ್ಟ್ರೇಲಿಯಾಕ್ಕೆ ಕಾಲಿಟ್ಟರೆ, ಸಾಲು ಸಾಲಾಗಿ ಸೋಲುತ್ತದೆ. ಟೀಂ ಇಂಡಿಯಾ, ಉಪಖಂಡ ಬಿಟ್ಟು ಕಾಲಿಟ್ಟಲ್ಲೆಲ್ಲಾ ಎಡವುತ್ತದೆ. ಯಾಕೆ ಹೀಗೆ ಎಂದರೆ ಸಿಗುವ ಉತ್ತರ ಬೆಚ್ಚಿಬೀಳಿಸುವ ಪಿಚ್‌ಗಳು!
ಇಲ್ಲಿ 'ಆಡಲು ಬಾರದವ ನೆಲ ಡೊಂಕು' ಎನ್ನುವ ಗಾದೆ ಬಳಸುವಂತಿಲ್ಲ. ಕೆಲವೊಮ್ಮೆ ಆಟಗಾರರಿಗಿಂತ ಪಿಚ್‌ಗಳೇ ಹೆಚ್ಚು ಕ್ರಿಕೆಟ್ ಆಡುತ್ತವೆ ಇಲ್ಲಾ ಆಡಿಸುತ್ತವೆ! ಯಾವ ತಂಡವೇ ಆಗಲಿ ಎಲ್ಲಾ ಪಿಚ್‌ಗಳಲ್ಲಿ ಒಂದೇ ರಣತಂತ್ರವನ್ನು ಪ್ರಯೋಗಿಸಬಾರದು. ಹೀಗಾದಾಗ ಟಾಸ್ ಕೂಡ ರಿಸಲ್ಟ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸಿ ತಂಡಕ್ಕೆ ಪಿಚ್  ಯಾವತ್ತಿದ್ದರೂ ಬಗೆಹರಿಯದ ಯಕ್ಷಪ್ರಶ್ನೆ. ಸುಮ್ಮನೆ ಅಲ್ಲ ಸಿದ್ದೂ ಕಾಮೆಂಟರಿಸಿದ್ದು; 'ಪಿಚ್ ಅಂದರೆ ಹೆಂಡತಿ ಇದ್ಹಂಗೆ, ಯಾವಾಗ ಎತ್ತ ಕಡೆ ತಿರುಗುತ್ತದೆ ಎಂದು ಹೇಳಲುಬಾರದು' ಎಂದು.
ರಣರಂಗದ ತಯಾರಿ
ಇರುವುದೊಂದೇ ಭೂಮಿಯಾದರೂ ಎಲ್ಲವೂ ಅಡಗಿರುವುದು ಪಿಚ್ ತಯಾರಿಸುವ ವಿಧಾನದಲ್ಲಿ. ಕ್ರಿಕೆಟ್ ಅನ್ನು ಕಾಂಕ್ರೀಟ್‌ನಿಂದ ತಯಾರಿಸಿದ ಕೃತಕ ಪಿಚ್‌ಗಳಲ್ಲೂ ಅಡಬಹುದಾದರೂ ವೃತ್ತಿಪರ ಕ್ರಿಕೆಟ್‌ನ ಬಂಡಿ ಸಾಗುವುದು  ಹಸಿರು ಟ್ರ್ಯಾಕ್‌ಗಳಲ್ಲೇ. ಪ್ರಪಂಚದ ಎಲ್ಲೆಡೆ ಹೆಚ್ಚೂಕಡಿಮೆ ಒಂದೇ ವಿಧಾನದಲ್ಲಿ ಪಿಚ್ ತಯಾರಿಸುತ್ತಾರೆ. ಇಂಗ್ಲೆಂಡಿನಲ್ಲಿ ಟೆಸ್ಟ್ ಪಂದ್ಯ ಪ್ರಾರಂಭವಾಗುವ ತಿಂಗಳು ಮೊದಲೇ ಪಿಚ್ ತಯಾರಿಸಲು ಆರಂಭಿಸುತ್ತಾರೆ. ಭಾರತದಲ್ಲಾದರೆ ಇದಕ್ಕೆ 10-15 ದಿನಗಳು ಸಾಕು. ಇದಕ್ಕೆ ಪ್ರಮುಖ ಕಾರಣ, ವಾತಾವರಣ ಹಾಗೂ ಪಂದ್ಯಗಳು ನಡೆಯುವ ಪ್ರಮಾಣ.
ಇಡೀ ಮೈದಾನಕ್ಕೂ, ಮೈದಾನದ ಮಧ್ಯ ಇರುವ ಪಿಚ್‌ಗೂ ಅಜಗಜಾಂತರ. ಕ್ರಿಕೆಟ್ ಮೈದಾನದ ಮಧ್ಯ ಪಿಚ್ ಇರುವ ಜಾಗವನ್ನು 'ಸ್ಕೇರ್‌' ಎನ್ನುತ್ತಾರೆ. ಕ್ರಿಕೆಟ್ ನಿಯಮಗಳ ಪ್ರಕಾರ, ಸ್ಕೇರ್‌ನ ಉದ್ದ 20.12 ಮೀಟರ್ ಮತ್ತು 3.05 ಮೀ. ಅಗಲ. ಮೈದಾನದಲ್ಲಿರುವ ಇಷ್ಟು ಜಾಗವನ್ನು ಅಗೆದು ಆವೆ ಮಣ್ಣಿನಿಂದ ತುಂಬಿ, ಅಲ್ಲಿ ಹುಲ್ಲನ್ನು ಬೆಳೆಸಲಾಗುತ್ತದೆ. ಇಂಗ್ಲೆಂಡಿನಲ್ಲಾದರೆ ಹುಲ್ಲಿನ ಬೀಜ ಬಿತ್ತುತ್ತಾರೆ. ನಮ್ಮಲ್ಲಿ ಬೀಜ ಬಿತ್ತುವುದೂ ಇದೆ, ಹುಲ್ಲನ್ನು ನೆಡುವ ಪದ್ಧತಿಯೂ ಇದೆ.
