ಕೃಷಿ ಸಂಕ್ರಾಂತಿ

ಇದು ಗ್ರೀನ್ ಟೂರ್- ಹಸಿರು ಪ್ರವಾಸ. ಅಂದರೆ ಕಾಡು- ಮೇಡು ಸುತ್ತುವುದಲ್ಲ. ಪ್ರಯೋಗಶೀಲ ಕೃಷಿಕರ ಹೊಲ- ಮನೆಗಳಿಗೆ ಭೇಟಿ. ಹೊಸಹೊಸತನ್ನು ಕಲಿಯಲು ಬಯಸುವ ರೈತರಿಗೆ, ತಾವು ಎಲ್ಲಿಗೆ ಭೇಟಿ ನೀಡಬಹುದೆಂಬ ಮಾಹಿತಿ ಇಲ್ಲಿದೆ. ಇದು ಬರೀ ರೈತರಿಗೆ ಮಾತ್ರವಲ್ಲ, ಕೃಷಿಯ ಬಗ್ಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳು, ಮಾಧ್ಯಮ ಮಂದಿ, ಇನ್ನಿತರರು ಕೂಡ ಇವರಲ್ಲಿಗೆ ಭೇಟಿ ನೀಡಬಹುದು. ಇಲ್ಲಿನ ರೈತರೊಂದಿಗೆ ಅಪೂರ್ವ ಮಾಹಿತಿ, ಒಳನೋಟಗಳನ್ನು ಹಂಚಿಕೊಳ್ಳಬಹುದು.
ಎಲ್ಲ ಕ್ಷೇತ್ರಗಳಂತೆ ಕೃಷಿ ರಂಗವೂ ನಿಂತ ನೀರಲ್ಲ. ಬದಲಾವಣೆಗೆ ಸಾಕಷ್ಟು ಅವಕಾಶಗಳುಂಟು. ಕೃಷಿ ಪ್ರವಾಸವೂ ಬದಲಾವಣೆಗೆ ತೆರೆದುಕೊಳ್ಳಲು ಸಹಕಾರಿ. ಪ್ರಗತಿಪರ ರೈತರು ಯಾವ ರೀತಿ ಯಶಸ್ಸು ಗಳಿಸಿದ್ದಾರೆ, ಅದರ ಹಿಂದಿನ ಕಾರಣ, ಅವರು ಅನುಸರಿಸುತ್ತಿರುವ ವಿಧಾನ, ಹೀಗೆ ಹತ್ತಾರು ಸಂಗತಿಗಳು ಇದರಿಂದ ಮನವರಿಕೆಯಾಗಬಹುದೆಂಬುದು ನಮ್ಮ ನಂಬಿಕೆ. ಕೃಷಿಯಿಂದ ಲಾಭ ಇಲ್ಲ ಅನ್ನೋರು ಬಹಳಷ್ಟು ಮಂದಿ. ಕೃಷಿಯಲ್ಲಿ ಲಾಭ ಅಷ್ಟೇ ಅಲ್ಲ, ನೆಮ್ಮದಿಯೂ ಇದೆ. ಮಾಡುವ ವಿಧಾನ, ಪ್ರಯೋಗಶೀಲತೆ, ತಂತ್ರಜ್ಞಾನ, ಮಾರುಕಟ್ಟೆ ಮೊದಲಾದ ಸಂಗತಿ ಅರಿತರೆ ಕೃಷಿ ಕಷ್ಟವೇನಲ್ಲ. ಅದಕ್ಕೆ ಈ ರೈತ ಸಾಧಕರೇ ಸಾಕ್ಷಿ. ಇಲ್ಲಿನ ಪ್ರತಿಯೊಬ್ಬ ರೈತರ ಜಮೀನಿಗೆ ಕಾಲಿಟ್ಟಾಗಲೂ ವಿಶಿಷ್ಟ ಅನುಭವ ಆಗುತ್ತದೆ.
ಇದು ಖುಷಿಯ ಸಂಕ್ರಾಂತಿ ವಿಶೇಷ. ಇದು ರೈತರಿಗೆ ನಾವು ಸಲ್ಲಿಸುತ್ತಿರುವ ಗೌರವ ಮಾತ್ರವಲ್ಲ, ಈ ನೆಲದ ಜೀವನಶೈಲಿಗೆ ಸಲ್ಲಿಸುತ್ತಿರುವ ನಮನ. ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಇದು ಅರ್ಥಪೂರ್ಣವೂ ಆಗಿದೆ ಎಂಬುದು ನಮ್ಮ ನಂಬಿಕೆ.
ಹೋಗಿ ಬನ್ನಿ.
ಸಾವಯವದಿಂದಲೇ ಸಮೃದ್ಧ ಬದುಕು
ಕೃಷಿಯಲ್ಲೇ ಖುಷಿ, ನೆಮ್ಮದಿ, ಲಾಭ ಸಿಗುವಾಗ ಪೇಟೆಗೆ ಹೋಗಿ ಯಾಕೆ ತಾಪತ್ರಯ ಅನುಭವಿಸುತ್ತೀರಿ ಅನ್ನೋದು ಸಾವಯವ ಕೃಷಿಕ ಎ.ಪಿ. ಸದಾಶಿವ ಅವರ ಮನದಾಳದ ಮಾತು.
ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಕೃಷಿ ಮಾಡುವುದು ಅಸಾಧ್ಯ ಎಂಬ ಸ್ಥಿತಿಗೆ ಬಹಳಷ್ಟು ರೈತರು ಬಂದಿದ್ದಾರೆ. ಆದರೆ, ರಾಸಾಯನಿಕ ಉಪಯೋಗಿಸದೇ ಕೃಷಿ ಮಾಡಬಹುದು ಎಂಬುದನ್ನು ಒಬ್ಬ ತಜ್ಞನಂತೆ ಅವರು ಜಮೀನಿನಲ್ಲಿ ತೋರಿಸಿಕೊಟ್ಟಿದ್ದಾರೆ.
ಎ.ಪಿ. ಸದಾಶಿವ ಅವರದು 10 ಎಕರೆ ಜಮೀನು. 6 ಎಕರೆ ಅಡಕೆ, 3 ಎಕರೆ ತೆಂಗು, ಮಿಕ್ಕಿದ 1 ಎಕರೆಯಲ್ಲಿ ಬತ್ತದ ಗದ್ದೆ ಮಾಡಿದ್ದಾರೆ. ಇದರ ಜತೆಗೆ ಕೊಕ್ಕೊ, ಬಾಳೆ, ಕಾಳುಮೆಣಸು, ಜಾಯಿಕಾಯಿ ಸೇರಿದಂತೆ ಹಲವು ನಮೂನೆಯ ತರಕಾರಿ ಬೆಳೆಯುತ್ತಾರೆ. 16 ಹಸುಗಳನ್ನು ಸಾಕಿದ್ದಾರೆ. ಇವರ ಕೃಷಿಯ ವಿಶೇಷವೆಂದರೆ ಪಕ್ಕಾ ಸಾವಯವ ವಿಧಾನ. ಇವರ ಜಮೀನಿನಲ್ಲಿ ಎಲ್ಲೂ ರಾಸಾಯನಿಕದ ವಾಸನೆ ಸುಳಿಯುವುದಿಲ್ಲ. ಹಾಗಾಗಿಯೇ ಇವರ ಕೃಷಿ ಸುತ್ತಲಿನ ರೈತರಿಗೆ ಮಾದರಿ. 54 ವರ್ಷದ ಸದಾಶಿವ ಓದಿದ್ದು ಪಿಯುಸಿ. ಚಿಕ್ಕಂದಿನಿಂದಲೇ ಕೃಷಿಯಲ್ಲಿ ಆಸಕ್ತಿ. ಸಹಜವಾಗಿ ಕೃಷಿಯಲ್ಲಿ ಸಕ್ರಿಯ. ಅವರಿಗೆ ಪತ್ನಿ, ಮಗ ಸಾಥ್ ನೀಡುತ್ತಾರೆ.
