ಖುಷಿ

ಶಿವತತ್ತ್ವ ರತ್ನಾಕರವೆಂಬ ವಿಶ್ವಕೋಶ

Published On :

ಕನ್ನಡ ಸಾಹಿತ್ಯದಲ್ಲಿ ವಿಶ್ವಕೋಶ ಪರಂಪರೆಯೊಂದು ಬಹಳ ಹಿಂದಿನಿಂದಲೇ ಬಂದಿದೆ ಮತ್ತು ಅದು ಅತ್ಯಂತ ಶಾಸ್ತ್ರೀಯವಾಗಿಯೂ ಇದೆ. ಆಧುನಿಕ ಪರಿಭಾಷೆಯಲ್ಲಿ ಹೇಳುವ ಎನ್ಸೈಕ್ಲೋಪಿಡಿಯಾಕ್ಕೆ ಸಂವಾದಿಯಾಗುವಂಥ ಕೃತಿಗಳು ಸಾವಿರ ವರ್ಷಗಳ ಹಿಂದೆಯೇ ಕನ್ನಡದಲ್ಲಿ ಬಂತು ಮತ್ತು ಅದು ಸಂಸ್ಕೃತ ವಿಶ್ವಕೋಶಕ್ಕೂ ಮಾದರಿಯಾಯಿತು ಎಂಬುದು ವಿಶೇಷ.
ಇಂಥ ವಿಶ್ವಕೋಶಗಳ ಸಂಬಂಧದಲ್ಲಿ ಕೆಲವು ಹೊಸ ವಿಚಾರಗಳನ್ನು ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರು ಕೆಳದಿ ಬಸವರಾಜ ಸಂಕಲಿಸಿದ 'ಶ್ರೀಶಿವತತ್ತ್ವರತ್ನಾಕರ' ಕೃತಿಯ ಸಂಪಾದನೆಯ ಕಾಲಕ್ಕೆ ಪ್ರಾಸ್ತಾವಿಕವಾಗಿ ಬರೆದ ಮಾತುಗಳಲ್ಲಿ ಹೇಳಿದ್ದಾರೆ.
ಕ್ರಿ.ಶ.1045ರ ಸುಮಾರಿಗೆ ಬಂದ ಚಾವುಂಡರಾಯನ 'ಲೋಕೋಪಕಾರ' ಕೃತಿಯು ಕನ್ನಡದ ಮೊದಲ ವಿಶ್ವಕೋಶ ರೀತಿಯ ಕೃತಿ. ಇದಾದ ನೂರು ವರ್ಷಗಳ ನಂತರ ಕಲ್ಯಾಣದ ಚಾಲುಕ್ಯ ಚಕ್ರವರ್ತಿ ಮೂರನೆಯ ಸೋಮೇಶ್ವರನು 'ಅಭಿಲಷಿತಾರ್ಥ ಚಿಂತಾಮಣಿ' ಅರ್ಥಾತ್ 'ಮಾನಸೋಲ್ಲಾಸ' ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದನು. ಚಾವುಂಡರಾಯನ 'ಲೋಕೋಪಕಾರ'ವೇ ವಿಸ್ತೃತವಾಗಿ 'ಮಾನಸೋಲ್ಲಾಸ'ವಾಯಿತುಎಂಬ ಮಾತನ್ನು ಮಲ್ಲೇಪುರಂ ವೆಂಕಟೇಶ ಹೇಳಿದ್ದಾರೆ.
1668-1715ರ ಸುಮಾರಿಗೆ ಮತ್ತೊಬ್ಬ ಕನ್ನಡಿಗ ಕೆಳದಿ ಬಸವರಾಜನು ಸಂಸ್ಕೃತ ವಾಙ್ಮಯವನ್ನೆಲ್ಲ ಜಾಲಾಡಿ ಎಲ್ಲ ಜ್ಞಾನ ಶಾಖೆಗಳ ಪಂಡಿತರನ್ನು ಸೇರಿಸಿಕೊಂಡು ಸಂಕಲಿಸಿದ ಕೃತಿಯೇ 'ಶ್ರೀಶಿವತತ್ತ್ವರತ್ನಾಕರ'. ಒಬ್ಬ ಸಂಕಲನಕಾರನಿಗೆ ಇರಬೇಕಾದ ಜಾಣ್ಮೆ, ತಿಳಿವಳಿಕೆ ಎಲ್ಲವನ್ನೂ ನಾವು ಈ ಕೃತಿಯಲ್ಲಿ ಕಾಣಬಹುದಾಗಿದೆ. 'ಮಾನಸೋಲ್ಲಾಸ'ವು ಎಂಟು ಸಾವಿರ ಶ್ಲೋಕಗಳಿಂದ ಕೂಡಿದ್ದರೆ 'ಶ್ರೀಶಿವತತ್ತ್ವರತ್ನಾಕರ'ವು ಹದಿಮೂರು ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. 'ಮಾನಸೋಲ್ಲಾಸ'ವು ವಿದ್ವಾಂಸರಾಜನೊಬ್ಬನ ಅಧ್ಯಯನದ ಫಲ. ಆದರೆ 'ಶ್ರೀಶಿವತತ್ತ್ವರತ್ನಾಕರ'ವು ಹಲವು ವಿದ್ವಾಂಸರ ಹಾಗೂ ಭೂಪಾಲ ಇವರಿಬ್ಬರ ಅಧ್ಯಯನದ ಫಲ. ಇಂದು ಲಭ್ಯವಿಲ್ಲದ ಹಲವು ಕೃತಿಗಳಲ್ಲಿಯ ಉಪಯುಕ್ತ ಮಾಹಿತಿಗಳು ಇದರಲ್ಲಿ ಲಭ್ಯವಿದೆ.