ಆವೆಮಣ್ಣು ಸಂಗ್ರಹ
ಪಿಚ್‌ಗೆ ಬೇಕಾದ ಆವೆಮಣ್ಣನ್ನು ಸಂಗ್ರಹಿಸುವುದೂ ಜಾಣ್ಮೆ. ಸಾಮಾನ್ಯವಾಗಿ ನದಿ ಪಾತ್ರಗಳಿಂದಲೋ ಇಲ್ಲಾ ಕೆರೆ ಓಡುಗಳಿಂದಲೋ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಕ್ಯುರೇಟರ್‌ಗಳು ಊರೂರು ತಿರುಗಿ ಸಾಹಸವನ್ನೇ ಮೆರೆಯಬೇಕಾಗುತ್ತದೆ. ಹಿರಿಯ ಕ್ಯುರೇಟರ್ ನಾರಾಯಣ ರಾಜು ಹೇಳುವ ಪ್ರಕಾರ, 'ನಾನು ತಯಾರಿಸಿದ್ದ ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್‌ನಲ್ಲಿ ಪಕ್ಕದ ಮಂಡ್ಯದ ಮಣ್ಣಿನ ಪರಿಮಳವೂ ಇದೆ. ಅದೇ ರೀತಿ ರಾಯಚೂರಿನಿಂದಲೂ ಮಣ್ಣು ತರಿಸಿಕೊಂಡಿದ್ದೇನೆ. ಆಂಧ್ರಪ್ರದೇಶದ ಕಾಕಿನಾಡ, ಅನಂತಪುರ, ಅಮಲಾಪುರದಿಂದಲೂ ಮಣ್ಣು ಬಂದಿದೆ. ಇಷ್ಟೆ ಅಲ್ಲ, ಆಸ್ಟ್ರೇಲಿಯಾದ ಮೆಲ್ಬರ್ನ್‌ನಿಂದಲೂ ಮಣ್ಣನ್ನು ಆಮದುಮಾಡಿಕೊಳ್ಳಲಾಗಿದೆ. ನೆಲವನ್ನು 16 ಇಂಚು ಅಗಿದು ಇಂಥ ಮಣ್ಣನ್ನು ತುಂಬಲಾಗುತ್ತದೆ.
ಹತ್ತು ದಿನದ ತಪಸ್ಸು
ಪಂದ್ಯ ಪ್ರಾರಂಭವಾಗಲು ಹತ್ತು ದಿನಗಳಿರುವಾಗ ಪಿಚ್‌ನ ಮೇಲೆ ನೀರು ಹಾಯಿಸಿ ಹುಲ್ಲು ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ದಿನದ ಮೂರೂ ಹೊತ್ತು ನೀರು ಹಾಯಿಸಬೇಕಾಗುತ್ತದೆ. ಐದು ದಿನಗಳಿರಬೇಕಾದರೆ ಹುಲ್ಲಿನ ಮೇಲ್ಪದರ ಕತ್ತರಿಸುತ್ತಾರೆ. ಜೊತೆಗೆ ಅಗತ್ಯಕ್ಕೆ ತಕ್ಕಂತೆ ರೋಲಿಂಗ್, ಇದಕ್ಕಾಗಿ ವಿಭಿನ್ನ ಬಗೆಯ ಹೆವಿ, ಲೈಟ್ ರೋಲರ್‌ಗಳನ್ನು ಬಳಸಲಾಗುತ್ತದೆ. ಒಬ್ಬ ಕ್ಯುರೇಟರ್‌ಗೆ ನಿಜವಾದ ಸತ್ವಪರೀಕ್ಷೆ ಎದುರಾಗುವುದು ಇಲ್ಲಿಂದಲೇ. ಪಿಚ್ ಬೌನ್ಸಿ ಬೇಕೋ, ಇಲ್ಲಾ ಬ್ಯಾಟಿಂಗ್‌ಸ್ನೇಹಿ ಆಗಿರಬೇಕೋ ಎಂಬುದನ್ನು ಅದಾಗಲೇ ದೃಢಪಡಿಸಿಕೊಂಡಿರುವ ಕ್ಯುರೇಟರ್ ಅದಕ್ಕೆ ತಕ್ಕಂತೆ ಪಿಚ್ ಅನ್ನು ಸುಧಾರಿಸಬೇಕಾಗುತ್ತದೆ. ತೇವಾಂಶ ಆರಿ ಹೋಗದ ಹಾಗೆ ನೋಡಿಕೊಳ್ಳಬೇಕು. ಹಸುರನ್ನು ಕಾಪಾಡಿಕೊಳ್ಳುವುದಂತೂ ಬಹಳ ಮುಖ್ಯ. ಪಂದ್ಯಕ್ಕೆ 4 ದಿನಗಳಿರುವಾಗ ಲೈಟ್ ರೋಲಿಂಗ್ ಆರಂಭಿಸುತ್ತಾರೆ. ಪ್ರಾರಂಭದಲ್ಲಿ ಪಿಚ್‌ನ ಕೆಳಗೆ 6 ಇಂಚು ಇದ್ದ ತೇವಾಂಶ ಕಡಿಮೆ ಮಾಡುತ್ತಾ... 3ನೇ ದಿನದಿಂದ 2.5 ಇಂಚು ಕೆಳಗೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ಹಂತ ಹಂತವಾಗಿ ನೀರು ಪೂರೈಕೆ ನಿಯಂತ್ರಿಸುತ್ತಾ ಬರುತ್ತಾರೆ. ಪ್ರಾರಂಭದ ದಿನಗಳಲ್ಲಿ ಮೂರು ಹೊತ್ತು ಪಿಚ್‌ಗೆ ನೀರುಣಿಸುತ್ತಿದ್ದುದು ಬರು ಬರುತ್ತಾ ಒಂದು ಹೊತ್ತಿಗೆ ಇಳಿಸಲಾಗುತ್ತದೆ. ಈ ವೇಳೆ ಪಿಚ್ ಬಿರುಕು ಬಿಡದಂತೆ ನೋಡಿಕೊಳ್ಳಬೇಕು. ಹೀಗಾಗಿ 250 ಕೆ.ಜಿ. ರೋಲರ್‌ನಲ್ಲಿ ನೆಲವನ್ನು ಸಮತಟ್ಟು ಮಾಡಬೇಕಾಗುತ್ತದೆ. ಹಾಗೆಯೇ ಬೇಕಾದ ಪ್ರಮಾಣದಲ್ಲಿ ಹುಲ್ಲನ್ನೂ ಕತ್ತರಿಸಲಾಗುತ್ತದೆ. ಪಂದ್ಯದ ಹಿಂದಿನ ದಿನವೂ 2.5 ಇಂಚಿನಷ್ಟು ಮಾತ್ರ ತೇವಾಂಶ ಉಳಿಸಿಕೊಳ್ಳುವುದು ಬಹಳ ಮುಖ್ಯ. ಪಿಚ್ ತೇವದಿಂದ ಕೂಡಿದ್ದು ಹಸುರಾಗಿದ್ದರೆ, ಸ್ವಿಂಗ್ ಹಾಗೂ ಬೌನ್ಸಿ ಆಗುತ್ತದೆ. ತೇವಾಂಶ ಕಡಿಮೆಯಾದಷ್ಟೂ ಬ್ಯಾಟಿಂಗ್‌ಗೆ ಅನುಕೂಲಕರ.