ವಿಳಾಸ: ಎ.ಪಿ. ಸದಾಶಿವ, ಮರಿಕೆ, ಪೋ. ಅರ್ಯಾಪು, ತಾ. ಪುತ್ತೂರು, ಜಿ. ದ.ಕ, ಮೊ. 9449282892
ಪ್ರವಾಸ ಹೊರಡುವ ಮುನ್ನ
1. ನೀವು ಸಂದರ್ಶಿಸುವ ರೈತರಿಗೆ ಮುಂಚಿತವಾಗಿ ಕರೆ ಮಾಡಿ ತಿಳಿಸಿ ಪ್ರವಾಸಕ್ಕೆ ತೆರಳಿ.
2. ಸಂದರ್ಶಿತ ರೈತನ ಜತೆ ಮುಕ್ತವಾಗಿ ಮಾತನಾಡಿ ಮಾಹಿತಿ ಪಡೆದುಕೊಳ್ಳಿ.
3. ಒಂದು ನೋಟ್ಬುಕ್, ಪೆನ್, ಸಾಧ್ಯವಿದ್ದರೆ ಕ್ಯಾಮೆರಾ ಒಯ್ಯಿರಿ, ನಿಮಗೆ ಮುಖ್ಯವೆನಿಸಿದ್ದನ್ನು ನೋಟ್ ಮಾಡಿಕೊಳ್ಳಿ.
4. ಜಮೀನಿನಲ್ಲಿ ಗಿಡ- ಗಂಟಿ, ಹಣ್ಣು- ಚಿಗುರು ಇತ್ಯಾದಿ ಕೀಳುವುದು ಅಥವಾ ಹಾನಿ ಮಾಡದಿರಿ.
5. ಪ್ರವಾಸಕ್ಕೆ ಒಬ್ಬರೇ ಹೋಗುವುದಕ್ಕಿಂತ ಹತ್ತಾರು ರೈತರು ಹೋದರೆ ಪ್ರವಾಸದ ಖುಷಿ ಮತ್ತಷ್ಟು ಹೆಚ್ಚುತ್ತೆ.
ಯಾಕೆ ಪ್ರವಾಸ?
1. ಕೃಷಿಯಲ್ಲಿ ಅಳವಡಿಸಿಕೊಳ್ಳಬಹುದಾದ ಹೊಸ- ಹೊಸ ವಿಧಾನ, ತಂತ್ರಜ್ಞಾನ, ಪ್ರಯೋಗ ಮೊದಲಾದ ಸಂಗತಿ ಅರಿಯಬಹುದು.
2. ರೈತ- ರೈತರ ಮಧ್ಯೆ ಉತ್ತಮ ಸಂಪರ್ಕ ಬೆಸೆಯುತ್ತದೆ.
3. ಆಯಾ ಪ್ರದೇಶದ ಬೆಳೆಗಳ ಮಾಹಿತಿ, ಬೆಳೆಯುವ ವಿಧಾನ ತಿಳಿದುಕೊಳ್ಳಬಹುದು.
4. ರೈತರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುತ್ತದೆ.
5. ಬದಲಾವಣೆಗೆ ತೆರೆದುಕೊಳ್ಳಲು ಪ್ರೇರಣೆ ನೀಡುತ್ತದೆ.
ನೌಕರಿಗೆ ಬೈ ಕೃಷಿಗೆ ಜೈ
ಕೃಷಿಯಲ್ಲಿ ಲಾಭವಿಲ್ಲ ಅನ್ನೋದು ಹಲವರ ಅಭಿಪ್ರಾಯ. ಆದರೆ, ಮನಸ್ಸಿಟ್ಟು ಮಾಡಿದರೆ ಕೃಷಿ ಕೂಡ ಲಾಭದಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ. ಇದಕ್ಕೆ ತಾಜಾ ಉದಾಹರಣೆ ಶಿವಪುತ್ರಪ್ಪ ಎತ್ತಿನಮನಿ.
ಇವರು ಹಗರಿಬೊಮ್ಮನಹಳ್ಳಿಯ ತುಂಗಭದ್ರಾ ಗ್ರಾಮೀಣ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಮೊದಲಿನಿಂದಲೂ ಕೃಷಿಯಲ್ಲಿ ಒಲವು. ಹಾಗಾಗಿ 1983ರಲ್ಲಿ ನೌಕರಿಗೆ ರಾಜಿನಾಮೆ ಕೊಟ್ಟು ಹಗರಿಬೊಮ್ಮನಹಳ್ಳಿ ಬಳಿಯ ಶಿವಾನಂದ ನಗರದಲ್ಲಿ 5 ಎಕರೆ ಜಮೀನು ಕೊಂಡು ಬೇಸಾಯ ಶುರುಹಚ್ಚಿಕೊಂಡರು. ಆಗ ಸೂರ್ಯಕಾಂತಿ ಬೀಜೋತ್ಪಾದನೆ ಮಾಡತೊಡಗಿದರು. ಮೆಲ್ಲನೆ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿದರು. ದಾಳಿಂಬೆ ಮತ್ತು ಮಲ್ಲಿಗೆ ಮುಖ್ಯ ಬೆಳೆಯಾಗಿ ಬೆಳೆಯತೊಡಗಿದರು. ಆಗ ಅವರ ಖದರ್ರೆ ಬದಲಾಯಿತು. ನೋಡನೋಡುತ್ತಿದ್ದಂತೆ ಲಕ್ಷ- ಲಕ್ಷ ಹಣ ಗಳಿಸತೊಡಗಿದರು. ಈಗ ಅವರ ಜಮೀನಿನ ಪ್ರಮಾಣ 100 ಎಕರೆ! ಆ ಪೈಕಿ 30 ಎಕರೆ ಜಮೀನಲ್ಲಿ ತೋಟಗಾರಿಕೆ ಮಾಡಿಕೊಂಡಿದ್ದಾರೆ. ಉಳಿದ 70 ಎಕರೆ ಪ್ರದೇಶದಲ್ಲಿ ಒಣ ಬೇಸಾಯ ಮಾಡಿಕೊಂಡಿದ್ದಾರೆ. ವರ್ಷಕ್ಕೆ ಕನಿಷ್ಠ 50 ಲಕ್ಷದಷ್ಟು ಆದಾಯ ಗಳಿಸುತ್ತಿದ್ದಾರೆ. ಅವರಿಗೆ ಪತ್ನಿ ಪ್ರಮೀಳಾ ಮತ್ತು ಮಗ ಶರಣಬಸವ ಸಾಥ್ ನೀಡುತ್ತಿದ್ದಾರೆ. ಶಿವಪುತ್ರಪ್ಪ ಅವರಿಗೆ 2006ರಲ್ಲಿ ರಾಜ್ಯ ಸರ್ಕಾರದಿಂದ ಕೃಷಿ ಪಂಡಿತ ಪ್ರಶಸ್ತಿಯೂ ಲಭಿಸಿದೆ.
