ಭವಾನಿ ಪೋಡಿಸ್ಟಾಲ್

ತಿಲಕ ಅಷ್ಟೊಂದು ವೇಗವಾಗಿ ಪುಟಿಯುತ್ತಾ ನಲ್ಲೂರು- ಸಂತೆಕಟ್ಟೆ ರಸ್ತೆ ಹಿಡಿವ ಹೊತ್ತಿಗೆ ಮಳೆ ಉಚ್ಚೆಹೊಯ್ಯಲು ಶುರುಮಾಡಿತು. ರಸ್ತೆ- ಆಕಾಶ ಕಪ್ಪಗೇ ಕಾಣುತ್ತಿತ್ತು. ಜೋಮು ಹಿಡಿದಂತಿದ್ದ ರಸ್ತೆ ಪಕ್ಕದ ಮರಗಳು ಒಳಗೊಳಗೆ ಒಮ್ಮೆಲೇ ಕುಣಿಯಲು ಶುರುಮಾಡಿದ್ದವು. ದೂರದಲ್ಲಿ ನಲ್ಲೂರು ಮಾರ್ಕೆಟ್ಟು ಮಂದ ಮಂದಗೇ ಬೆಳಕು ಬಿಡುತ್ತಿರುವುದನ್ನು ನೋಡಿ, ಪೋಡಿ ಗಾಡಿಗಳು ಹೊಗೆ ಸೂಸುತ್ತಾ ತರ್ಪಲ್ಲಿನ ಛತ್ರಿ ಹೊದ್ದು, ಕೆಲವರು ಪೋಡಿಪ್ರಿಯರು ಚಟ್ನಿಗೆ ಪೋಡಿ ಅದ್ದಿ ತಿನ್ನುತ್ತಿರುವುದನ್ನು ನೋಡಿ, ತಿಲಕ ಪ್ರಸನ್ನನಾದ. ಅವನು ಇನ್ನೂ ಏದುಸಿರು ಬಿಡುತ್ತಾ ಮಳೆ ರೊಯ್ಯನೆ ಸುಯ್ಯುತ್ತಿದ್ದರೂ, ಕ್ಯಾರೇ ಅನ್ನದೇ ಅದೇ ವೇಗದಲ್ಲಿ ಓಡುತ್ತಿದ್ದ. ಓಡುವ ರಭಸಕ್ಕೆ ಅವನ ಹೆಗಲ ಬ್ಯಾಗೊಳಗಿದ್ದ ನೀರಿನ ಬಾಟ್ಲಿ, ನೋಟುಬುಕ್ಕು, ಸ್ಟೀಲಿನ ಬುತ್ತಿ, ಪೆನ್ನು, ಪೆನ್ಸಿಲ್ಲು... ಎಲ್ಲವೂ ಪರಸ್ಪರ ಗುದ್ದಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದರೂ, ಎದುರಿಗೆ ಸ್ವಪ್ನನಗರಿಯಂತೆ ಕಾಣುತ್ತಿದ್ದ ಪೋಡಿ ಕಾವಲಿ, ಆ ಮಬ್ಬುಮಿಣುಕು ದೀಪಗಳು, ಅಂಬೊಡೆ ಪೋಡಿಯ ಹದ ಘಮಲು, ಆರಾಮಾಸನ ಹಾಕಿ ತಿನ್ನಲೆಂದೇ ಹಾಸಿದ ಸ್ಟೂಲುಗಳು, ಇಷ್ಟಲ್ಲದೆ ಬೇಕುಬೇಕೂಂತಲೇ ಆಸೆಹುಟ್ಟಿಸುವ ಭವಾನಿ ಪೋಡಿಸ್ಟಾಲ್ನ ರುಚಿರುಚಿ ಅಂಬೊಡೆ, ಬನ್ಸ್, ಗೋಳಿಬಜೆ, ಚಟ್ಟಂಬಡೆ,ಬಿಸ್ಕೂಟ್ ರೊಟ್ಟಿ ಅಂತ ಕೆಂಪು ಪೈಂಟಿನಲ್ಲಿ ತೂಗುವ ಬೋರ್ಡು, ಅಲ್ಲೇ ಇರುವ ಕಬ್ಬಿಣದ ಬಾಣಲೆಗೆ ಲಟ್ಟಂತ ಎರಡು