ನೆನಪಿಡಿ, ಪಂದ್ಯ ಪ್ರಾರಂಭವಾಗುವ ದಿನ ಒಂದು ಬಾರಿ ಕ್ಯುರೇಟರ್‌ಗಳು ಅಂಪೈರ್‌ಗಳಿಗೆ ಮೈದಾನ ಹಸ್ತಾಂತರಿಸಿದರೆ ಮತ್ತೆ ಹಸ್ತಕ್ಷೇಪ ಮಾಡುವಂತಿಲ್ಲ. ಆಮೇಲೇನಿದ್ದರೂ ಅಂಪೈರ್ ಹೇಳಿದನ್ನಷ್ಟೇ ಇವರು ಮಾಡಬೇಕು. ಹೀಗಾಗಿ ಟೆಸ್ಟ್ ಪಂದ್ಯಗಳಲ್ಲಿ ದಿನದಿಂದ ದಿನಕ್ಕೆ ಪಿಚ್‌ನಲ್ಲಿನ ತೇವಾಂಶ ಕಡಿಮೆಯಾಗುತ್ತಾ ಸಾಗಿದಂತೆ ವೇಗದ ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‌ಗಳ ಕಡೆಗೆ ಜಾರುತ್ತದೆ. ಪಿಚ್‌ನಲ್ಲಿ ಬಿರುಕು ಮೂಡಿದಂತೆ, ಧೂಳು ಹೆಚ್ಚುತ್ತಿದ್ದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುತ್ತಾರೆ.
ಹೀಗಾಗಿ ಪಿಚ್ ಕೊನೆಯ ಮೂರು ದಿನ ಹೇಗೆ ವರ್ತಿಸಬಲ್ಲುದು ಎಂಬುದನ್ನು ಪಂದ್ಯದ ಮೂರನೇ ದಿನವೇ ನಿರ್ಧರಿಸಬಹುದು ಎನ್ನುತ್ತಾರೆ ಕೆಎಸ್‌ಸಿಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್) ಕ್ಯುರೇಟರ್ ಶ್ರೀರಾಮ್. ಏಕದಿನ, ಟಿ20 ವೇಳೆ ಪಂದ್ಯ ಪ್ರಾರಂಭವಾಗಲು ವಾರವಿರುವಾಗ ತಯಾರಿ ನಡೆಯುತ್ತದೆ. ಸೀಮಿತ ಓವರ್‌ಗಳಿಗೆ ಹೆಚ್ಚಾಗಿ ಬ್ಯಾಟಿಂಗ್ ಪಿಚ್‌ಗಳ ಅಪೇಕ್ಷೆಯಿರುವುದರಿಂದ 3 ದಿನ ಮೊದಲು ಹೆವಿ ರೋಲರ್ ಬಳಸಲಾಗುತ್ತದೆ. ಪಿಚ್ ಅನ್ನು ಕಠಿಣಗೊಳಿಸುವ ಸಲುವಾಗಿ ತೇವಾಂಶ ನಿಲ್ಲದ ಹಾಗೆ ನಿರ್ವಹಣೆ.
ವಾತಾವರಣದ ಪ್ರಭಾವ
ಚಳಿಗಾಲದಲ್ಲಿ ಬಿಸಿಲು ಕಡಿಮೆಯಿರುವುದರಿಂದ ಪಿಚ್ ತೇವಾಂಶ ಉಳಿಸಿಕೊಳ್ಳುತ್ತದೆ. ಇದೇ ವೇಳೆ ಇಬ್ಬನಿ ಅಧಿಕವಿತ್ತೆನ್ನಿ, ವೇಗದ ಬೌಲರ್‌ಗಳಿಗೆ ಹಬ್ಬವೋ ಹಬ್ಬ. ಬೆಳಗ್ಗಿನ ಜಾವ ಇಬ್ಬನಿ ಹೆಚ್ಚಿರುವ ಕಾರಣಕ್ಕೆ ಚಿನ್ನಸ್ವಾಮಿಯಲ್ಲಿ ದಿನದ ಮೊದಲ ಅವಧಿಯಲ್ಲಿ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಾರೆ. ಅದೇ ಬಿಸಿಲು ಹೆಚ್ಚಾದಂತೆ ಬ್ಯಾಟ್ಸ್‌ಮನ್‌ಗಳಿಗೆ ಸುಗ್ಗಿ.
1980ರ ಹಿಂದೆ ಹೀಗೆಲ್ಲ ಪಿಚ್ ಅನ್ನು ಪರಿವರ್ತಿಸುವ ಪ್ರಮೇಯ ಇರುತ್ತಿರಲಿಲ್ಲ. ಎಲ್ಲ ದೇಶದ ಪಿಚ್‌ಗಳೂ ಬಹುತೇಕ ಒಂದೇ ಥರ ನಿರ್ವಹಣೆಗೊಳ್ಳುತ್ತಿದ್ದವು. ಆದರೆ, ಈಗಿನ ಆತಿಥೇಯ ತಂಡಗಳನ್ನು ಗೆಲ್ಲಿಸುತ್ತಿರುವುದೇ ಪಿಚ್. ಅಭಿಮಾನಿಗಳ ನಿರೀಕ್ಷೆ ಇಲ್ಲೇ ತಲೆಕೆಳಗಾಗುವುದು. ಲೆಕ್ಕಾಚಾರ ಪದೇಪದೇ ತಪ್ಪಾದರೂ ನಾವಂತೂ ಕ್ರಿಕೆಟಿನ ಮೇಲೆ ಪ್ರೀತಿ ಕಳೆದುಕೊಂಡಿಲ್ಲ.


