ಟ್ವೆಂಟಿಯೊಳಗೆ ಯಶಸ್ಸು ಗ್ಯಾರಂಟಿ!
ಇದನ್ನು ನಾನು ಎಲ್ಲೋ ಓದಿದ್ದು. ವೈಜ್ಞಾನಿಕವಾಗಿ ಎಷ್ಟು ಸತ್ಯವೆಂಬುದು ಗೊತ್ತಿಲ್ಲ. ಆದರೆ, ಒಂದು ನಿದರ್ಶನವಾಗಿ ಇಲ್ಲಿ ಪ್ರಸ್ತಾಪಿಸ....
ಇದನ್ನು ನಾನು ಎಲ್ಲೋ ಓದಿದ್ದು. ವೈಜ್ಞಾನಿಕವಾಗಿ ಎಷ್ಟು ಸತ್ಯವೆಂಬುದು ಗೊತ್ತಿಲ್ಲ. ಆದರೆ, ಒಂದು ನಿದರ್ಶನವಾಗಿ ಇಲ್ಲಿ ಪ್ರಸ್ತಾಪಿಸಬಹುದೆನಿಸುತ್ತದೆ. ಬಾಹ್ಯಾಕಾಶಕ್ಕಾಗಿ ರಾಕೆಟ್ಅನ್ನು ಹಾರಿಸಿದಾಗ ಅದು ಭೂಕಕ್ಷೆಯನ್ನು ದಾಟುವ ತನಕ ಅದಕ್ಕೆ ಶೇ.50ರಷ್ಟು ಇಂಧನ ಬೇಕಾಗುತ್ತದಂತೆ. ಈ ಕಕ್ಷೆಯನ್ನು ದಾಟಿದ ಬಳಿಕ ಅದು ಅಂತರಿಕ್ಷದಲ್ಲಿ ಹತ್ತೊ, ಹನ್ನೆರಡೋ, ಹದಿನೈದೋ ವರ್ಷಗಳ ಕಾಲ ತಿರುಗುತ್ತದಲ್ಲ, ಅದಕ್ಕೆ ಉಳಿದ ಶೇ.30ರಷ್ಟು ಇಂಧನ ಸಾಕಂತೆ. ಅಂದರೆ ಆರಂಭದ ಒಂದು ವಾರದಲ್ಲಿ ರಾಕೆಟ್ ಮುಕ್ಕಾಲು ಪಾಲು ಇಂಧನವನ್ನು ತಿಂದು ಹಾಕುತ್ತದೆ. ಆನಂತರದ ಹದಿನೈದು ವರ್ಷ ಅಂತರಿಕ್ಷದಲ್ಲಿ ಸುತ್ತು ಹೊಡೆದರೂ ಅದಕ್ಕೆ ಕಾಲು ಭಾಗದಷ್ಟೇ ಇಂಧನ ಸಾಕು.ಇದನ್ನು ನಮ್ಮ ಜೀವನಕ್ಕೂ ಅನ್ವಯಿಸಬಹುದು. ಆರಂಭದ ಇಪ್ಪತ್ತು ವರ್ಷಗಳನ್ನು ಸಾರ್ಥಕಪಡಿಸಿಕೊಂಡರೆ, ಜೀವನದ ಉಳಿದ ಭಾಗವನ್ನು ನೆಮ್ಮದಿಯಿಂದ, ಯಶಸ್ವಿಯಾಗಿ ಕಳೆಯಬಹುದು. ಅಂದರೆ ಆರಂಭಿಕ ಇಪ್ಪತ್ತು ವರ್ಷದ ಭದ್ರ ಬುನಾದಿಯ ಮೇಲೆ ನಮ್ಮ ಜೀವನವನ್ನು ಕಟ್ಟಬಹುದು. ನಮ್ಮ ಬದುಕಿನ ಮೊದಲ ಎರಡು ದಶಕಗಳಿವೆಯಲ್ಲ, ಅವು ಎಷ್ಟು ಮಹತ್ವಪೂರ್ಣ ಎಂಬುದು ಮನವರಿಕೆಯಾಗಿರಬಹುದು.
ಬಹುತೇಕ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಈ ಅವಧಿಯಲ್ಲಿ ಬರೀ ವಿದ್ಯಾಭ್ಯಾಸದಲ್ಲಿಯೇ ನಿರತರಾಗಬೇಕೆಂದು ಬಯಸುತ್ತಾರೆ. ತಪ್ಪೇನಿಲ್ಲ, ಆದರೆ, ಮಕ್ಕಳು ತಮ್ಮ ಜೀವನದ ಕೆಲವು ಮಹತ್ವದ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆಂಬುದನ್ನು ಸಹ ಮರೆತುಬಿಡುತ್ತಾರೆ. ಪಾಲಕರು ಹೀಗೆ ಯೋಚಿಸಲು ಕಾರಣ ತಮ್ಮ ಮಕ್ಕಳು ಕಲಿತು ದೊಡ್ಡವರಾದ ನಂತರವೇ ಸಾಧನೆ ಮಾಡಲಿ, ಈಗ ಬರೀ ವಿದ್ಯಾಭ್ಯಾಸದಲ್ಲಿ ತೊಡಗಿರಲಿ ಎಂಬ ಹಳೆಯ ಚಿಂತನೆ. ನಿಮ್ಮ ಮಗು ಹತ್ತು ವರ್ಷ ಮುಗಿಯುವುದರೊಳಗೆ ಕ್ರಿಕೆಟ್ ಬ್ಯಾಟು, ಬಾಲು ಹಿಡಿದು ಮೈದಾನಕ್ಕಿಳಿದು ಬ್ಯಾಟ್ಸ್ಮನ್ ಅಥವಾ ಬೌಲರ್ ಎಂದು ತನ್ನನ್ನು ರೂಪಿಸಿಕೊಳ್ಳದಿದ್ದರೆ ಹದಿನಾಲ್ಕು ವರ್ಷದೊಳಗಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಾರ. ಒಂದು ವೇಳೆ ಈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿಲ್ಲ ಅಂದ್ರೆ, ರಣಜಿ ಅಥವಾ ಟೆಸ್ಟ್ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಈಗ ನಾವು ಎಂಥ ಸ್ಪಧಾ೯ತ್ಮಕ ಯುಗದಲ್ಲಿದ್ದೇವೆ ಅಂದರೆ ಕೆಲವರ ಕ್ರಿಕೆಟ್ ಜೀವನ ಇಪ್ಪತ್ತನೆ ವರ್ಷಕ್ಕೆ ಮುಗಿದು ಹೋಗಿರುತ್ತದೆ. ನಮ್ಮ ಮಗು ಸಕಾ೯ರಿ ನೌಕರಿ ಮಾಡಿಕೊಂಡಿರಲಿ ಎಂದು ತೀಮಾ೯ನಿಸಿದರೆ, ಇಪ್ಪತ್ತು ಮುಗಿಯುವ ಹೊತ್ತಿಗೆ ಓದೊಂದರಲ್ಲಿ ತಲ್ಲೀನರಾಗಿದ್ದರೆ ಸಾಕು.