ಗುದ್ದಿ, ನಿಂತೂ ನಿಂತು ನಿರಾಶರಾದವರರಿಗೆ- ಇನ್ನೇನು ಆಯ್ತು ಪೋಡಿ ಅಂತ ಪೂರ್ವ ಸೂಚನೆ ಕೊಟ್ಟು ಅವರ ನಾಲಗೆಯನ್ನು ಭಾವೋದ್ವೇಗಕ್ಕೊಳಪಡಿಸುವ ನೀಲಿ ಗೀಟಿನ ಲುಂಗಿಯನ್ನು ಮೇಲಕ್ಕೆ ಕಟ್ಟಿ ಹೆಗ್ಹೇಗೋ ಕಾಣುತ್ತಿದ್ದ ಅಂಗಡಿ ಮಾಲಿಕ ಶೆಟ್ಟಿ, ಇದನ್ನೆಲ್ಲಾ ನೋಡಿ ತಿಲಕನಿಗೆ ಏನೇನೋ ಆಗಿಹೋಯ್ತು.
ನಲ್ಲೂರು ಕ್ರಾಸಿನಿಂದ ಯಾವತ್ತೂ ನಡೆದು ಶಾಲೆಗೆ ಹೋಗುತ್ತಿದ್ದ ತಿಲಕ ಕನಸು ಕಂಡಿದ್ದು ಇಷ್ಟೇ; ನಂಗೂ ಅಲ್ಲಿ ನಿಂತು ಗಾಡಿಯ ಕನ್ನಡಿಯಲ್ಲಿ ಕಾಣುವ ಆ ದೊಡ್ಡ ಮಂಡೆಯ ತಿಂಡಿ ತಿನ್ಬೇಕು, ಅದು ತಿಂದರೆ ಏನಾಗ್ತದೋ? ಹೇಗಿರ್ಬೋದು ಅದು? ಹೀಗೆ ತಿಲಕ ಬೆಳಗ್ಗೆ ಶಾಲೆಗೆ ಹೊರಡುವಾಗ ಬೊಗಸೆಯಲ್ಲಿ ಪೋಡಿಯ ಕನಸುಗಳನ್ನು ಸಂಗ್ರಹಿಸುತ್ತಾ ಶಾಲೆ ಹಿಡಿಯುತ್ತಿದ್ದ. ಮತ್ತೆ ಸಂಜೆ ಮರಳುವಾಗ ಯಾವುದೋ ಲೈಟು ಕಂಬದ ಮರೆಯಲ್ಲಿ ನಿಂತು, ಪೋಡಿ ಕಾವಲಿ ನೋಡಿ ಆಸೆಯಿಂದ ಜೊಲ್ಲು ಸುರಿಸುತ್ತಾ- ಅದನ್ನು ಹೇಗೆ ತಿಂತಾರೆ ನೋಡುವಾ ಅಂತ ಚಟ್ನಿ, ಸಾಂಬಾರು, ತೋವೆಗೆ ಅಂಬೊಡೆ ಮುಳುಗಿಸುತ್ತಾ ತಮ್ಮ ತಮ್ಮ ಆಂಗಿಕ ಭಂಗಿಯಲ್ಲಿ, ಬಂಡೆಗಾತ್ರದವರು, ಅಷ್ಟು ದೊಡ್ಡ ಅಂಬೊಡೆಯನ್ನೇ ಪೂರ್ತಿ ಒಂದೇ ಸಲಕ್ಕೆ ಗುಳುಂಗುಳುಂ ಸ್ವಾಃ ಮಾಡುತ್ತಿರುವುದು ತಿಲಕನಿಗೇ ತೀರಾ ಹಾಸ್ಯಾಸ್ಪದವಾಗಿ ಕಂಡು ಗೊಳ್ ಎಂದು ನಗು ಬರುತ್ತಿತ್ತು. ದಿನಾ ಮುಸ್ಸಂಜೆ ಅದೇ ಬಂಡೆಗಾತ್ರದ ಮನುಷ್ಯರು, ನೀಲಿಗೀಟಿನ ಶೆಟ್ಟಿ, ಕತ್ತಲಲ್ಲಿ ಕರಗಿಹೋಗುವ ಕಾವಲಿಯ ದಟ್ಟಹೊಗೆ, ಇದನ್ನೆಲ್ಲಾ ಬರೀ ನೋಡುತ್ತಾ ಆಸೆಯಿಂದ ಮನೆ ಹಾದಿ ಹಿಡಿಯುವುದು ತಿಲಕನ ನಿತ್ಯಪ್ರಾರ್ಥನೆ.