ಹರಿಣಗಳ ಟ್ರ್ಯಾಕ್
ಸದಾ ಫೀಲ್ಡಿಂಗಿಗೆ ನೆನಪಿಸಲ್ಪಡುವ ದಕ್ಷಿಣ ಆಫ್ರಿಕ ನೆಲದಲ್ಲಿ ಡೊನಾಲ್ಡ್, ಸ್ಟೇಯ್ನ್, ಫಿಲ್ಯಾಂಡರ್‌ನಂಥ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳ ಎದೆ ನಡುಗಿಸುತ್ತಾರೆ. ಆಸ್ಟ್ರೇಲಿಯಾಗಿಂತ ಕೊಂಚ ಕಡಿಮೆ ಬೌನ್ಸಿ ಬಿಟ್ಟರೆ, ಮಿಕ್ಕಂತೆ ಇವೂ ಅಪಾಯಕಾರಿಯೇ. ಇಲ್ಲಿನ ಪಿಚ್‌ಗಳು ಸ್ಪಿನ್ನರ್‌ಗೆ ತಪ್ಪಿಯೂ ನೆರವು ನೀಡಲಾರವು. ಇದೇ ಕಾರಣಕ್ಕೋ ಏನೋ ಆಫ್ರಿಕಾ ವಿಶ್ವದರ್ಜೆಯ ಸ್ಪಿನ್ನರ್ ಅನ್ನು ಈವರೆಗೂ ಕಂಡಿಲ್ಲ. ಹಾಗೆಂದು ಬೌನ್ಸನ್ನು ಸರಿಯಾದ ರೀತಿಯಲ್ಲಿ ಎದುರಿಸಿದರೆ ಈ ಪಿಚ್‌ನಲ್ಲಿ ಬೇಕಾಬಿಟ್ಟಿ ರನ್ ಕೊಳ್ಳೆ ಹೊಡೆಯಬಹುದು ಎಂಬುದಕ್ಕೆ ವಾಂಡರರ್ ಸ್ಟೇಡಿಯಂ ಸಾಕ್ಷಿ. ಆಸ್ಟ್ರೇಲಿಯಾ ಹೊಡೆದ 438 ರನ್‌ಗಳನ್ನು ಆಫ್ರಿಕ ಲೀಲಾಜಾಲವಾಗಿ ಬೆಂಬತ್ತಿದ್ದು ಮರೆಯಲಸಾಧ್ಯ.

ಇಂಗ್ಲೆಂಡ್ ಸ್ವಿಂಗ್‌ನ ಸ್ವರ್ಗ
ವಿಶ್ವದ ಅತ್ಯಂತ ಚಂಚಲ ಟ್ರ್ಯಾಕ್‌ಗಳಿರುವುದು ಇಂಗ್ಲೆಂಡಿನಲ್ಲಿ. ಇಲ್ಲಿ ಏನು ಬೇಕಾದರೂ ನಡೆಯಬಹುದು. ಎಲ್ಲವೂ ವಾತಾವರಣದ ಮೇಲೆ ನಿರ್ಧರಿತ. ಚಳಿಗಾಲದಲ್ಲಿ ಮುದುಡಿಕೊಂಡು, ಬೌಲರ್‌ಗಳಿಗೆ ನೆರವು ನೀಡುವ ಮೈದಾನಗಳು ಬೇಸಿಗೆಯಲ್ಲಿ ರನ್ ಹೊಳೆಯನ್ನೇ ಹರಿಸುತ್ತವೆ. ತೇವಾಂಶದಿಂದ ಕೂಡಿದ ಇಲ್ಲಿನ ಹಸಿರು ವಿಕೆಟ್‌ಗಳು ಸ್ವಿಂಗ್ ಬೌಲರ್‌ಗಳ ಸ್ವರ್ಗ. ಬೇಸಿಗೆಯಲ್ಲಿ ಇಲ್ಲಿನ ಪಿಚ್‌ಗಳು ಥೇಟ್ ಭಾರತದ ಪಿಚ್‌ಗಳಂತೆ. ಬೇಸಿಗೆಯ ಅಂತಿಮ ಹಂತದಲ್ಲಂತೂ ಪಿಚ್ ಹಸಿರತನ ಕಳೆದುಕೊಳ್ಳುತ್ತದೆ. ಕಠಿಣವಾಗುತ್ತದೆ. ಆಗ ಇದು ಬ್ಯಾಟ್ಸ್‌ಮನ್‌ಸ್ನೇಹಿ. ನಿರಂತರವಾಗಿ 135-150 ಕಿ.ಮೀ. ವೇಗದಲ್ಲಿ ಚೆಂಡೆಸೆಯುವ ನುರಿತ ಬೌಲರ್‌ಗಳಿಗಷ್ಟೇ ಇಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಕೆಡವಬಹುದು. ಸ್ಪಿನ್ನರ್‌ಗಳಿಗೂ ಒಂದಿಷ್ಟು ಅವಕಾಶವಿದೆ. ತೇವಾಂಶದಿಂದ ಕೂಡಿದ ವಾತಾವರಣ ಹಾಗೂ ಕೊಂಚ ಧೂಳು 50 ಓವರ್‌ಗಳ ಬಳಿಕ ಪಿಚ್ ರಿವರ್ಸ್ ಸ್ವಿಂಗ್ ಅನುಕೂಲ ವಾತಾವರಣ ಸೃಷ್ಟಿಸುತ್ತದೆ. ಹೆಚ್ಚು ರಿವರ್ಸ್ ಸ್ವಿಂಗ್‌ಗೆ ಹೆಸರಾಗಿರುವುದು 'ಓವಲ್‌'ನ ಪಿಚ್. ಅತ್ಯಂತ ಅಪಾಯಕಾರಿ. ಪಿಚ್ಚುಗಳ ತಯಾರಿ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸುವ ರಾಷ್ಟ್ರಗಳಲ್ಲಿ ಇಂಗ್ಲೆಂಡ್ ಯಾವತ್ತಿದ್ದರೂ ನಂ.1.


ದೈತ್ಯರೊಡ್ಡೋಲಗ...
