ಬುದ್ಧ ಅತ್ತ!

'ಬಿಗ್ಬಾಸ್'ನಲ್ಲಿ ಪಾಲ್ಗೊಂಡ ಕೆಲವರು ಕೇವಲ 98 ದಿನ ಕುಟುಂಬದಿಂದ ದೂರ ಉಳಿದಿದ್ದಕ್ಕೆ ಕಣ್ಣೀರು ಸುರಿಸಿದ್ದರು. ಆದರೆ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿರುವ ಗೊಂಪಾಮಠದ ಬೌದ್ಧ ಭಿಕ್ಷುಗಳು ಮೂರುವರೆ ವರ್ಷ ಜನಸಂಪರ್ಕವಿಲ್ಲದ ಬೆಟ್ಟದ ಗುಹೆಗಳಲ್ಲಿ ಅಜ್ಞಾತವಾಸದಲ್ಲಿದ್ದರು. ಅಲ್ಲವರು ಯಾವ ಅಡೆತಡೆಗಳಿಲ್ಲದೆ ಧ್ಯಾನ ಮಾಡುತ್ತಾರೆ. ಅಜ್ಞಾತವಾಸಕ್ಕೆ ತೆರಳುವ ಮೊದಲು ಸಾರ್ವಜನಿಕ ಸ್ಥಳದಲ್ಲಿರುವ ಸಾಮದೇನ್ ರೆಸ್ಟೋರೆಂಟ್ನಲ್ಲಿ ಅಂತಿಮ ಭೋಜನ ಕೈಗೊಳ್ಳುತ್ತಾರೆ. ಈ ರೆಸ್ಟೋರೆಂಟ್ ಇರುವ ಸ್ಥಳವೇ ಮಿರಿಕ್.
ಮಿರಿಕ್ ಹೆಚ್ಚು ಪ್ರಸಿದ್ಧಿ ಪಡೆಯದ ಪುಟ್ಟ ಗಿರಿಧಾಮ. ಬ್ರಿಟಿಷರ ಕಾಲದಲ್ಲಿ ಈ ಪ್ರದೇಶದಲ್ಲೆಲ್ಲ ಬರೀ ಟೀ ಎಸ್ಟೇಟುಗಳೇ ತುಂಬಿದ್ದವು. ಹೀಗಾಗಿ ಆಗ ಇದೊಂದು ಪ್ರೇಕ್ಷಣೀಯ ಸ್ಥಳವಾಗಿರಲಿಲ್ಲ. ಅಲ್ಲಿ ಮಿರಿಕ್ ಮತ್ತು ಸುಮೆಂದು ಎಂಬ ಎರಡು ಸರೋವರಗಳಿವೆ. ಅದರ ಸುತ್ತಲಿನ ಪ್ರದೇಶವೆಲ್ಲ ಜೌಗು. 1969ರಲ್ಲಿ ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಇಲಾಖೆ ಪಕ್ಕದಲ್ಲಿನ ಟೀ ಎಸ್ಟೇಟಿನಿಂದ 335 ಎಕರೆ ಭೂಮಿಯನ್ನು ವಶಪಡಿಸಿಕೊಂಡು ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿತು.
ಮಿರಿಕ್ ಧಾಮ ಸಮುದ್ರಮಟ್ಟದಿಂದ 1495 ಮೀಟರ್ ಎತ್ತರದಲ್ಲಿದೆ. ಸಿಲಿಗುಡಿಯಿಂದ 52 ಕಿ.ಮೀ. ದೂರದಲ್ಲೂ, ಡಾರ್ಜಿಲಿಂಗನಿಂದ 49 ಕಿ.ಮೀ. ದೂರದಲ್ಲೂ ಇದೆ. ಸಮೀಪದ ವಿಮಾನ ನಿಲ್ದಾಣ ಬಾಗಡೋರಗಾ. 55 ಕಿ.ಮೀ. ದೂರದಲ್ಲಿದೆ. ನ್ಯೂಜಲಪೈಗುಡಿ ಸಮೀಪದ ರೈಲು ನಿಲ್ದಾಣ. ಚಳಿಗಾಲವನ್ನು ಹೊರತುಪಡಿಸಿ ವರ್ಷದ ಇತರ ದಿನಗಳಲ್ಲಿ ಇಲ್ಲಿನ ಹವಾಮಾನ ಹಿತಕರವಾಗಿರುತ್ತದೆ. ಗರಿಷ್ಠ ಉಷ್ಣತೆ 30 ಡಿಗ್ರಿ ಸೆಲ್ಷಿಯಸ್. ಕನಿಷ್ಠ ಉಷ್ಣತೆ 1 ಡಿಗ್ರಿ ಸೆಲ್ಷಿಯಸ್. ಸಿಲಿಗುಡಿ ಹಾಗು ಡಾರ್ಜಿಲಿಂಗ್ನಿಂದ ಇಲ್ಲಿಗೆ ನಿರಂತರ ಬಸ್ ಸಂಚಾರವಿದೆ. ಸಿಲಿಗುಡಿಯಿಂದ ಮಿರಿಕ್ಗೆ ಹೋಗುವ ಮಾರ್ಗದಲ್ಲಿ ಮೊದಲು ಎದುರಾಗುವುದು ಗಗನಚುಂಬಿ ದೇವದಾರು ಮರಗಳ ಸಾಲು. ನಂತರ ಸುಮೇಂದು ಸರೋವರ. ಅದರ ಮುಂದಿನ ಬೆಟ್ಟದ ಇಳಿಜಾರಿನಲ್ಲಿ ಹೋಟೆಲ್, ಅಂಗಡಿ, ಮನೆಗಳ ಸಾಲು.