ವಿಳಾಸ: ಶಿವಪುತ್ರಪ್ಪ ಎತ್ತಿನಮನಿ
ಶಿವಾನಂದ ನಗರ ಗ್ರಾಮ
ತಂಬರಹಳ್ಳಿ ರಸ್ತೆ, ತಾ. ಹಗರಿಬೊಮ್ಮನಹಳ್ಳಿ
ಜಿ. ಬಳ್ಳಾರಿ, ಮೊ. 9164115121
ದೇಸೀಯ ಬೀಜ ಸಂರಕ್ಷಕ
ಹೈಬ್ರೀಡ್ ತಳಿಗಳಿಂದಾಗಿ ದೇಸೀಯ ತಳಿಯ ಬೀಜಗಳು ಅವನತಿಯತ್ತ ಸಾಗುತ್ತಿವೆ. ದೇಸೀಯ ಬೀಜ ತಳಿ ಸಂರಕ್ಷಿಸುವ ಪ್ರಯತ್ನ ಆಗುತ್ತಿಲ್ಲ ಎಂಬುದು ಹಲವು ಪ್ರಜ್ಞಾವಂತ ರೈತರ, ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರ ಅಳಲು. ಇಲ್ಲೊಬ್ಬ ರೈತರು ಸದ್ದಿಲ್ಲದೆ ದೇಸೀಯ ಬೀಜ ಸಂರಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹೆಸರೆ ಶಂಕರ ಲಂಗಟಿ. ಓದಿದ್ದು ಬರೀ 3ನೇ ಕ್ಲಾಸು. ಆದರೂ ಕೃಷಿಯಲ್ಲಿ ಅವರ ಸಾಧನೆ ಬೆರಗು ಮೂಡಿಸುವಂಥದ್ದು. ನಿಮಗೆ ಆಶ್ಚರ್ಯ ಆಗಬಹುದು. ಅವರ ಬಳಿ ಈಗಾಗಲೇ ದೇಸೀಯ ಬತ್ತದ 70 ತಳಿಯ ಬೀಜಗಳಿವೆ. ಅಷ್ಟೇ ಅಲ್ಲ, 20 ತಳಿಯ ದೇಸೀಯ ಬತ್ತದ ಬೀಜಗಳನ್ನು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆಯುತ್ತಾರೆ. ಜತೆಗೆ ದೇಸೀ ತಳಿಯ ಕಪ್ಪು ಕಡಲೆ, ಅಲಸಂದೆ, ಉದ್ದು ಸೇರಿದಂತೆ ಹಲವು ತರಕಾರಿ ಬೀಜ ಬೆಳೆಯುತ್ತಾರೆ. ಇನ್ನು ಹೇಳಬೇಕೆಂದರೆ 40 ಜನ ಸಮಾನ ಮನಸ್ಕರರು ಸೇರಿ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ 'ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಹಾಗೂ ಸಮುದಾಯ ಆಧಾರಿತ ಬೀಜ ಬ್ಯಾಂಕ್' ಸ್ಥಾಪಿಸಿದ್ದಾರೆ. ಆ ಮೂಲಕ ದೇಸೀಯ ತಳೀಯ ಬೀಜ ಬೇಕೆಂಬುವವರಿಗೆ ಬೀಜ ನೀಡುವ ಕೈಂಕರ್ಯ ಕೈಗೊಂಡಿದ್ದಾರೆ.
ವಿಳಾಸ:ಶಂಕರ ಲಂಗಟಿ , ಸಾ. ಗುಂಡೇನಟ್ಟಿ, ಪೋ. ಬೈಲೂರು
ತಾ. ಖಾನಾಪುರ, ಜಿ. ಬೆಳಗಾವಿ, ಮೊ. 9972150378
ಮಹಿಳೆಯ ಹೈನುಗಾರಿಕೆ ಪ್ರೇಮ
ಹೈನುಗಾರಿಕೆ ಹೆಚ್ಚು ಶ್ರಮ ಬಯಸುವ ಕೆಲಸ. ನಿಯಮಿತವಾಗಿ ಜಾನುವಾರುಗಳಿಗೆ ಆಹಾರ, ನೀರು ಕೊಡಬೇಕು, ಕೊಟ್ಟಿಗೆಯ ಸ್ವಚ್ಛತೆ ಅವುಗಳ ಆರೈಕೆಗೆ ಹೆಚ್ಚು ಶ್ರಮ, ಸಮಯ ಹಿಡಿಯುತ್ತದೆ. ಇಂಥ ಶ್ರಮದಾಯಕ ಕೆಲಸದಲ್ಲಿ ಮಹಿಳೆಯೊಬ್ಬರು ಸಾಧನೆ ಮಾಡಿದ್ದಾರೆ. ಆ ಮೂಲಕ ಪ್ರತಿ ತಿಂಗಳು ಸಾಫ್ಟ್ವೇರ್ ಎಂಜಿನಿಯರ್ಗಳ ಸಂಬಳವನ್ನು ಹೈನುಗಾರಿಕೆಯಿಂದಲೇ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳ ತಾಲೂಕಿನ ಥೋಡಿಕೊಡಿಕಾನಾ ಎಂಬ ಗ್ರಾಮದ ಪ್ರೇಮಾ ವಸಂತ್ ಅವರು 20 ಹಸುಗಳನ್ನು ಸಾಕಿದ್ದಾರೆ. ಕಳೆದ 12 ವರ್ಷದಿಂದ ಹೈನುಗಾರಿಕೆಯಲ್ಲಿ ಸಕ್ರಿಯ. ಪ್ರತಿದಿನವೂ 160 ರಿಂದ 170 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಾರೆ. ತಿಂಗಳಿಗೆ ಎಲ್ಲ ಖರ್ಚು ಕಳೆದು 65 ಸಾವಿರ ಲಾಭ ಸಿಗುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅವರ ಮನೆಯಲ್ಲಿ ಎಚ್ಎಫ್, ಜೆರ್ಸಿ, ಸಾಹಿವಾಲ, ಗೀರ್ ತಳಿಯ 20 ಹಸುಗಳಿವೆ. ಪ್ರೇಮಾ ಅವರ ಸಾಧನೆ ಮೆಚ್ಚಿ 2006ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಮಹಿಳೆ, 2009- 10ನೇ ಸಾಲಿನ ಉತ್ತಮ ಹೈನುಗಾರ ಪ್ರಶಸ್ತಿ, 2007ರಲ್ಲಿ ಕೆಎಂಎಫ್ ವತಿಯಿಂದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ಮಾಡಿ ಬಂದಿದ್ದಾರೆ.
ವಿಳಾಸ: ಪ್ರೇಮಾ ವಸಂತ್, ಪೊ. ಥೋಡಿಕೋಡಿಕಾನಾ, ತಾ. ಸುಳ್ಳ, ಜಿ. ದ.ಕ., ಮೊ. 9448725806
ಝಗಮಗ ರೇಷ್ಮೆ
ರೇಷ್ಮೆ ಕೃಷಿಯಲ್ಲಿ ಸರಳ ಉಪಾಯದಿಂದ ಹೇಗೆ ಭರ್ಜರಿ ಲಾಭ ಗಳಿಸಬಹುದು ಎಂಬುದಕ್ಕೆ ಗೋಪಾಲಗೌಡರು ಮಾದರಿಯಾಗಿ ಕಾಣುತ್ತಾರೆ.
