ಖುಷಿ

ಒಂದು ಗೋಡೆ ರಾಜಕಾರಣ

ಸಮಾಜ ಕಲ್ಯಾಣ ಸಚಿವರಾದ ಶ್ರೀ ಆಂಜನೇಯ ಅವರಿಗೆ ನಮಸ್ಕಾರ...ಹೇಗಿದ್ದೀರಿ ಸಾರ್? ಚೆನ್ನಾಗಿದ್ದೀರ ಅನ್ಕೊಂಡಿದ್ದೀನಿ. ಆದರೆ...

ಒಂದು ಗೋಡೆ ರಾಜಕಾರಣ
Published On :

ಸಮಾಜ ಕಲ್ಯಾಣ ಸಚಿವರಾದ ಶ್ರೀ ಆಂಜನೇಯ ಅವರಿಗೆ ನಮಸ್ಕಾರ...
ಹೇಗಿದ್ದೀರಿ ಸಾರ್? ಚೆನ್ನಾಗಿದ್ದೀರ ಅನ್ಕೊಂಡಿದ್ದೀನಿ. ಆದರೆ, ಈ ಮಾಧ್ಯಮಗಳಿಂದಾಗಿ ಸ್ವಲ್ಪ ತಲೆಬಿಸಿ ಆಗಿರಬೇಕು. ಏಕೆ ಅಂದ್ರೆ ಕಳೆದ 2-3 ದಿನದಿಂದ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ನಿಮ್ಮದೇ ಸುದ್ದಿ. ಸಿಕ್ಕಾಪಟ್ಟೆ 'ಬ್ರೇಕಿಂಗ್‌' ನ್ಯೂಸು.
ನೀವು ನೋಡಿಕೊಳ್ತಿರೋ ಸಮಾಜ ಕಲ್ಯಾಣ ಇಲಾಖೆಯಲ್ಲಿ ಏನಾದರೂ ಸಾಧನೆ ಮಾಡಿ ಸುದ್ದಿಯಾಗಿದ್ದಿದ್ದರೆ ನಿಮಗೆ ಖುಷಿ ಆಗ್ತಾ ಇತ್ತು. ಏನು ಮಾಡೋದು ನಾಲ್ಕು 'ಗೋಡೆ' ಮಧ್ಯ ನಡೆಯೋ ಸಮಾಚಾರ ಈ ಮಾಧ್ಯಮದವರಿಂದ ಹೊರಗೆ ಬಂತಲ್ಲ ಅನ್ನೋ ಫೀಲಿಂಗ್ ನಿಮಗೆ ಆಗ್ತಿರಬಹುದು.
ಏನೇ ಆಗ್ಲಿ ನೀವು ಗ್ರೇಟ್ ಬಿಡಿ ಸಾರ್. ಈ ರಾಜಕಾರಣಿಗಳ ಪೈಕಿ ಕೆಲವರು ಅವರಿವರ ಮನೆ ಒಡೀತಾರೆ ಅಂತ ಕೇಳಿದ್ದೆ. ನೀವು ವಿಧಾನಸೌಧದೊಳಗಿರೋ ಗೋಡೆಯನ್ನೇ ಒಡೆದು ಹಾಕಿದ್ದೀರ. ಅವರ ಮುಂದೆ ನಿಮ್ಮದೇನು ಮಹಾ ಅಲ್ವೇ?
ಮತ್ತೆ ಇನ್ನೇನ್ ಸಾರ್, ಚಿಕ್ಕದಾಗಿರೋ ಚೇಂಬರ್‌ನಲ್ಲಿ ಕೂತು ಕೆಲಸ ಮಾಡಲಿಕ್ಕೆ ಆಗುತ್ತಾ? ಜನ ಬರೋದು, ಹೋಗೋದು ಹೇಗೆ? ಮಂತ್ರಿಯಾಗಿ ಒಂದು ಗೋಡೆಯನ್ನೂ ಒಡೆಯಲಿಲ್ಲ ಅಂದ್ರೆ ಏನ್ ಚೆನ್ನಾಗಿರುತ್ತೆ ಹೇಳಿ. ಕ್ಷೇತ್ರದ ಕಡೆ ಹೋದ್ರೆ ಜನ ಕೇಳೋದಿಲ್ವೆ, ವಿಧಾನಸೌಧಕ್ಕೆ ಹೋಗಿ ಏನ್ ದಬ್ಬಾಕಿದ್ರಿ ಅಂತ. ಈವಾಗ ನೀವು ಕಾಲರ್ ಎತ್ತಿ ನೋಡ್ರಯ್ಯ ಇಂಥ ಘನಂದಾರಿ ಕೆಲಸ ಮಾಡಿದ್ದೇನೆ ಅಂತ ಉತ್ತರ ಹೇಳಬಹುದು. ಇಷ್ಟಕ್ಕೂ ನೀವು ಒಡೆದಿರೋದು ವಿಧಾನಸೌಧದ ಗೋಡೆ. ಚೀನಾದ ಮಹಾಗೋಡೆ ಏನೂ ಅಲ್ವಲ್ಲ.
ಅಲ್ಲ, ನೀವೇನಾದ್ರೂ ಯಾರದ್ದಾದ್ರೂ ತಲೆ ಒಡೆದ್ರಾ? ಈ ಜನಗಳ್ಗೆ ಸ್ವಲ್ಪವೂ ಗೊತ್ತಾಗಲ್ಲ ನೋಡಿ. ಒಡೆದಾಕಿ ಸಾರ್, ಕೊಠಡಿಯೊಳಗಿರೋ ಗೋಡೆ ಏನಂತೆ? ವಿಧಾನಸೌಧವನ್ನೇ ಕೆಡವಿ. ನಿಮ್ಮನ್ನ ತಡೆಯೋರು ಯಾರು? ರಾಮಾಯಣದ ಆ ಆಂಜನೇಯ ಇಡೀ ಲಂಕೆ ಸುಟ್ಟು ಬೂದಿ ಮಾಡಿದ್ರೂ ಜನ ಕೈ ಮುಗೀತಾರೆ. ನೀವು ಒಂದು ಗೋಡೆ ಒಡೆದಿದ್ದಕ್ಕೆ ಹೇಗೆಲ್ಲಾ ಮಾತಾಡ್ತಾರೆ ನೋಡಿ.
ನಾನೇದ್ರೂ ಮುಖ್ಯಮಂತ್ರಿ ಆಗಿದ್ರೆ ಆಂಜನೇಯ ಅವರನ್ನ ಮನೆಗೆ ಕಳುಹಿಸ್ತಾ ಇದ್ದೆ ಅಂತ ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಹೇಳಿದ್ದಾರೆ. ನಿಮ್ ಪುಣ್ಯ, ಅವ್ರು ಸಿಎಂ ಆಗ್ಲಿಲ್ಲ. ಇಲ್ಲ ಅಂದಿದ್ರೆ ಇಷ್ಟೊತ್ತಿಗೆ ಮಾಜಿಯಾಗಿ ಮನೆ ಸೇರ್ಕೊತಾಯಿದ್ರಿ. ಆಮೇಲೆ ಮನೆಯಲ್ಲಿ ಗೋಡೆ ನೋಡ್ಕೊಂಡು ಕೂತ್ಕಬೇಕಾಗಿರ್ತಿತ್ತು.
ಅಲ್ಲ ಮಂತ್ರಿಗಳೇ, ಈ ಗೋಡೆ ಒಡೆಯೋ ಐಡಿಯಾನ ನಿಮ್ಗೆ ಕೊಟ್ಟೋರು ಯಾರು? ವಾಸ್ತು, ಶಾಸ್ತ್ರ ಅದು ಇದು ಅಂತ ಯಾರಾದ್ರೂ ತಲೆಕೆಡ್ಸಿದ್ರಾ?