ಇಡೀ ಶ್ರೀಶಿವತತ್ತ್ವರತ್ನಾಕರವು ಪ್ರಾರಂಭವಾಗುವುದು ಸೃಷ್ಟಿಯ ಮಹಾಕಥನದಿಂದ. ಮುಗಿಯುವುದು ವೀರಶೈವ ದರ್ಶನದಿಂದ. ಇದರಲ್ಲಿಯ ಚಾರಿತ್ರಿಕ ವಿವರಗಳು ಕರ್ನಾಟಕ ಸಂಸ್ಕೃತಿಯ 17-18ನೆ ಶತಮಾನದ ಸಮಗ್ರ ಚರಿತ್ರೆಯನ್ನು ಅರಿಯಲು ಅನುಕೂಲ ಮಾಡಿಕೊಡುತ್ತವೆ. ಆ ಕಾಲದ ನಂಬಿಕೆಗಳು, ಆಚರಣೆಗಳು ಹಲವು ಬಗೆಯಲ್ಲಿ ಪ್ರಸ್ತಾಪವಾಗಿವೆ. ಇದು ಮಧ್ಯಕಾಲೀನ ಭಾರತದ ಸಾಂಸ್ಕೃತಿಕ ಚರಿತ್ರೆಯ ಮರುವ್ಯಾಖ್ಯಾನಕ್ಕೆ ಅವಕಾಶ ಒದಗಿಸುತ್ತದೆ.
'ಶ್ರೀಶಿವತತ್ತ್ವರತ್ನಾಕರ'ದಲ್ಲಿ ಒಂಬತ್ತು ಕಲ್ಲೋಲಗಳಿವೆ. ಇವುಗಳನ್ನು ಮತ್ತೆ ತರಂಗಳಾಗಿ ವಿಭಾಗಿಸಲಾಗಿದೆ. ಕೃತಿಯಲ್ಲಿ ಒಟ್ಟೂ ಒಂದುನೂರ ಎಂಟು ತರಂಗಳಿವೆ. ಯಾವ ತರಂಗದಲ್ಲಿ ಯಾವ ವಿಷಯವನ್ನು ಹೇಳಲಾಗಿದೆ ಎಂಬ ವಿಷಯ ಸೂಚಿಯ ಶ್ಲೋಕಗಳೂ ಇದರಲ್ಲಿವೆ. ಉದಾ: ವೇದಾಗಮಗಳಲ್ಲಿ ಇರುವ ವಿದ್ಯೆಗಳೆಲ್ಲ ಮೊದಲನೆಯ ತರಂಗದಲ್ಲಿಯೂ, ಆ ವಿದ್ಯೆಗಳ ಪ್ರಯೋಜನಗಳನ್ನು ಎರಡನೆಯ ತರಂಗದಲ್ಲಿಯೂ ಹೇಳಲಾಗಿದೆ. ಹೀಗೆ ವಿವರಗಳನ್ನು ನೀಡಿರುವುದು ಸಂಕಲನಕಾರರ ಪ್ರತಿಭೆಯನ್ನು ಸೂಚಿಸುತ್ತದೆ.