ಇಲ್ಲಿರುವುದು ಅತ್ಯಂತ ಸಮತೋಲಿತ ಪಿಚ್‌ಗಳು. ಇವು ಬೌನ್ಸ್ ಇರಬಹುದು ಇಲ್ಲಾ ಸ್ಪಿನ್ ಇರಬಹುದು... ಇವು ಎಲ್ಲೂ ಅತಿಯಾಗಿ ವರ್ತಿಸುವುದಿಲ್ಲ. ಆಸ್ಟ್ರೇಲಿಯಾದ ಪಿಚ್‌ಗಳಂತೆ ಅಸಾಧಾರಣ ನೆಗೆತವಾಗಲಿ, ಭಾರತೀಯ ಪಿಚ್‌ಗಳಂತೆ ಅತಿಯಾದ ತಿರುವುಗಳನ್ನು ಈ ನೆಲದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ವೇಗಿಗಳಿಗೆ ಮಾತ್ರ ಖಂಡಿತ ನೆರವಾಗುತ್ತವೆ. ಒಂದೊಮ್ಮೆ ಭಯಾನಕ ಬೌಲರ್‌ಗಳ ಒಡ್ಡೋಲಗವಾಗಿದ್ದ ವಿಂಡೀಸ್ ಇಂದಿಗೆ ಆ ಖದರ್ರನ್ನು ಉಳಿಸಿಕೊಂಡಿಲ್ಲವಾದರೂ ಅಲ್ಲಿನ ಪಿಚ್‌ಗಳು ಮಾತ್ರ ಆ ಗೌರವವನ್ನು ಇನ್ನೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಉತ್ತಮ ದರ್ಜೆಯ ಬ್ಯಾಟ್ಸ್‌ಮನ್ ಮಾತ್ರ ಇಲ್ಲಿ ಮರ್ಯಾದೆ ಉಳಿಸಿಕೊಳ್ಳಬಹುದು. ಟೆಸ್ಟ್ ಪಂದ್ಯಗಳಲ್ಲಿ ಮೊದಲ ಮೂರು ದಿನವೇನಿದ್ದರೂ ಇಲ್ಲಿ ವೇಗಿಗಳದ್ದೇ ಕಾರುಬಾರು. ನಾಲ್ಕನೇ ಹಾಗೂ ಐದನೇ ದಿನಕ್ಕೆ ಪಂದ್ಯ ಮುಂದುವರಿದಲ್ಲಿ ಸ್ಪಿನ್ನರುಗಳೂ ಒಂದು ಕೈ ನೋಡಲಡ್ಡಿಯಿಲ್ಲ.

ಕ್ರಿಕೆಟ್ ಶಿಶುಗಳ ಆಡುಂಬೊಲ
ಭೌಗೋಳಿಕವಾಗಿ ಹತ್ತಿರವಿರುವ ದಕ್ಷಿಣ ಆಫ್ರಿಕ ಟ್ರ್ಯಾಕ್‌ಗಳನ್ನು ಹೋಲುತ್ತಾವಾದರೂ ಬೌನ್ಸ್‌ನಲ್ಲಿ ಸಣ್ಣ ವ್ಯತ್ಯಾಸವಿದೆ. ಆಫ್ರಿಕದ ಪಿಚ್‌ಗಳು ವೇಗ ಹಾಗೂ ಬೌನ್ಸಿಯಾಗಿದ್ದರೆ, ಇಲ್ಲಿನ ಪಿಚ್‌ಗಳು ಸ್ಪಂಜಿನಂತೆ ಮಿದುವಾಗಿರುವವು. ಇವುಗಳಲ್ಲಿ ಲೆದರ್‌ಬಾಲ್‌ಗಳು ಟೆನಿಸ್ ಬಾಲ್ ಥರ ಪುಟಿಯುತ್ತವೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ನಿರಾಯಾಸವಾಗಿ ಬ್ಯಾಟ್ ಬೀಸಬಹುದು.

ನ್ಯೂಜಿಲೆಂಡಲ್ಲಿ ಗಾಳಿಯದ್ದೇ ಆಟ!
ಭೌಗೋಳಿಕವಾಗಿ ಆಸ್ಟ್ರೇಲಿಯಾಗೆ ಹತ್ತಿರವಿದ್ದರೂ ಇಂಗ್ಲೆಂಡ್ ಅನ್ನು ನೆನಪಿಸುವ ಪಿಚ್‌ಗಳು ನ್ಯೂಜಿಲೆಂಡಿನವು. ವಿಶ್ವದಲ್ಲೇ ಅತ್ಯಂತ ಆಕರ್ಷಕ, ಹಸಿರುಚ್ಛಾದಿತ ಪಿಚ್‌ಗಳಲ್ಲಿ ಸ್ವಿಂಗ್ ಬೌಲರ್‌ಗಳು ಆಡಿದ್ದೇ ಆಟ. 90ರ ದಶಕದಲ್ಲಿ ಇಲ್ಲಿನ ಪಿಚ್‌ನ ಮರ್ಮ ಅರಿಯದೇ ಘಟಾನುಘಟಿ ಭಾರತೀಯ ಬ್ಯಾಟ್ಸ್‌ಮನ್‌ಗಳು ದಂಗಾಗಿ ಹೋಗಿದ್ದರು. ಇಂದೂ ಅದೇ ಮುಂದುವರಿಯುತ್ತಿದೆ. ಈಡನ್ ಪಾರ್ಕ್, ಆಕ್ಲಂಡ್ ಮತ್ತು ಬೇಸಿನ್ ರಿಸರ್ವ್ ಸ್ಟೇಡಿಯಂಗಳು ಇಂಗ್ಲೆಂಡ್‌ನ ಪಿಚ್‌ಗಳಂತೆ ಗೋಚರಿಸುತ್ತವೆ. ಹೆಚ್ಚಿನವು ಸಮುದ್ರ ತಟದಲ್ಲಿರುವ ತೆರೆದ ಮೈದಾನ. ಇಲ್ಲಿನ ಹವೆ ಮತ್ತು ಬೀಸುವ ಗಾಳಿ ವೇಗ ಹಾಗೂ ಸ್ವಿಂಗ್ ಮೇಲೆ ಪರಿಣಾಮ ಬೀರುತ್ತದೆ. ಒಂದು ಬದಿಯಿಂದ ಬೀಸುವ ಗಾಳಿ ಚೆಂಡಿನ ವೇಗ ಹೆಚ್ಚಿಸಿದರೆ, ವಿರುದ್ಧ ತುದಿಯಿಂದ ಬೌಲಿಂಗ್ ಮಾಡುವಾಗ ಚೆಂಡಿನ ವೇಗವನ್ನು ಕುಗ್ಗಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬ್ಯಾಟ್ಸ್‌ಮನ್‌ಗೆ ಕ್ರೀಸಿನಲ್ಲಿ ತಳವೂರಲು ಹೆಚ್ಚು ಸಮಯ ಬೇಕಾಗುತ್ತದೆ.