ಬೆಟ್ಟದ ಕಣಿವೆಯಲ್ಲಿರುವ ಈ ಪುಟ್ಟ ಪಟ್ಟಣವೇ ಮಿರಿಕ್. ಸುತ್ತಮುತ್ತಲಿನ ಹಳ್ಳಿಯವರು, ಟೀ ಎಸ್ಟೇಟು ವಾಸಿಗಳು ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಈ ಪೇಟೆಗೆ ಬರಬೇಕು. ಮಿರಿಕ್ನ ಆಕಾಶದಲ್ಲಿ ಯಾವಾಗಲೂ ಕಪ್ಪು ಮೋಡಗಳು ತುಂಬಿರುತ್ತವೆ. ಕೆಲವೊಮ್ಮೆ ಮಳೆ ಸುರಿಸದೇ ಮುಂದೆ ಸಾಗುತ್ತವೆ. ಮಿರಿಕ್ನಲ್ಲಿ ಬೌದ್ಧಧರ್ಮೀಯರು ಹೆಚ್ಚಾಗಿದ್ದಾರೆ. ಬೌದ್ಧ ಮಠಗಳೂ ಇವೆ. ಗೊಂಪಾ ಇಲ್ಲಿನ ಪ್ರಮುಖ ಬೌದ್ಧ ಮಠ. ಇಲ್ಲೊಂದು ಹಿಂದು ದೇಗುಲವಿದೆ. ಅದನ್ನು ತಲುಪಬೇಕಾದರೆ ಸುಮೇಂದು ಸರೋವರದ ಪಕ್ಕದಲ್ಲಿರುವ ಕಾಡಿನ ಮೂಲಕ ಸಾಗಬೇಕು. ಕೆಲವು ವರ್ಷಗಳ ಹಿಂದೆ ಈ ಕಾಡಿನಲ್ಲಿ ಹುಲಿಗಳಿದ್ದವಂತೆ. ಹುಲಿಗಳಿಂದ ರಕ್ಷಿಸಿಕೊಳ್ಳಲು ಸ್ಥಳೀಯರು ಇಲ್ಲಿ ದುರ್ಗಾದೇವಿಯ ಗುಡಿ ಕಟ್ಟಿದರು. ಮಿರಿಕ್ನಲ್ಲಿ ಸೂರ್ಯೋದಯವಾದಾಗ ಅದರ ಬೆಳಕಿನಿಂದ ಕಾಂಚನಜುಂಗ ಬೆಳ್ಳಿಬೆಟ್ಟದಂತೆ ಶೋಭಿಸುತ್ತದೆ.