ಆದರೆ ಈ ದಿನದ ಕತೆ ಬೇರೆ. ಬೆಳಗ್ಗೆ ಮನೆಯಿಂದ ಹೊರಡುವಾಗ ಅಮ್ಮನ ಬಳಿ ಹತ್ತು ರುಪಾಯಿ ತಗೊಂಡು ಕಾಪಿಪುಸ್ತಕ ಖಾಲಿಯಾಗಿದೆ ಅಂತಲೂ, 'ಬಾಲಕ್' ಮೂರುಗೀಟಿನ ಕಾಪಿಪುಸ್ತಕ ಬೇಕು ಅಂತ ಸುಳ್ಳು ಹೇಳಿದಾಗ ಅಮ್ಮ ಹತ್ತು ರುಪಾಯನ್ನು ಮುಖ ಚೂಪು ಮಾಡಿ ಕೊಟ್ಟಿದ್ದಳು. ಹತ್ತು ರುಪಾಯಿ ನೋಟು ನೋಡಿದ್ದೇ, ತಿಲಕ ಬನ್ಸಿನಂತೆ ಉಬ್ಬಿ ಹೋಗಿ, ಬೆಳಗ್ಗೆ ಪೋಡಿ ಅಂಗಡಿ ದಾಟುವಾಗಲೇ ಸಂಜೆ ಪುಕು ಪುಕು ಬೆಳಕಿನ ಸ್ವಪ್ನನಗರಿಯಲ್ಲಿ ಚಟ್ನಿಗೆ ಅಂಬೊಡೆ ಅದ್ದಿ ತಿನ್ನುವುದನ್ನೂ, ತನ್ನ ಅಕ್ಕಪಕ್ಕ ದೇವಮಾನವರಂತೆ ಇಡೀ ಅಂಬೊಡೆ ಪ್ಲೇಟನ್ನೇ ಭಟ್ಟಿಯಿಳಿಸುವಂತೆ ತಿನ್ನುವ ಆ ಬಂಡೆ ಗಾತ್ರದ ಮನುಷ್ಯರನ್ನು ಕಲ್ಪಿಸಿಕೊಂಡು, ಹತ್ತು ರುಪಾಯಿ ನೋಟನ್ನು ಜೋಪಾನವಾಗಿ ಚಡ್ಡಿಯ ಕಿಸೆಯಲ್ಲಿ ಬೆಚ್ಚಗೆ ಮಲಗಿಸಲು ಬಿಟ್ಟು ಬೇಗ ಸಂಜೆಯಾಗಲಿ ಅಂತ ಶಾಲೆಗೆ ಹೋಗಿದ್ದ.