ದಾಂಡಿಗರ ಅಡ್ಡ ಉಪಖಂಡ
ಭಾರತ ಉಪಖಂಡದ ಪಿಚ್‌ಗಳಲ್ಲಿ ಹೆಚ್ಚಿನವು ಬ್ಯಾಟಿಂಗ್‌ಸ್ನೇಹಿಗಳೇ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಈ ಮೂರೂ ದೇಶಗಳು ಇದಕ್ಕೆ ಹೊರತಲ್ಲ. ಒಂದೊಮ್ಮೆ ಭಾರತವೆಂದರೆ ನೆನಪಾಗುತ್ತಿದ್ದದು ಬರೇ ಸ್ಪಿನ್ನರ್‌ಗಳು. ಅಂದು ಅವರೇ ಮ್ಯಾಚ್ ವಿನ್ನರ್‌ಗಳು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಂದು ಭಾರತದ ಪಿಚ್‌ಗಳೆಂದರೆ ಬ್ಯಾಟ್ಸ್‌ಮನ್‌ಗಳ ಸ್ವರ್ಗ. ಇಲ್ಲಿನ ಪಿಚ್‌ಗಳು ಎಷ್ಟರ ಮಟ್ಟಿಗೆ ಬ್ಯಾಟಿಂಗ್‌ಸ್ನೇಹಿಯಿಂದರೆ, ಚೆಂಡು ನೆಲಕ್ಕೆ ಬಡಿದ ಮೇಲೆ ಬಹಳ ನೀಟಾಗಿ ಬ್ಯಾಟನ್ನು ಹುಡುಕಿಕೊಂಡು ಬಂದು ಹೊಡೆಸಿಕೊಳ್ಳುತ್ತವೆ. ಪಿಚ್‌ನಲ್ಲಿ ಹಸಿರು ಕಡಿಮೆ ಪ್ರಮಾಣದಲ್ಲಿರುವುದರಿಂದ ನೆಲಕ್ಕೆ ಬಿದ್ದ ಮೇಲೆ ಚೆಂಡಿನ ವೇಗ ಕಡಿಮೆಯಾಗುತ್ತದೆ. ಹೆಚ್ಚು ಪುಟಿಯುವುದಿಲ್ಲ. ಎಷ್ಟರಮಟ್ಟಿಗೆ ಅಂದರೆ ಬ್ಯಾಟ್ಸ್‌ಮನ್ ಅನ್ನು ದಾಡಿದ ಚೆಂಡು ಆಸೀಸ್ ಪಿಚ್‌ಗಳಲ್ಲಿ ಕೀಪರ್‌ನ ತಲೆ ಮೇಲಿಂದ ಹಾರಿ ಹೋದರೆ, ಇಲ್ಲಿ ಎರಡು ಬೌನ್ಸ್‌ಗಳಾಗಿ ಕೀಪರ್ರನ್ನು ತಲುಪುತ್ತದೆ. ಹೀಗಾಗಿಯೇ ಇಲ್ಲಿ ಸ್ಲಿಪ್‌ನಲ್ಲಿ ಚೆಂಡು ನೇರ ಕೈ ಬಾರದೆ ಬ್ಯಾಟ್ಸ್‌ಮನ್‌ಗೆ ಜೀವದಾನ ಸಿಗುತ್ತದೆ. ಕೋಲ್ಕತಾ, ಚೆನ್ನೈನ ಇಂಥ ಪಿಚ್‌ಗಳಲ್ಲಿ ಸ್ಪಿನ್ ಬೌಲರ್‌ಗಳು ಮಾತ್ರ ಸುಲಭದಲ್ಲಿ ವಿಕೆಟ್ ಕೀಳಬಹುದು. ಮುಂಬೈನ ಬ್ರೆಬೊರ್ನ್, ವಾಂಖೆಡೆ, ದೆಹಲಿಯ ಫಿರೋಜ್ ಶಾ ಕೋಟ್ಲಾ ಇದೇ ತೆರನಾದುವು. ಆದರೆ ಬೆಂಗಳೂರಿನ ಪಿಚ್ ಮಾತ್ರ ಇದಕ್ಕೆ ಅಪವಾದ. ಇಲ್ಲಿ ವೇಗಿಗಳಿಗೂ ಗೌರವ ಉಂಟು. ಇದೇ ಕಾರಣಕ್ಕೆ ಹರ್ಷಲ್ ಪಟೇಲ್ ಎಂಬ ಹೇಳಹೆಸರಿಲ್ಲದ ಬೌಲರ್ ರಣಜಿಯಲ್ಲಿ 8 ವಿಕೆಟ್ ಪಡೆದು ಬೀಗುತ್ತಾನೆ.
ಮೊಹಾಲಿ ಹಾಗೂ ಧರ್ಮಶಾಲಾದ ಪಿಚ್‌ಗಳು ಭಾರತದ ಉಳಿದ ಪಿಚ್‌ಗಳಿಗಿಂತ ಡಿಫರೆಂಟ್. ಹಸಿರು ಹೊದಿಕೆಯಿಂದ ಕೂಡಿದ ಇವುಗಳಲ್ಲಿ ಮಧ್ಯಮ ವೇಗಿಗಳೂ ವಿಕೆಟ್ ಬೇಟೆಯಾಡುತ್ತಾರೆ.
ಪಾಕಿಸ್ತಾನದ ಹೆಚ್ಚಿನ ಪಿಚ್‌ಗಳು ಸ್ಪಿನ್ ಬೌಲಿಂಗ್‌ಗೆ ನೆರವು ನೀಡುತ್ತವಾದರೂ ವೇಗಿಗಳು ರಿವರ್ಸ್ ಸ್ವಿಂಗ್‌ನ ಲಾಭವನ್ನು ಭರಪೂರ ಪಡೆಯಬಹುದು. ರಾವಲ್ಪಿಂಡಿ, ಲಾಹೋರ್, ಪೇಶಾವರ ಪಿಚ್‌ಗಳಲ್ಲಿ ರಿವರ್ಸ್ ಸ್ವಿಂಗ್ ಚೆನ್ನಾಗಿ ಅರಿತಿರುವ ಬೌಲರ್‌ಗೆ ಚೆಂಡು ಕೊಟ್ಟರೆ ಕೈಗೆ ಗುಲಾಬ್ ಜಾಮೂನು ಕೊಟ್ಟಷ್ಟು ಖುಷಿಯಾಗಬಹುದು.
ಶ್ರೀಲಂಕಾದ ಪಿಚ್‌ಗಳು ಮಾತ್ರ ಈ ಮೂರು ದೇಶಗಳಿಗಿಂತ ಸ್ವಲ್ಪ ಡಿಫರೆಂಟ್. ಇಲ್ಲಿನ ಸಪಾಟು ಪಿಚ್‌ಗಳಲ್ಲಿ ಚೆಂಡು ಹೆಚ್ಚು ಪುಟಿಯುವುದಿಲ್ಲ. ಆಗಾಗ ಮಳೆಯೂ ಕಾಡುವುದರಿಂದ ಕೊಂಚ ಜಿಗುಟಾಗಿ ವರ್ತಿಸುತ್ತವೆ. ಸ್ಪಿನ್ನರ್‌ಗಳಿಗೆ ಬಹಳ ಪ್ರಿಯವಾಗುವ ಇಲ್ಲಿನ ಪಿಚ್‌ಗಳಲ್ಲಿ ವೇಗಿಗಳು ವಿಕೆಟ್ ಪಡೆಯಲು ಬೆವರು ಬಸಿಯಬೇಕಾಗುತ್ತದೆ. ಆದರೆ ಕ್ಯಾಂಡಿಯ ಪಿಚ್‌ಗಳನ್ನೂ ವೇಗಿಗಳೂ ಪ್ರೀತಿಸುತ್ತಾರೆ.