ನೂತನ ಮಾದರಿ ಬಿದರಿನ ಚಂದ್ರಂಕಿಯನ್ನು ಸ್ವತಃ ಗೋಪಾಲಗೌಡರೆ ಆವಿಷ್ಕರಿಸಿದ್ದಾರೆ. ಇದರಿಂದ ಶೇ. 40ರಷ್ಟು ಆಳುಗಳ ಮತ್ತು ಖರ್ಚಿನ ಉಳಿತಾಯ ಆಗುತ್ತದೆ. ಅಲ್ಲದೆ, ರೇಷ್ಮೆ ಹುಳುಗಳಿಗೆ ಹೂಜಿ ನೊಣಗಳ ಹಾವಳಿ ತಡೆಗೆ ರ್ಯಾಟ್ಗಮ್ ಕಂಡುಹಿಡಿದಿದ್ದಾರೆ. ಇದರಿಂದ ಹೂಜಿ ಹುಳು ಬಾಧೆ ತಡೆಗಟ್ಟಬಹುದು. ಇಂಥ ಆವಿಷ್ಕಾರವನ್ನು ಗೋಪಾಲಗೌಡ ಮಾಡಿ ಅದನ್ನು ಅಳವಡಿಸಿಕೊಂಡಿದ್ದಾರೆ. ಅವರದು ಒಟ್ಟು 15 ಎಕರೆ ಜಮೀನು. ಅದರಲ್ಲಿ 11 ಎಕರೆ ರೇಷ್ಮೆ ಕೃಷಿಗೆ ಮೀಸಲು. ಉಳಿದ 4 ಎಕರೆ ಸಮಗ್ರ ಕೃಷಿ ಮಾಡುತ್ತಾರೆ. ಪೂರ್ತಿ ಸಾವಯವ ವಿಧಾನ. ಹನಿ ನೀರಾವರಿ ಅಳವಡಿಕೆ. ಹಸಿರೆಲೆ ಗೊಬ್ಬರ ತಯಾರಿಕೆ, ಹತ್ತಾರು ನಮೂನೆಯ ಬೆಳೆಗಳು, ಹಸು, ಕುರಿ, ಎಮ್ಮೆ, ಕೋಳಿ, ಜೇನು ಸಾಕಾಣಿಕೆ ಹೀಗೆ ಹತ್ತಾರು ಬಗೆಯ ಉಪಕಸುಬು ನಿಜಕ್ಕೂ ಬೆರಗು ಮೂಡಿಸುತ್ತದೆ. ಪ್ರತಿಯೊಂದರಲ್ಲೂ ಶಿಸ್ತು ಎದ್ದು ಕಾಣುತ್ತದೆ. ಹೀಗೂ ಮಾಡಬಹುದಾ? ಎಂದು ಆಶ್ಚರ್ಯವಾಗುತ್ತದೆ. ಅವರ ಸಾಧನೆ ಮೆಚ್ಚಿ ಕೃಷಿ ಪಂಡಿತ, ರೇಷ್ಮೆ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ.
ವಿಳಾಸ: ಎಚ್.ಜಿ. ಗೋಪಾಲಗೌಡ
ಹಿತ್ತಲಹಳ್ಳಿ, ಪೋ. ಮಳಮಾಚನಹಳ್ಳಿ
ತಾ. ಶಿಡ್ಲಘಟ್ಟ, ಜಿ. ಚಿಕ್ಕಬಳ್ಳಾಪುರ
ಮೊ. 9448138397
ಎರೆಹುಳು ಗೊಬ್ಬರ
ಹಲವು ರೈತರು ತಮ್ಮ ಜಮೀನಿಗೆ ಬೇಕಾದಷ್ಟು ಎರೆಹುಳು ಗೊಬ್ಬರ ಸ್ವತಃ ತಾವೇ ಉತ್ಪಾದಿಸುವುದರ ಬಗ್ಗೆ ಕೇಳಿರಬಹುದು. ಆದರೆ, ಮಾರಾಟಕ್ಕಾಗಿಯೇ ಟನ್ಗಟ್ಟಲೇ ಎರೆಹುಳು ಗೊಬ್ಬರ ಉತ್ಪಾದನೆ ಮಾಡುವುದರ ಬಗ್ಗೆ ಕೇಳಿದ್ದೀರಾ?
ಅವರ ಹೆಸರು ಶಾಮರಾವ್ ಪಾಟೀಲ್. ಗುಲ್ಬರ್ಗ ಜಿಲ್ಲೆಯ ಗರೂರು ಅವರ ಊರು. ಶಾಲೆ ಮೆಟ್ಟಿಲು ಹತ್ತದ ಶಾಮರಾವ್ ಇಂಥದ್ದೊಂದು ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಅವರಿಗೆ ಪ್ರೇರಕ ಶಕ್ತಿಯಂತೆ ಕೆಲಸ ಮಾಡಿದರವರು ಗುಲ್ಬರ್ಗ ಕೃಷಿ ವಿವಿಯ ಕೃಷಿ ವಿಜ್ಞಾನಿ ವಿ.ಐ. ಬೆಣಗಿ. 15 ವರ್ಷದ ಹಿಂದೆ ಬೆಣಗಿಯವರು ನೀಡಿದ ಸಲಹೆ ಮೇರೆಗೆ ಶಾಮರಾವ್ ಪಾಟೀಲ್ ಎರೆಹುಳು ಗೊಬ್ಬರ ತಯಾರಿಕೆ ಪ್ರಾರಂಭಿಸಿದರು. ನಂತರದ್ದು ಇತಿಹಾಸ. ಈಗ ವರ್ಷಕ್ಕೆ ಕನಿಷ್ಠ 50 ಕೆಜಿಯ ಸಾವಿರ ಬ್ಯಾಗ್ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಾರೆ. ಅವರ ಗೊಬ್ಬರಕ್ಕೆ ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರದಲ್ಲೂ ಬೇಡಿಕೆಯುಂಟು.
ಗೊಬ್ಬರ ಉತ್ಪಾದನೆ ಹೇಗೆ?
ಮೊದಲು 10 ಅಡಿ ಉದ್ದದ 2 ಅಗಲದ ಮತ್ತು ಒಂದೂವರೆ ಅಡಿ ಆಳದ ಸಿಮೆಂಟ್ ತೊಟ್ಟಿ ಮಾಡಿ ಅದರಲ್ಲಿ ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಒಂದು ತೊಟ್ಟಿಯಿಂದ ಗೊಬ್ಬರ ತಯಾರಿಸಲು 90 ದಿನ ಬೇಕು. ಎರೆಹುಳು ಗೊಬ್ಬರ ತಯಾರಿಕೆಗಾಗಿಯೇ 40 ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ತಮ್ಮ ಮೂರುವರೆ ಎಕರೆ ಜಮೀನಲ್ಲಿ ಸಾವಯವ ವಿಧಾನದ ಮೂಲಕ ಬೇಸಾಯ ಮಾಡುತ್ತಿದ್ದಾರೆ. ಅವರಿಗೆ ಪತ್ನಿ ಲಕ್ಷ್ಮಿಬಾಯಿ ಸಾಥ್ ನೀಡುತ್ತಿದ್ದಾರೆ. ಶಾಮರಾವ್ ಅವರ ಸಾಧನೆ ಗುರುತಿಸಿ ರಾಜ್ಯ ಸರ್ಕಾರ 2008- 09ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ.