ಮಳೆ ಈಗ ಪಕಳೆ ಬಿಡಿಸಿ ಸರಿಯುತ್ತಿದ್ದರೂ ತಿಲಕನಿಗೆ ಕಾಣುತ್ತಿದ್ದುದು ಭವಾನಿಪೋಡಿಸ್ಟಾಲ್. ಅದರ ಆಚೀಚೆ ನಿಂತು 'ಪೋಡಿಗೆ ಬೇಗ ಬಾ' ಅಂತ ಕರೆಯುತ್ತಿರುವಂತೆ ಕಾಣುವ ತಿಂಡಿಪೋತರ ನಾಲಗೆಯ ಯಾವುದೋ ಒಂದು ಸಂದು...ಇಷ್ಟೇ. ಗಾಡಿಯ ಕನ್ನಡಿ ಕಪಾಟಿನೊಳಗೆ ಏನೇನೋ ಆಕಾರದ ತಿಂಡಿಗಳು ಉದ್ದಗೆ, ಗಿಡ್ಡಗೆ, ಲಟ್ಟಗೆ, ಕೆಂಪಗೆ, ತರಹೇವಾರಿ ಭಂಗಿಯಲ್ಲಿ ಕಾಣುವಾಗ ತಿಲಕ ನಾಲಗೆಯ ಜೊಲ್ಲೇ ಆಗಿಹೋದ.
'ಅದು ಕೊಡಿ' ಎಂದ, ತಾನಿಷ್ಟು ದಿನ ಕನಸು ಕಂಡ ಆ ದೊಡ್ಡ ಮಂಡೆಯ ತಿಂಡಿಯನ್ನು ತೋರಿಸಿ. ಅವನು ಕೇಳುವ ಶೈಲಿಯಲ್ಲಿ ದಿವ್ಯ ಉನ್ಮಾದವಿತ್ತು. 'ಎಷ್ಟು ರುಪಾಯದ್ದು ಬೇಕೋ?' ಪೋಡಿ ಗಾಡಿಯ ಶೆಟ್ಟಿ ಹಿಟ್ಟನ್ನು ಬಾಣಲೆಗೆ ಬಿಡುತ್ತಾ ಕೇಳಿದ.
ತಿಲಕ ಕೊಂಚ ಬೆದರಿ, ನೋಟು ಎಲ್ಲಾದ್ರೂ ಬಿತ್ತಾ? ಉಂಟಲ್ವಾ ಅಂತ ಚಡ್ಡಿಯ ಕಿಸೆಗೆ ಕೈ ಹಾಕಿ, ಮಳೆಗೆ ತುಸು ಒದ್ದೆಯಾದ ನೋಟನ್ನು ಕಕ್ಕುಲಾತಿಯಿಂದಲೇ ಶೆಟ್ಟಿಗೆ ಕೊಟ್ಟ. ಶೆಟ್ಟಿ ಬಿಸಿಬಿಸಿಯಾದ ಬದನೆಪೋಡಿಯನ್ನು ಕೊಟ್ಟಾಗ ತಿಲಕನಿಗೆ ರೇಸಿನಲ್ಲಿ ದ್ವಿತೀಯ ಫ್ರೈಜು ತಗೊಂಡಕ್ಕಿಂತಲೂ ವಿಪರೀತ ಪುಳಕ. ಅನಾಮತ್ತಾಗಿ ಲಭಿಸಿದ ಪೋಡಿಯ ಚೊಚ್ಚಲ ಚುಂಬನದಿಂದ ತಿಲಕನ ನಾಲಗೆ ಕಳೆದೇಹೋಯ್ತು. ಹಾಗೆ ತಿನ್ನೋವಾಗ ಗಾಡಿಯ ಸುತ್ತ ಸುತ್ತುವ ಹರುಕಾದ ಬಿಕಾರಿ ಹುಡುಗ, ತಿಲಕನ ಕಾಲ ಬುಡಕ್ಕೆ ಬಂದು 'ಅಣ್ಣಾ' ಅಂತ ಕರೆದದ್ದು, ಅವನು ತನ್ನ ಪುಟ್ಟ ಕೈಯನ್ನು ತಿಲಕನ ಮುಂದೆ ಮಾಡಿ, ದೈನ್ಯದಿಂದ 'ನಂಗೂ ತಿಂಡಿ ಕೊಡು' ಅಂತ ಕೇಳಿದ್ದು ಘೋರವಾಗಿಯೂ, ಹಸಿವು ಹಾಗೂ ಹಂಬಲಗಳ ಮುಖಾಮುಖಿಯಾಗಿಯೂ ಕಾಣುತ್ತಿತ್ತು. ತನಗಿಂತ ಸ್ವಲ್ಪವೇ ಕುಳ್ಳಗಿದ್ದ ಆ ಪುಟ್ಟ ಹುಡುಗನನ್ನು ನೋಡಿ ತಿಲಕನಿಗೆ ಪಾಪ ಅನ್ನಿಸಿತು.