ಆದರೆ, ಈ ದಿನಗಳಲ್ಲಿ ಇಪ್ಪತ್ತು ವರ್ಷ ಮುಗಿಯುವುದರೊಳಗೆ ನೂರಿಪ್ಪತ್ತು ಕಲೆ, ವಿದ್ಯೆ, ಹವ್ಯಾಸ, ಅಭಿರುಚಿಗಳನ್ನು ಕಲಿಯುವ ಅವಕಾಶಗಳಿವೆ. ಪ್ರತಿ ದಿನ ಒಂದು ಗಂಟೆ ಪಠ್ಯೇತರ ಚಟುವಟಿಕೆಗೆ ಮೀಸಲಿಟ್ಟರೆ, ನಿಮ್ಮ ಮಗು ಚೆಸ್, ಕೇರಂ, ಟೇಬಲ್ ಟೆನಿಸ್ ಆಟಗಾರನಾಗಬಹುದು. ಫೋಟೊಗ್ರಾಫರ್ ಆಗಬಹುದು. ತಬಲಾ, ಮೃದಂಗ, ಕೀಬೋಡ್೯, ಪಿಯಾನೋ, ಹಾಮೋ೯ನಿಯಂ ವಾದಕನಾಗಬಹುದು. ಉತ್ತಮ ಭಾಷಣಕಾರ, ಕಲಾವಿದ, ಸಂಗೀತಗಾರನಾಗಬಹುದು. ಇವೆಲ್ಲವುಗಳನ್ನು ಆಗುವುದರ ಜತೆಗೆ ನಿಮ್ಮ ಮಗಳು ನೃತ್ಯಗಾತಿಯೂ ಆಗಬಹುದು.
ಈ ಇಪ್ಪತ್ತು ವರ್ಷಗಳಲ್ಲಿ ನೀವು ಓದುತ್ತಾ ಓದುತ್ತಾ, ಬೇರೆ ಏನು ಬೇಕಾದರೂ ಆಗಬಹುದು. ನೀವು ಎಷ್ಟೇ ತಪ್ಪು ಮಾಡಿ, ಯಾರೂ ಬೇಸರಿಸಿಕೊಳ್ಳುವುದಿಲ್ಲ. ಎಲ್ಲ ತಪ್ಪುಗಳೂ ಮಾಫಿ! ನಿಮ್ಮನ್ನು ರೂಪಿಸಿಕೊಳ್ಳಲು, ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಅಪರಿಮಿತ ಅವಕಾಶ. `ಎಷ್ಟೆಂದರೂ ಚಿಕ್ಕವ ಬಿಡು' ಎಂಬ ಸಾಂತ್ವನ.
ಇಪ್ಪತ್ತು ವರ್ಷ ಮುಗಿಸುವ ಹೊತ್ತಿಗೆ ಕನಿಷ್ಠ ಇಪ್ಪತ್ತು ವಿದ್ಯೆ, ಕಲೆಯಲ್ಲಿ ಕೈಯಾಡಿಸಿದ ಅನುಭವ ಪಡೆದರೆ ಸಾಕು. ಅವುಗಳಲ್ಲಿ ಪ್ರೌಢಿಮೆ, ಪ್ರಾವೀಣ್ಯ ಪಡೆಯಬೇಕೆಂದಿಲ್ಲ. ಇಪ್ಪತ್ತರೊಳಗೆ ನೀವು ಕಲ್ಲು ತಿಂದರೂ ಜೀರ್ಣಿಸಿಕೊಳ್ಳಬಹುದು. ನಿಮ್ಮಲ್ಲಿ ಅಂಥ ಹುರುಪು, ಲವಲವಿಕೆ ಇದ್ದರೆ ಒಮ್ಮೊಮ್ಮೆ ತಿಂದಿದ್ದು ಕಲ್ಲು ಎಂಬುದೂ ಗೊತ್ತಾಗುವುದಿಲ್ಲ.
ಇಷ್ಟು ಮಾಡಿ ಸಾಕು ಟ್ವೆಂಟಿಯೊಳಗೆ ನಿಮಗೊಂದು ಯಶಸ್ಸು ಗ್ಯಾರಂಟಿ!
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