ಸುಮೇಂದು ಸರೋವರದ ಮೇಲಿನ 80 ಅಡಿ ಉದ್ದದ ಸೇತುವೆ ಕಣ್ಣಿಗೆ ಹಬ್ಬ. ಇಲ್ಲಿ ಪೆಡಲ್ ಮಾಡಬಲ್ಲ ಚಿಕ್ಕಚಿಕ್ಕ ಬೋಟ್ಗಳು ಬಾಡಿಗೆಗೆ ಸಿಗುತ್ತವೆ. ಈ ಸರೋವರದ ಸುತ್ತಲೂ ವಿಶಾಲ ಚಹಾ ತೋಟಗಳು. ಇನ್ನೊಂದೆಡೆ ಕಿತ್ತಳೆಬನಗಳು. ಅಲ್ಲಲ್ಲಿ ಮರದ ಹಲಗೆಗಳಿಂದ ನಿರ್ಮಿಸಿದ ಪುಟ್ಟಪುಟ್ಟ ಮನೆಗಳು. ಪ್ರತಿ ಮನೆಯ ಅಂಗಳದಲ್ಲಿ ಒಂದು ಪುಟ್ಟ ಕೈದೋಟ. ಕಡುಗೆಂಪು ಬಟ್ಟೆ ಧರಿಸಿ ಸಾಗುವ ಲಾಮಾಗಳು ಇಲ್ಲಿ ಅಲೌಕಿಕ ಸೌಂದರ್ಯ ನೀಡಿದ್ದಾರೆ.
ಇಲ್ಲಿಗೆ ವಿದೇಶಿ ಪ್ರವಾಸಿಗರೂ ಹೆಚ್ಚು ದೌಡಾಯಿಸುತ್ತಾರೆ. ಹೆಚ್ಚಿನವರು ಇಟಲಿ, ಜರ್ಮನಿಯಿಂದ ಬಂದವರು. ಬೌದ್ಧ ಧರ್ಮದ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಅವರಿಗೆ. ಇಲ್ಲಿನ ಪ್ರಶಾಂತತೆ ಅವರಿಗೆ ಇಷ್ಟ.
ಮಿರಿಕ್ ಪ್ರವಾಸದ ನಿಜವಾದ ಆನಂದ ಪಡೆಯಬೇಕಾದರೆ ಹೋಂ ಸ್ಟೇ ಕಾಟೇಜುಗಳಲ್ಲಿ ವಾಸಿಸುವುದೇ ಹೆಚ್ಚು ಸೂಕ್ತ. ಮರದಿಂದ ನಿರ್ಮಿಸಿದ ರೂಮಿನ ಪುಟ್ಟ ಕಿಟಕಿಯಿಂದ ಹೊರಗೆ ಇಣುಕಿದಾಗ ಹೂಗಳಿಂದ ತುಂಬಿದ ಪುಟ್ಟ ಕೈದೋಟ ಕಣ್ಣಿಗೆ ಬೀಳುತ್ತದೆ. ಮುಂಜಾನೆ ಕಾಟೇಜಿನ ಯಜಮಾನ ಹಾಗೂ ಆತನ ಪರಿವಾರದೊಂದಿಗೆ ಚಹಾ ಸೇವಿಸುವ ಸೌಭಾಗ್ಯವೂ ನಿಮ್ಮದಾಗಬಹುದು.
ಮಿರಿಕ್ಗೆ ಹೋಗಿ ಇಲ್ಲಿರುವ ಗೊಂಪಾ ಬೌದ್ಧ ಮಠವನ್ನು ನೋಡದಿದ್ದರೆ ಆ ಪ್ರವಾಸ ಪೂರ್ಣಗೊಳ್ಳದು. ಮಠದ ಆವರಣ ಬಹಳ ವಿಶಾಲ. ಬುದ್ಧನ 1200 ವಿಗ್ರಹಗಳಿವೆ. ಮಠದ ಗೋಡೆ, ಚಾವಣಿಗಳಲ್ಲಿ ಸುಂದರ ವರ್ಣಚಿತ್ರಗಳಿವೆ. ಮೂರುವರೆ ವರ್ಷ ಅಜ್ಞಾತವಾಸಕ್ಕೆ ತೆರಳುವ ಭಿಕ್ಷುಗಳು ಈ ಮಠಕ್ಕೆ ಸಂಬಂಧಿಸಿದವರೇ ಆಗಿರುತ್ತಾರೆ. ಆ ದೃಶ್ಯ ತುಂಬಾ ಮಾರ್ಮಿಕವಾಗಿರುತ್ತದೆ. ಅಜ್ಞಾತವಾಸಕ್ಕೆ ತೆರಳಲು ಬೌದ್ಧಭಿಕ್ಷುಗಳು ಸಿದ್ಧರಾದಾಗ ಅವರನ್ನು ಬೀಳ್ಕೊಡಲು ಅವರ ಕುಂಟುಂಬದವರೆಲ್ಲ ಸೇರುತ್ತಾರೆ. ಅಲ್ಲಿ ಕಣ್ಣೀರ ಹೊಳೆಯೇ ಹರಿಯುತ್ತದೆ. ಮುಖ್ಯ ಭಿಕ್ಷು ಸಾಗಿದಂತೆ ಉಳಿದ ಭಿಕ್ಷುಗಳು ಅವರನ್ನು ಹಿಂಬಾಲಿಸುತ್ತಾರೆ.
