ಖುಷಿ

ಒಬ್ಬ ಮಣಿರತ್ನಂ ಸಿಗದೇ ಹೋಗಿದ್ದರೆ!

ಅದು ಶ್ರೇಷ್ಠವೆನ್ನಿಸಿದಂತಹ ಜಾಹೀರಾತುಗಳಿಗೆ ಪ್ರಶಸ್ತಿ ನೀಡುವ ಸಮಾರಂಭ. ಅಲ್ಲಿ ಸೇರಿದ್ದ ಹಲವು ಗಣ್ಯರಲ್ಲಿ ಖ್ಯಾತ ನಿರ್ದೇಶಕ...

ಒಬ್ಬ ಮಣಿರತ್ನಂ ಸಿಗದೇ ಹೋಗಿದ್ದರೆ!
Published On :

ಅದು ಶ್ರೇಷ್ಠವೆನ್ನಿಸಿದಂತಹ ಜಾಹೀರಾತುಗಳಿಗೆ ಪ್ರಶಸ್ತಿ ನೀಡುವ ಸಮಾರಂಭ. ಅಲ್ಲಿ ಸೇರಿದ್ದ ಹಲವು ಗಣ್ಯರಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ ಕೂಡ ಒಬ್ಬರು. ಸ್ಟೇಜ್ ಮೇಲೆ ಪ್ರಶಸ್ತಿ ನೀಡುವ ಮಧ್ಯೆ ನಡೆಯುವ ಕಾರ್ಯಕ್ರಮದಲ್ಲಿ ಒಬ್ಬ ಹುಡುಗ ಕೆಲವೇ ಕೆಲವು ವಾದ್ಯಗಳನ್ನು ಬಳಸಿಕೊಂಡು ಅದ್ಭುತ ಅನ್ನಿಸುವಂಥ ಸಂಗೀತವನ್ನು ಹೊರ ಹೊಮ್ಮಿಸುತ್ತಿದ್ದ. ಸುಮ್ಮನೆ ಕೇಳಿಸಿಕೊಂಡ ಮಣಿರತ್ನಂಗೆ ಇದು ಹೀಗೆ ಕೇಳಿ ಹಾಗೆ ಮರೆಯುವ ಸಂಗೀತವಲ್ಲ ಅನ್ನಿಸಿತು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಆ ಇಪ್ಪತ್ತಾರರ ಯುವಕನನ್ನು ಭೇಟಿಯಾಗಿ ನನ್ನ ಮುಂದಿನ ಸಿನಿಮಾಕ್ಕೆ ನೀನೆ ಸಂಗೀತ ನಿರ್ದೇಶಕ ಎಂದು ಬಿಟ್ಟರು. ರೋಜಾ ತಮಿಳು ಚಿತ್ರಕ್ಕೆ ಅಲ್ಲಾ ರಖಾ ರೆಹಮಾನ್ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಹೀಗೆ.
ಎ.ಆರ್. ರೆಹಮಾನ್ ಭಾರತೀಯ ಚಿತ್ರರಂಗ ಕಂಡ ಒಬ್ಬ ಅದ್ಭುತ ಪ್ರತಿಭೆಯ ಅಪರೂಪದ ಸಂಗೀತ ನಿರ್ದೇಶಕ. ಇದೀಗ 48ನೇ ವಸಂತಕ್ಕೆ ಕಾಲಿಡುತ್ತಿರುವ ರೆಹಮಾನ್ ಎರಡು ದಶಕಗಳ ವೃತ್ತಿ ಜೀವನದಲ್ಲಿ ಯಾವತ್ತೂ ತೃಪ್ತರಾದವರಲ್ಲ. ಕ್ರಿಯಾಶೀಲ ವ್ಯಕ್ತಿ ಸದಾ ಹೊಸತನ್ನು ಹುಡುಕುತ್ತಿರಬೇಕು ಎಂಬ ಧ್ಯೇಯ ಅವರ ಯಶಸ್ಸಿನ ಗುಟ್ಟು.