'ಹೇ ನಿಂಗೂ ಆಸೆಯಾ ಪೋಡಿ ತಿನ್ಬೇಕಂತ? ನನ್ನತ್ರ ನಾಲ್ಕೇ ಇರೋದು, ಎರಡು ನಿಂಗೆ ಎರಡು ನಂಗೆ ಆಯ್ತಾ?' ಅಂತ ಪ್ಲೇಟಿನ ಎರಡು ಪೋಡಿಯನ್ನೂ ತಿಲಕ, ಅವನ ಕೈಗೆ ತುರುಕಿ ಬಿಟ್ಟ. ಆ ಹುಡುಗನ ಕೆನ್ನೆ ಅಂಚಿನಲ್ಲಿ ಒಂದು ಪ್ರಸನ್ನವಾದ ನಗೆ ಬಂತು. ಇಬ್ಬರೂ ಗಬಗಬ ಅಂತ ತಿಂದರು. ಒಬ್ಬ ಹಸಿವಿನಿಂದ ಇನ್ನೊಬ್ಬ ಆಸೆಯಿಂದ. ತಿಲಕ ಚಟ್ನಿ ಎಲ್ಲಾ ಚಪ್ಪರಿಸಿಯಾದ ಮೇಲೆ ತಾನು ಕೊಟ್ಟ ಹತ್ತು ರುಪಾಯಿಗೆ ಇನ್ನೂ ಏನಾದ್ರೂ ಕೊಡುವನಾ ಅಂತ ಗಾಡಿ ಹತ್ತಿರ ಒಮ್ಮೆ ನೋಡಿ, ಅಂತೂ ತಿಂದೆನಲ್ಲಾ ಅಂತ ತೃಪ್ತನಾಗಿ, ನಿಂತ ಪುಟ್ಟ ಹುಡುಗನಿಗೆ ಟಾಟಾ ಮಾಡುತ್ತಾ ಚಂದಿರಲೋಕದಂತೆ ಲಕಲಕ ಎನ್ನುತ್ತಿದ್ದ ನಲ್ಲೂರು ಸಂತೆಯ ಸಂಭ್ರಮ ನೋಡಿ, ಹಿನ್ನೆಲೆಯಾಗಿ ಬರುವ ಪೋಡಿ ಪರಿಮಳವನ್ನು ಮತ್ತೊಮ್ಮೆ ಹೀರಿ, ಮನೆ ಹಾದಿ ಹಿಡಿದ. ಮಳೆ ಈಗ ದೊಡ್ಡದಾಗಿ, ತಿಲಕನ ಬಾಗಿನ ಮೇಲೆ ಹನಿಯುದುರ ತೊಡಗಿದವು. ತಿಲಕನಿಗೆ ಕಾಪಿಪುಸ್ತಕ ನೆನಪಾಯ್ತು. ಅಮ್ಮ ಕಾಪಿ ಪುಸ್ತಕ ಎಲ್ಲಂತ ಕೇಳಿದರೆ ಎಂತ ಹೇಳೋದು? ತಿಲಕ ನಡುಗಿದ. ಚಡ್ಡಿಯ ಮೇಲೆ ಉಚ್ಚೆಹೊಯ್ದದ್ದೋ ಮಳೆ ನೀರು ಬಿದ್ದದ್ದೋ... ಅಂತೂ ಚಡ್ಡಿ ಹೇಗೋ ಒದ್ದೆಯಾಗಿತ್ತು.
= ಪ್ರಸಾದ್ ಶೆಣೈ ಆರ್.ಕೆ.
prasad.shenoy93@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