 ಈ ಕೃತಿಯನ್ನು ಮೊದಲು ಸಂಪಾದಿಸಿದವರು ಮದರಾಸು ಸರ್ಕಾರದಲ್ಲಿ ಸೀನಿಯರ್ ಟ್ರಾನ್ಸ್ಲೇಟರ್ ಆಗಿದ್ದ ಶ್ರೀ ಬಿ.ರಾಮರಾವ್ ಮತ್ತು ಮದರಾಸಿನ ಸರ್ಕಾರಿ ಪ್ರಾಚ್ಯವಿದ್ಯಾಸಂಸ್ಥೆಯಲ್ಲಿ ಸಹಾಯಕ ಗ್ರಂಥಪಾಲಕರಾಗಿದ್ದ ವಿದ್ವಾನ್ ಪಿ.ಸುಂದರಶಾಸ್ತ್ರಿ. ಮಲ್ಲೇಪುರಂ  ಅವರು ಈ ಕೃತಿಯನ್ನು ಐದು ಸಂಪುಟಗಳಲ್ಲಿ ಪುನಸ್ಸಂಯೋಜಿಸಿ ರೂಪಿಸಿದ್ದಾರೆ. ಪ್ರತಿ ಸಂಪುಟಕ್ಕೂ ಯುಕ್ತ ಹೆಸರನ್ನು ನೀಡಿದ್ದಾರೆ. ಮೊದಲ ಸಂಪುಟಕ್ಕೆ ಸೃಷ್ಟಿ ಸಂಪುಟಂ ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ 1, 2, 3 ಕಲ್ಲೋಲಗಳು ಪ್ರಸ್ತಾವನೆಯೊಡನೆ ಇವೆ. ಎರಡನೆಯದು ಲೋಕ ಸಂಪುಟಂ. ಇದರಲ್ಲಿ 4 ಮತ್ತು 5ನೆ ಕಲ್ಲೋಲಗಳಿವೆ. ಮೂರನೆಯದು ವಿದ್ಯಾ ಸಂಪುಟಂ. ಇದರಲ್ಲಿ 6ನೆ ಕಲ್ಲೋಲವಿದೆ. ನಾಲ್ಕನೆಯದು ಶಾಸ್ತ್ರಸಂಪುಟಂ. ಇದರಲ್ಲಿ 7 ಮತ್ತು 8ನೆ ಕಲ್ಲೋಲಗಳಿವೆ. ಐದನೆಯದು ದೈವ ಸಂಪುಟಂ. ಇದರಲ್ಲಿ 9ನೆ ಕಲ್ಲೋಲವಿದ್ದು ಜೊತೆಗೆ ವಿಸ್ತಾರವಾದ ಶಬ್ದಸೂಚಿ, ವಿಷಯಸೂಚಿ ಹಾಗೂ ಗ್ರಂಥಸೂಚಿಗಳಿವೆ. ಮೂಲ ಶ್ಲೋಕವನ್ನು ನೀಡಿ ಅಲ್ಲಿಯೇ ಅದರ ಕನ್ನಡ ಅನುವಾದವನ್ನೂ, ವಿಸ್ತೃತ ಟಿಪ್ಪಣಿಯನ್ನೂ ನೀಡಿದ್ದಾರೆ.
ಈ ಸಂಪುಟಗಳಿಗಾಗಿ ನಾನಾ ಮೂಲಗಳಿಂದ ಚಿತ್ರಗಳನ್ನು ಸಂಗ್ರಹಿಸಿದ್ದು ವಿಶೇಷ. ಖ್ಯಾತ ಕಲಾವಿದರಾದ ಡಾ.ವಿಜಯಾ ಹಾಗರಗುಂಡಗಿ ಅವರು ಬರೆದಿರುವ ಶಿವನ ಪಂಚವಿಂಶತಿ ಲೀಲೆಗಳ ಸರಣಿ ಕಲಾಮಾಲಿಕೆಯ ಚಿತ್ರಗಳನ್ನು ಇದರಲ್ಲಿ ಬಳಸಿಕೊಂಡಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
ಮಲ್ಲೇಪುರಂ ವೆಂಕಟೇಶ ಅವರ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.ಟಿ

ಒಂದು ನಿಮಿಷ ಮೌನ ಮ್ವೊಸೀರ್ ಸ್ಕ್ಲೀರ್
ಕೆಲವು ಪುಟಗಳು
ದೊರೆ ಸತ್ತ. ಆಗ ಸರಕಾರ ಹೊರಡಿಸಿದ ಆಜ್ಞೆ; ಶವಸಂಸ್ಕಾರದ ಮಾರನೆಯ ದಿನ ಬೆಳಗ್ಗೆ ಹತ್ತು ಗಂಟೆಗೆ ಜನರೆಲ್ಲರೂ ಒಂದು ನಿಮಿಷ ಮೌನ ಆಚರಿಸಬೇಕು. ಆ ಆಜ್ಞೆಯನ್ನು ಪ್ರತಿಯೊಬ್ಬರೂ ಪಾಲಿಸಿದರು. ನಿಗದಿಪಡಿಸಿದ ಆ ಸಮಯದಲ್ಲಿ ಇಡೀ ದೇಶವನ್ನು ಗಾಢವಾದ ಮೌನ ಆವರಿಸಿತು.