ರೋಜಾ ಚಿತ್ರದ ಯಶಸ್ಸಿನಿಂದ ಹಿಡಿದು ಇತ್ತೀಚಿನ ಮರಿಯಾನ್ ವರೆಗಿನ ಎಲ್ಲ ಚಿತ್ರಗಳು ಸೂಪರ್‌ಹಿಟ್. ಇಲ್ಲಿಯವರೆಗೆ 250ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ದಕ್ಷಿಣ ಭಾರತದ ಎಲ್ಲ ಭಾಷೆಗಳು ಸೇರಿದಂತೆ ಹಾಲಿವುಡ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿ, ಸಂಗೀತ ಕ್ಷೇತ್ರಕ್ಕೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವೈಯಕ್ತಿಕ ಬದುಕಿನಲ್ಲೂ ರೆಹಮಾನ್ ಫುಲ್ ಖುಷ್. ಕದೀಜಾ ಹಾಗೂ ಆಮೀನ್ ಎಂಬ ಮೂರು ಮಕ್ಕಳ ತಂದೆಯಾಗಿರುವ ಇವರು, ಪತ್ನಿ ಸಾಯಿರಾಭಾನು ತಮಗೆ ನೀಡುವ ಪ್ರೋತ್ಸಾಹವನ್ನು ಸದಾ ನೆನೆಪಿಸಿಕೊಳ್ಳುತ್ತಾರೆ. ರೆಹಮಾನ್ ಅವತ್ತಿಗೂ ಇವತ್ತಿಗೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ತಮ್ಮ ತಾಯಿಯನ್ನ. ತಾಯಿಯಲ್ಲದೇ ತಮಗೆ ಏನೂ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ರೆಹಮಾನ್‌ಗೆ ಕಳೆದ ವರ್ಷ ಆಸ್ಕರ್ ಪ್ರಶಸ್ತಿ ನೀಡಿದಾಗ ವೇದಿಕೆಯಲ್ಲಿ ಏನಾದರೂ ಮಾತನಾಡಿ ಎಂದರೆ, 'ನನ್ನ ಹತ್ತಿರ ತಾಯಿ ಇದ್ದಾಳೆ' ಎಂದು ಸಾರಿದ್ದರು.
ತೊಂಬತ್ತರ ದಶಕದಲ್ಲಿ ಭಾರತದ ಗಲ್ಲಿ ಗಲ್ಲಿಗಳಲ್ಲೂ ಚಿನ್ನ ಚಿನ್ನ ಆಸೈ ಹಾಡು ಗುನುಗಿಸಿದ್ದ ರೆಹಮಾನ್ ಮೊನ್ನೆ ತಾನೆ ವಿಶ್ವಾದ್ಯಂತ ಎಲ್ಲರ ಬಾಯಲ್ಲೂ ಜೈ ಹೋ ಉದ್ಗಾರ ಹೊರಡಿಸಿದ್ದಾರೆ. ಜಾಗತಿಕ ಸಂಗೀತ ಪ್ರಪಂಚದಲ್ಲಿ ರೆಹಮಾನ್ ಶಕೆ ಆರಂಭವಾಗಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ರಾಗ ಮತ್ತು ಪಾಶ್ಚಾತ್ಯ ಸಾಧನಗಳನ್ನು ಮೇಳೈಸಿ ವಿಶಿಷ್ಟ ಸಂಗೀತ ಸೃಷ್ಟಿಸುವುದರಲ್ಲಿ ಸಿದ್ಧಹಸ್ತರಾಗಿರುವ ರೆಹಮಾನ್‌ರಿಂದ ಭಾರತೀಯ ಮಣ್ಣಿನ ಸೊಗಡಿನ ದನಿಗಳು ಹಾಲಿವುಡ್‌ನಲ್ಲಿ ಮಿಂಚುತ್ತಿವೆ.

- ಪ್ರವೀಣರಾಜು ಸೊನ್ನದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.