ಆಸೀಸ್ ಪಿಚ್ ಭಯಂಕರ
ಕಾಂಗರೂಗಳಂತೆ 'ವೇಗದೊಂದಿಗೆ ನೆಗೆತವೇ' ಇಲ್ಲಿನ ಮೂಲಮಂತ್ರ. ಬ್ಯಾಟ್ಸ್‌ಮನ್ ಕೊಂಚ ಕೊಸರಿದರೂ ಕಣ್ಣು ಮಿಟುಕಿಸುವಷ್ಟರಲ್ಲಿ ಚೆಂಡು ತಲೆಗಪ್ಪಳಿಸಿರುತ್ತದೆ. ಅದರಲ್ಲೂ ಪರ್ತ್‌ನ ವಾಕಾ ಮೈದಾನವಂತೂ ಪ್ರಪಂಚದಲ್ಲೇ ಅತ್ಯಂತ ವೇಗದ (ಕ್ವಿಕೆಸ್ಟ್) ಪಿಚ್. ಬ್ರಿಸ್ಬೇನ್‌ನ ಗಾಬಾ ಸ್ಟೇಡಿಯಂ ಹೆಚ್ಚೂಕಮ್ಮಿ ಇದರ ತಮ್ಮ. ಪುಲ್, ಹುಕ್ ಮತ್ತು ಕಟ್‌ಶಾಟ್‌ಗಳನ್ನು ಬಲ್ಲ ಚತುರ ದಾಂಡಿಗನಷ್ಟೇ ಇಲ್ಲಿ ರನ್‌ಮಳೆ ಸುರಿಸಬಹುದು. ಮೆಕ್‌ಗ್ರಾಥ್, ಬ್ರೆಟ್‌ಲೀಯಂಥ ಬೌಲರ್‌ಗಳು ಸ್ಲಿಪ್‌ನ ಆಸುಪಾಸು ಮೂರ್ನಾಲ್ಕು ಫೀಲ್ಡರ್‌ಗಳನ್ನು ನಿಲ್ಲಿಸಿ ಆಯಕಟ್ಟಿನ ಜಾಗದಲ್ಲಿ ಚೆಂಡೆಸೆದಲ್ಲಿ ಬ್ಯಾಟ್ ಬೀಸುವುದು ಸುಲಭವಲ್ಲ. ಸ್ವಲ್ಪ ಎಡವಿದರೂ ಪೆವಿಲಿಯನ್ ಪೆರೇಡ್. ಈ ವಿಷಯದಲ್ಲಿ ಟೀಂ ಇಂಡಿಯಾದಷ್ಟು ಅನುಭವಿ ತಂಡ ಇನ್ನೊಂದಿಲ್ಲ! ಹಾಗೆಂದು ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ಗಳಿಲ್ಲ ಎಂದಲ್ಲ. ಆಡಿಲೇಡ್, ಓವಲ್, ಸಿಡ್ನಿಯ ಪಿಚ್‌ಗಳಲ್ಲಿ ಧೂಳು ನಿಲ್ಲುವುದರಿಂದ ತಂಡದಲ್ಲಿ ತಜ್ಞ ಸ್ಪಿನ್ನರನ ಇರುವಿಕೆಯೂ ಮುಖ್ಯ. ಎಂಥ ಪಿಚ್‌ನಲ್ಲೂ ಚೆಂಡನ್ನು ಬ್ಯಾಟ್ಸ್‌ಮನ್ ಊಹಿಸಲೂ ಸಾಧ್ಯವಿರದ ಮಟ್ಟಿಗೆ ತಿರುಗಿಸುವ ಶೇನ್‌ವಾರ್ನ್‌ರಂಥ ಬೌಲರ್‌ಗೆ ಈ ಪಿಚ್ ಸ್ವರ್ಗವೇ ಸರಿ. ಮೆಲ್ಬರ್ನ್ ಗ್ರೌಂಡ್ ಮಾತ್ರ ಪಕ್ಕಾ ವೇಗದ ಬೌಲರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಪಂದ್ಯ ಮುಂದುವರಿಯುತ್ತಿದ್ದಂತೆ ಇಲ್ಲಿ ಟೆನಿಸ್‌ಬಾಲ್ ಕೂಡ ಬೌನ್ಸ್ ಆಗುತ್ತದೆ. ಇಂಗ್ಲೆಂಡ್‌ನಷ್ಟು ಅಲ್ಲವಾದರೂ ಆಸ್ಟ್ರೇಲಿಯಾದ ಪಿಚ್‌ಗಳು ಸ್ವಿಂಗ್‌ಗೆ ಬಹಳ ನೆರವು ನೀಡುತ್ತವೆ. ಆದರೆ ಭಾರತದ ಪಿಚ್‌ಗಳಂತೆ ಎಲ್ಲವೂ ವಾತಾವರಣದ ಮೇಲೆ ಅವಲಂಬಿತ. ಬ್ಯಾಕ್‌ಫೂಟ್ ಪ್ಲೇಯರ್ಸ್ ಇಲ್ಲಿ ಭರಪೂರ ರನ್ ಕಲೆಹಾಕಬಹುದು. ಆದರೂ ಎಂಥ ಬ್ಯಾಟ್ಸ್‌ಮನ್‌ನ ಉತ್ಸಾಹಕ್ಕೂ ತಣ್ಣೀರೆರಚಬಲ್ಲ ವಾಕಾ ಮತ್ತು ಎಂಸಿಜೆಯ ಅಸಾಧಾರಣ ಪುಟಿತವೇ ಪರಮ ಶತ್ರು. ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿರುವ ಈ ಪಿಚ್ಚುಗಳೇ ಮುಂದಿನ ವಿಶ್ವಚಾಂಪಿಯನ್ನರನ್ನು ನಿರ್ಧರಿಸಲಿವೆ.