ವಿಳಾಸ: ಶಾಮರಾವ್ ಪಾಟೀಲ್, ಗರೂರು, ಪೋ. ಬಿದನೂರು, ತಾ, ಜಿ. ಗುಲ್ಬರ್ಗ
ಮೊ. 9902837727
ಕಾಂಚಾಣ ಬರತಾಳೆ
12 ವರ್ಷದ ಹಿಂದೆ ಕೃಷಿಕ ಶಿವಕುಮಾರ್ ವರ್ಷದಲ್ಲಿ ಒಂದು ಬೆಳೆಯಾಗಿ ಬತ್ತ ಬೆಳೆಯುತ್ತ ಜೀವನ ಸಾಗಿಸುತ್ತಿದ್ದರು. ಅದರಿಂದ ತೀರಾ ಲಾಭ ಆಗುತ್ತಿರಲಿಲ್ಲ. ಆಗ ತಾವೇಕೆ ತಾಳೆ ಮರ ಬೆಳೆಸಬಾರದು ಎಂದು ಯೋಚನೆ ಮಾಡಿದರು. ಅದೇ ಸಮಯಕ್ಕೆ ಪಾಮ್ ಟೆಕ್ ಇಂಡಿಯಾದವರು ತಾಳೆ ಬಗ್ಗೆ ಮಾಹಿತಿ ನೀಡಿದರು. ತಡಮಾಡಲಿಲ್ಲ. ತಮ್ಮ 6 ಎಕರೆ ಜಮೀನಲ್ಲಿ ತಾಳೆ ಗಿಡ ನೆಟ್ಟರು. ಗಿಡಗಳು ಚೆನ್ನಾಗಿ ಬೆಳೆದವು. ಗಿಡ ನೆಟ್ಟ 4 ವರ್ಷ ಅವಧಿಯಲ್ಲಿ ಅಂತರ ಬೆಳೆಯಾಗಿ ಹಲವು ಬೆಳೆಗಳನ್ನು ಬೆಳೆದರು. 4ನೇ ವರ್ಷಕ್ಕೆ ತಾಳೆ ಎಕರೆಗೆ 5 ಟನ್ ಫಸಲು ಬಂದಿತು. 5ನೇ ವರ್ಷಕ್ಕೆ 10 ಟನ್ ಇಳುವರಿ ಬಂತು. ಒಟ್ಟಾರೆ ತಾಳೆಯಿಂದ ಭರ್ಜರಿ ಲಾಭ ಗಳಿಸಿದರು. ಖರ್ಚು ಕಳೆದು ಎಕರೆಗೆ 50 ಸಾವಿರದಿಂದ 1ಲಕ್ಷದವರೆಗೆ ಲಾಭ ಗಳಿಸಬಹುದು ಅಂತಾರೆ. ಎಕರೆಗೆ 59 ಗಿಡಗಳು ಬೇಕಾಗುತ್ತವೆ. ಗಿಡಗಳನ್ನು ತೋಟಗಾರಿಕೆ ಇಲಾಖೆಯವರೆ ಉಚಿತವಾಗಿ ಪೂರೈಸುತ್ತಾರೆ. ಜತೆಗೆ ಅದಕ್ಕೆ ಬೇಕಾಗುವ ಗೊಬ್ಬರವನ್ನು ಕೊಡುತ್ತಾರೆ. ತಾಳೆ ಬೆಳೆಯಲು ನೀರು ಜಾಸ್ತಿ ಬೇಕು. ಅಂದರೆ ಪ್ರತಿದಿನ ಗಿಡಕ್ಕೆ 100ರಿಂದ 150 ಲೀಟರ್ ಕೊಡಲೇಬೇಕು. ನೀರಿನ ಕೊರತೆ ಇಲ್ಲದ ಪ್ರದೇಶದಲ್ಲಿ ತಾಳೆಯನ್ನು ಧಾರಾಳವಾಗಿ ಬೆಳೆಯಬಹುದು ಅನ್ನೋದು ಶಿವಕುಮಾರ್ ಅವರ ಅನುಭವದ ಮಾತು.
ವಿಳಾಸ: ಕೆ. ಎಸ್. ಶಿವಕುಮಾರ್, ಕಲ್ಮಳ್ಳಿ, ಪೋ. ಕುಪ್ಪರಹಳ್ಳಿ, ತಾ. ನಂಜನಗೂಡು
ಜಿ. ಮೈಸೂರು, ಮೊ. 9448354243
ದೇಸೀಯ ಜೋಳ ಸಂರಕ್ಷಕ
ಹೈಬ್ರೀಡ್ನಿಂದ ಇತ್ತೀಚೆಗೆ ದೇಸೀಯ ಜೋಳದ ತಳಿಗಳೂ ನಲುಗಿ ಹೋಗಿವೆ. ದೇಸೀಯ ತಳಿಗಳನ್ನು ಅವುಗಳನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ. ಆ ನಿಟ್ಟಿನಲ್ಲಿ ಇಲ್ಲೊಬ್ಬ ರೈತರು ದೇಸೀಯ ಜೋಳದ ತಳಿಗಳನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ದಿಲ್ಲದೆ ಇಂಥದ್ದೊಂದು ಕೆಲಸ ಮಾಡುತ್ತಿರುವ ಅವರ ಸೇವೆ ನಿಜಕ್ಕೂ ಮೆಚ್ಚುವಂಥದ್ದು. ಕಲ್ಲಪ್ಪ ಅವರೆ ಇಂಥ ಮಹಾನ್ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರು ವರ್ಷಕ್ಕೆ 23 ತಳಿಯ ಜೋಳ ಬೆಳೆಯುತ್ತಾರೆ ಅಂದರೆ ಅಚ್ಚರಿಯಾಗದೆ ಇರದು. ಯಾಕೆಂದರೆ ಹಲವು ರೈತರಿಗೆ ಇಷ್ಟೊಂದು ದೇಸೀಯ ತಳಿಗಳಿವೆ ಎಂಬುದು ಗೊತ್ತಿರಲಿಕ್ಕಿಲ್ಲ. ಲೋಕಲ್ ಬಾರ್ಸಿ, ಯಣೆಗಾರ, ಕೊಡುಮುರುಕ, ಪುಟಾಣಿ ಜೋಳ, ದೋಸಾ, ಕಡುಬಿನ ಜೋಳ, ಕೇರಮ್, ಕಾಗೆ ಮೋತಿ, ಪೋಲೇಶ್ವರ, ಗಟ್ಟಿದನಿ, ಸಕ್ರಿ- ಮುಕ್ರಿ, ಮೂಗುತಿ, ಕಣ್ಮುಚುಗ್, ಚೌರಿ, ಕಾರಜೋಳ ಮತ್ತು ಮಾಲದಂಡಿ ಜೋಳದ ತಳಿಗಳನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಅವರದು ಒಟ್ಟು 12 ಎಕರೆ ಜಮೀನು. ಅದರಲ್ಲಿ 5 ಎಕರೆ ಜೋಳ ಬೆಳೆಯುವುದಕ್ಕೆ ಮೀಸಲು. ಉಳಿದ ಹೊಲದಲ್ಲಿ ತೊಗರಿ, ಮೆಕ್ಕೆಜೋಳ, ಹತ್ತಿ, ಸೋಯಾಬೀನ್, ಅಲಸಂದೆ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ. ದೇಸೀಯ ತಳಿಯ ಜೋಳ ಬೇಕೆಂಬುವವರಿಗೆ ಮಾರಾಟವನ್ನೂ ಮಾಡುತ್ತಾರೆ.