ಬೀದಿಯಲ್ಲಿದ್ದ ಜನ, ಬೆರೆಯವರು ಕೂಡ ಒಂದಿಷ್ಟೂ ಅಲ್ಲಾಡದೆ ಮೌನವಾಗಿ ನಿಂತಿರುವುದನ್ನು ನೋಡಿದರು. ಅವರೆಲ್ಲ ಸತ್ತ ದೊರೆಯ ಬಗ್ಗೆ ಯೋಚಿಸುತ್ತಿರಬೇಕಿತ್ತು. ಅನೇಕರು ಹಾಗೆ ಯೋಚಿಸುತ್ತಿದ್ದರು ಕೂಡ. ಹಾಗೆ ನೋಡಿದರೆ ಎಲ್ಲರೂ ದೊರೆಯ ಬಗ್ಗೆ ಯೋಚಿಸುತ್ತಿದ್ದವರೇ- ಗಣಿತಶಾಸ್ತ್ರದ ಪ್ರಾಧ್ಯಾಪಕರೊಬ್ಬರನ್ನು ಬಿಟ್ಟು. ಆ ಪ್ರಾಧ್ಯಾಪಕರು ಮೌನವಾಗಿ ನಿಂತದ್ದೇ ಅದೇನೋ ಲೆಕ್ಕಾಚಾರ ಹಾಕುತ್ತ ಇಪ್ಪತ್ತಾರು ಮಿಲಿಯನ್ ಎಂಟುನೂರು ಸಾವಿರ ನಾಗರಿಕರ ಒಂದೊಂದು ನಿಮಿಷ ಮೌನದ ಒಟ್ಟು ಮೊತ್ತ ಐವತ್ತು ವರ್ಷಕ್ಕೆ ಸಮನಾಗುತ್ತದೆಯೆಂದು ಕಂಡುಹಿಡಿದರು. ದೊರೆ ಸತ್ತಾಗ ಅವನಿಗಾಗಿದ್ದ ವಯಸ್ಸೂ ಅಷ್ಟೇ. ಈ ಮೌನದಲ್ಲಿ ಒಂದು ಜೀವ ಕಳೆದುಹೋಯಿತು, ಇನ್ನೊಂದು ಜೀವ ಕಳೆದುಹೋಗಲಿದೆ ಎಂದು ಯೋಚಿಸುತ್ತಿದ್ದರು ಪ್ರಾಧ್ಯಾಪಕರು. ಆಮೇಲೆ: ಇಲ್ಲ, ಸಂಪೂರ್ಣವಾಗಿ ಕಳೆದುಹೋಗುತ್ತಿಲ್ಲ, ಯಾಕೆಂದರೆ ನಾನು ಮತ್ತೇನೋ ಕಂಡುಹಿಡಿದಿದ್ದೇನೆ- ಏನದು?
ಅದೇ ಕ್ಷಣ ಪ್ರಾಧ್ಯಾಪಕರ ಹೆಂಡತಿ ಹೆರಿಗೆ ಆಸ್ಪತ್ರೆಯಲ್ಲಿ ಒಂದು ಮಗುವಿಗೆ ಜನ್ಮ ನೀಡುತ್ತಿದ್ದಳು. ಹುಟ್ಟಿನ ಜೊತೆಗೇ ಹುಟ್ಟಿಕೊಂಡ ಹಲವು ತೊಂದರೆಗಳಿಂದ ಬಳಲಿದ ಆ ಮಗು ಬದುಕಿಗೆ ಜೋತುಬೀಳಲಾಗಲಿಲ್ಲ. ಅದು ಬದುಕಿದ್ದದ್ದು ಒಂದೇ ನಿಮಿಷ. ಅಂದರೆ ಅದರ ತಾಯಿಗೆ ಜನರೆಲ್ಲರೂ ಯಾವ ದೊರೆಯನ್ನು ಕಳೆದುಕೊಂಡೆವೆಂದು ಹಪಹಪಿಸುತ್ತಿದ್ದರೋ ಆ ದೊರೆಯ ಹೆಸರನ್ನು ತನ್ನ ಮಗುವಿಗಿಡಲು ಸಾಕಾಗುವಷ್ಟು ಹೊತ್ತು ಮಾತ್ರ.
ಕೃತಿ: ಹಾರಿಕೊಂಡು ಹೋದವರು
ಕನ್ನಡಕ್ಕೆ: ಎಸ್. ದಿವಾಕರ್
ಪ್ರಕಾಶನ: ಆಕೃತಿ ಪುಸ್ತಕ
ಬೆಲೆ: 125

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.