ನೀವೇನಾದ್ರೂ ವಿಧಾನಸೌಧದಲ್ಲಿ ಶಾಶ್ವತವಾಗಿ ಗೂಟ ಹೊಡ್ಕಂಡು ಇರ್ತೀರ? ನಿಮಗೆ ಹೇಗೆ ಬೇಕೋ ಹಾಗೆ ಗೋಡೆ ಒಡೆದು ಗೋಡೆ ಕಟ್ಟಿಸಿಕೊಳ್ಳಕ್ಕೆ. ವಾರದಲ್ಲಿ 2-3 ದಿನ ನೀವು ವಿಧಾನಸೌಧದಲ್ಲಿ ಇದ್ದರೆ ಹೆಚ್ಚು. ನಿಮ್ ಮಂತ್ರಿಗಿರಿ ಯಾವಾಗ ಕಿತ್ಕೊಂಡು ಹೋಗುತ್ತೋ ಯಾರಿಗೆ ಗೊತ್ತು. ನೀವು ನೋಡಿದ್ರೆ ಪರ್ಮನೆಂಟಾಗಿ ಅಲ್ಲೇ ಇರೋರ ಹಾಗಿ ಮಾಡ್ತಾ ಇದ್ದೀರ.
ಗೋಡೆ ಒಡೆಯಿಸಿದ್ರಿ ಓಕೆ. ಆ ಪತ್ರಕರ್ತರು ನಿಮ್ಗೆ ಏನು ಮಾಡಿದ್ರು ಅಂತ. ಸುದ್ದಿ ಮಾಡಿದ್ದು ಮಹಾ ಆಪರಾಧವೇ. ಅದಕ್ಕೆ ವಿಧಾನಸೌಧಕ್ಕೆ ಅವ್ರು ಬರೋದೆ ಬೇಡ ಅಂತ ಆರ್ಡರ್ ಮಾಡಿಸಿದ್ದೀರಂತೆ. ಇದೇನು ತುಘಲಕ್ ಆಡಳಿತವೇ ಸ್ವಾಮಿ?
ಮಂತ್ರಿ ಆದೋರು ಸ್ವಲ್ಪ ಗಾಂಭೀರ್ಯವಾಗಿರಬೇಕು. ನೀವೋ ಎದುರುಗಡೆ ಕೂತವರ ಕಿವಿಯಲ್ಲಿ ರಕ್ತ ಬರೋವಷ್ಟು ಮಾತಾಡ್ತೀರಿ. ಅದು ಇದು ಮಾತಾಡಿ ಅಮೇಲೆ ತಗ್ಲಾಕ್ಕೊಳ್ತೀರಿ. ನೀವು ಒಳ್ಳೇ ಜನ. ರಾಜಕಾರಣದಲ್ಲಿ ಕಷ್ಟಪಟ್ಟು ಮೇಲೆ ಬಂದೋರು. ಸಿದ್ದರಾಮಯ್ಯನೋರು ನಿಮ್ಗೆ ಒಳ್ಳೇ ಖಾತೆ ಕೊಟ್ಟವ್ರೆ. ಅದನ್ನ ಸರಿಯಾಗಿ ನೋಡ್ಕಳ್ಳಿ. ನಿಮ್ಮತ್ರ ಬರೋ ಜನ ನಮ್ ಕೆಲ್ಸ ಆದ್ರೆ ಸಾಕು ಅಂತ ನೋಡ್ತಾರೆ. ನಿಮ್ ಚೇಂಬರ್ ಹೆಂಗಿದ್ರೆ ಅವರಿಗೆ ಏನಂತೆ. ಹೋಗಿ ಹೋಗಿ ಅದಕ್ಕೆ 18 ಲಕ್ಷ ಖರ್ಚು ಮಾಡಿದ್ದೀರಲ್ಲ. ಅದೇ ಹಣವನ್ನು ಬಡವರಿಗೆ ಕೊಟ್ಟಿದ್ರೆ 8-10 ಮನೆಗಳಾದ್ರೂ ಕಟ್ಟಿಕೊಳ್ತಿದ್ರು. ಯಾವುದನ್ನೇ ಆಗಲಿ, ಆಂಜನೇಯ ಅವರೇ ಒಡೆಯೋದು ಸುಲಭ. ಕಟ್ಟೋದು ಕಷ್ಟ. ಏನಾದ್ರೂ ಮಾಡ್ಕೋಳಿ, ನಮಸ್ಕಾರ...



 -ಕೆ.ವಿ. ಪ್ರಭಾಕರ್‌
prabhukolar@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.