ವಿಳಾಸ: ಕಲ್ಲಪ್ಪ ಪಂ. ನೇಗಿನಹಾಳ, ಚಿಕ್ಕಬಾಗೇವಾಡಿ, ತಾ. ಬೈಲಹೊಂಗಲ
ಜಿ. ಬೆಳಗಾವಿ, ಮೊ. 9980634062
ನೋಡಬನ್ನಿ ಬತ್ತದ ಮ್ಯೂಜಿಯಂ
ಹತ್ತರ ಜತೆ ಹನ್ನೊಂದು ಎಂಬಂತೆ ಬೇಸಾಯ ಮಾಡಬಾರದು, ತುಸು ಭಿನ್ನವಾಗಿ ಮಾಡಬೇಕು ಅನ್ನೋದು ರೈತ ಬೋರೇಗೌಡರ ಆಶಯ. ಅದಕ್ಕಾಗಿ ದೇಸೀಯ ಬತ್ತದ ಕೃಷಿಯಲ್ಲೇ ಸಾಧನೆ ಮಾಡಬೇಕು ಎಂದು ನಿರ್ಧರಿಸಿದರು. ಅವರು ಓದಿದ್ದು ಎಸ್ಸೆಸ್ಸೆಲ್ಸಿ. 1989ರಲ್ಲಿ ಕೃಷಿರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ 2 ಎಕರೆ ಜಮೀನಿನಲ್ಲಿ ದೇಸೀಯ ಬತ್ತ ಬೆಳೆಯಲು ಶುರು ಮಾಡಿದರು. ಆರಂಭದಲ್ಲಿ ಬೆಳೆದದ್ದು 4 ತಳಿ. ಈ ಅವರು ಬೆಳೆಯುತ್ತಿರುವುದು 70 ದೇಸೀಯ ತಳಿ! ಅಷ್ಟೇ ಅಲ್ಲ, ದೇಸೀಯ ಬತ್ತ ಸಂರಕ್ಷಣೆ ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಮನೆಯಲ್ಲೇ ಒಂದು ವಿಶಿಷ್ಟವಾದ ಮ್ಯೂಜಿಯಂ ಸ್ಥಾಪಿಸಿದ್ದಾರೆ. ಮ್ಯೂಜಿಯಂನಲ್ಲಿ 210 ಬತ್ತದ ತಳಿಗಳಿವೆ. ಅವರ ಮ್ಯೂಜಿಯಂ ಎಷ್ಟು ಪ್ರಸಿದ್ಧಿ ಎಂದರೆ ಈಗಾಗಲೇ ಅಲ್ಲಿಗೆ 14 ದೇಶದ ಜನರು ಭೇಟಿ ನೀಡಿ ಹೋಗಿದ್ದಾರೆ. ಮಂಡ್ಯಕ್ಕೆ ಬರುವ ಬಹಳಷ್ಟು ಪ್ರವಾಸಿಗರು ಬೋರೇಗೌಡರ ಮನೆಗೆ ಹಾಜರಿ ಹಾಕಿ ಮುಂದೆ ಸಾಗುತ್ತಾರೆ.
ವಿಳಾಸ: ಎಸ್. ಬೋರೇಗೌಡ, ನಾಟಿ ಬತ್ತ ತಳಿಯ ಸಂರಕ್ಷಕರು, ಶಿವಳ್ಳಿ
ತಾ. ಜಿ. ಮಂಡ್ಯ, ಮೊ. 9986381167
ಸದಾನಂದಮಯ
ತುಂಡು ಜಮೀನುಗಳೇ ಇತ್ತೀಚೆಗೆ ಜಾಸ್ತಿ ಆಗುತ್ತಿವೆ. ಚಿಕ್ಕ- ಚಿಕ್ಕ ಹಿಡುವಳಿಗಳಲ್ಲಿ ಬೆಳೆ ಬೆಳೆದು ಹೇಗೆ ಲಾಭ ಗಳಿಸುವುದು ಅನ್ನುವುದು ಹಲವು ರೈತರ ಪ್ರಶ್ನೆ. ಅದಕ್ಕೆ ಸಮಗ್ರ ಕೃಷಿ ಪದ್ಧತಿಯೇ ಪರಿಹಾರ ಅಂತಾರೆ ಸದಾನಂದ್ ಅವರು. ಸದಾನಂದ್ ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ 15 ವರ್ಷ ಕೆಲಸ ಮಾಡಿದರು. ಇನ್ನೊಬ್ಬರ ಕೈಯಲ್ಲಿ ಎಷ್ಟು ದಿನ ದುಡಿಯೋದು ಎಂದು ಸ್ವಾವಲಂಬಿಯಾಗುವ ನಿರ್ಧಾರ ಮಾಡಿದರು. ಆ ದಿನವೇ ಕೆಲಸಕ್ಕೆ ರಾಜಿನಾಮೆ ಕೊಟ್ಟು ಕೃಷಿಯಲ್ಲಿ ತೊಡಗಿಸಿಕೊಂಡರು. ಅವರಿಗೆ ಇದ್ದದ್ದೆ ಎರಡು ಕಾಲು ಎಕರೆ ಜಮೀನು. ಅದರಲ್ಲಿ ಕೃಷಿ ಚಟುವಟಿಕೆ ಆರಂಭಿಸಿದರು. ಮೊದಲು ಅಷ್ಟೇನು ಲಾಭವಾಗಲಿಲ್ಲ. ಯಾವಾಗ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೋ ಅಂದಿನಿಂದ ಹಿಂತಿರುಗಿ ನೋಡಲೇ ಇಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರು. ಚಿಕ್ಕ ಹಿಡುವಳಿಯಲ್ಲೆ ಗುಲಾಬಿ, ಅಡಕೆ, ತೆಂಗು, ಹಲಸು, ಸಪೋಟಾ, ಮಾವು, ನಿಂಬೆ, ಚಕೋತಾ, ಪಪ್ಪಾಯಿ ತರಕಾರಿ ಸೇರಿದಂತೆ ಹಲವು ಬೆಳೆ ಬೆಳೆಯುತ್ತಾರೆ. ಅಲ್ಲದೆ, ಮೀನು, ಹಸು, ಕೋಳಿ, ಕುರಿಗಳನ್ನು ಸಾಕಿದ್ದಾರೆ. ಅವರೆ ಹೇಳುವಂತೆ ಜಮೀನಿನಲ್ಲಿ ಒಂದು ಅಡಿಯಷ್ಟು ಖಾಲಿ ಬಿಡಲ್ಲ. ಆ ಪುಟ್ಟ ಜಾಗದಲ್ಲೇ ಒಂದು ಸಸಿ ನೆಟ್ಟು ಫಲ ಪಡೆಯಬಹುದು ಎಂಬ ಲೆಕ್ಕಾಚಾರ ಅವರದು. ಹೀಗಾಗಿಯೇ ಅವರು ವರ್ಷಕ್ಕೆ ಕನಿಷ್ಠ 8 ಲಕ್ಷ ಆದಾಯ ಪಡೆಯುತ್ತಾರೆ. ಅವರಿಗೆ ಈಗಾಗಲೇ 4 ರಾಷ್ಟ್ರೀಯ ಪುರಸ್ಕಾರಗಳು ಸಂದಿವೆ. ಜತೆಗೆ ಬೆಂಗಳೂರಿನ ಜಿಕೆವಿಕೆಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ವಿಳಾಸ:ಎಚ್. ಸದಾನಂದ್ , ತಪಸ್ಸಿಹಳ್ಳಿ, ಪೋ. ಅಂತರಹಳ್ಳಿ ತೂಬಗೆರೆ ಹೋಬಳಿ,
ತಾ. ದೊಡ್ಡಬಳ್ಳಾಪುರ, ಜಿ. ಬೆಂಗಳೂರು ಗ್ರಾಮಾಂತರ, ಮೊ. 9241602789
ಮಾರುಕಟ್ಟೆ ಚಿಂತೆ ಇಲ್ಲ