ಚಿನ್ನಸ್ವಾಮಿ ವಿಶೇಷ ಅನುಭವ
ಉತ್ತಮ ಫಲಿತಾಂಶ ಕೊಡುವ ಯಾವುದೇ ಪಿಚ್ ಆಟಗಾರರಿಗೆ ಬಹಳ ಪ್ರಿಯವಾಗುತ್ತದೆ. ಚಿನ್ನಸ್ವಾಮಿ ನನ್ನ ಹೋಮ್ ಗ್ರೌಂಡ್ ಆಗಿರುವುದರಿಂದ ಇಲ್ಲಿ ಆಡುವುದು ಯಾವತ್ತಿದ್ದರೂ ಒಳ್ಳೆಯ ಅನುಭವ. ಮುಂಬೈನ ವಾಂಖೆಡೆಯೂ ಅಚ್ಚುಮೆಚ್ಚು. ಒಬ್ಬ ಫಾಸ್ಟ್‌ಬೌಲರ್ ಆಗಿ ಹೇಳಬೇಕೆಂದರೆ ದಕ್ಷಿಣ ಆಫ್ರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳ ಬೌನ್ಸಿ ಪಿಚ್‌ಗಳು ಇಷ್ಟವಾಗುತ್ತವೆ. ಸೆಂಚುರಿಯನ್ ಪಾರ್ಕ್ ಚೆನ್ನಾಗಿದೆ.
- ಜಾವಗಲ್ ಶ್ರೀನಾಥ್
ಚಿನ್ನಸ್ವಾಮಿ ಪಿಚ್ ಕೊಟ್ರೆ ಹೊತ್ಕೊಂಡ್ಹೋಗ್ತೀನಿ...
ಚಿನ್ನಸ್ವಾಮಿ ಪಿಚ್ ಕೊಟ್ರೆ ಖುಷಿಯಿಂದ ಹೊತ್ಕೊಂಡ್ಹೋಗ್ತೀನಿ. ಅಷ್ಟು ಇಷ್ಟ ನಂಗೆ. ಯಾಕೆಂದ್ರೆ ಇದು ರಿಸಲ್ಟ್ ಓರಿಯೆಂಟೆಡ್ ಪಿಚ್. ಯಾರಿಗೂ ನಿರಾಶೆ ಮಾಡೋದಿಲ್ಲ. ವೇಗಿಗಳಿಗೂ ನೆರವಾಗುತ್ತೆ. ಬ್ಯಾಟ್ಸ್‌ಮನ್‌ಗಳೂ ರನ್ ಮಾಡ್ಬಹುದು. ಸ್ಪಿನ್ನರ್‌ಗಳೂ ವಿಕೆಟ್ ಬೀಳಿಸ್ಬೋದು. ನಿಜಕ್ಕೂ ಮಾದರಿ ವಿಕೆಟ್. ವಿದೇಶಿ ಪಿಚ್‌ಗಳಲ್ಲಿ ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳು ಇಷ್ಟ. ಅದರಲ್ಲೂ ಬ್ರಿಸ್ಬೇನ್‌ನ ಗಾಬಾ ಅತ್ಯುತ್ತಮ ಟ್ರ್ಯಾಕ್.
- ವಿಜಯ್ ಭಾರದ್ವಾಜ್


ಲಾರ್ಡ್ಸ್ ಫೇವರಿಟ್,
ಚಿನ್ನಸ್ವಾಮಿ ಹಾರ್ಟ್‌ಬೀಟ್

ಲಾರ್ಡ್ಸ್ ನನ್ನ ಫೇವರಿಟ್. ಈ 'ಕ್ರಿಕೆಟ್ ಕಾಶಿ'ಯಲ್ಲಿ ಆಡಬೇಕೆಂಬುದು ನನ್ನ ಕನಸಾಗಿತ್ತು. ಪ್ರಪಂಚದ ಎಷ್ಟೇ ಕ್ರೀಡಾಂಗಣ ಸುತ್ತುವರಿದರೂ ನಮ್ಮ ಚಿನ್ನಸ್ವಾಮಿಯಷ್ಟು ಖುಷಿ ಕೊಟ್ಟದ್ದು ಯಾವುದೂ ಇಲ್ಲ. ನಮ್ಮೂರಿನ ಜನರೆದುರು ಆಡುವುದು ಯಾವತ್ತೂ ಖುಷಿ, ಹೆಮ್ಮೆ. ಇನ್ನು ಕೋಲ್ಕತಾದ ಈಡನ್‌ಗಾರ್ಡನ್‌ನಲ್ಲೂ ಅಷ್ಟೇ ಖುಷಿಯಾಗುತ್ತದೆ.
- ಬಿ.ಕೆ. ವೆಂಕಟೇಶ್ ಪ್ರಸಾದ್
ಆಸೀಸ್‌ನ ಬೌನ್ಸಿ ಟ್ರ್ಯಾಕ್‌ಗಳಿಷ್ಟ...
ಚಿನ್ನಸ್ವಾಮಿ ಯಾವತ್ತಿಗೂ ನನಗಿಷ್ಟ. ಈ ನೆಲದಲ್ಲಿ ನನ್ನ ನಾಯಕತ್ವದಲ್ಲಿ ರಣಜಿ ಟ್ರೋಫಿ ಗೆದ್ದಿರುವುದು ಮರೆಯಲಸಾಧ್ಯ. ಇನ್ನು ಲಾರ್ಡ್ಸ್ ನನ್ನ ಫೇವರಿಟ್ ಮೈದಾನಗಳಲ್ಲೊಂದು. ಆದರೆ ನನ್ನ ಬೌಲಿಂಗ್‌ನ ವಿಚಾರಕ್ಕೆ ಬಂದಾಗ ಮಾತ್ರ ಆಸ್ಟ್ರೇಲಿಯಾದ ಬೌನ್ಸಿ ಟ್ರ್ಯಾಕ್‌ಗಳು ಬಹಳ ಆಪ್ತವಾಗುತ್ತವೆ. ಸ್ಪಿನ್ನರ್ ವಿಕೆಟ್ ಕಬಳಿಸಬೇಕಾದರೆ ಟರ್ನ್ ಜೊತೆಗೆ ಬೌನ್ಸ್ ಕೂಡ ಬಹಳ ಮುಖ್ಯ. ನನ್ನ ಬೌಲಿಂಗ್ ಶೈಲಿಗೆ ಹೊಂದಿಕೊಳ್ಳುವುದರಿಂದ ಅಲ್ಲಿನ ಪಿಚ್‌ಗಳಲ್ಲಿ ಆಡುವುದೆಂದರೆ ಬಹಳ ಇಷ್ಟ.
- ಸುನಿಲ್ ಜೋಷಿ


= ಗಣೇಶ್‌ಪ್ರಸಾದ್ ಕುಂಬ್ಳೆ
     gprasad8@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com