ಮೆರವಣಿಗೆ ಮುಂದೆ ಮುಂದೆ ಸಾಗಿದಂತೆ ಅವರು ಬೆಟ್ಟಗಳಲ್ಲಿ ಕಣ್ಮರೆಯಾಗಿ, ಅವರು ಧರಿಸಿದ ಗಂಟೆಗಳ ಸದ್ದು ಮಾತ್ರ ಕೇಳಿಸುತ್ತದೆ. ಮಠದ ಇಡೀ ವಾತಾವರಣ ಅಲ್ಲಿ ಉರಿಸಿದ ಅಗರಬತ್ತಿಯಿಂದ ಸುಗಂಧಮಯವಾಗಿರುತ್ತದೆ. ಈ ರೀತಿ ಹೊರಟ ಬೌದ್ಧಭಿಕ್ಷುಗಳ ಮೆರವಣಿಗೆ ಅಂತಿಮ ಭೋಜನಕ್ಕಾಗಿ ಸಾಮದೇನ್ ರೆಸ್ಟೋರೆಂಟಿಗೆ ಬರುತ್ತದೆ. ಮುಖ್ಯ ಲಾಮಾ ಅಲ್ಲಿ ಜೋಡಿಸಿಟ್ಟ ಮೇಜುಗಳ ಮಧ್ಯದಲ್ಲಿ ಕೂರುತ್ತಾನೆ. ಆತನ ಅಕ್ಕಪಕ್ಕದಲ್ಲಿ ಅಜ್ಞಾತವಾಸಕ್ಕೆ ಹೊರಡಲಿರುವ ಯುವ ಲಾಮಾಗಳು ಕೂರುತ್ತಾರೆ. 20 ಲಾಮಾಗಳು ಮಂತ್ರೋಚ್ಚಾರ ಮಾಡುತ್ತಾರೆ. ನಂತರ ಊಟ. ನೂಡಲ್ಸ್, ಫ್ರೈಡ್ರೈಸ್, ಮೊಮೊ ಮುಂತಾದ ಭಕ್ಷ್ಯಗಳನ್ನು ಸೇವಿಸುತ್ತ ಈ ಯುವ ಲಾಮಾಗಳು, ಅತ್ಯಾಧುನಿಕ ಮೊಬೈಲುಗಳ ಮೂಲಕ ಆಪ್ತರೊಂದಿಗೆ ಮಾತಾಡುತ್ತಾರೆ. ಊಟ ಮುಗಿದ ಕೂಡಲೇ ಅಲ್ಲಿಗೆ ಬಂದ ಮಹಿಳೆ ಅವರ ಮೊಬೈಲ್ಗಳನ್ನು ಕಿತ್ತುಕೊಂಡು 'ಇನ್ನು ಮುಂದೆ ನಿಮಗಿದರ ಅವಶ್ಯಕತೆಯಿಲ್ಲ. ಇವು ಪುನಃ ನಿಮ್ಮ ಕೈಗೆ ಸಿಗುವದು ಮೂರುವರೆ ವರ್ಷಗಳ ನಂತರ' ಎನ್ನುತ್ತಾಳೆ. ಅಲ್ಲಿಂದ ಅವರೆಲ್ಲ ಅಜ್ಞಾತವಾಸಕ್ಕೆ ತೆರಳುತ್ತಾರೆ. ಈ ದೃಶ್ಯ ಸಿದ್ಧಾರ್ಥ ಹೆಂಡತಿ ಮಗನನ್ನು ತೊರೆದು ಕಾಡಿಗೆ ಹೋದ ಘಟನೆಯನ್ನು ನೆನಪಿಸುತ್ತದೆ. ಹೆಚ್ಚು ಜನಜಂಗುಳಿಯಿಲ್ಲದ ಪ್ರವಾಸಿ ತಾಣವನ್ನು ಬಯಸುವವರಿಗೆ ಮಿರಿಕ್ ಅತ್ಯುತ್ತಮ ಆಯ್ಕೆ.
= ಮುರಳೀಧರ ಕುಲಕರ್ಣಿ
murli46@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