36್ಢ36 ಅಡಿ ಜಾಗದಲ್ಲಿ 90 ಬೆಳೆದು ದಾಖಲೆ ನಿರ್ಮಿಸಿದ ರೈತ ಬಿ. ಎಂ. ಶಿವಯೋಗಿ. ಅವರು ಕೇವಲ ತೋಟಗಾರಿಕೆ ಬೆಳೆ ಅಲ್ಲದೆ ಆಹಾರ ಮತ್ತು ಅರಣ್ಯಾಧಾರಿತ ಕೃಷಿಯನ್ನು ಮಾಡುತ್ತಾರೆ. ಅವರು ಓದಿದ್ದು ಎಂಎ(ರಾಜ್ಯಶಾಸ್ತ್ರ). ಆಯ್ದುಕೊಂಡಿದ್ದು ಕೃಷಿ ಕ್ಷೇತ್ರ. ಅವರ 20 ಎಕರೆ ಜಮೀನಿನಲ್ಲಿ ತೆಂಗು, ಸಪೋಟಾ, ಮೂಸಂಬಿ, ಮಾವು, ಗಮ್ಲೆಸ್ ಹಲಸು, ನೆಲ್ಲಿಕಾಯಿ, ಸೀತಾಫಲ, ಪೇರಲ, ಅಂಜೂರ, ಬೀಜರಹಿತ ನೇರಳೆ, ಬೇಲದ ಹಣ್ಣು, ಗೋಧಿ, ಕಡಲೆ, ಶೇಂಗಾ, ಜೋಳ, ರಾಗಿ, ನವಣೆ, ಅಲಸಂದೆ, ಹೆಸರು, ತರಕಾರಿ ಮತ್ತು ಅರಣ್ಯಾಧಾರಿತ ಬೆಳೆಗಳ ಪೈಕಿ ಬೇವು, ಹೆಬ್ಬೇವು, ತೇಗ, ಬಿದಿರು, ಸಿಲ್ವರ್ಗಳನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಶಿವಯೋಗಿ ಅವರ ಕೃಷಿಯ ಮತ್ತೊಂದು ವಿಶೇಷವೆಂದರೆ ತಮ್ಮ ಫಸಲಿಗೆ ಮಾರುಕಟ್ಟೆಯನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ. ಬಹುತೇಕ ಅವರ ಫಸಲನ್ನು ತಮ್ಮ ಜಮೀನಿಗೆ ಬಂದು ಕೊಂಡುಕೊಂಡು ಹೋಗುತ್ತಾರೆ ಎನ್ನುತ್ತಾರೆ.
ವಿಳಾಸ: ಬಿ.ಎಂ. ಶಿವಯೋಗಿ, ಇ. ಬೇವಿನಹಳ್ಳಿ, ಪೋ. ಇಟ್ಟಿಗುಡಿ, ತಾ. ಹರಪನಹಳ್ಳಿ
ಜಿ. ದಾವಣಗೆರೆ, ಮೊ. 9008279337
ಕೃಷಿ ಕುಟುಂಬ
ಕೃಷಿಯಿಂದ ಲಾಭವಿಲ್ಲ ಎಂದು ಅದರಿಂದ ವಿಮುಖವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅದರಲ್ಲಿ ಲಾಭವಿದೆ, ನೆಮ್ಮದಿ ಇದೆ ಎಂದು ಬಸವರಾಜರ ಕುಟುಂಬ ಉತ್ತರ ಹೇಳುವಂತಿದೆ. 1987ರಲ್ಲಿ ಬಸವರಾಜ್ ಬಿಎ ಪದವಿ ಮುಗಿಸಿ ಕೆಲಸಕ್ಕೆಂದು ಬೆಂಗಳೂರಿಗೆ ಹೋದರು. 20 ದಿನ ಅಲೆದಾಡಿದರೂ ಕೆಲಸ ಸಿಗಲಿಲ್ಲ. ಯಾಕೋ ಏನೋ ಬೆಂಗಳೂರು ಬೇಡ ಅನಿಸಿತು. ಸೀದಾ ಊರಿಗೆ ವಾಪಸ್ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಜತೆಗೆ ಅವರ ಪತ್ನಿ ಶಕುಂತಲಾ ಅವರಿಗೆ ನೆರವಾದರು. 8 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯಿಂದ ಬೇಸಾಯ ಮಾಡುತ್ತಿದ್ದಾರೆ. ಅವರ ಜಮೀನಿನಲ್ಲಿ 300 ತೆಂಗು, 500 ಅಡಕೆ ಮರ, ಹಲಸು, ಸೀಬೆ, ಸಪೋಟ, ತೇಗ, ಸಪೋಟಾ, ತೇಗ, ಸಿಲ್ವರ್, ಹೆಬ್ಬೇವು ಗಿಡ ನೆಟ್ಟಿದ್ದಾರೆ. ಜತೆಗೆ ಬತ್ತವನ್ನು ಬೆಳೆಯುತ್ತಾರೆ. ನಾಟಿ ಎಮ್ಮೆ, ಮೇಕೆ, ಹಸು ಸಾಕಿದ್ದಾರೆ. ಬಸವರಾಜ ಅವರ ತಂದೆ, ತಾಯಿ ಕೂಡ ಕೃಷಿಯಲ್ಲಿ ಸಕ್ರಿಯ. ಅಲ್ಲದೆ, ಬಸವರಾಜ ಅವರ ಇಬ್ಬರು ಮಕ್ಕಳು ಕಾಲೇಜಿನಿಂದ ಮನೆಗೆ ಬಂದಾಗ ಜಮೀನಿನಲ್ಲಿ ಅವರ ತಂದೆಗೆ ಸಹಾಯ ಮಾಡುತ್ತಾರೆ.
ವಿಳಾಸ: ಡಿ,ಜೆ. ಬಸವರಾಜು, ದೇವಿಹಳ್ಳಿ, ತಾ. ತುರುವೇಕೆರೆ, ಜಿ. ತುಮಕೂರು, ಮೊ. 9141682049
ಬೇಸಾಯದಲ್ಲೇ ಖುಷಿ
ಕೃಷಿಯಲ್ಲಿ ಕೂಲಿ ಕಾರ್ಮಿಕರದ್ದೇ ಬಹುದೊಡ್ಡ ಸಮಸ್ಯೆ. ಹಾಗಂತ ಸುಮ್ಮನೆ ಕುಳಿತರೆ ಸಮಸ್ಯೆ ಪರಿಹಾರ ಆಗಲ್ಲ. ಅದಕ್ಕೆ ಕೃಷಿಕ ರಾಮಕಿಶೋರ್ ಪರಿಹಾರ ಕಂಡುಕೊಂಡಿದ್ದು ಯಂತ್ರ ಬಳಕೆಯಿಂದ. ರಾಮಕಿಶೋರ್ ಅವರದ್ದು 10 ಎಕರೆ ಅಡಕೆ ತೋಟವಿದೆ. ಜತೆಗೆ ಬಾಳೆ, ತೆಂಗು, ಕೊಕ್ಕೊ, ಕಾಳುಮೆಣಸು, ಗೇರು ಬೀಜ, ಹಲಸಿನ ಮರ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ. 10 ಹಸುಗಳಿವೆ. ಪ್ರತಿದಿನ 75 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಾರೆ. ಆದರೆ, ಅವರು ಜಮೀನಿನ ಬಹುತೇಕ ಎಲ್ಲ ಕೆಲಸಗಳಿಗೂ ಯಂತ್ರ ಬಳಸುತ್ತಾರೆ. ಹೀಗಾಗಿ ಕೂಲಿಯಾಳುಗಳ ಮೇಲೆ ಅವಲಂಬನೆ ಆಗಿಲ್ಲ. ಅವರ ಬಳಿ ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ಸ್ಲರಿ ಪಂಪ್, ಮೋಟೋ ಕಾರ್ಟ್ ವಾಹನ, ಅಡಕೆ ಸುಲಿಯುವ ಯಂತ್ರ ಹೀಗೆ ಹತ್ತಾರು ಯಂತ್ರಗಳ ಮೂಲಕ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಬಿಎಸ್ಸಿ(ಅಗ್ರಿ) ಓದಿರುವ ರಾಮಕಿಶೋರ್(48) ಅವರು ಯೋಜನಾಬದ್ಧವಾಗಿ ಬೇಸಾಯ ಮಾಡಿದರೆ ಕೃಷಿಯಲ್ಲಿ ಹಾನಿ ಎಂಬುದೇ ಇಲ್ಲ ಅಂತಾರೆ.
ವಿಳಾಸ: ರಾಮಕಿಶೋರ, ಪೋ. ಮಂಚಿ ಗ್ರಾಮ, ತಾ. ಬಂಟ್ವಾಳ
ಜಿ. ದ.ಕ., ಮೊ. 9448156543
ರಸಮೇವು ತಯಾರಿಕೆಗೆ ಸಿದ್ದಪ್ಪ
ರಸಮೇವಿನಿಂದ ಸಾಕಷ್ಟು ಉಪಯೋಗಗಳು ಉಂಟು. ಜಾನುವಾರುಗಳಿಗೆ ಬೇಕಾದ ಅಗತ್ಯ ಪೋಷಕಾಂಶ ಒದಗಿಸಲು ಸಹಕಾರಿ. ಅಲ್ಲದೆ, ರಸಮೇವು ನೀಡುವುದರಿಂದ ಅವು ನೀಡುವ ಹಾಲಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ರಸಮೇವನ್ನು ವೈಜ್ಞಾನಿಕವಾಗಿ ಮಾಡಿ ಇಲ್ಲೊಬ್ಬ ರೈತರು ಗಮನ ಸೆಳೆದಿದ್ದಾರೆ.
ಅವರೇ ಸಿದ್ದಪ್ಪ. ಅವರು ವರ್ಷಕ್ಕೆ 60 ಟನ್ ರಸಮೇವನ್ನು ಉತ್ಪಾದನೆ ಮಾಡುತ್ತಾರೆ. ಅದು ವೈಜ್ಞಾನಿಕ ವಿಧಾನದ ಮೂಲಕ. ರಸಮೇವು ತಯಾರಿಸುವ ಬಗೆ: 25್ಢ25 ಅಡಿ ಜಾಗದಲ್ಲಿ 10 ಅಡಿ ಆಳದ ಒಂದು ತೊಟ್ಟಿ ನಿರ್ಮಿಸಿದ್ದಾರೆ. ಅದರಲ್ಲಿ ಹಸಿ ಮೇವನ್ನು ಅರ್ಧ ಇಂಚಿನಷ್ಟು ಚಿಕ್ಕದಾಗಿ ಕತ್ತರಿಸಿ ಹಾಕುತ್ತಾರೆ. ಅದಕ್ಕೆ 10 ಲೀಟರ್ ಬೆಲ್ಲದ ನೀರನ್ನು ಹಾಕುತ್ತಾರೆ. ನಂತರ ಗಾಳಿಯಾಡದಂತೆ ಬಂದ್ ಮಾಡುತ್ತಾರೆ. ಹೀಗೆ ಅದನ್ನು 45 ದಿನ ಬಿಡಬೇಕು. ಆಗ ಅದರಿಂದ ಲ್ಯಾಕ್ಟಿಕ್ ಆಮ್ಲ ಬಿಡುಗಡೆ ಆಗುತ್ತದೆ. ಅದು ಬಂಗಾರದ ಬಣ್ಣಕ್ಕೆ ತಿರುಗುತ್ತದೆ.
ಇದನ್ನೇ ತಮ್ಮ 40 ಜಾನುವಾರುಗಳಿಗೆ ಆಹಾರವಾಗಿ ಕೊಡುತ್ತಾರೆ. ರಸಮೇವು ಕೊಡುವುದರಿಂದ ಹಸುಗಳ ನೀಡುವ ಹಾಲಿನ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ ಎನ್ನುತ್ತಾರೆ.
ವಿಳಾಸ: ಸಿದ್ದಪ್ಪ ಬಾಲಗೊಂಡ, ಪೋ. ಕೋಲ್ಹಾರ
ತಾ. ಬಸವನ ಬಾಗೇವಾಡಿ, ಜಿ. ಬಿಜಾಪುರ, ಮೊ. 9448789651
ಸೋನ್ಸ್ ಫಾರ್ಮ್ ಸಿರಿ
ಬರೀ ನಮಗೆ ಗೊತ್ತಿರುವ ಹಣ್ಣಿನ ಬೆಳೆಗಳ ಜತೆಗೆ ಹಲವು ವಿದೇಶಿ ವೈವಿಧ್ಯಮಯ ಹಣ್ಣಿನ ಗಿಡ- ಮರಗಳನ್ನು ಬೆಳೆಸಿದ್ದಾರೆ ಡಾ. ಎಲ್.ಸಿ. ಸೋನ್ಸ್ ಅವರು. ಅವರ 60 ಎಕರೆ ಜಮೀನಿನಲ್ಲಿ ಅನಾನಸ್, ತೆಂಗು, ಮಾವು ಅಲ್ಲದೆ, ರಾಂಬುಟಾನ್, ಮ್ಯಾಂಗೋಸ್ಟಿನ್, ಲಾಂಗ್ಸಾಟ್, ಡೂರಿಯಾನ್, ಪುಲಾಸಾನ್, ಜಪೋಟಿಕಾಬಾ, ಅಬಿವ್ ಸೇರಿದಂತೆ ಹಲವು ಬಗೆಯ ವಿದೇಶಿ ಹಣ್ಣುಗಳು ಅವರ ತೋಟದಲ್ಲಿ ಕಂಗೊಳಿಸುತ್ತಿವೆ. 20 ಎಕರೆ ಜಮೀನಿನನ್ನು ಅನಾನಸ್ಗಾಗಿ ಮೀಸಲಿಟ್ಟಿದ್ದಾರೆ. ಹೊಸ- ಹೊಸ ಹಣ್ಣಿನ ಬೆಳೆಗಳನ್ನು ಬೆಳೆಯಬೇಕು ಅನ್ನುವ ಕಾರಣಕ್ಕಾಗಿ ಈ ರೀತಿ ಬಗೆ ಬಗೆಯ ಬೆಳೆಯುತ್ತಾರೆ.
ವಿಳಾಸ: ಸೋನ್ಸ್ ಫಾರ್ಮ, ಪೋ. ಬೆಳವಾಯಿ, ತಾ. ಮಂಗಳೂರು
ಮೊ. 9902331561 ಟಿ
- ಮಹೇಶ್ ಅರಳಿ
mahesharali85@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


